ಯುವಕರಿಬ್ಬರ ಸಾಧನೆ - ಪರಿಸರ ಸ್ನೇಹಿ ಟೀ ಬ್ಯಾಗ್

ಯುವಕರಿಬ್ಬರ ಸಾಧನೆ - ಪರಿಸರ ಸ್ನೇಹಿ ಟೀ ಬ್ಯಾಗ್

ಟೀ ಅಥವಾ ಚಹಾ ಸರ್ವವ್ಯಾಪಿಯಾಗಿ ಸಿಗುವ ಪೇಯ. ಚಹಾ ಹುಡಿ ರೂಪದಲ್ಲಿ ಅಥವಾ ಒಣಗಿಸಿದ ಎಲೆಯ ರೂಪದಲ್ಲಿ ಸಿಗುತ್ತದೆ. ಆದರೆ ಇತ್ತೀಚೆಗೆ ಬಳಕೆಗೆ, ಸಾಗಾಟಕ್ಕೆ ಅನುಕೂಲವೆಂದೋ ಚಹಾ ಹುಡಿಯು ಸಣ್ಣ ಸಣ್ಣ ಪೊಟ್ಟಣ (ಟೀ ಬ್ಯಾಗ್) ರೂಪದಲ್ಲಿ ಸಿಗುತ್ತಿದೆ. ಇದಕ್ಕೆ ಒಂದು ದಾರವಿರುತ್ತದೆ. ಬಿಸಿಯಾದ ಹಾಲು ಅಥವಾ ನೀರಿಗೆ ಈ ಪೊಟ್ಟಣವನ್ನು ಹಾಕಿ (ಡಿಪ್) ದಾರದ ಸಹಾಯದಿಂದ ಮೇಲೆ ಕೆಳಗೆ ಅದ್ದಿದರಾಯಿತು. ಆ ಚಹಾ ಹುಡಿ ಇರುವ ಪೊಟ್ಟಣದಿಂದ ನಿಧಾನವಾಗಿ ಚಹಾ ನೀರಿಗೆ ಅಥವಾ ಹಾಲಿಗೆ ಮಿಶ್ರವಾಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ಇದರ ಬಳಕೆ ಹೆಚ್ಚು.

ಈಗ ಗ್ರೀನ್ ಟೀ ಅಥವಾ ಹಸಿರು ಚಹಾ ಆರೋಗ್ಯಕ್ಕೆ ಒಳ್ಳೆಯದು ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ಚಹಾ ಉತ್ಪಾದಕರು ಗ್ರೀನ್ ಟೀ ಬ್ಯಾಗ್ ತಯಾರು ಮಾಡುತ್ತಿದ್ದಾರೆ. ಆದರೆ ಟೀ ಬ್ಯಾಗ್ ಮಾಡಲು ಬಳಸುವ ಪೇಪರ್ ನಂತಹ ವಸ್ತು ನಮ್ಮ ಆರೋಗ್ಯಕ್ಕೆ ಹಾನಿ ಮಾಡಬಲ್ಲುದು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಈ ವಿಚಾರದ ಬಗ್ಗೆ ನಾವಿಂದು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಏಕೆಂದರೆ ಆ ಪೇಪರ್ ರೀತಿಯ ವಸ್ತುವಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ಲಾಸ್ಟಿಕ್ ಅಂಶ ಇದೆ. ಈ ಟೀ ಬ್ಯಾಗ್ ನಾವು ಬಿಸಿ ಹಾಲು ಅಥವಾ ನೀರಿನಲ್ಲಿ ಮುಳುಗಿಸಿದಾಗ ಆ ಪೊಟ್ಟಣದಲ್ಲಿರುವ ಪ್ಲಾಸ್ಟಿಕ್ ಅಂಶ ನಿಧಾನವಾಗಿ ನೀವು ಕುಡಿಯುವ ಚಹಾಕ್ಕೆ ಸೇರುತ್ತದೆ. ಒಂದು ಕಪ್ ಚಹಾದಲ್ಲಿ ೧೧.೬ ಬಿಲಿಯನ್ ಮೈಕ್ರೋ ಪ್ಲಾಸ್ಟಿಕ್ ಇರುವ ಸಾಧ್ಯತೆ ಇದೆ. ಇಂತಹ ಮೈಕ್ರೋ ಪ್ಲಾಸ್ಟಿಕ್ ಇರುವ ಚಹಾ ನಿಮ್ಮ ದೇಹಕ್ಕೆ ಸೇರಿ, ನಿರಂತರ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಹಾಗಾದರೆ ಇದಕ್ಕೆ ಪರಿಹಾರವೇನು?

ನಮ್ಮ ತಲೆಗೆ ಹೊಕ್ಕ ಈ ಸಮಸ್ಯೆಯ ಹುಳವು ಅಸ್ಸಾಂ ನ ಇಬ್ಬರು ಯುವಕರ ತಲೆಗೂ ಹೊಕ್ಕಿತ್ತು. ಉಪಮನ್ಯು ಬಾರ್ಕಾಕೋಟಿ ಹಾಗೂ ಅಂಶುಮಾನ್ ಭರಾಲಿ ಎಂಬ ಇಬ್ಬರು ಯುವಕರು ಟೀ ಬ್ಯಾಗ್ ರಹಿತ ಟೀ ಡಿಪ್ ಮಾಡುವ ಯೋಚನೆ ಮಾಡಿದರು. ಅಸ್ಸಾಂ ಚಹಾ ಉತ್ಪಾದನೆಯಲ್ಲಿ ಪ್ರಮುಖ ರಾಜ್ಯ ಎಂದೇ ಹೇಳಬಹುದು. ವಿವಿಧ ರೀತಿಯ ನೈಸರ್ಗಿಕ ಚಹಾ ಎಲೆಗಳು ಇಲ್ಲಿ ದೊರೆಯುತ್ತವೆ. ಈ ಇಬ್ಬರು ಯುವಕರು ಅಸ್ಸಾಂ ರಾಜ್ಯದವರೇ ಆಗಿದ್ದುದರಿಂದ ಅವರಿಗೆ ಚಹಾದ ಎಲೆಗಳ ಬಗ್ಗೆ ಉತ್ತಮ ಮಾಹಿತಿ ಇತ್ತು. ಅವರು ಹಲವಾರು ವಸ್ತುಗಳನ್ನು ಬಳಸಿ ವಿಧದ ಪೊಟ್ಟಣಗಳನ್ನು ತಯಾರು ಮಾಡಿ ನೋಡಿದರು ಆದರೆ ಯಾವುದೂ ಸಫಲತೆ ತಂದುಕೊಡಲಿಲ್ಲ. ಟೀ ಬ್ಯಾಗ್ ನಲ್ಲಿರುವ ಮೈಕ್ರೋ ಪ್ಲಾಸ್ಟಿಕ್ ಮಾನವರ ದೇಹಕ್ಕೆ ಹೋಗದಂತೆ ಮಾಡಬೇಕು ಎನ್ನುವುದು ಈ ಇಬ್ಬರು ಯುವಕರ ಕನಸಾಗಿತ್ತು. ಮೊದಲಿಗೆ ಅವರು ರಾಸಾಯನಿಕ ರಹಿತ, ನೈಸರ್ಗಿಕವಾಗಿ ಬೆಳೆದ ಚಹಾ ತೋಟಗಳನ್ನು ಆಯ್ಕೆ ಮಾಡಿಕೊಂಡರು. ಹಲವಾರು ಚಹಾ ಬೆಳೆಯುವ ಕೃಷಿಕರನ್ನೂ ಸಂಪರ್ಕಿಸಿದರು. ಉತ್ತಮ ದರ್ಜೆಯ ಚಹಾ ಎಲೆಯಂತೂ ಸಿಕ್ಕಿತು. ಆದರೆ ಅದನ್ನು ಯಾವ ರೀತಿ ಪೊಟ್ಟಣದಲ್ಲಿ ಬಳಸುವುದು ಇದೇ ದೊಡ್ಡ ಸಮಸ್ಯೆಯಾಗಿತ್ತು. 

ಕಡೆಗೊಮ್ಮೆ ಇವರು ಪೊಟ್ಟಣವೇ ಇಲ್ಲದ ಟೀ ಬ್ಯಾಗ್ ಮಾಡುವ ಯೋಚನೆ ಮಾಡಿದರು. ಟೀ ಎಲೆಗಳನ್ನು ಆಯ್ದು ಅದನ್ನು ಒಂದು ದಾರದಿಂದ ಬಿಗಿದು ಅದನ್ನು ಸಂಸ್ಕರಿಸಿ ಸಣ್ಣದಾದ ಉಂಡೆಯಾಕೃತಿಗೆ ತರಲಾಯಿತು. ಇವುಗಳನ್ನು ಕಾಗದದ ಪೊಟ್ಟಣದ ಒಳಗೆ ಸೇರಿಸಿ ಪ್ಯಾಕ್ ಮಾಡಲಾಯಿತು. ಚಹಾ ತಯಾರಿಸುವಾಗ ಈ ಸಂಸ್ಕರಿತ ಚಹಾ ಎಲೆಯ ಉಂಡೆಗಳನ್ನು ನೇರವಾಗಿ ಬಿಸಿ ನೀರಿಗೆ ಹಾಕಿದರಾಯಿತು. ಬಿಸಿ ನೀರಿನ ಶಾಖಕ್ಕೆ ಸಂಸ್ಕರಿತ ಚಹಾ ಎಲೆಗಳು ಬಿಡಿಸಿಕೊಂಡು ಅದರಿಂದ ಚಹಾ ದ್ರಾವಣ ಹೊರ ಬಂದು ನೀರಿನಲ್ಲಿ ಮಿಶ್ರವಾಗುತ್ತದೆ. ಇದರಿಂದ ೩-೪ ಬಾರಿ ಚಹಾ ಮಾಡಬಹುದು. ಚಹಾ ಮಾಡಿದ ನಂತರ ಈ ಎಲೆಗಳನ್ನು ನಿಮ್ಮ ಹೂಕುಂಡದ ಬುಡಕ್ಕೆ ಹಾಕಿದರೆ ಗಿಡಗಳಿಗೆ ಉತ್ತಮ ಗೊಬ್ಬರವೂ ಆಗುತ್ತದೆ. ಈ ಉತ್ಪನ್ನಕ್ಕೆ ಪೇಟೆಂಟ್ ಪಡೆಯಲು ಅರ್ಜಿಯನ್ನೂ ಸಲ್ಲಿಸಿದ್ದಾರೆ ಈ ಯುವಕರು.

ಶುಚಿತ್ವ ಹಾಗೂ ಗುಣ ಮಟ್ಟಕ್ಕೆ ಪ್ರಾಶಸ್ತ್ಯ ನೀಡ ಬಯಸುವ ಇವರು ತಮ್ಮ ಉದ್ದಿಮೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದ್ದಾರೆ. ಗೃಹ ಉದ್ದಿಮೆಯ ರೀತಿಯಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆ ಈಗ ದೇಶಾದ್ಯಂತ ಚಹಾ ಪೊಟ್ಟಣವನ್ನು ಮಾರಾಟ ಮಾಡುತ್ತಿದೆ. ನಾಲ್ಕು ಬಗೆಯ ಚಹಾ ಪೊಟ್ಟಣಗಳನ್ನು ಇವರ ಸಂಸ್ಥೆ ತಯಾರಿಸುತ್ತದೆ. ಫಿಲ್ಟೀ ಗ್ರೀನ್ (ಹಸಿರು ಚಹಾ), ಫಿಲ್ಟೀ ವೈಟ್ (ಸಾಮಾನ್ಯ ಚಹಾ), ಡರ್ಟಿ ಡಿಟೋಕ್ಸ್ (ಹಸಿರು ಚಹಾ ಮತ್ತು ತುಳಸಿಯ ಮಿಶ್ರಣ), ಕಿಲ್ಲರ್ ಇಮ್ಯೂನಿಟಿ (ಬ್ಲಾಕ್ ಟೀ ಹಾಗೂ ತುಳಸಿಯ ಮಿಶ್ರಣ). ಇವರ ಚಹಾದ ಹೆಸರು ವೂಲಾಹ ಚಹಾ (Woolah Tea). ನಿಮಗೆ ವೂಲಾಹ ಚಹಾ ಕುಡಿಯುವ ಮನಸ್ಸಾದರೆ ನೀವು www.woolahtea.com ಮೂಲಕ ಆರ್ಡರ್ ಮಾಡಬಹುದು. 

ಉಪಮನ್ಯು ಹಾಗೂ ಅಂಶುಮಾನ್ ಎಂಬ ಈ ಯುವಕರ ಸಾಧನೆಗೆ ನಿಮ್ಮ ಬೆಂಬಲವಿರಲಿ. ಇವರ ಈ ಟೀಬ್ಯಾಗ್ ರಹಿತ ಟೀ ಹುಡಿ ಬಳಕೆಯಿಂದ ಪರಿಸರದಲ್ಲಿ ಪ್ಲಾಸ್ಟಿಕ್ ಅಂಶ ಕಡಿಮೆಯಾಗಿ, ನಮ್ಮ ಆರೋಗ್ಯವೂ ಉತ್ತಮವಾಗಿರಲಿದೆ. ಇದರ ಜೊತೆ ಈ ಉದ್ಯಮದಿಂದಾಗಿ ಕೃಷಿಕರಿಗೆ ಬೆಂಬಲ ಹಾಗೂ ಹಲವಾರು ಉದ್ಯೋಗ ಸೃಷ್ಟಿಯಾಗಲಿದೆ. ನೀವೂ ಒಮ್ಮೆ ವೂಲಾಹ ಚಹಾ ಕುಡಿಯಬಾರದೇಕೆ?

ಮೊದಲ ಚಿತ್ರದಲ್ಲಿ: ಉತ್ತಮ ದರ್ಜೆಯ ಚಹಾದ ಚಿಗುರು, ಸಂಸ್ಕರಿತ ಚಹಾ ಎಲೆ, ಬಿಸಿ ನೀರಿನಲ್ಲಿ ಅರಳಿದ ಚಹಾ ಎಲೆ

ಎರಡನೇ ಚಿತ್ರದಲ್ಲಿ: ಉಪಮನ್ಯು ಹಾಗೂ ಅಂಶಮಾನ್

ಚಿತ್ರ ಕೃಪೆ: ಅಂತರ್ಜಾಲ ತಾಣ