ಯುವ ಕಲಾವಿದರ ಚಿತ್ರಗಳ ಹಿಂದಿವೆ ಹಲವಾರು ಕಥೆಗಳು!

ಯುವ ಕಲಾವಿದರ ಚಿತ್ರಗಳ ಹಿಂದಿವೆ ಹಲವಾರು ಕಥೆಗಳು!

‘Pictures Speak Louder Than Words’ ಈ ಇಂಗ್ಲೀಷ್ ವಾಕ್ಯವು ನಿಜಕ್ಕೂ ಅರ್ಥಪೂರ್ಣವಾಗಿದೆ. ಒಂದು ಚಿತ್ರಕಲೆಯು ನೂರಾರು ಕಥೆಗಳನ್ನು ಹೇಳಬಲ್ಲದು. ಅಂತಹ ತಾಕತ್ತು ಒಂದು ಚಿತ್ರಕಲೆಗಿದೆ.

ಯಾವುದಾದರೂ ಆಕರ್ಷಕ ಕಲೆಯನ್ನು ಕಂಡ ತಕ್ಷಣ ಅದರ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವುದು ಈಗಿನ ಟ್ರೆಂಡ್  ಆಗಿಬಿಟ್ಟಿದೆ. ಅದಕ್ಕೆ ಇನ್ನೊಂದು ಹೊಸ ಸೇರ್ಪಡೆಯೆಂಬಂತೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ದ್ವಾರದ ಬಳಿ ಮಂಗಳೂರಿನಲ್ಲಿಯೇ ಅತೀ ದೊಡ್ಡದಾದ ಚಿತ್ರ ಕಲಾಕೃತಿಯೊಂದು ತಲೆಯೆತ್ತುತ್ತಿದೆ. 

`ಪಿಕ್ಸೆನ್ಸಿಲ್ (PIXNCIL) ತಂಡವನ್ನು ಕಟ್ಟಿಕೊಂಡ ವಿನೋದ್ ಚಿಲಿಂಬಿ, ಆಜಿಶ್ ಸಜಿಪ, ಪೃಥ್ವಿರಾಜ್ ಮರೋಳಿ, ಅಭಿಜಿತ್ ಬಿಜೈ ಹಾಗೂ ನಿತೇಶ್ ಕನ್ಯಾಡಿ ಇವರೇ ಈ ಮಹಾ ಸಾಹಸಕ್ಕೆ ಕೈಹಾಕಿರುವುದು.

ಕಾಲೇಜು ಸಮಯದಿಂದಲೇ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಈ ಯುವಕರು ಕಾಲೇಜು ಸಮಯದಲ್ಲೇ ಚಿತ್ರಕಲಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ನಾಡಿಗೆ ಹೆಮ್ಮೆತಂದವರು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ಬೆಂಬಲದ ಕೊರತೆಯಿಂದ ಚಿಗುರಿ ಹೆಮ್ಮರವಾಗಬೇಕಿದ್ದ ಯುವಕರು ಎಲೆಮರೆಯ ಕಾಯಿಯಂತಾದರು.

ಕಳೆದ ಹತ್ತು ವರ್ಷದಿಂದಲೂ ಗೆಳೆಯರಾಗಿರುವ ಈ ಐದು ಜನ ಗೆಳೆಯರ ತಂಡವು ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ಇನ್ನೂ ಹೆಚ್ಚಿನ ಪರಿಣತಿಯನ್ನು ಪಡೆದು ತಮ್ಮದೇ ಸ್ವಂತ ಛಲದಿಂದ, ಚಿತ್ರಕಲಾ ಕ್ಷೇತ್ರದಲ್ಲಿ ಏನೋ ಒಂದು ಹೊಸ ಸಾಹಸ ಮಾಡಲು ಹೊರಟಿದ್ದಾರೆ.

ಮಂಗಳೂರು ಆಸುಪಾಸಿನಲ್ಲಿ ಯಾವುದಾದರೂ ಖಾಲಿ ಗೋಡೆಯನ್ನು ಕಂಡರೆ ಆ ಕಟ್ಟಡದ ಮಾಲೀಕರನ್ನು ಸಂಪರ್ಕಿಸುವ `ಪಿಕ್ಸೆನ್ಸಿಲ್’ ತಂಡ ಅವರ ಅಪ್ಪಣೆ ಪಡೆದು, ಆಸುಪಾಸಿನ ಜನರ ಅಭಿಪ್ರಾಯ ತಿಳಿದು, ಆ ಗೋಡೆಯಲ್ಲಿ ಯಾವ ಚಿತ್ರಕಲೆಯನ್ನು ರಚಿಸಬೇಕೆಂದು ಸ್ಕೆಚ್ ಹಾಕುತ್ತಾರೆ.

`ಪಿಕ್ಸೆನ್ಸಿಲ್ ತಂಡ ತಮ್ಮಲ್ಲೇ ಚರ್ಚೆ ನಡೆಸಿ, ತಮ್ಮ ಮನಸ್ಸಿನಲ್ಲಿ ಮೂಡಿದ ಕಾಲ್ಪನಿಕ ಚಿತ್ರದ ಬಗ್ಗೆ ಗ್ರಾಫಿಕ್ ಡಿಸೈನರ್ ಪೃಥ್ವಿರಾಜ್ ಅವರಿಗೆ ತಿಳಿಸುತ್ತಾರೆ. ಪೃಥ್ವಿರಾಜ್ ಉಳಿದವರ ಅಭಿಪ್ರಾಯದಂತೆ ಡಿಜಿಟಲ್ ಗ್ರಾಫಿಕ್ಸ್ ನಿರ್ಮಿಸುತ್ತಾರೆ. ಐವರಿಗೂ ಈ ಡಿಸೈನ್ ಓಕೆ ಆದ ಮೇಲೆ ಪ್ರಿಂಟೌಟ್ ತೆಗೆದು, ಸೆಂಟಿಮೀಟರ್ ಸ್ಕೆಚ್ ಅನ್ನು ಫೀಟ್‌ಗೆ ಕನ್‌ವರ್ಟ್ ಮಾಡಿ ಗೋಡೆ ಮೇಲೆ ಕಲಾಕೃತಿಯನ್ನು ರಚಿಸುತ್ತಾರೆ. 

ಚಿತ್ರ ಬರೆಯಲಿರುವ ಗೋಡೆಯ ಮುಂದೆ ಸ್ಕೆಫೊಲ್ಡಿಂಗ್  ಹಾಕಿ ಚಿತ್ರಕಲೆ ನಿರ್ಮಿಸುವ ಸಾಹಸಕ್ಕೆ ಧುಮುಕುವ ಈ ತಂಡವು  ಕಂಪ್ಯೂಟರ್‌ನಿಂದ ಪ್ರಿಂಟ್‌ಔಟ್ ತೆಗೆದ ಪ್ರತಿ, ಕಂಪ್ರೆಸರ್, ಏರ್ ಬ್ರಶ್, ಚಾಕ್, ಸ್ಕೇಲ್ ಹಾಗೂ ಬ್ರಶ್ ಬಳಸಿ ಮಂಗಳೂರಿನ ಹಲವಾರು ಕಡೆ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. 

ಇದೀಗ ಕುದ್ರೋಳಿ ದ್ವಾರದ ಬಳಿ ನಿರ್ಮಾಣವಾಗುತ್ತಿರುವ, ೪೫ ಅಡಿ ಎತ್ತರ ಹಾಗೂ ೨೨ ಅಡಿ ಅಗಲದ, ಗೋಡೆಚಿತ್ರ ಕಲಾಕೃತಿಯು  ಮಂಗಳೂರಿನಲ್ಲೇ ಅತೀ ದೊಡ್ಡ ಗೋಡೆ ಚಿತ್ರ ಕಲಾಕೃತಿಯಾಗಿರುವುದಲ್ಲದೆ, ಇದನ್ನು ಕೇವಲ ಒಂದು ವಾರದೊಳಗೆ ನಿರ್ಮಿಸುವ ಛಾಲೆಂಜ್‌ನ್ನು ತೆಗೆದುಕೊಂಡಿರುವ ಯುವಕರ ಸಾಹಸವನ್ನು ಮೆಚ್ಚಲೇಬೇಕು.

ಪ್ರಸ್ತುತ ಹೆಚ್ಚಿನ ಭಾಗ ಕೆಲಸ ಮುಗಿದಿದ್ದು ಒಂದೆರಡು ದಿನಗಳಲ್ಲಿ ಸಂಪೂರ್ಣ ಮುಕ್ತಾಯಗೊಳ್ಳಲಿದೆ. ಕುದ್ರೋಳಿ ಖ್ಯಾತ ಪ್ರವಾಸಿ ಕ್ಷೇತ್ರವಾಗಿರುವುದರಿಂದ ಹಾಗೂ ಇಲ್ಲಿ ಶಿವನು ಮುಖ್ಯ ದೇವರಾಗಿರುವುದರಿಂದ ಸಹಜವಾಗಿಯೇ ಕಲಾವಿದರು ಶಿವನಿಗೆ ಪ್ರಾಶಸ್ತ್ಯ ನೀಡಿದ್ದು, ಚಿತ್ರದ ಮೇಲ್ಭಾದಲ್ಲಿ ಶಿವ, ಮಧ್ಯಭಾಗದಲ್ಲಿ ಹುಲಿವೇಷ ಹಾಗೂ ಕೆಳಗಿನ ಭಾಗದಲ್ಲಿ ಬಲೂನು ಮಾರುವ ಬಾಲಕನೊಬ್ಬನ ಚಿತ್ರವನ್ನು ಬಿಡಿಸಲಾಗಿದೆ. ಫಿನಿಶಿಂಗ್ ಟಚ್ ಮಾತ್ರ ಬಾಕಿ ಇದೆ. ಈ ಚಿತ್ರದಲ್ಲಿರುವ ಬಾಲಕ ಕೂಡಾ ಈ ಕಲಾವಿದರ ಪರಿಚಿತನೇ.

`ಕಲೆಗೆ ಬೆಲೆ ಕಟ್ಟಲಾಗದು. ಆದರೆ ಪ್ರಾಕ್ಟಿಕಲ್ ಆಗಿ, ಹೆಚ್ಚು ಕಾಲ ಬಾಳಿಕೆ ಬರಬೇಕೆಂಬ ಉದ್ದೇಶದಿಂದ `ಅಪೆಕ್ಸ್ ಪೈಂಟ್ ಬಳಸಿ ನಿರ್ಮಿಸುವ ಈ ಚಿತ್ರಕಲೆಗೆ ಸುಮಾರು ಒಂದು ಲಕ್ಷ ಖರ್ಚಾಗಲಿದೆ. ಈ ಬಗ್ಗೆ ಮಂಗಳೂರಿನ ‘ಬಿರುವೆರ್ ಕುಡ್ಲ’ ಎಂಬ ಸಂಸ್ಥೆಯ ಮುಖ್ಯಸ್ಥರಾದ ಉದಯ ಕುಮಾರ್‌ರವರನ್ನು ಸಂಪರ್ಕಿಸಿದಾಗ ಅವರು ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಕಟ್ಟಡದ ಮಾಲೀಕರಾದ ಪುಂಡಲೀಕ, ಫೈಝಲ್, ರಝಾಕ್ (ಪುಷ್ಪಕ್ ಎನ್ವೆಲಪ್ಸ್), ಅಕ್ಷಯ್ ದೇವಾಂಗ, ಹರೀಶ್ ಕೊಟ್ಟಾರಿ ಇನ್ನೂ ಹಲವರು ಆರ್ಥಿಕ ಬೆಂಬಲವನ್ನು ಸೂಚಿಸಿದ್ದಾರೆ. 

`ಪಿಕ್ಸ್‌ನ್ಸಿಲ್  ತಂಡ ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿ ನಿರ್ಮಿಸಿದ `ಮೀನು ಮಾರುವ ಮಹಿಳೆಯ ಚಿತ್ರ ಕಲಾಕೃತಿಯು ಒಂದು ಕಥೆಯನ್ನು ಹೇಳಿದರೆ, ಚಿಲಿಂಬಿ ಮಲರಾಯ ದೇವಸ್ಥಾನ ದ್ವಾರದ ಬಳಿ ನಿರ್ಮಿಸಿದ ಚಿತ್ರ ಬೇರೊಂದೇ ಕಥೆಯನ್ನು ಹೇಳುತ್ತದೆ. 

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಮನೆಯೊಳಗೇ ಸಿಕ್ಕಿಕೊಂಡು, ಕಣ್ಣು ದೃಷ್ಟಿ ತೊಂದರೆಗೊಳಗಾದ ೮೦ ವರ್ಷ ಪ್ರಾಯದ ಹಿರಿಯ ನಾಗರಿಕರ ಭಾವಚಿತ್ರವಿರುವ ಈ ಗೋಡೆಚಿತ್ರವು, ಹಿರಿಯ ನಾಗರಿಕರ ಬಗ್ಗೆ ಅಸಡ್ಡೆಯನ್ನು ತೋರುವವರಿಗೆ ಉತ್ತಮ ಪಾಠವನ್ನೇ ಹೇಳುತ್ತದೆ. ಮುಂದೊಂದು ದಿನ ನೀವೂ ಈ ಸ್ಥಾನಕ್ಕೆ ಬರಲಿದ್ದೀರಿ ಎಂಬ ಬಗ್ಗೆ ಎಚ್ಚರಿಕೆಯನ್ನೂ ಈ ಚಿತ್ರವು ನೀಡುತ್ತದೆ. 

ಅದೇ ರೀತಿ ಸುಲ್ತಾನ್ ಬತ್ತೇರಿಯಲ್ಲಿ ಪಾಳು ಬಿದ್ದ ಫ್ಯಾಕ್ಟರಿಯೊಂದರ ಗೋಡೆಯಲ್ಲಿ ನಿರ್ಮಿಸಿದ ಯುವತಿಯ ಚಿತ್ರವು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್‌ರವರು  ಕೂಡಾ ಪಿಕ್ಸ್‌ನ್ಸಿಲ್ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ. 

`ಪಿಕ್ಸ್‌ನ್ಸಿಲ್  ತಂಡವು ರಚಿಸಿದ ಒಂದೊಂದು ಚಿತ್ರಕಲೆಯೂ  ಅಮೂಲ್ಯವಾದದ್ದು. ಒಂದೊಂದು ಚಿತ್ರವೂ ಒಂದೊಂದು ಕಥೆ ಹೇಳುತ್ತದೆ. ಇವರು ಚಿತ್ರಕ್ಕಾಗಿ ನೈಜ ರೂಪದರ್ಶಿಗಳನ್ನೇ ಬಳಸಿಕೊಂಡಿದ್ದಾರೆ. ನಮ್ಮ ಪರಿಸರ ಬಗ್ಗೆ, ಸದುದ್ದೇಶ ಇರುವ, ಕ್ಷೇತ್ರ ಮಹತ್ವ ಸಾರುವ ವಿಷಯಗಳನ್ನೇ ಇವರು ಚಿತ್ರಕಲೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇವರ ಚಿತ್ರದಿಂದ ಗೋಡೆಯ ಅಂದ ಹೆಚ್ಚುವುದರ ಜೊತೆಗೆ ಜನರಿಗೆ ಅಮೂಲ್ಯ ಮಾಹಿತಿಯೂ ದೊರೆಯುತ್ತದೆ. ಜನರಿಂದ ಸಹಕಾರ ಸಿಕ್ಕರೆ, ಮಂಗಳೂರು ನಗರದ ಆಸುಪಾಸಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರ ಕಲಾಕೃತಿಯನ್ನು ನಿರ್ಮಿಸಬೇಕೆಂಬ ಅಭಿಲಾಷೆಯನ್ನು `ಪಿಕ್ಸೆನಿಲ್ಸ್  ತಂಡವು ಹೊಂದಿದೆ. 

ಏನಾದರೂ ಸಾಧನೆ ಮಾಡಬೇಕೆಂಬ ಛಲ ಹೊಂದಿರುವ ಈ ಯುವಕರು ಆರ್ಥಿಕವಾಗಿ ಸದೃಢರಾಗಿಲ್ಲದಿದ್ದರೂ ಮಂಗಳೂರಿಗರ ಸಹಕಾರದ ನಂಬಿಕೆಯಿಂದ ಇಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಸರಕಾರ ಹಾಗೂ ಸಂಘ ಸಂಸ್ಥೆಗಳು ಇವರಿಗೆ ಸಹಕಾರ ನೀಡಬೇಕೆಂಬ ಹಂಬಲ ನಮ್ಮದು. `ಆಲ್ ದ ಬೆಸ್ಟ್ ಪಿಕ್ಸ್‌ನ್ಸಿಲ್. 

ಯಾರಿಗಾದರೂ `ಪಿಕ್ಸ್‌ನ್ಸಿಲ್  ತಂಡಕ್ಕೆ ಸ್ವಯಂಸೇವಕರಾಗಿ ಸೇರಲು ಇಚ್ಛೆಯಿದ್ದಲ್ಲಿ ಆತ್ಮೀಯ ಸ್ವಾಗತವಿದೆ ಎಂದು ತಂಡದ ಸದಸ್ಯ ವಿನೋದ್‌ರವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ `ಪಿಕ್ಸ್‌ನ್ಸಿಲ್  ತಂಡವನ್ನು ಸಂಪರ್ಕಿಸಬಹುದು. 

ಮೊಬೈಲ್ : 9611801491 (ಪೃಥ್ವಿರಾಜ್) 

ಚಿತ್ರ ವಿವರ: ೧. ಉರ್ವಾ ಮಾರ್ಕೆಟ್ ನ ಮೀನುಗಾರ ಮಹಿಳೆಯ ಚಿತ್ರ 

೨. ಚಿತ್ರ ರಚಿಸುವ ಯುವ ಕಲಾವಿದರು

೩. ಮಹಿಳಾ ದೌರ್ಜನ್ಯದ ಕಥೆ ಹೇಳುವ ಚಿತ್ರ (ಸುಲ್ತಾನ್ ಬತ್ತೇರಿಯ ಮೊದಲ ಹಾಗೂ ಈಗಿನ ದೃಶ್ಯಗಳು)

೪. ಕೊನೆಯ ಹಂತದಲ್ಲಿರುವ ಕುದ್ರೋಳಿ ದ್ವಾರದ ಬಳಿಯ ಚಿತ್ರ

ಮಾಹಿತಿ ಮತ್ತು ಸಹಕಾರ: ಮನು ಶಕ್ತಿನಗರ