ಯುವಜನ-ಜೀವನದ ಜತೆ ಚೆಲ್ಲಾಟವಾಡುತ್ತಿರುವ ಮಾದಕ ವಸ್ತುಗಳು.

ಯುವಜನ-ಜೀವನದ ಜತೆ ಚೆಲ್ಲಾಟವಾಡುತ್ತಿರುವ ಮಾದಕ ವಸ್ತುಗಳು.

ಇತ್ತೀಚೆಗೆ ಮಂಗಳೂರಿನ ಕಾವೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಎಲ್ಲರಿಗೂ ತಿಳಿದಿರುವಂತಾದ್ದು. ತನ್ನ ಕೈಯಾರೆ ಬದುಕನ್ನು ಅಂತ್ಯವಾಗಿಸಿಕೊಂಡ ಆಕೆಯ ಸಾವಿಗೆ ಕಾರಣ"ತಾನು ಸೇವಿಸುವ ಮಾದಕ ವಸ್ತು ಖರೀದಿಗಾಗಿ ಮನೆಯವರು ಹಣ ನೀಡಲಿಲ್ಲವೆಂಬುದು!". ಚೆನ್ನಾಗಿ ಓದಿ ತಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಲಿ ಎಂಬ ಆಶಯದಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಶಾಲಾ ಕಾಲೇಜುಗಳಲ್ಲಿ ಸ್ನೇಹಿತರ ಸಂಗವೋ, ಒತ್ತಡವೋ, ಮಾದಕ ವಸ್ತುಗಳ ಮೇಲಿನ ಕುತೂಹಲವೋ ಅವುಗಳ ದಾಸರಾಗುತ್ತಾರೆ. ಒಂದು ಬಾರಿ ಈ ವಸ್ತುಗಳನ್ನು ಸೇವಿಸಿದರೆಂದರೆ ನಂತರ ಅಯಸ್ಕಾಂತದಂತೆ ಅದರತ್ತ ಆಕರ್ಷಿಸುವ ಗುಣ ಹೊಂದಿದೆ  ಎನ್ನಬಹುದು. ಕುತೂಹಲದಿಂದ ಹೇಗಿರಬಹುದು ಎಂದು ರುಚಿ ನೋಡಿದವರು ಮತ್ತೆ ಮತ್ತೆ ಈ ವಸ್ತುಗಳನ್ನು ಸೇವಿಸುವಂತಹ ಮೋಹಕ್ಕೆ ಒಳಗಾಗಿ ಬಿಡುತ್ತಾರೆ. ಮುಂದುವರಿದ ನಗರಗಳಲ್ಲಿ ಇದು ಒಂದು ಫ್ಯಾಶನ್ ಎಂಬಂತಾದರೂ ಕರಾವಳಿ ತೀರದ ಈ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ.
ಎರಡು ವರ್ಷಗಳ ಹಿಂದಿನ ಘಟನೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಎರಡು ವರ್ಷದ ಹಿಂದೆ ಇದೇ ಮಂಗಳೂರಿನ ನಗರದ ಬಲ್ಮಠ ಮೈದಾನದ ಬಳಿ ಉತ್ತರ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಆಕೆಯ ಕೈಗಳಲ್ಲಿ ಇಂಜೆಕ್ಷನ್ ಸಿರಿಂಜುಗಳನ್ನು ಚುಚ್ಚಿಕೊಳ್ಳುತ್ತಿದ್ದ ಗುರುತುಗಳಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆಕೆ ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದಳು ಎಂದು ತಿಳಿದು ಬಂದಿತ್ತು ಎಂಬುದು ಸುದ್ಧಿಯಾಗಿತ್ತು . ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಇನ್ನೊಂದು ಘಟನೆ ಮರುಕಳಿಸಿದೆ. ಇದು ಬೆಳಕಿಗೆ ಬಂದ ಪ್ರಕರಣಗಳು. ಡ್ರಗ್ ಮಾಫಿಯಾ ಇಷ್ಟೊಂದು ತೀವ್ರವಾಗಿ ಪರಿಣಮಿಸುತ್ತಿರುವಾಗ ತೆರೆಮರೆಯಲ್ಲಿ ಅದೆಷ್ಟು ದಾಸರಿರಬಹುದು?
ದೇಶದಲ್ಲೇ ಶೈಕ್ಷಣಿಕ ರಂಗದಲ್ಲಿ ಗಣನೀಯವಾಗಿ ಗುರುತಿಸಿಕೊಂಡಿರುವ ಮಂಗಳೂರಿಗೆ ವಿದೇಶ ಹಾಗೂ ಹೊರಾರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಅವರನ್ನೇ ಕೇಂದ್ರೀಕರಿಸಿ ಈ ಮಾಫಿಯಾ ಕಾರ್ಯಾಚರಿಸುತ್ತಿವೆ. ನಂತರ ಅವರ ಮುಖಾಂತರ ಸ್ಥಳೀಯ ವಿದ್ಯಾರ್ಥಿಗಳನ್ನೂ ಇವುಗಳ ದಾಸರನ್ನಾಗಿ ಮಾಡುತ್ತಿವೆ ಎನ್ನಲಾಗುತ್ತಿದೆ. ಸಮುದ್ರ ಮಾರ್ಗದಿಂದ ಇಂತಹ ವಸ್ತುಗಳ ಸಾಗಾಟ ಎಗ್ಗಿಲ್ಲದೆ ಸಾಗುತ್ತಿದೆ ಎಂಬುದು ಅಲ್ಲಿನ ಸ್ಥಳೀಯರ ನುಡಿ. ಇದು ಇಂದು ನಿನ್ನೆಯದಲ್ಲ ಹಲಾವಾರು ವರ್ಷಗಳಿಂದ ಇಲ್ಲಿ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ. ಹಲವಾರು ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವ ಯುಜನತೆಯ ದೌರ್ಬಲ್ಯವನ್ನು ಅರಿತುಕೊಂಡು ಈ ವಸ್ತುಗಳು ಕೆಲಸ ಮಾಡುತ್ತಿವೆ ಎನ್ನಬಹುದು. ಇವುಗಳ ದುಷ್ಪರಿಣಾಮವನ್ನು ಅರಿತೋ, ಅರಿಯದೆಯೋ ವಿದ್ಯಾರ್ಥಿಗಳು ಇವುಗಳನ್ನು ಸೇವಿಸುತ್ತಿರುವುದು  ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎನ್ನಬಹುದು. ಈ ಬಗ್ಗೆ ಕರಾವಳಿ ತೀರದಲ್ಲಿ ಯಾವುದೇ ರೀತಿಯ ಸೂಕ್ತ ತಪಾಸಣಾ ವ್ಯವಸ್ಥೆ ಇಲ್ಲದಿರುವುದು ಇಂತಹ ಜಾಲಗಳಿಗೆ ವರವಾಗಿ ಪರಿಣಮಿಸಿದೆ ಎನ್ನಬಹುದು.
ಕಾಲೇಜುಗಳ ಬಳಿಯಿರುವ ಸಣ್ಣ ಸಣ್ಣ ಗೂಡಂಗಡಿಗಳೇ ಈ ರೀತಿಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಅಲ್ಲಿ ಎಲ್ಲರಿಗೂ ತಿಳಿದಿರುವ ವಿಷಯವೇ ಆದರೂ ಯಾರೂ ಈ ಬಗ್ಗೆ ಧ್ವನಿಯೆತ್ತುತ್ತಿಲ್ಲ. "ಇತ್ತೀಚೆಗೆ ನಿಧನಳಾದ ಸ್ನೇಹಾಳ ತಂದೆಯೇ ಪತ್ರಿಕೆಯೊಂದರಲ್ಲಿ ಈ ರೀತಿ ಹೇಳಿಕೆ ನೀಡಿದ್ದರು, ನಾವು ಗೌರವಸ್ಥರು. ನಮ್ಮ ಮನೆ ಮರ್ಯಾದೆಗಂಜಿ ನನ್ನ ಮಗಳೇ ಈ ಚಟವನ್ನು ಹೊಂದಿದ್ದರೂ ಅದರ ವಿರುದ್ಧ ಮಾತಾಡಲಿಲ್ಲ. ಅವಳನ್ನೇ ಶಾಲೆಯಿಂದ ಬಿಡಿಸಿ ಅವುಗಳಿಂದ ಮುಕ್ತಿ ಹೊಂದುವಂತೆ,ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದೆ. ಆದರೆ ಇಂದು ಆ ಚಟವೇ ಅವಳ ಜೀವವನ್ನು ತೆಗೆದುಕೊಂಡಿದೆ, ಇನ್ನು ಮುಂದೆ ಇದರ ವಿರುದ್ಧ ಹೋರಾಡುವ ನಿರ್ಣಯ ಮಾಡಿದ್ಧೇನೆ', ಈಕೆ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಮಾದಕ ವ್ಯಸನಿಯಾಗಿದ್ದಳು. ಪಿಯುಸಿ ಯಲ್ಲಿದ್ದಾಗ ಈ ವಿಷಯ ಮನೆಯವರಿಗೆ ತಿಳಿಯಿತು. ನಂತರ ಆಕೆಯನ್ನು ಶಾಲೆಯಿಂದ ಬಿಡಿಸಿ ಚಿಕಿತ್ಸೆ ಕೊಡಿಸುತ್ತಿದ್ದರು.  ಮಗಳನ್ನು ಕಳೆದುಕೊಂಡ ಆ ತಂದೆಯ ಮಾತುಗಳಿವು.
ಕರಾವಳಿ ಸಂಸ್ಕೃತಿಯ ನಾಡು. ಅಲ್ಲಿ ಗೌರವಕ್ಕೆ ಅಂಜಿ, ಎಲ್ಲವನ್ನೂ ಸಹಿಸಿಕೊಳ್ಳುವಂತಹ ಮುಗ್ಧ ಜನರೇ ಹೆಚ್ಚು. ಆದರೆ ಇಂತಹ ವ್ಯಸನಗಳು ತಮ್ಮ ಮಕ್ಕಳ ಜೀವ, ಜೀವನವನ್ನೇ ಬಲಿತೆಗೆದುಕೊಳ್ಳುತ್ತಿರುವುದನ್ನು ನೋಡಿ ಅವರ ಸಹನೆಯೂ ಒಡೆದಿದೆ. ಅಲ್ಲಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇಂತಹ ಜಾಲಗಳನ್ನು ಪತ್ತೆಹಚ್ಚಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ. ಎರಡು ವರ್ಷಗಳ ಹಿಂದಿನ ಪ್ರಕರಣದಲ್ಲಿಯೂ ಇಂತಹುದೇ ಪ್ರತಿಭಟನೆಗಳು  ನಡೆದಿದ್ದರೂ ಸರಕಾರ ಸಂಬಂಧಪಟ್ಟ ಇಲಾಖೆ ಇವುಗಳನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿದೆ ಎನ್ನಬಹದು. ಸೂಕ್ತವಾದ ಕ್ರಮಗಳನ್ನು ಅಂದೇ ಕೈಗೊಳ್ಳುತ್ತಿದ್ದರೆ, ಇಂದು ಸ್ನೇಹಾಳ ಜೀವ ಬಲಿಯಾಗುವುದನ್ನು ತಪ್ಪಿಸಬಹುದಿತ್ತು. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಮಾದಕ ವಸ್ತುಗಳ ಮಾರಾಟ ತಾಣಗಳನ್ನು ಪತ್ತೆಹಚ್ಚಿ, ಕಾನೂನು ರೀತ್ಯಾ ಅವರುಗಳನ್ನು ಕಠಿಣ ಶಿಕ್ಷೆಗೊಳಪಡಿಸಿ, ಅಮಾಯಕ ಜೀವಗಳು ಬಲಿಯಾಗುವುದನ್ನು ತಪ್ಪಿಸಲಿ, ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ, ಯುವ ಜಾಗೃತಿ ಮೂಡಿಸುವಂತಾಗಲಿ.  

ಚಿತ್ರಕೃಪೆ:
http://www.u4mix.com/life/drugs-addiction/

Comments

Submitted by kavinagaraj Thu, 02/07/2013 - 10:25

ಸಕಾಲಿಕ ಬರಹ. ಶೀರ್ಷಿಕೆ ಮಾದಕ ವಸ್ತುಗಳೊಂದಿಗೆ ಚಲ್ಲಾಟವಾಡುತ್ತಿರುವ ಯುವಜನತೆ ಎಂದಿದ್ದರೆ ಸೂಕ್ತವಾಗುತ್ತಿತ್ತೇನೋ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಇದರಲ್ಲಿ ತಪ್ಪು ಮಾದಕ ವಸ್ತುಗಳದ್ದಲ್ಲ.