ಯು ಎಲ್ ಐ ಗೌಪ್ಯತೆ: ಆರ್ ಬಿ ಐ ಮುಂದಿರುವ ಸವಾಲು
ಭಾರತ ಮಾತ್ರವಲ್ಲದೆ ಈಗ ವಿಶ್ವದೆಲ್ಲೆಡೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿರುವ ಯು ಪಿ ಐ ಮಾದರಿಯಲ್ಲಿ ಶೀಘ್ರದಲ್ಲಿಯೇ ಸಾಲ ನೀಡಿಕೆಗೂ ದೇಶವ್ಯಾಪಿಯಾಗಿ ಯುನಿಫೈಡ್ ಲೆಂಡಿಂಗ್ ಇಂಟರ್ ಫೇಸ್ (ಯು ಎಲ್ ಐ) ಅನ್ನು ಪರಿಚಯಿಸಲಾಗುವುದು ಎಂದು ಆರ್ ಬಿ ಐ ಘೋಷಿಸಿದೆ. ಸಾಲ ನೀಡಿಕೆ ಪ್ರಕ್ರಿಯೆಯನ್ನು ಸರಳ ಮತ್ತು ಸುಲಲಿತಗೊಳಿಸುವುದೇ ಯು ಎಲ್ ಐ ಜಾರಿಯ ಹಿಂದಿನ ಉದ್ದೇಶ.
ಯು ಪಿ ಐ, ಇಡೀ ಪಾವತಿ ವ್ಯವಸ್ಥೆಯನ್ನು ಬದಲಾಯಿಸಿದ್ದೇ ಅಲ್ಲದೆ ವಹಿವಾಟು ಮತ್ತು ವ್ಯವಹಾರವನ್ನು ಹೆಚ್ಚು ಪಾರದರ್ಶಕವಾಗಿಸಿತು. ನಿರೀಕ್ಷೆಗೂ ಮೀರಿದ ವೇಗದಲ್ಲಿ ದೇಶದ ಜನತೆ ಯುಪಿಐ ಪಾವತಿ ವ್ಯವಸ್ಥೆಗೆ ಹೊಂದಿಕೊಳ್ಳುವ ಮೂಲಕ ನಗದು ವ್ಯವಹಾರ ಒಂದಿಷ್ಟು ಹಿನ್ನಲೆಗೆ ಸರಿಯುವಂತಾಯಿತು. ದೇಶದಲ್ಲಿ ಯುಪಿಐ ಈಗ ಸಾರ್ವತ್ರಿಕವಾಗಿ ಬಳಕೆಯಲ್ಲಿದ್ದು ಬಲು ಜನಪ್ರಿಯವಾಗಿದೆ. ಇದರಿಂದ ಪ್ರೇರಣೆ ಪಡೆದು ಭಾರತೀಯ ರಿಸರ್ವ್ ಬ್ಯಾಂಕ್ ಈಗ ಸಾಲ ನೀಡಿಕೆಗೂ ಇಂತಹುದೇ ತಂತ್ರಜ್ಞಾನ ಫ್ಲಾಟ್ ಫಾರಂ ಅನ್ನು ಪರಿಚಯಿಸಲು ಮುಂದಾಗಿದೆ.
ಗ್ರಾಹಕರಿಗೆ ಯಾವುದೇ ಸಮಸ್ಯೆ, ತೊಡಕುಗಳಿಲ್ಲದೆ ಸಾಲ ಲಭಿಸುವಂತಾಗ ಬೇಕೆಂಬ ಉದ್ದೇಶದಿಂದ ಆರ್ ಬಿ ಐ, ಸಾರ್ವಜನಿಕ ತಾಂತ್ರಿಕ ವೇದಿಕೆಯೊಂದನ್ನು ಅಭಿವೃದ್ಧಿ ಪಡಿಸಿತ್ತು. ಆದರೆ ಸಾಲ ನೀಡಿಕೆಗೆ ಅಗತ್ಯವಾದ ದಾಖಲೆ ಪತ್ರಗಳು, ಮಾಹಿತಿಗಳು, ದತ್ತಾಂಶಗಳು ವಿವಿಧ ವ್ಯವಸ್ಥೆಯಲ್ಲಿರುವುದರಿಂದ ಇದು ಕಷ್ಟ ಸಾಧ್ಯವಾಯಿತು. ಈ ಹಿನ್ನಲೆಯಲ್ಲಿ ಆರ್ ಬಿ ಐ, ಯು ಎಲ್ ಐ ಅನ್ನು ಪರಿಚಯಿಸಲು ತೀರ್ಮಾನಿಸಿತು. ಈ ಹೊಸ ವ್ಯವಸ್ಥೆಯಿಂದ ಗ್ರಾಮೀಣ ಮತ್ತು ಸಣ್ಣ ಸಾಲಗಾರರು ಹಾಗೂ ಸೂಕ್ಷ್ಮ ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಅತ್ಯಂತ ತ್ರರಿತ ಗತಿಯಲ್ಲಿ ಸಾಲ ನೀಡಲು ಸಾಧ್ಯವಾಗಲಿದೆ. ಇನ್ನು ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಈ ಪ್ಲಾಟ್ ಫಾರಂ ವ್ಯಾಪ್ತಿಗೆ ಬರಲಿದೆ. ಗ್ರಾಹಕರ ಭೂ ದಾಖಲೆ ಸಹಿತ ಎಲ್ಲ ದಾಖಲೆಗಳು ಮತ್ತು ಮಾಹಿತಿಗಳು ಯು ಎಲ್ ಐ ನಲ್ಲಿ ಲಭ್ಯವಿರಲಿದ್ದು ಇದರ ಆಧಾರದಲ್ಲಿ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲ ಮಂಜೂರು ಮಾಡಲು ಸಾಧ್ಯವಾಗಲಿದೆ. ಯುಪಿಐ ಮಾದರಿಯಲ್ಲಿ ಯು ಎಲ್ ಐ ಕೂಡ ಸಾಲ ನೀಡಿಕೆ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂಬ ವಿಶ್ವಾಸ ಆರ್ ಬಿ ಐನದ್ದಾಗಿದೆ.
ಇದೇ ವೇಳೆ ಯು ಎಲ್ ಐ ಜಾರಿಯಿಂದ ಗ್ರಾಹಕರ ಮಾಹಿತಿ ಸಾರ್ವಜನಿಕರಿಗೆ ಮುಕ್ತವಾಗಿರುವುದಿಲ್ಲ ಮತ್ತು ಗ್ರಾಹಕರ ವೈಯಕ್ತಿಕ ಮಾಹಿತಿಗಳು ಮತ್ತು ದಾಖಲೆಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ. ಆದರೆ ಯು ಪಿ ಐ ಜಾರಿಯಾದ ಬಳಿಕ ವಂಚನೆ ಪ್ರಕರಣಗಳು ಅಗಾಧ ಪ್ರಮಾಣದಲ್ಲಿ ಹೆಚ್ಚಿವೆ. ಪ್ರತಿ ನಿತ್ಯ ಎಂಬಂತೆ ಜನರು ವಂಚನ ಜಾಲಕ್ಕೆ ಸಿಲುಕಿ ಕೈಸುಟ್ಟುಕೊಳ್ಳುತ್ತಿದ್ದಾರೆ. ಜನರ ವೈಯಕ್ತಿಕ ಮಾಹಿತಿ, ದತ್ತಾಂಶಗಳು, ದಾಖಲೆಗಳು ಪರರ ಕೈಸೇರಿ ಮೋಸ ಹೋಗುತ್ತಿರುವ ಘಟನೆಗಳು ನಿತ್ಯ ನಿರಂತರ ಎಂಬಂತಾಗಿದೆ. ಇಂತಹ ಸ್ಥಿತಿಯಲ್ಲಿ ಈಗ ಸಾಲ ನೀಡಿಕೆಗೂ ತಂತ್ರಜ್ಞಾನದ ಫ್ಲಾಟ್ ಫಾರಂ ಅನ್ನು ಪರಿಚಯಿಸಿದಲ್ಲಿ ಯಾರ್ಯಾರದೋ ಹೆಸರಲ್ಲಿ ಇನ್ಯಾರೋ ಸಾಲ ಪಡೆದು ಗ್ರಾಹಕರಿಗೆ ಮಾತ್ರವಲ್ಲದೆ ಬ್ಯಾಂಗ್ ಗಳಿಗೂ ಪಂಗನಾಮ ಹಾಕುವ ಸಾಧ್ಯತೆ ಇದೆ. ಹಾಗಾಗದಂತೆ ಎಚ್ಚರ ವಹಿಸಲಾಗುವುದು ಎಂದು ಆರ್ ಬಿ ಐ ಮುಖ್ಯಸ್ಥರು ಭರವಸೆ ನೀಡಿದ್ದರೂ ಈಗ ದೇಶದ ವಿವಿದೆಡೆ ವಂಚಕರು ನವನವೀನ ಮಾದರಿಯಲ್ಲಿ ತಂತ್ರಜ್ಞಾನವನ್ನು ಬಳಸಿಯೇ ವಂಚಿಸುತ್ತಿರುವ ಘಟನೆಗಳಿಂದಾಗಿ ಯು ಎಲ್ ಐ ಸುರಕ್ಷೆಯ ಬಗೆಗೆ ಸಾರ್ವಜನಿಕರಿಗೆ ಅನುಮಾನ ಇದ್ದೇ ಇದೆ. ಹೀಗಾಗಿ ಆರ್ ಬಿ ಐ, ಯು ಎಲ್ ಐ ಜಾರಿಗೂ ಮುನ್ನ ಇಂತಹ ಅಕ್ರಮ, ವಂಚನೆಗಳು ನಡೆಯದಂತೆ, ಗ್ರಾಹಕರ ವೈಯಕ್ತಿಕ ದಾಖಲೆ, ಮಾಹಿತಿಗಳ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ಆರ್ ಬಿ ಐ ನ ಹೊಣೆಗಾರಿಕೆಯಾಗಿದೆ. ಆರ್ ಬಿ ಐ ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದರ ಮೇಲೆ ಯು ಎಲ್ ಐ ನ ಯಶಸ್ಸು ನಿಂತಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೯-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ