ಯುರೋಪ್ ನ ಕೈಗಾರಿಕಾ ಕ್ರಾಂತಿ!

ಅದುವರೆಗೂ ಮನುಷ್ಯ ತನ್ನ ಪ್ರತಿಯೊಂದು ಉತ್ಪಾದನೆಗೂ ತನ್ನ ಬಲವನ್ನೇ ಅವಲಂಬಿಸಿದ್ದ. ಆ ಕಾಲದಲ್ಲಿ ಮನುಷ್ಯ ಬಲದಿಂದ ಯಂತ್ರಗಳೆಡೆಗೆ ಸಾಗಿದ ಮಹಾ ಪರ್ವಕಾಲ ಈ ಕೈಗಾರಿಕಾ ಕ್ರಾಂತಿ! ಕೈಗಳಿಂದ ನಿರ್ಮಾಣವಾಗುತ್ತಿದ್ದ ವಸ್ತುಗಳು ಯಂತ್ರಗಳಿಂದ ನಿರ್ಮಾಣವಾಗುವ ಮಹಾ ಪರಿವರ್ತನ ಕಾಲ ಆರಂಭಗೊಂಡಿದ್ದೇ ಇಲ್ಲಿಂದ.
ಈ ಕೈಗಾರಿಕಾ ಕ್ರಾಂತಿ ಆರಂಭವಾದದ್ದು 18 ನೇ ಶತಮಾನದಲ್ಲಿ ಬ್ರಿಟನ್ ನಲ್ಲಿ, ನಂತರ ಇದು ಹರಡಿದ್ದು ಇಡೀ ಪ್ರಪಂಚಕ್ಕೆ ವಿವಿಧ ಭಾಗಕ್ಕೆ. ಇದನ್ನು ಕೈಗಾರಿಕಾ ಕ್ರಾಂತಿ ಎಂದು ಕರೆದದ್ದೇ ಬ್ರಿಟನ್ ನ ಆರ್ನಾಲ್ಡ್ ಟಾಯ್ ಬೀ. ಇದರಿಂದ ಬ್ರಿಟನ್ನಲ್ಲಿ 1760 ರಿಂದ 1840 ರ ದೊಡ್ಡ ಆರ್ಥಿಕ ಬೆಳವಣಿಗೆಯೇ ಕಂಡುಬಂದಿತ್ತು. ಇದರ ಜತೆಗೆ ಉತ್ತರ ಅಮೇರಿಕಾದಲ್ಲೂ ಇದೇ ವೇಳೆಯಲ್ಲಿ ಕೈಗಾರಿಕಾ ಕ್ರಾಂತಿ ಹರಡುತ್ತಿತ್ತು. ಭಾರತ ಹಾಗೂ ಚೀನಾಗಳಲ್ಲಿ ಈ ಬೆಳವಣಿಗೆ ಕಂಡು ಬಂದದ್ದು 20 ನೇ ಶತಮಾನದಲ್ಲಿ, ಈ ವೇಳೆಗೆ ಬ್ರಿಟನ್ ಹಾಗೂ ಯುರೋಪ್ ನ ಇತರೆ ಪ್ರದೇಶಗಳಲ್ಲಿ ಎರಡನೇ ಹಂತದ ಕೈಗಾರಿಕಾ ಬೆಳವಣಿಗೆಗಳು ಆರಂಭವಾಗಿದ್ದವು.
18 ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಬ್ರಿಟನ್ ವಿಶ್ವದ ವಾಣಿಜ್ಯ ವ್ಯವಹಾರದಲ್ಲಿ ಮುಂಚೂಣಿಯಲ್ಲಿತ್ತು. ಜತೆಗೆ ಇದರ ಆಡಳಿತದ ರಾಷ್ಟ್ರಗಳಲ್ಲೂ ತನ್ನ ಆರ್ಥಿಕ ವ್ಯವಹಾರವನ್ನು ಬಲವಂತವಾಗಿ ಹೇರಿ ಮೇಲುಗೈ ಇಂಡಿಯಾ ಕಂಪನಿಗಳ ಸಾಧಿಸಿತ್ತು. ಇದು ತನ್ನ ಈಸ್ಟ್ ಇಂಡಿಯಾ ಕಂಪೆನಿಗಳ ಮೂಲಕ ಬಲವಂತವಾಗಿ ಭಾರತದಂತಹ ರಾಷ್ಟ್ರಗಳ ಮೇಲೆ ಸವಾರಿ ಮಾಡಿತ್ತು.
ಯಾವ ಯಾವ ಕ್ಷೇತ್ರಗಳಲ್ಲಿ ಬದಲಾವಣೆ?: ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ದೊಡ್ಡ ದೊಡ್ಡ ಯಂತ್ರಗಳ ಆವಿಷ್ಕಾರಗಳಾದವು. ಇದರಿಂದ ದೊಡ್ಡ ದೊಡ್ಡ ನೂಲು ತೆಗೆಯುವ ಬಟ್ಟೆ ನೇಯುವ ಯಂತ್ರಗಳು ಬಂದವು. ಜೇಮ್ಸ್ ವಾಟ್ನ ಉಗಿಯಂತ್ರಗಳು ಸ್ಟೀಮ್ ಬೋಟ್ ಹಾಗೂ ಹಡಗುಗಳ ನಿರ್ಮಾಣಕ್ಕೆ ನಾಂದಿ ಹಾಡಿದವು. ರಸ್ತೆ ಸಾರಿಗೆ ಹಾಗೂ ಜಲಸಾರಿಗೆಗಳಲ್ಲಿ ಹೊಸ ಕ್ರಾಂತಿಯೇ ಉಂಟಾದವು. ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬನ್ನು ಕಂಡು ಹಿಡಿದು ಇಡೀ ಜಗತ್ತಿಗೆ ಬೆಳಕನ್ನು ನೀಡಿದ್ದ. ವಿದ್ಯುತ್ ರೈಲು ಹಾಗೂ ಟ್ರಾಂಗಳು ರಸ್ತೆಗೆ ಇಳಿದವು. ಇದೇ ವೇಳೆಯಲ್ಲಿ ದೇಶಗಳ ಜನರಲ್ಲಿ ಸಂಪರ್ಕ ಕಲ್ಪಿಸಿದ್ದು ಟೆಲಿಗ್ರಾಫ್ ಮತ್ತು ಟೆಲಿಫೋನ್ಗಳು. ಈ ಕೈಗಾರಿಕಾ ಕ್ರಾಂತಿಯ ಎರಡನೇ ಹಂತದಲ್ಲಿ ಅಂತರ್ದಹನ ಎಂಜಿನ್ಗಳು ಬಳಕೆಗೆ ಬಂದು ಸಾರಿಗೆ ಕ್ಷೇತ್ರದಲ್ಲಿ ಹೊಸ ಮನ್ವಂತರವನ್ನೇ ದಾಖಲಿಸಿದವು. ಈ ಕೈಗಾರಿಕಾ ಕ್ರಾಂತಿ ವ್ಯವಸಾಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಇಲ್ಲಿಂದ ಆರಂಭವಾದದ್ದೇ ಹೊಲ ಉಳುವ ಕಬ್ಬಿಣದ ಯಂತ್ರ, ಬಹೋಪಯೋಗಿ ಟ್ರಾಕ್ಟರ್, ಬೀಜಬಿತ್ತುವ ಯಂತ್ರ, ಕಟಾವಿನ ಯಂತ್ರ, ಕಳೆ ಕೀಳುವ ಯಂತ್ರಗಳು. ನೀರನ್ನು ಸಿಂಪಡಿಸುವ ಯಂತ್ರ, ಒಂದೇ ಎರಡೇ. ವ್ಯವಸಾಯ ಕ್ಷೇತ್ರಕ್ಕಂತೂ ವರದಾನವಾಗಿ ಪರಿಣಮಿಸಿತು!
ಅಲ್ಲಿಂದ ಸಿಂಥೆಟಿಕ್ ವಸ್ತುಗಳ ಮಹಾಪೂರವೇ ಹರಿದು ಬಂತು. ಹೂಗಳು ಮತ್ತು ಕಾಸ್ಟೆಟಿಕ್ಗಳ ಉತ್ಪಾದನೆಯಲ್ಲಿ ಹೊಸ ಶಕೆಯೇ ಆರಂಭವಾಯಿತು. ಇವೆಲ್ಲಕ್ಕಿಂತ ಕಳಶವಿಟ್ಟ ಒಂದು ಕ್ಷೇತ್ರ ಎಂದರೆ ಉಡುಪು ತಯಾರಿಕಾ ಕ್ಷೇತ್ರ. ವಿವಿಧ ಸಿಥೆಟಿಕ್ ಬಣ್ಣಗಳ ಉತ್ಪಾದನೆ ಆರಂಭಗೊಂಡದ್ದು ಇದೇ ಕಾಲದಲ್ಲಿ, ತಲೆಗೆ ಹಾಕುವ ಉತ್ಪನ್ನಗಳ ತಯಾರಿಕೆ ಅಂದರೆ ಬಣ್ಣಗಳು, ಸೋಪು, ಆಯಿಲ್ಗಳ ತಯಾರಿಕೆ ಆರಂಭಗೊಂಡವು. ಈ ಕೈಗಾರಿಕಾ ಕ್ರಾಂತಿಯಿಂದ ದೊಡ್ಡ ದೊಡ್ಡ ಕೈಗಾರಿಕಾ ಸಮುಚ್ಛಾಯಗಳೇ ತೆರೆಯಲ್ಪಟ್ಟವು. ದೊಡ್ಡ ಪ್ರಮಾಣದ ಕಬ್ಬಿಣದ ಉತ್ಪಾದನೆಯ ಕಾರ್ಖಾನೆಗಳು ಮೇಲೆ ಎದ್ದವು. ದೊಡ್ಡ ದೊಡ್ಡ ಜಲ ವಿದ್ಯುತ್ ಸ್ಥಾವರಗಳು ನಿರ್ಮಾಣಗೊಂಡವು. ಇತರೆ ಲೋಹಗಳ ಉತ್ಪಾದನೆಯಲ್ಲಿ ಹೊಸ ಶಕೆಯೇ ಆರಂಭಗೊಂಡಿತು.
ನಕಾರಾತ್ಮಕ ಪರಿಣಾಮಗಳು :
* ನಗರಗಳ ಕೈಗಾರಿಕೀಕರಣದಿಂದಾಗಿ ಹಳ್ಳಿಗಳಿಂದ ಜನರ ವಲಸೆಯಿಂದಾಗಿ ನಗರಗಳು ಜನದಟ್ಟಣೆಗೆ ಬಲಿಯಾದವು
* ಇಲ್ಲಿ ಕಾರ್ಮಿಕರ ಕಡಿಮೆ ವೇತನದಿಂದಾಗಿ ಅವರ ಜೀವನ ಶೋಷಣೆಗೆ ಒಳಪಟ್ಟಿತು.
* ಕರಕುಶಲ ಉದ್ಯಮಕ್ಕೆ ದೊಡ್ಡದಾದ ಪೆಟ್ಟು
* ಬಾಲ ಕಾರ್ಮಿಕರ ನೇಮಕ ಮತ್ತು ಶೋಷಣೆ
* ನಗರ ಮಾಲಿನ್ಯದ ಹೆಚ್ಚಳ
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ