ಯೋಗರತ್ನ

ಯೋಗರತ್ನ

ಪುಸ್ತಕದ ಲೇಖಕ/ಕವಿಯ ಹೆಸರು
ನಾಗರಾಜ ಆರ್.ಸಾಲೋಳ್ಳಿ
ಪ್ರಕಾಶಕರು
ಸಿದ್ದಲಿಂಗೇಶ್ವರ ಪ್ರಕಾಶನ, ಸರಸ್ವತಿ ಗೋದಾಮು, ಕಲಬುರಗಿ.
ಪುಸ್ತಕದ ಬೆಲೆ
ರೂ.೩೫೦.೦೦, ಮುದ್ರಣ: ೨೦೨೨

ಇತ್ತೀಚೆಗೆ ಯೋಗ ಶಿಕ್ಷಣದ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚಾಗುತ್ತಿದೆ. ಈ ವಿಷಯದಲ್ಲಿ ಈಗಾಗಲೇ ಹಲವಾರು ಮಹತ್ವಪೂರ್ಣ ಕೃತಿಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಕೃತಿ ‘ಯೋಗರತ್ನ'  ನಾಗರಾಜ ಇವರು “ಪ್ರಸನ್ನ ಕಾಯ, ಮನ, ಇಂದ್ರೀಯ ಮತ್ತು ಆತ್ಮವೇ ಆರೋಗ್ಯ ಎನ್ನುವ ಚರಕ ಮಹರ್ಷಿಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ವಚನಕಾರರ ಅನೇಕ ವಚನಗಳನ್ನು, ಸರ್ವಜ್ಞ ಕವಿಯ ತ್ರಿಪದಿಗಳನ್ನು ಸಾಂದರ್ಭಿಕವಾಗಿ ಬಳಸಿದ್ದಾರೆ. ಯೋಗ-ವ್ಯಾಯಾಮಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದಾರೆ. ಇದು ಇವರ ಚೊಚ್ಚಲ ಕೃತಿ ಎಂದರೆ ನಂಬುವುದಕ್ಕೆ ಆಗದಷ್ಟು ಪರಿಣಿತಿಯನ್ನು ತೋರಿದ್ದಾರೆ" ಎನ್ನುತ್ತಾರೆ ಕೃತಿಗೆ ಮುನ್ನುಡಿಯನ್ನು ಬರೆದ ಖ್ಯಾತ ಮನೋವೈದ್ಯ ಸಿ.ಆರ್.ಚಂದ್ರಶೇಖರ್.‌ ಈ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿದೆ...

“ನಿಮಗೆ ಡಯಾಬಿಟಿಸ್ ಇದೆಯೇ? ರಕ್ತದೊತ್ತಡ ಇದೆಯೇ? ಥೈರಾಯ್ಡ್ ಸಮಸ್ಯೆ ಶುರುವಾಗಿದೆಯೇ? ಕೀಲುಗಳ ಊತ, ಬೆನ್ನು, ಸೊಂಟ ನೋವಿದೆಯೇ? ಉಸಿರಾಟದ ತೊಂದರೆಯೇ? ಋತುಚಕ್ರದ ಏರು-ಪೇರು, ಪಿಸಿಓಡಿ ಸಮಸ್ಯೆ ಇದೆಯೇ? ಬೇಗ ಸುಸ್ತು, ಆಯಾಸ, ನಿಶಕ್ತಿ ಆಗುತ್ತಿದೆಯೇ? ಏಕಾಗ್ರತೆ ಕಡಿಮೆಯಾಗುತ್ತಿದೆಯೇ? ನೆನಪಿನ ಶಕ್ತಿ ಕ್ಷೀಣಿಸುತ್ತಿದೆಯೇ? ಆತಂಕ, ಭಯ, ದುಃಖ, ಕೋಪ ಇತ್ಯಾದಿ ಭಾವೋದ್ವೇಗವಿದೆಯೇ? ಎಲ್ಲಾ ಪರೀಕ್ಷೆಗಳು, ‘ನಾರ್ಮಲ್’ ಇವೆ ನಿಮಗೆ ಯಾವ ಕಾಯಿಲೆ ಇಲ್ಲಎಂದು ವೈದ್ಯರು ಹೇಳಿದರೂ, ನಿಮ್ಮ ಆರೋಗ್ಯ ಸರಿ ಇಲ್ಲ ಎನ್ನಿಸಿದೆಯೇ? ಪದೇ ಪದೇ ನೆಗಡಿ, ಕೆಮ್ಮು, ಜ್ವರ, ಮೈ-ಕೈ ನೋವು, ಸೋಂಕು ಉಂಟಾಗಿದೆಯೇ? ನಿಮ್ಮರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆಯೇ?

ನಿಮ್ಮ ದೇಹದ ಆರೋಗ್ಯ-ಶಕ್ತಿಯು ವರ್ಧಿಸಬೇಕೇ? ನಿಮ್ಮ ಮನಸ್ಸಿನ ಶಕ್ತಿ, ಸಾಮರ್ಥ್ಯ ಹೆಚ್ಚಿ, ನೀವು ಹೆಚ್ಚು ಕ್ರಿಯಾಶೀಲರಾಗಬೇಕೇ? ಆತ್ಮವಿಶ್ವಾಸ ವರ್ಧಿಸಬೇಕೇ? ಖಿನ್ನತೆ ಇತ್ಯಾದಿ ಮಾನಸಿಕ ರೋಗಗಳು ಬರಬಾರದೇ? ದೀರ್ಘಾಯಸ್ಸು ನಿಮ್ಮದಾಗಬೇಕೇ?ಮುಪ್ಪು ಮರಣವನ್ನು ಮುಂದೂಡಬೇಕೇ? ಇದಕ್ಕೆಲ್ಲ ಒಂದೇ ಉತ್ತರ, ಒಂದೇ ಪರಿಹಾರ. “ಯೋಗ ಮಾಡಿ”

ಇದು ಎಲ್ಲೆಡೆ ಕೇಳಿ ಬರುತ್ತಿರುವ ಮಾತು-ಸಲಹೆ. ಈಗ ಜಗತ್ತಿನ ೧೫೦ಕ್ಕೂ ಹೆಚ್ಚಿನ ದೇಶಗಳಲ್ಲಿ ಯೋಗ ಮಾಡುವವರಿದ್ದಾರೆ. ಯೋಗಚಿಕಿತ್ಸೆ ಅನೇಕ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆನ್‌ ಲೈನಲ್ಲೂ ಲಭ್ಯವಿದೆ. ಯೋಗವೆಂದರೆ ಕೇವಲ ಆಸನಗಳಲ್ಲ, ಧ್ಯಾನವಲ್ಲ. ದೇಹ-ಮನಸ್ಸುಗಳ ಪ್ರಸನ್ನತೆ ಹಾಗೂ ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಸುಖಾನುಭವಗಳ ಸಮತೋಲನ ಎಂಬುದನ್ನು ಎಲ್ಲರೂ ಅರಿಯಬೇಕು. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಬೌದ್ಧಿಕ ಶಕ್ತಿ ಹಾಗೂ ನೈತಿಕ ಮೌಲ್ಯಗಳ ವರ್ಧನೆಯೇ ಯೋಗದ ಗುರಿ. ಪತಂಜಲಿ ಮಹರ್ಷಿಯ ಪ್ರಕಾರ ಯೋಗವೆಂದರೆ ಚಿತ್ತವೃತ್ತಿಗಳನ್ನು ಹತೋಟಿಯಲ್ಲಿಟ್ಟು ಆನಂದ ಮತ್ತು ಆರೋಗ್ಯವನ್ನು ವೃದ್ಧಿಸುವ ವಿಧಾನ. ಯೋಗದಲ್ಲಿ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ರಾಜಯೋಗ, ಪತಂಜಲಿ ಯೋಗ, ಬೌದ್ಧಯೋಗ ಹಾಗೂ ಶಿವಯೋಗ ಎಂಬ ಅನೇಕ ಪ್ರಕಾರಗಳಿವೆ.

ಯೋಗದಿಂದ ನಿತ್ಯಜೀವನ ಚಟುವಟಿಕೆಗಳಲ್ಲಿ ಶಿಸ್ತು, ಆಚಾರ - ವಿಚಾರ, ವಿಹಾರಗಳಲ್ಲಿ ಶಿಸ್ತು, ಸಂಯಮ, ಆಸೆ, ಆಕಾಂಕ್ಷೆಗಳ ಮೇಲೆ ಅಂಕುಶ, ಪ್ರೀತಿ, ಸ್ನೇಹ, ದಯೆ, ಅನುಕಂಪಗಳ ಪಾಲನೆ, ಕೋಪ, ದುಃಖ, ಭಯ, ಮತ್ಸರಗಳು ಲೋಭ, ಮೋಹ, ಮದಗಳ ಮೇಲೆ ಹತೋಟಿ ಸಾಧ್ಯವಾಗುತ್ತದೆ. ವ್ಯಕ್ತಿ ವ್ಯಕ್ತಿ ನಡುವಿನ ಸಂಬಂಧ ಸುಧಾರಿಸುತ್ತದೆ. ಎಲ್ಲದರಲ್ಲಿ, ಎಲ್ಲರಲ್ಲಿ ಒಳಿತನ್ನೇ ಕಾಣುವದೃಷ್ಟಿಯನ್ನು ನೀಡುತ್ತದೆ. ಯೋಗ ನಮ್ಮ ಭಾರತೀಯ ಪರಂಪರೆಯ ಉತ್ಕೃಷ್ಟ ಜೀವನ ವಿಧಾನ. ಮನುಕುಲಕ್ಕೆ ದೊಡ್ಡ ಕೊಡುಗೆ. “ಯೋಗ: ಕರ್ಮಸು ಕೌಶಲಂ” ಎಂದು ಭಗವದ್ಗೀತೆ ಹೇಳಿದೆ. ಸ್ಥಿರವಾದ ಇಂದ್ರಿಯ ಧಾರಣೆಯೇ ಯೋಗ ಎನ್ನುತ್ತದೆ ಕಠೋಪನಿಷತ್ತು. ಮನಸ್ಸಿನ ಭಾವತರಂಗಗಳನ್ನು ಶಮನಗೊಳಿಸಿ ಪ್ರಶಾಂತಗೊಳಿಸುವ ವಿಧಿಯೇ ಯೋಗ ಎನ್ನುತ್ತಾರೆ ವಸಿಷ್ಠರು. ವ್ಯಕ್ತಿಯ ಶಕ್ತಿ, ಸಾಮರ್ಥ್ಯಗಳ ವಿಕಸನವೇ ಯೋಗ ಎಂದು ಅರಬಿಂದೋ ಮತ್ತು ವಿವೇಕಾನಂದರು ನುಡಿದಿದ್ದಾರೆ. ಯೋಗದ ಆಳ–ವಿಸ್ತಾರಗಳು ಅನಂತ.

ಕರ್ನಾಟಕದ ಕಲಬುರಗಿಯ ಭೂಮಿ ಯೋಗ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕರಾದ ನಾಗರಾಜ ಆರ್. ಸಾಲೋಳ್ಳಿ ತಮ್ಮ ೧೬ ವರ್ಷಗಳಷ್ಟು ದೀರ್ಘವಾದ ಯೋಗಾನುಭವಗಳನ್ನು ಈ ಕೃತಿಯ ಮುಖಾಂತರ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ೯೦ ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಜನಸಾಮಾನ್ಯರಿಗೆ ಯೋಗ ಜೀವನದ ಬಗ್ಗೆ ತರಬೇತಿ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ. ತರಬೇತಿ ಅಷ್ಟೇ ಅಲ್ಲ, ಯೋಗದಿಂದ ಆಗುವ ಪರಿಣಾಮಗಳ ಬಗ್ಗೆ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

‘ಯೋಗರತ್ನ’ ಸಾಲೋಳ್ಳಿ ಯವರ ಚೊಚ್ಚಲ ಕೃತಿ. ೧೧೧ ಆಸನಗಳು, ಪ್ರಾಣಾಯಾಮಗಳು, ಕ್ರಿಯೆಗಳು, ಬಂಧಗಳ ಬಗ್ಗೆ ಸಚಿತ್ರ ಮಾಹಿತಿಯನ್ನು ಸರಳ ಭಾಷೆಯಲ್ಲಿ, ಜನಸಾಮಾನ್ಯರಿಗೆ ತಿಳಿಯುವಂತೆ ಬರೆದಿದ್ದಾರೆ. ಯೋಗದ ಬಗ್ಗೆ ಈಗ ಪ್ರಚಲಿತವಿರುವ ತಪ್ಪು ನಂಬಿಕೆ ನಿರೀಕ್ಷೆಗಳ ಪಟ್ಟಿಯನ್ನುಕೊಟ್ಟು, ಸರಿಯಾದ ನಂಬಿಕೆ ನಿರೀಕ್ಷೆಗಳನ್ನಿಟ್ಟುಕೊಳ್ಳುವಂತೆ ಎಚ್ಚರಿಸಿದ್ದಾರೆ. ಯೋಗ ಸಾಧಕನು ಅನುಸರಿಸಬೇಕಾದ ನೀತಿ-ನಿಯಮಾವಳಿಗಳನ್ನು ಹೇಳಿದ್ದಾರೆ. ಪಂಚಕೋಶಗಳಿಂದ ಮಾಡಲಿರುವ ಮಾನವನಿಗೆ ಧ್ಯಾನದ ಜೊತೆಗೆ ಮೌನದ ಅನುಕೂಲತೆಗಳನ್ನು ತಿಳಿಸಿದ್ದಾರೆ. ಆರೋಗ್ಯ ಎಂದರೇನು ಎಂಬುದನ್ನು ವಿವರಿಸುತ್ತಾ, ಪ್ರಸನ್ನ ಕಾಯ, ಮನ, ಇಂದ್ರೀಯ ಮತ್ತು ಆತ್ಮವೇ ಆರೋಗ್ಯ ಎನ್ನುವ ಚರಕ ಮಹರ್ಷಿಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ವಚನಕಾರರ ಅನೇಕ ವಚನಗಳನ್ನು, ಸರ್ವಜ್ಞ ಕವಿಯ ತ್ರಿಪದಿಗಳನ್ನು ಸಾಂದರ್ಭಿಕವಾಗಿ ಬಳಸಿದ್ದಾರೆ. ಯೋಗ-ವ್ಯಾಯಾಮಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದಾರೆ. ಇದು ಇವರ ಚೊಚ್ಚಲ ಕೃತಿ ಎಂದರೆ ನಂಬುವುದಕ್ಕೆ ಆಗದಷ್ಟು ಪರಿಣಿತಿಯನ್ನು ತೋರಿದ್ದಾರೆ.

‘ಯೋಗರತ್ನ’ ಪುಸ್ತಕ ಪ್ರತಿಯೊಂದು ಮನೆಯಲ್ಲಿರಬೇಕು, ಪ್ರತಿಯೊಬ್ಬರು ಅದರಲ್ಲೂ ನಮ್ಮ ಯುವಜನ ಓದಿ ಆರೋಗ್ಯವಂತರಾಗಿ ಬದುಕಬೇಕು. ಎಲ್ಲೆಡೆ ಹರಡುತ್ತಿರುವ ಅನಾರೋಗ್ಯವನ್ನು ತಡೆದು ನಿವಾರಿಸಬೇಕು. ಒಳ್ಳೆಯ ಆರೋಗ್ಯದಿಂದ ಒಳ್ಳೆಯ ಸಾಮರ್ಥ್ಯ, ಒಳ್ಳೆಯ ಸಾಮರ್ಥ್ಯದಿಂದ ಒಳ್ಳೆಯ ಸಾಧನೆ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುವಂತಾಗಬೇಕು.”

ಸರ್ವೇಜನ ಸುಖಿನೋಭವಂತು, ಭೋಗಿಯಾದರೆ ಸುಖವಿಲ್ಲ. ಯೋಗಿಯಾದರೆ ಸುಖ ನೆಮ್ಮದಿ ಎನ್ನುತ್ತಾರೆ ಯೋಗ ಗುರು ನಾಗರಾಜ ಆರ್. ಸಾಲೋಳ್ಳಿ ಇವರು. ೪೦೦ ಪುಟಗಳ ಈ ಮಾಹಿತಿ ಪೂರ್ಣ ಪುಸ್ತಕವನ್ನು ಯೋಗ ಮಾಡುವವರು ಮಾತ್ರವಲ್ಲ, ಯೋಗದಲ್ಲಿ ಆಸಕ್ತಿ ಇದ್ದವರೂ ಓದಲೇ ಬೇಕಾದ ಕೃತಿ.