ಯೆಷ್ಟಾರ ಉಣಿಸುತಿಯೇ ತಾಯಿ ನೀನು

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ಕವನ

 

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು

ನೀ ಇಲ್ಲದಿರಲು ನಾ ಬೆಳೆದೆನೇನು?

ಬೆಳೆದರೂ ಹಾಗೆ ಅದರರ್ಥಯೇನು?

 

 

ಒಡಲಲ್ಲಿ ಬಚ್ಚಿ ನನ್ನ ಕಾದು ಕಾದು

ಕೆನ್ನೀರ ಸತ್ತ್ವವನು ಹೀರಿ ಬೆಳೆದು

ನನ್ನ ತೀಡಿ ತೊಳೆದು ಅಲ್ಲಿ ರೂಪ ನೀಡಿ

ಈ ಚೇತನಕ್ಕೆ ಒಂದು ಮನೆಯ ಮಾಡಿ

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು

 

 

ಉಣಿಸುವೆ ಹಾಲು, ದೇಹಕೆ ನೀನು

ಮನಕೆ ಉಣಿಸುವೆ ಪ್ರೇಮದ ಜೇನು

ಧೈರ್ಯವ ಉಣಿಸಿ ಜೋಗುಳದಲ್ಲಿ

ಆದರ್ಶವ ಉಣಿಸಿ ತುತ್ತುಗಳಲ್ಲಿ

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು

 

 

ಮನವನು ಮಣಿಸುವ ದಾರಿಯ ಹೆಣೆಸಿ

ಅದರಲ್ಲಿ ನಡೆಯಬೇಕೆಂದು ಕಲಿಸಿ

ನಾ ಸೋತರೆ ಏನು, ಈ ಜಗದಲಿ ಇಂದು

ನಿನ್ನ ತೊಡೆಯೇ ನನಗೆ ಇದು ಊರ್ಜೆ ಬಿಂದು

ಯೆಷ್ಟಾರ ಉಣಿಸುತಿಯೇ ತಾಯಿ ನೀನು

ನಿನ್ನ ತತ್ತ್ವ ತುತ್ತುಗಳ ಮರ್ಮವೇನು

 

 

ನಾ ನಿನ್ನ ತೊರೆದು, ನೀ ನನ್ನ ತೊರೆದು

ಹೋದೆವೆಂದರೂ ಹೋದೆವೆಂದು?

ಜಗದಾಟವಾಡಿ ನಾ ಮಲಿನವಾಗಿ

ಭೂ ನಲ್ಲಿ ಮಲಗಿ ನಾ ವಿಲೀನವಾಗಿ

ನಾ ಮತ್ತೆ ಮತ್ತೆ ಮತ್ತೆ ಶುಭ್ರವಾಗಲು

ಬಂದು ಸೇರುವೆ ನಿನ್ನ ಒಡಲೋಳು