ಯುವಕರಿಗೆ ಸ್ಪೂರ್ತಿಯ ಸೆಲೆ - ಸ್ವಾಮಿ ವಿವೇಕಾನಂದರು

ಯುವಕರಿಗೆ ಸ್ಪೂರ್ತಿಯ ಸೆಲೆ - ಸ್ವಾಮಿ ವಿವೇಕಾನಂದರು

ಶರೀರದ ಶಕ್ತಿ, ಮನಸ್ಸಿನ ಶಕ್ತಿ, ಸಂಕಲ್ಪ ಶಕ್ತಿ ಇದ್ದಲ್ಲಿ ಕಾರ್ಯಸಿದ್ಧಿ. ಸ್ವಾಮಿ ವಿವೇಕಾನಂದರ ಶಕ್ತಿಯ ಕುರಿತಾದ ಸಂದೇಶವಿದು. ಭಗವಂತನಲ್ಲಿ ಶ್ರದ್ಧೆಯಿರಲಿ. ವೇದ, ಉಪನಿಷತ್ ಗಳು ಮನುಷ್ಯರ ಜೀವಾಳ ಅವುಗಳನ್ನು ಓದಿ ತಿಳಿಯಿರೆಂದು ಕರೆಯಿತ್ತರು. ಧರ್ಮಪಾಲನೆ ಆದ್ಯ ಕರ್ತವ್ಯ, ಹಿಮ್ಮೆಟ್ಟದಿರಿ, ಆಚರಣೆಯಲಿರಲಿ. ಸತ್ಯವೇ ನಮ್ಮ ಉಸಿರಾಗಿರಲಿ, ನರನಾಡಿಯಲಿಯೂ ಸತ್ಯ, ದಯೆ, ಅನುಕಂಪ, ಪ್ರಾಮಾಣಿಕತೆ, ಸಹಕಾರಗಳೆಂಬ ನೈತಿಕ ಮೌಲ್ಯಗಳು ಹರಿಯಲಿ. ತಮೋಗುಣವನ್ನು ಪೂರ್ತಿ ಬಿಡಬೇಕು. ನಾವು ಏನೇ ಹೇಳಿದರೂ, ಯಾವುದರ ಬಗ್ಗೆ ಮಾತನಾಡಿದರೂ ಬಡತನದಿಂದ ಕಷ್ಟ ಪಡುವವರ ಬಗ್ಗೆ, ಸೂರಿಲ್ಲದವರ ಬಗ್ಗೆ ಮೊದಲು ಯೋಚಿಸಬೇಕು. ಸಹಾನುಭೂತಿ ಹೃದಯದಿಂದ ಬರಲಿ. ಎಲ್ಲಾ ಪಾಪಕಾರ್ಯಗಳ ಆರಂಭಕ್ಕೆ ದೌರ್ಬಲ್ಯ ಮತ್ತು ಸ್ವಂತಿಕೆ ಇಲ್ಲದಿರುವುದೇ ಕಾರಣ. ಅಂತರಂಗದ ಬಗ್ಗೆ, ಆತ್ಮಶಕ್ತಿಯ ಬಗ್ಗೆ ನಮಗೆ ನಾವೇ ಅರಿತರೆ ಎಲ್ಲಾ ಪರಿಪೂರ್ಣ. ಯುವಶಕ್ತಿಗಳೇ ಎದ್ದೇಳಿ, ತೂಕಡಿಕೆ ಬೇಡ. ತೋಳುಗಳಲ್ಲಿ ಭರವಸೆಯಿಟ್ಟು ಕೆಲಸಕ್ಕೆ ಧುಮುಕಿ ಕರೆಯಿತ್ತ ಮಹಾನುಭಾವರು.

ದೇಶ ಸದೃಢವಾಗಬೇಕಾದರೆ ಮೊದಲು ನಾವು ಬಲಿಷ್ಠರಾಗಬೇಕು. ಆದಷ್ಟೂ ದುಶ್ಚಟಗಳಿಂದ ದೂರವಿರಬೇಕು. ಪ್ರಪಂಚ ವಿಶಾಲವಾಗಿದೆ. ಬದುಕಲು ಬೇಕಾದ ಹಲವಾರು ದಾರಿಗಳಿವೆ. ಕುಳಿತಲ್ಲಿಗೆ ಯಾವುದೂ ಬಾರದು. ಅವಕಾಶ ಮತ್ತು ಜೀವನದ ಹಾದಿಯನ್ನು ಅರಸುತ್ತಾ ಹೋಗಬೇಕು. ಉತ್ತಮ ‌ಸಮಾಜ ನಿರ್ಮಾಣಕ್ಕಾಗಿ ಎಳವೆಯಿಂದಲೇ ಮಕ್ಕಳನ್ನು ತಯಾರು ಮಾಡಬೇಕು. ದುಶ್ಚಟಗಳಿಗೆ ಬಲಿಯಾಗದಂತಹ ಕಲಿಕಾ ವಾತಾವರಣ ಸೃಷ್ಟಿಯಾಗಬೇಕು. ವೈಚಾರಿಕತೆ, ವಿವೇಚನೆ, ವಿವೇಕ, ತುಲನಾ ಜ್ಞಾನ, ಸ್ವಂತ ಬುದ್ಧಿವಂತಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ಜಗತ್ತಿನ ಕಣ್ಣು ತೆರೆಸಿದವರು, ವಿಶ್ವದ ಪ್ರೇರಕಶಕ್ತಿ ಸ್ವಾಮಿ ವಿವೇಕಾನಂದರು. ಅವರ ಆದರ್ಶ ತತ್ವಗಳನ್ನು ಅಳವಡಿಸಬೇಕು. ಕೃಷಿಕ್ಷೇತ್ರದಲ್ಲೂ ಬದಲಾವಣೆಗಳಾಗಬೇಕು. ತೋಳುಗಳಿಗೆ ಕೆಲಸ ಕೊಡಬೇಕು. ನಿಷ್ಠೆಯಿಂದ ದುಡಿಯುವವರು ಯಾರಿಗೂ ತಲೆತಗ್ಗಿಸಬೇಕಾದ ಅಗತ್ಯವಿಲ್ಲ.

ಯಾರು ಏನು ಬೇಕಾದರೂ ಹೇಳಲಿ ಸಮಾಜಕ್ಕೆ ಒಳ್ಳೆಯದು ಮಾಡು, ನಿನ್ನವರನ್ನು ನೋಯಿಸದಿರು, ನಮಗೆ ನಾವೇ ಶತ್ರುಗಳಾಗಬಾರದು. ಹೇಡಿಯಾಗಿ ನೂರು ವರುಷದ ಬಾಳ್ವೆ ಯಾತಕ್ಕೆ? ಮರಣಕ್ಕೆ ಹೆದರದಿರು. ಎಂಬ ಕರೆ ಯುವ ಸಮುದಾಯವನ್ನು ಬಡಿದೆಬ್ಬಿಸುವಂತಿತ್ತು. ಭಗವಂತನನ್ನು ಒಳ್ಳೆಯ ಕೆಲಸಗಳಲ್ಲಿ ಕಾಣಲು ಪ್ರಯತ್ನಿಸು, ಸ್ವಾರ್ಥಬಿಟ್ಟು ಬದುಕು. ಸ್ವಾಮಿ ವಿವೇಕಾನಂದರನ್ನು ಒಂದೆಡೆ ‘ಸಿಡಿಲಸಂತ’ ಎಂಬುದಾಗಿ ಅವರ ವಾಕ್ ಚಾತುರ್ಯ, ಕೈಗೊಂಡ ಕಾರ್ಯಗಳನ್ನು ನೋಡಿ ಕರೆದರು. ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕಾದರೆ ಯುವಶಕ್ತಿ ಕಣಕ್ಕೆ ಇಳಿಯಬೇಕು, ಅದೇ ಇಲ್ಲ, ಪ್ರತಿಭೆ ಸೋರಿ ಹೋಗಿ ಹಾಳಾಗುತ್ತಿದೆ. ಸದ್ಬಳಕೆಯಾಗುತ್ತಿಲ್ಲ, ಇನ್ನೂ ನಿದ್ದೆಯಲ್ಲೇ ಇದ್ದಾರೆ ಎಂಬುದು ಅವರ ಅಭಿಮತವಾಗಿತ್ತು. ವಿವೇಕಪೂರ್ಣತೆಯ ಆಲೋಚನೆಗಳು ಮೌಲ್ಯವರ್ಧನೆಗೆ ಸಹಕಾರಿ. ನಮ್ಮ ಮೇಲೆ ನಮಗೆ ನಂಬಿಕೆ ಮೊದಲಿರಬೇಕು. ದೃಢ ನಿಶ್ಚಯವಿರಬೇಕು. ಹಿಡಿದ ಗುರಿ ನೇರವಾಗಿದ್ದಾಗ ಗಮ್ಯ ತಲುಪಲು ಸಾಧ್ಯ. ನೇರ ಗುರಿಯಿಲ್ಲದವ ದಾರಿಯನ್ನು ಕ್ರಮಿಸಲಾರ, ಕಲ್ಲುಮುಳ್ಳು ಸರಿಸಲಾರ. ನಿಷ್ಠಾವಂತ ಮಾನವರ ಕೊರತೆ ಕಾಡುವುದೇ ಎಲ್ಲಾ ಸಮಸ್ಯೆಗಳಿಗೆ ರಹದಾರಿ. ಉತ್ಸಾಹವಿರಲಿ, ಅನಂತಶಕ್ತಿಯ ಬಗ್ಗೆ ಅರಿವಿರಲಿ. ‘ಮುದುಡಿ ಮುಪ್ಪಾದ ಮೇಲೆ ಏನಿದೆ ಹೇಳಿ? ಯೌವನದಲ್ಲಿಯೇ ಏನಾದರೂ ಒಳ್ಳೆಯದು ಮಾಡಿ. ನಂಬಿಕೆ ಇರುವುದೇ ತರುಣ ಪೀಳಿಗೆ ಸಮುದಾಯದವರ ಮೇಲೆ. ಎಲ್ಲರೂ ಒಂದಾಗಿ ಶ್ರಮಿಸೋಣ. ನಮ್ಮ ಪ್ರಾಚೀನ ಉಜ್ವಲ ಪರಂಪರೆಯ ಮೇಲೆ ನಾವು ನಿಂತಿದ್ದೇವೆ. ಅದು ಕುಸಿಯದಂತೆ ಕಾಪಾಡುವುದು ನಮ್ಮ ಕರ್ತವ್ಯ. ನಿಜವಾದ ದೇಶ ಗುಡಿಸಲುಗಳ ಒಳಗಡಗಿದೆ. ಅದನ್ನು ಪ್ರೋತ್ಸಾಹಿಸಿ ಬೆನ್ನುತಟ್ಟುವ ಕೆಲಸವಾಗಬೇಕಾಗಿದೆ.’ ಪ್ರತಿಯೊಂದು ವಿಷಯಗಳ ಬಗ್ಗೆ ಆಳವಾದ ಅರಿವನ್ನು ಅಧ್ಯಯನಮಾಡಿದರೆ ಮಾತ್ರ ತಿಳಿಯಲು ಸಾಧ್ಯ. ಅಮೂಲಾಗ್ರ ಸುಧಾರಣೆ ದೇಶದ ಪ್ರಗತಿ.

ಸ್ವಾಮಿ ವಿವೇಕಾನಂದರ ಅನುಭವ ಸಾರಗಳು ನಿತ್ಯಸತ್ಯ, ಸ್ವಲ್ಪವಾದರೂ ಅಳವಡಿಸುವ ಪ್ರಯತ್ನ ಮಾಡೋಣ.

ನಿಂದಂತು ನೀತಿ ನಿಪುಣಾ ಯದಿ ವಾ ಸ್ತುವಂತು/

ಲಕ್ಷ್ಮೀ:ಸಮಾವಿಶತು ಗಚ್ಛತು ವಾ ಯಥೇಷ್ಟಮ್//

ಅದೈವ ವಾ ಮರಣಮಸ್ತು ಯುಗಾಂತರೇ ವಾ/

ನ್ಯಾಯತ್ಪಥ:ಪ್ರವಿಚಲಂತಿ ಪದಂ ನ ಧೀರಾ//

ಹಿರಿಯರು ಬೈಯಲಿ ಹೊಗಳಲಿ, ಲಕ್ಷ್ಮೀ ಪ್ರಸನ್ನಳಾಗಲಿ ಆಗದಿರಲಿ, ಹೋಗಲಿ, ಸಾವು ಇಂದೇ ಬರಲಿ ಅಥವಾ ನಂತರ ಬರಲಿ, ಕೈಗೊಳ್ಳುವ ಸತ್ಯದ ಹಾದಿಯಿಂದ ಕೊಂಚವೂ ಅತ್ತಿತ್ತ ಸರಿಯದವನೇ ನಿಜವಾದ ಧೀರ ಪುರುಷ. ಸತ್ ಚಿಂತನೆಗಳು ಮೂಡಿಬರಲಿ. ಮೊದಲು ನಮ್ಮನ್ನು ನಾವು ನಂಬಬೇಕು. ಅದೇ ಇಲ್ಲದಿದ್ದರೆ ಹೇಗೆ? ಭಗವಂತನ ಮೇಲೆ ನಂಬಿಕೆ,ವಿಶ್ವಾಸವಿಡಬೇಕು. ಸ್ಫೂರ್ತಿಯ ಸೆಲೆಯಾದ ಧೀಮಂತ ನಾಯಕರು ಸ್ವಾಮಿ ವಿವೇಕಾನಂದರು.

-ರತ್ನಾ ಕೆ ಭಟ್ ತಲಂಜೇರಿ

(ಆಕರಗ್ರಂಥ:ಸ್ವಾಮಿ ವಿವೇಕಾನಂದರ ವಾಣಿಗಳ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ