ಯುಪಿ: ಕಾನೂನು ಸುವ್ಯವಸ್ಥೆ ನಂತರ ಅಭಿವೃದ್ಧಿಯ ನಿರೀಕ್ಷೆ

ಯುಪಿ: ಕಾನೂನು ಸುವ್ಯವಸ್ಥೆ ನಂತರ ಅಭಿವೃದ್ಧಿಯ ನಿರೀಕ್ಷೆ

ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರೆಂಬ ಸನ್ಯಾಸಿ ಭಾರಿ ನಿರೀಕ್ಷೆಯೊಂದಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಠಗಳ ಮುಖ್ಯಸ್ಥರಾಗಿರುವ ಸರ್ವಸಂಗ ಪರಿತ್ಯಾಗಿಗಳು ಒಂದು ರಾಜ್ಯದ ಆಡಳಿತದ ಮುಖ್ಯಸ್ಥರಾಗುವುದೇ ಬಹಳ ವಿಶೇಷ. ಅದರಲ್ಲೂ, ಅಂತಹ ಸನ್ಯಾಸಿ ಒಂದು ಅವಧಿಗೆ ಅತ್ಯಂತ ಯಶಸ್ವಿ ಆಡಳಿತ ನೀಡಿ ಎರಡನೇ ಅವಧಿಗೆ ಭರ್ಜರಿ ಬಹುಮತದೊಂದಿಗೆ ಮುಖ್ಯಮಂತ್ರಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಉತ್ತರ ಪ್ರದೇಶದಲ್ಲಿ ಈವರೆಗೆ ಒಬ್ಬ ಮುಖ್ಯಮಂತ್ರಿ ಸತತ ೨ನೇ ಬಾರಿ ಅಧಿಕಾರಕ್ಕೆ ಬಂದ ದಾಖಲೆಯಿಲ್ಲ. ಮಿನಿಭಾರತವೆಂದೇ ಪ್ರಸಿದ್ಧಿ ಪಡೆದ ಈ ರಾಜ್ಯ ಯುರೋಪ್ ಖಂಡದಲ್ಲಿರುವ ಬಹುತೇಕ ದೇಶಗಳಿಗಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿ ಗೆಲ್ಲುವ ಪಕ್ಷ ಕೇಂದ್ರದಲ್ಲೂ ಗೆಲ್ಲುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ರಾಜಕೀಯವಾಗಿಯೂ ಯೋಗಿಯ ಆಯ್ಕೆ ಮಹತ್ವ ಪಡೆದಿದ್ದು, ಇಡೀ ದೇಶ ಉತ್ತರ ಪ್ರದೇಶವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ.

ಕಳೆದೊಂದು ದಶಕದ ಹಿಂದಿನವರೆಗೂ ಉತ್ತರ ಪ್ರದೇಶ ಜಂಗಲ್ ರಾಜ್, ಭ್ರಷ್ಟಾಚಾರ, ಮಾಲಿನ್ಯ, ಅಪೌಷ್ಟಿಕತೆ, ಮೂಲಭೂತ ಸೌಕರ್ಯಗಳ ಕೊರತೆ, ಬಡತನ, ಅನಕ್ಷರತೆ, ಕಾನೂನು ಅವ್ಯವಸ್ಥೆ ಇತ್ಯಾದಿಗಳಿಗೆ ಕುಪ್ರಸಿದ್ಧಿ ಪಡೆದಿತ್ತು. ಜಾತಿ ರಾಜಕಾರಣದ ಭರಾಟೆಯಲ್ಲಿ ರಾಜ್ಯ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಇತ್ತಿಚಿನ ದಶಕದಲ್ಲಿ ಮಾಯಾವತಿ ಹಾಗೂ ಮುಲಾಯಂ ಆಡಳಿತಗಳು ಒಂದೊಂದು ಅತಿರೇಕಕ್ಕೆ ಹೆಸರಾಗಿದ್ದವೇ ಹೊರತು ರಾಜ್ಯದ ಚಹರೆಯನ್ನು ಬದಲಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಸಣ್ಣದಾಗಿ ಬದಲಾವಣೆಯ ಗಾಳಿ ಬೀಸತೊಡಗಿತು. ಯೋಗಿ ಮುಖ್ಯಮಂತ್ರಿಯಾದ ನಂತರ ಬದಲಾವಣೆಯ ಪ್ರಕ್ರಿಯೆ ವೇಗ ಪಡೆಯಿತು. ಮೊದಲ ಅವಧಿಯಲ್ಲಿ ಯೋಗಿ ಉತ್ತರ ಪ್ರದೇಶದಲ್ಲಿ ಗೂಂಡಾರಾಜ್ ವ್ಯವಸ್ಥೆಯನ್ನು ಬಗ್ಗುಬಡಿಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಜೊತೆಗೆ ರಾಷ್ಟ್ರಮಟ್ಟದಲ್ಲಿ ಉತ್ತರ ಪ್ರದೇಶದ ಇಮೇಜ್ ಬದಲಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಆದರೂ ಆರ್ಥಿಕಾಭಿವೃದ್ಧಿ, ಬಡತನ ನಿರ್ಮೂಲನೆ, ಶಿಕ್ಷಣ ಮುಂತಾದ ಸೂಚ್ಯಂಕಗಳಲ್ಲಿ ಇವತ್ತಿಗೂ ಆ ರಾಜ್ಯ ಬಹಳ ಹಿಂದುಳಿದಿದೆ. ಪರಿಣಾಮ, ದೇಶದ ಅಭಿವೃದ್ಧಿಗೂ ಉತ್ತರ ಪ್ರದೇಶದ ಕೊಡುಗೆ ಬಹಳ ಕಡಿಮೆಯಿದೆ. ೨ನೇ ಅವಧಿಯಲ್ಲಿ ಈ ಚಿತ್ರಣವನ್ನು ಬದಲಿಸಿ ಉತ್ತರ ಪ್ರದೇಶವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿಸುವ ಸವಾಲು ಯೋಗಿ ಎದುರು ಇದೆ. ಈ ನಿಟ್ಟಿನಲ್ಲಿ ಅವರ ಮೇಲೆ ನಿರೀಕ್ಷೆಯೂ ಬಹಳ ಇದೆ. 

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೬-೦೩-೨೦೨೨  

ಚಿತ್ರ ಕೃಪೆ: ಅಂತರ್ಜಾಲ ತಾಣ