ಯೂನಿಕೋಡ್
ಕಂಪ್ಯೂಟರಿನಲ್ಲಿರುವ ಇಂಗ್ಲಿಷ್ ಅಕ್ಷರಗಳಿಗೆ ASCII (American Standard Code for Infromation Interchange=ಮಾಹಿತಿ ವಿನಿಮಯಕ್ಕೆ ಅಮೆರಿಕದ ಮಾನಕ) ಅಳವಡಿಸಿರುವುದರಿಂದ ಒಂದು ಕಂಪ್ಯೂಟರಿನಲ್ಲಿ ಟೈಪಿಸಿದ ಮಾಹಿತಿಯನ್ನು ತೆಗೆದುಕೊಂಡು ಮತ್ತೊಂದು ಕಂಪ್ಯೂಟರಿನಲ್ಲಿ ತೆರೆದು ನೋಡಿದಾಗಲೂ ಅದೇ ಅಕ್ಷರಗಳನ್ನು ಕಾಣಬಹುದಾಗಿದೆ.
ಆದರೆ ಕನ್ನಡ ಮುಂತಾದ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಲು ಹಲವರು ಪ್ರಯತ್ನಿಸಿರುವರಾದರೂ ASCII ಯನ್ನು ನಿಯಂತ್ರಿಸುವ ಸಂಸ್ಥೆಗೆ ತಮ್ಮ ಆವಿಷ್ಕಾರವನ್ನು ಅರುಹಲು ಯಾವ ಇತಿಮಿತಿಗಳಿತ್ತೋ ತಿಳಿಯದು. ಅಲ್ಲದೆ ಯಾರು ಯಾರು ಕನ್ನಡ ಲಿಪಿ ತಂತ್ರಾಂಶದ ವಿನ್ಯಾಸ ಮಾಡಿದರೋ ಅವರೆಲ್ಲ ತಮ್ಮದೇ ಆದ ಮಾಹಿತಿ ವಿನಿಮಯ ವೇದಿಕೆ ರೂಪಿಸಿಕೊಂಡರು. ಹೀಗಾಗಿ ANSI, ISCII ಇತ್ಯಾದಿಗಳಲ್ಲಿ ಕನ್ನಡ ಹಂಚಿಹೋಯಿತು.
ಇದರ ದುಷ್ಪರಿಣಾಮಗಳನ್ನು ಮೊದಲೇ ಊಹಿಸಿಕೊಂಡ ಕನ್ನಡ ಗಣಕ ಪರಿಷತ್ತು ಒಂದು ಮಾನಕ ತಂತ್ರಾಂತ ರೂಪಿಸಿ ಕನ್ನಡದ ಎಲ್ಲ ಲಿಪಿತಂತ್ರಾಂಶಗಳೂ ಆ ಮಾನಕಕ್ಕೆ ವಿಧೇಯವಾಗಿರಬೇಕೆಂದು ವಿನಂತಿಸಿತು. ಆದರೆ ಆಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ನೆಲೆ ಗುರುತಿಸಿಕೊಂಡಿದ್ದವರು ತಮ್ಮ ತಂತ್ರಾಂಶವೇ ಶ್ರೇಷ್ಠ ಎಂದು ವಾದಿಸತೊಡಗಿ ಪ್ರತ್ಯೇಕತೆ ಉಳಿಸಿಕೊಂಡಿದ್ದರಿಂದ ಕನ್ನಡದ ಗಣಕೀಕರಣ ಪ್ರಕ್ರಿಯೆಗೆ ಸ್ವಲ್ಪ ಹಿನ್ನಡೆಯಾಯಿತು.
ಈಗ ಯೂನಿಕೋಡ್ ಬಂದಿದೆ. ನುಡಿ ಕೀಲಿಮಣೆ, ಬರಹ ಕೀಲಿಮಣೆ ಬಳಸಿಯೂ ನಾವು ಯೂನಿಕೋಡ್ ಅಕ್ಷರಗಳನ್ನು ಅಚ್ಚಿಸಬಹುದಾಗಿದೆ. ಇ-ಮೇಲ್ ಪೂರೈಕೆದಾರರೂ ತಮ್ಮನ್ನು ಯೂನಿಕೋಡ್ ತಂತ್ರಾಂಶಕ್ಕೆ ಅಳವಡಿಸಿಕೊಂಡಿರುವುದರಿಂದ ದೇಶವಿದೇಶಗಳ ಕನ್ನಡಿಗರು ತಮ್ಮ ಕಂಪ್ಯೂಟರಿನಲ್ಲಿ ಕನ್ನಡ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆಯೇ ಕನ್ನಡದ ಇ-ಮೇಲ್ ಓದಬಹುದಾಗಿದೆ. ಹಲವಾರು ಜಾಲತಾಣಗಳೂ ಇಂದು ಯೂನಿಕೋಡ್ ಅಳವಡಿಸಿಕೊಂಡಿವೆ. ಹೀಗೆ ಶ್ರೀಲಿಪಿಯಲ್ಲಿ ಬರೆದಿರುವುದನ್ನು ಬರಹದಲ್ಲಿ ಓದಲಾಗದೇ, ನುಡಿಯಲ್ಲಿರುವುದನ್ನು ಇನ್ನೊಂದರಲ್ಲಿ ಓದಲಾಗದೇ ಚಡಪಡಿಸುವ ಸನ್ನಿವೇಶಗಳು ಇಲ್ಲ.
ಆದರೆ ಈ ಯೂನಿಕೋಡ್ ಸಹಾ ಸ್ವಯಂ ಪರಿಪೂರ್ಣವಾಗಿಲ್ಲ. ಈಗಾಗಲೇ ನುಡಿಯಲ್ಲಾಗಲೀ ಬರಹದಲ್ಲಾಗಲೀ ಇರುವ ಪಠ್ಯಗಳನ್ನು ಯೂನಿಕೋಡ್ ಅಕ್ಷರಕ್ಕೆ ಪರಿವರ್ತಿಸಿಕೊಂಡರೆ ವಿ, ಮಿ, ಹಿ, ಯ ಮುಂತಾದ ಅಕ್ಷರಗಳು ಮಾಯವಾಗುತ್ತವೆ. ನುಡಿಯ ಯೂನಿಕೋಡ್ ಪರಿವರ್ತಕದಲ್ಲಿ ಕನ್ನಡ ಅಂಕಿಗಳೂ ಮಾಯವಾಗುತ್ತವೆ. ಇನ್ನು Page Maker ತಂತ್ರಾಂಶವಂತೂ ಯೂನಿಕೋಡ್ ಅಳವಡಿಸಿಕೊಂಡಿಲ್ಲ. ಬರಹ ೭.೦ ರ Arial Unicode MS ಬಳಸಿದ ನಮ್ಮ ಗ್ರಂಥಾಲಯ ತಂತ್ರಾಂಶದಲ್ಲಿ ಹಾವು ಎಂದು ಬರೆದುದು ಹಾಮ ಎಂದಾಗುತ್ತದೆ. ಒಂದು ಬರೆದಾಗ ಎರಡು ಸೊನ್ನೆ ಕಾಣುತ್ತದೆ. ಕುಮಾರ್ ಎಂಬುದು ಕುರ್ಮಾ ಎಂದಾಗುತ್ತದೆ. ಕುಮಾರ್ ಪದದ 'ರ್' ಉಳಿಸಿಕೊಳ್ಳಲು del ಮತ್ತು backspace ಬಳಸಬೇಕಾಗುತ್ತದೆ. ಅದೇರೀತಿ ಏನೇ ತಿಪ್ಪರಲಾಗ ಹಾಕಿದರೂ Ramp ಎಂದು ಕನ್ನಡದಲ್ಲಿ ಬರೆಯಲಾಗುತ್ತಿಲ್ಲ. ಕರ್ರಗೆ, ಸ್ವಾತಂತ್ರ್ಯ ಎಂಬುದನ್ನು ಹೇಗೆ ಬರೆಯುವುದು? ಕಾರ್ಯಾಂಗ ಎನ್ನುವಲ್ಲಿ ಸೊನ್ನೆಯ ಸ್ಥಾನ ಎಲ್ಲಿರಬೇಕು? ಅಂತಿಮವಾಗಿ ನಮಗೆ ಅರ್ಕಒತ್ತು ಏಕೆ ಬೇಕು? ಈ ಸಂದೇಹಗಳನ್ನು ಪರಿಹರಿಸಬೇಕಿದೆ.
Comments
ಉ: