ಯುವ ಚೇತನ ಸ್ವಾಮಿ ವಿವೇಕಾನಂದ

ಯುವ ಚೇತನ ಸ್ವಾಮಿ ವಿವೇಕಾನಂದ

ಬಾಲಕ ನರೇಂದ್ರನಾಥ ದತ್ತ ೧೨--೦೧--೧೮೬೨ ರಂದು ಶ್ರೀ ವಿಶ್ವನಾಥ ದತ್ತ, ಭುವನೇಶ್ವರಿ ದೇವಿ ದಂಪತಿಗಳಿಗೆ ಮಗನಾಗಿ ಜನಿಸಿದ. ಸಣ್ಣ ವಯಸ್ಸಿನಲ್ಲಿಯೇ ನಾಯಕತ್ವ ಗುಣ ಬಾಲಕನಲ್ಲಿ ಬಂದಿತ್ತು. ‘ಒಂದು ದಿನ ನೀನು ಏನಾಗಲು ಬಯಸುವೆ ಎಂದು ಅಪ್ಪ ಕೇಳಿದಾಗ, ಭಗವದ್ಗೀತೆ ಉಪದೇಶಿಸುವ ಭಾವಚಿತ್ರ ತೋರಿಸಿ, ಚಾಟಿ ಹಿಡಿದ ಕೃಷ್ಣನಂತಾಗುವೆ’ ಎಂದನಂತೆ. ಅಪ್ಪ ಬಾಲಕನ ಮೈಗೆ ಬಾಸುಂಡೆ ಬರುವ ಹಾಗೆ ಬಾರಿಸಿ ಹೊರ ಹೋದಾಗ, ಅಮ್ಮನ ಹತ್ತಿರ ಹೇಳಿದನಂತೆ *ಇಡೀ ಜಗತ್ತನ್ನೇ ಆಡಿಸಿದ ಆ ಕೃಷ್ಣನಂತಾಗುವೆ, ಸಾರಥಿಯಾಗುವೆ* ಎಂಬುದಾಗಿ.

ಮುಂದೇ ಇದೇ ಬಾಲಕ 'ಸ್ವಾಮಿ ವಿವೇಕಾನಂದರಾದರು.'ತನ್ನ ವಿಶಾಲ ದೃಷ್ಟಿಕೋನ, ವಿವೇಕ, ನಿರ್ಭಯತೆ, ಆಶಾವಾದ, ತತ್ವಜ್ಞಾನ'ಗಳಿಂದ ವಿಶ್ವಮಾನ್ಯರಾದರು. ಇವರ ಗುರು ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶಾರದಾಮಾತೆ ಇವರ ಮೇಲೆ ಹೆಚ್ಚು ಪ್ರಭಾವ ಬೀರಿದವರು.

ವೇದಾಂತ, ತತ್ವಶಾಸ್ತ್ರ, ರಾಜನೀತಿ, ಸಾಹಿತ್ಯ ಕೆಲಸಗಳು, ರಾಜಯೋಗ, ಕರ್ಮಯೋಗ, ಭಕ್ತಿ ಯೋಗ ಮತ್ತು ಜ್ಞಾನ ಯೋಗ ಇವುಗಳನ್ನು ಅಭ್ಯಸಿಸಿದ್ದರು. *ಭಕ್ತಿ ನಿಷ್ಠರಾಗದ ಹೊರತು ಜೀವನದ ರಹಸ್ಯ ಅರಿಯಲು ಸಾಧ್ಯವಿಲ್ಲ * ಎಂದು ಶಾರದಾಮಾತೆ ಹೇಳುತ್ತಿದ್ದರು. ಗುರುವಿನ ಸಂದೇಶಗಳನ್ನು ಭಾರತ ದೇಶದ ಉದ್ದಗಲಕ್ಕೂ ಪಸರಿಸಿದರು,ಪ್ರವಾಸ ಕೈಗೊಂಡರು.

೧೮೯೨ರಲ್ಲಿ ಚಿಕಾಗೋ (ಅಮೇರಿಕಾ) ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಸರ್ವಧರ್ಮ ಸಮ್ಮೇಳನದ ಅವರ ಮಾತುಗಳನ್ನು ಕೇಳಿದವರು ತಲೆದೂಗಿದರು. *ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ಹಿಡಿದ ಕಾರ್ಯವ ಬಿಡದಿರಿ* ಕರೆಯಿತ್ತರು. ಅವರ ಚಿಕಾಗೋ ಭಾಷಣದ ಪ್ರಾರಂಭಿಕ ಮಾತುಗಳಾದ ‘ಅಮೇರಿಕಾದ ನನ್ನ ಸಹೋದರ, ಸಹೋದರಿಯರೇ... ಅಲ್ಲಿದ್ದ ಸಮಸ್ತ ಸಭಿಕರನ್ನು ಬಡಿದೆಬ್ಬಿಸಿತು. ದೀರ್ಘವಾದ ಕರತಾಡನವಾಯಿತು. ಆಧ್ಯಾತ್ಮಿಕ ಅಲೆಯನ್ನು, ಸ್ಪಷ್ಟ ನಿಲುವನ್ನು, ತಾರ್ಕಿಕ ಆಲೋಚನೆಗಳನ್ನು, ನವಭಾರತ ನಿರ್ಮಾಣದ ಕನಸನ್ನು ಹೋದಲ್ಲೆಲ್ಲಾ ಬಿತ್ತಿದರು.

ಪ್ರಾರ್ಥನೆ ಎಂದರೆ ಅದು ಯಾಂತ್ರಿಕವಲ್ಲ, ಏಕಾಗ್ರತೆ ಬೇಕು, ಅದಿಲ್ಲದಿದ್ದರೆ ಧರ್ಮ ದ್ರೋಹ ಮಾಡಿದಂತೆ*  ಎಂದರು. ಪ್ರತಿಯೊಬ್ಬ ಭಾರತೀಯನೂ,ಅದರಲ್ಲೂ ಯುವಕರು ಶಕ್ತಿಯುತವಾಗಿ, ಮೌಲ್ಯಯುತವಾಗಿ ಬಾಳಲು ಪ್ರಯತ್ನಿಸಿ ಎಂದರು. ನಮ್ಮ ಲ್ಲಿ ಪರಿಪೂರ್ಣತೆ ಬರಲು ಶಿಕ್ಷಣ ಅಗತ್ಯವಿದೆ. ಶಿಕ್ಷಣದಿಂದ 'ಚಾರಿತ್ರ್ಯ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರ ನಿರ್ಮಾಣ, ಉನ್ನತ ವಿಚಾರಗಳ ಅವಲೋಕನ,ಸಾಧ್ಯ, ಒಬ್ಬ ವ್ಯಕ್ತಿಯನ್ನು ಶಿಕ್ಷಣ ಮೌಲ್ಯಗಳ ಧಾರೆ ಎರೆದು ಹುಲಿಯನ್ನಾಗಿಸಿ, ನರಿಯನ್ನಾಗಿ ಮಾಡದಿರಿ ಎನ್ನುತ್ತಿದ್ದರು.

ಕೃಷಿಗೆ, ರೈತರಿಗೆ, ಜನಸಾಮಾನ್ಯರಿಗೆ ಹೆಚ್ಚು ಒತ್ತು ನೀಡಿದರು. ಜನಸಾಮಾನ್ಯರ ಬೆವರಿಗೆ ಮರ್ಯಾದೆ ಕೊಡದೆ ಇದ್ದಲ್ಲಿ *ದೇಶದ್ರೋಹಿ* ಗಳಾಗುವಿರಿ ಎಂದರು. ಹಿಂತಿರುಗಿ ನೋಡದೆ, ಸದಾ ಮುನ್ನಡೆಯಿರಿ, ಭೀತಿ ಎಂಬುದು ಎಲ್ಲಾ ಹಿನ್ನೆಡೆಗೆ ಕಾರಣವೆಂದರು. ಆತ್ಮವಿಶ್ವಾಸ ನಿನ್ನ ಸ್ನೇಹಿತ, ಹೆದರದೆ ಮುನ್ನುಗ್ಗಿ ಎಂದರು.

"Truth can be stated in a thousand different ways.Yet each one can be true.

Strength is life, Weakness is Death *. ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು *ರಾಷ್ಟ್ರೀಯ ಯುವ ದಿನ*ವನ್ನಾಗಿ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳ ಬಗ್ಗೆ ವಿಶೇಷವಾದ ಕರೆ ನೀಡಿ 'ಅವರನ್ನು ಅವರಷ್ಟಕ್ಕೇ ಬೆಳೆಯಲು ಬಿಡಿ, ಬೇಲಿಯನ್ನು ಕಿತ್ತೊಗೆಯಿರಿ, ಅವರ ಜೀವನ ರೂಪಿಸಲು ಅವರಿಗೆ ಗೊತ್ತಿದೆ, ಅವರಿಗೆ ಆ ಶಕ್ತಿ ಇದೆ' ಎಂದು ಕರೆಯಿತ್ತರು.

ಜೀವನದಲ್ಲಿ ಗುರಿ ಮತ್ತು ಕನಸು ಇಲ್ಲದವ ಬಡವ ಎಂಬುದಾಗಿ ಹೇಳುತ್ತಿದ್ದರು, ಹುಡುಗರನ್ನು ಬಡಿದೆಬ್ಬಿಸುತ್ತಿದ್ದರು. ಇಂಥ ಧೀಮಂತ ಯುವನಾಯಕ ಚಿಕ್ಕ ವಯಸ್ಸಿನಲ್ಲಿ ೪--೭--೧೯೦೨ರಲ್ಲಿ  ಅಸುನೀಗಿದ್ದು, ಭಾರತದೇಶಕ್ಕೆ ತುಂಬಲಾರದ ನಷ್ಟ. ಅವರ ಜನ್ಮ ದಿನಕ್ಕೆ ನಮ್ಮದೊಂದು ನೆನಹು.

 

-ರತ್ನಾ ಭಟ್ ತಲಂಜೇರಿ

(ವಿವಿಧ ಮೂಲಗಳಿಂದ ಸಂಗ್ರಹ)

ಚಿತ್ರ: ಚಿಕಾಗೋ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು