ಯೇಸು ಕಾಣಲು ಆತ್ಮಹತ್ಯೆ..!

ಯೇಸು ಕಾಣಲು ಆತ್ಮಹತ್ಯೆ..!

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಫ್ರಿಕಾದ ಖ್ಯಾತ ಚಿಂತಕ ಬಿಷಪ್ ಡೆಸ್ಮಂಡ್ ಟುಟು ಒಮ್ಮೆ ಹೀಗೆ ಹೇಳಿದರು " ಬ್ರಿಟೀಷರು ನಮ್ಮ ದೇಶಕ್ಕೆ ಬಂದು ನಮ್ಮ ಕೈಗೆ ಬೈಬಲ್ ನೀಡಿ ಕಣ್ಣು ಮುಚ್ಚಿ ಪ್ರಾರ್ಥಿಸಿ ಎಂದರು. ಆಗ ನಮ್ಮ ಕೈಯಲ್ಲಿ ಭೂಮಿ ಇತ್ತು. ಕಣ್ಣು ಬಿಟ್ಟಾಗ ನಮ್ಮ ಭೂಮಿ ಅವರ ಕೈಯಲ್ಲಿತ್ತು. ಅವರು ಕೊಟ್ಟ ಬೈಬಲ್ ಶಾಶ್ವತವಾಗಿ ನಮ್ಮ ಬಳಿ ಉಳಿಯಿತು.... " ಈಗ ಡೆಸ್ಮಂಡ್ ಟುಟು ಉಳಿದಿಲ್ಲ. ಹಾಗೆಯೇ ಈಗ ಆಫ್ರಿಕನ್ನರ ಜೀವವೂ ಉಳಿಯುತ್ತಿಲ್ಲ.

ಅನೇಕ ಆಫ್ರಿಕನ್ ರಾಷ್ಟ್ರಗಳು ಹಸಿವು ಬಡತನದಿಂದ ನರಳುತ್ತಿವೆ. ಮೌಡ್ಯ ತನ್ನ ಪರಾಕಾಷ್ಠೆ ತಲುಪಿದೆ. ಉಪವಾಸ ಮಾಡಿದರೆ ಏಸುವನ್ನು ಕಾಣಬಹುದು ಎಂದು ಮೂರ್ಖ ಧರ್ಮ ಗುರುವೊಬ್ಬನ ಮಾತು ನಂಬಿ ಕೀನ್ಯಾದಲ್ಲಿ 400 ಕ್ಕೂ ಹೆಚ್ಚು ಜನ ಸತ್ತು 600 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಹಿಂದೆಯೂ ಬೇರೆ ಬೇರೆ ದೇಶಗಳಲ್ಲಿ ಈ ರೀತಿಯ ಮೌಡ್ಯಕ್ಕೆ ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೈಜ್ಞಾನಿಕ ಪ್ರಜ್ಞೆ - ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಮತ್ತು ಅದನ್ನು ಇತರರಿಗೂ ಅರ್ಥಮಾಡಿಸಬೇಕು ಎಂದು ಸದಾ ಪ್ರತಿಪಾದಿಸುವುದು ಇದಕ್ಕಾಗಿಯೇ. ಇತರರ ನಂಬಿಕೆಗಳಿಗೆ ಘಾಸಿಯಾಗುತ್ತದೆ ಎಂದು ಸತ್ಯವನ್ನು ಮುಚ್ಚಿಟ್ಟರೆ ಮುಂದೆ ಈ ರೀತಿಯ ಹುಚ್ಚ ಧರ್ಮಾಂಧರು ಜನರನ್ನು ಶೋಷಿಸುತ್ತಲೇ ಇರುತ್ತಾರೆ. ಭಾರತದಲ್ಲಿ ಈ ರೀತಿಯ ಅತಿರೇಕ ಇಲ್ಲದೇ ಇರಬಹುದು. ಆದರೆ ವಿವಿಧ ಸ್ವರೂಪಗಳಲ್ಲಿ ಈಗಲೂ ನಿರಂತರವಾಗಿ ನಡೆಯುತ್ತಲೇ ಇದೆ. ಮೊನ್ನೆ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಚಂದ್ರಯಾನ 3 ಉಡಾವಣೆಯ ಯಶಸ್ಸಿಗಾಗಿ ಪೂಜೆ ಸಲ್ಲಿಸಿ ಅದನ್ನು ಮಾಧ್ಯಮಗಳಲ್ಲಿ ಬಹಿರಂಗವಾಗಿ ಪ್ರಚಾರ ಮಾಡಲಾಯಿತು. ಚಂದ್ರಯಾನ ಇನ್ನೇನು ಯಶಸ್ಸಿನ ಹಾದಿಯಲ್ಲಿದೆ ಮತ್ತು ಯಶಸ್ವಿಯಾಗಲಿ ಸಹ...

ಆದರೆ ಅನೇಕ ಜನ ಅದರ ಯಶಸ್ಸಿಗೆ ವೆಂಕಟೇಶ್ವರ ದೇವರೇ ಕಾರಣ ಎಂದು ಕೊನೆಗೆ ಮದುವೆ, ಮಕ್ಕಳು, ಉದ್ಯೋಗ, ಆರೋಗ್ಯ, ಹಣಕಾಸು, ವ್ಯಾಪಾರ ಎಲ್ಲಕ್ಕೂ ವೆಂಕಟೇಶ್ವರನಿಗೇ ಮುಡಿ ಕೊಡಲು ಹರಕೆ ಹೊತ್ತುಕೊಳ್ಳಲು ಮುಗಿ ಬೀಳುತ್ತಾರೆ. ಇದರಿಂದ ತಿರುಪತಿಗೆ ಲಾಭ ಹೆಚ್ಚಾಗುತ್ತದೆ ಮತ್ತು ಇತರರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅವರವರ ‌ನಂಬಿಕೆ ಇರಲಿ ಬಿಡಿ ಎನ್ನುವ ಬಹುತೇಕ ಸಂಪ್ರದಾಯವಾದಿಗಳು ಇದ್ದಾರೆ.

ಕೀನ್ಯಾದಲ್ಲಿ ಸಾವಿರ ಜನ‌ ಯಾರದೋ ಮಾತು ಕೇಳಿ ಉಪವಾಸ ಮಾಡಿ ಸತ್ತಿದ್ದರಿಂದಲು ಯಾರಿಗೂ ತೊಂದರೆ ಇಲ್ಲ. ಅದು ಅವರವರ ಭಕ್ತಿ ನಂಬಿಕೆ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಇದರ ಹಿಂದೆ ಮನುಷ್ಯನ ಶೋಷಣೆಯ ಬಹುದೊಡ್ಡ ಜಾಲ ಇರುವುದು ತಿಳಿದ ಮೇಲೆಯೂ ಅದರ ಬಗ್ಗೆ ಮಾತನಾಡದೇ ಇರುವುದು ನಾಗರಿಕ ಸಮಾಜದ ತಪ್ಪಾಗುತ್ತದೆ.

ಮೆಕ್ಕಾದಲ್ಲಿ ಕಾಲ್ತುಳಿತಕ್ಕೆ ಅನೇಕ ಜನ ಸತ್ತಾಗ, ಶಬರಿಮಲೆಯಲ್ಲಿಯೂ ಅನೇಕ ಜನ ಇದೇ ಕಾರಣದಿಂದಾಗಿ ಸತ್ತಾಗ ಅದು ಅವರವರ ಕರ್ಮ, ದೇವರು ಅವರ ಹಣೆಯಲ್ಲಿ ಹೀಗೆಯೇ ಬರೆದಿರುವಾಗ ಅದನ್ನು ಯಾರು ತಪ್ಪಿಸಲು ಆಗುವುದಿಲ್ಲ ಎಂದು ನಮ್ಮ ಪಾಡಿಗೆ ನಾವಿರಬೇಕೆ ಅಥವಾ ನಮ್ಮ ಅರಿವಿನ ಮಿತಿಯಲ್ಲಿ ಹೊಳೆದ ಸತ್ಯವನ್ನು ಧೈರ್ಯವಾಗಿ ಹೇಳಬೇಕೆ ಎಂಬುದನ್ನು ಯೋಚಿಸಬೇಕು.

ಮನುಷ್ಯ ವಿಕಾಸವಾದದಲ್ಲಿ ಸಾರ್ವತ್ರಿಕ ಸತ್ಯಗಳನ್ನು ಅನುಭವದ ಆಧಾರದ ಮೇಲೆ ಅಳವಡಿಸಿಕೊಳ್ಳುವುದೇ ವೈಚಾರಿಕ ಪ್ರಜ್ಞೆ. ಇಲ್ಲಿ ಧರ್ಮ ಮತ್ತು ವಿಜ್ಞಾನ ವಿರೋಧಿಗಳಲ್ಲ. ವಿಜ್ಞಾನ ಒಂದು ಅತ್ಯುತ್ತಮ ಪರ್ಯಾಯ ಮಾರ್ಗ ಮತ್ತು ಸಹಜ ಸ್ವಾಭಾವಿಕ ಬೆಳವಣಿಗೆ. ಅದು ಯಾರ ಸ್ನೇಹಿಯೂ ಅಲ್ಲ ವಿರೋಧಿಯೂ ಅಲ್ಲ. ಅನುಭವ ಚಿಂತನೆ ಸಂಶೋಧನೆಗಳ ಒಂದು ಮಾರ್ಗ ಮಾತ್ರ.

ದಯವಿಟ್ಟು ಕನಿಷ್ಠ ಭಾರತದಲ್ಲಿಯಾದರೂ ಪ್ರಶ್ನಿಸುವುದನ್ನು ಕಲಿತುಕೊಳ್ಳಿ ಅಥವಾ ಪ್ರಶ್ನಿಸುವ ಧ್ವನಿಗಳಿಗೆ ಮುಕ್ತ ಅವಕಾಶ ಕಲ್ಪಿಸಿ. ಅದನ್ನು ಟೀಕಿಸಿ ಮೌಡ್ಯದ ಬಲೆಯೊಳಗೆ ಬೀಳದಿರಿ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ