ಯೋಗಾಸನ
ನಾವು ಶರೀರವನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಶರೀರ ಸದೃಢವಾಗಿದೆ ಎಂದರೆ ಎರಡು ಲಕ್ಷಣ ಇರಬೇಕು.
1.ದೇಹ ಕಾರ್ಯಕ್ಷಮವಾಗಿರಬೇಕು.
2.ದೇಹ ಸ್ಥಿರವಾಗಿರಬೇಕು.
ಅಂದರೆ ಶರೀರ ಗಟ್ಟಿತನ ಹೊಂದಿರಬೇಕು. ತಡೆದುಕೊಳ್ಳುವ ಸಾಮರ್ಥ್ಯವಿರಬೇಕು, ತ್ರಾಣವಿರಬೇಕು. ಶರೀರದಲ್ಲಿರುವ ಪ್ರತಿಯೊಂದು ಅವಯವಗಳು ಕ್ರಿಯಾಶೀಲವಾಗಬೇಕು. ಯಾವ ಯಾವ ಕಾರ್ಯಗಳು, ಯಾವ ಯಾವ ಅಂಗಗಳಿಗೆ ಇವೆಯೋ, ಆ ಎಲ್ಲಾ ಚಲನೆಯನ್ನು ಶರೀರ ಮಾಡುತ್ತಾ ಇದ್ದರೆ, ಆ ಶರೀರಕ್ಕೆ ಕಾರ್ಯಕ್ಷಮತೆ ಬರುತ್ತದೆ. ಆ ಬಳಿಕ ಸ್ಥಿರತೆ ಬರುತ್ತದೆ. ಇದು ಬಹಳ ಮಹತ್ವ. ವಿದೇಶಿ ವ್ಯಕ್ತಿ ಹೇಳುತ್ತಾನೆ "use them legs and harms, if you don't use them, definitely you will lose them". ಇದರ ಅರ್ಥ ಬದುಕಿರುವವರೆಗೂ ಬಳಸು, ಇಲ್ಲದಿದ್ದರೆ ಖಂಡಿತವಾಗಿ ಅವುಗಳನ್ನು ಕಳೆದುಕೊಳ್ಳುತ್ತಿಯೇ. ಅವುಗಳನ್ನು ಉಪಯೋಗ ಮಾಡು, ಸುಂದರವಾಗಿ ಬಳಸು, ಇಲ್ಲ ಅಂದರೆ ಕಳೆದುಕೊಳ್ಳುತ್ತೇವೆ. ನಾವು ಉಪಯೋಗ ಮಾಡ್ಕೋತಾ- ಮಾಡ್ಕೋತಾ ಇರಬೇಕು.
ವಿಶ್ರಾಂತಿ ಎಂದರೆ ಆರಾಮಾಗಿ ಇರುವುದು ಎಂದಲ್ಲ. ಇದು ಉಪಯೋಗ ಮಾಡುವ ಕಲೆ. ದಣಿವಾಗಲಾರದಂತೆ ಮಾಡುವುದೇ ವಿಶ್ರಾಂತಿ. ಹಾಗೆ ಈ ಶರೀರವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಅದನ್ನು ಕೆಲಸಕ್ಕೆ ತೊಡಗಿಸಿದರೆ ಮಾತ್ರ ಚೆನ್ನಾಗಿರುತ್ತೆ. ಹಾಗೆ ಈ ಶರೀರವನ್ನು ಚೆನ್ನಾಗಿ ಬಳಸಿಕೊಳ್ಳುವುದು. ಕರ್ಮವನ್ನು ಮಾಡಲು ಹಚ್ಚುವುದು. ಎಲ್ಲಾ ಕ್ರಿಯೆ ಇರಬೇಕು. ಕೇವಲ ಕಾಲಿನ ಕೆಲಸ ಅಲ್ಲ. ಅಥವಾ ಕೈ ಕೆಲಸ ಅಲ್ಲ. ಬರಿ ಇಂದ್ರಿಯಗಳ ಕೆಲಸವಲ್ಲ. ಶರೀರದ ಎಲ್ಲಾ ಭಾಗಗಳು ಸಕ್ರಿಯವಾಗಬೇಕು. ಏಕೆಂದರೆ ಯಾವ ಭಾಗವೂ ಕನಿಷ್ಠವಲ್ಲ. ತಲೆ ಇರಬೇಕಾದರೆ ಮೈ ಬೇಕಾಗುತ್ತದೆ. ಮೈ ಇರಬೇಕಾದರೆ ತಲೆ ಇರಬೇಕಾಗುತ್ತದೆ. ಇವೆರಡನ್ನು ಹೊತ್ತು ತಿರುಗಲು ಕಾಲುಬೇಕಾಗುತ್ತದೆ. ಶ್ರೇಷ್ಠ ಕನಿಷ್ಠ ಎನ್ನುವುದು ಒಂದು ಭ್ರಮೆ. ಇಲ್ಲಿ ಇರುವುದು ಸಂಗಾತ, ಸಂಘ. ಅವು ಎಲ್ಲೆಲ್ಲಿ ಇರಬೇಕು ಅಲ್ಲಲ್ಲೇ ಇರಬೇಕು. ಅವೆಲ್ಲ ಕೂಡಿಕೊಂಡು ಕೆಲಸ ಮಾಡಬೇಕು. ಒಂದು ಅಂಗ ಇನ್ನೊಂದನ್ನು ಪೋಷಿಸುತ್ತದೆ. ಹೀಗೆ ಎಲ್ಲಾ ಅಂಗಗಳು ಸೇರಿ ಒಟ್ಟಾಗಿ ದೇಹ ಪೋಷಿಸುತ್ತದೆ. ಪ್ರತಿ ಅಂಗವನ್ನು ಪೋಷಿಸುತ್ತದೆ. ಹಾಗಿದ್ದಾಗ ಆ ದೇಹ ಸ್ವಚ್ಛವಾಗಿ ಬೆಳೆದು ನಿಲ್ಲುತ್ತದೆ. ಶರೀರದ ಯಾವ ಭಾಗವನ್ನು ಉಪೇಕ್ಷೆ ಮಾಡಬಾರದು. ನಾವು ಬುದ್ಧಿವಂತರೆಂದು ಬುದ್ದಿ ಬಳಸಿ ಉಳಿದವುಗಳನ್ನು ಕಡೆಗಣಿಸಿದರೆ, ಶರೀರವೆ ಹೋದರೆ ಏನು ಮಾಡುವುದು?. ಅನುಭವಿಸುವುದು ಹೇಗೆ?. ಅನುಭವ ಮಾಡಿಕೊಳ್ಳಬೇಕಾದರೆ ಶರೀರ ತೊಂದರೆ ಕೊಡಬಾರದು. ಕಾಲು ಇದ್ರು ಸಹಿತ ಕಾಲಿದೆ ಅಂತ ನಮ್ಮ ಅನುಭವಕ್ಕೆ ಬರಬಾರದು. ಅಷ್ಟು ಸ್ವಾಸ್ಥ್ಯ ಇರಬೇಕು.
ಆಯುರ್ವೇದದಲ್ಲಿ ಸ್ವಾಸ್ಥ್ಯ ಎಂದರೆ ಇದ್ರೂ ಇಲ್ಲದಂತೆ ಇರುವುದಕ್ಕೆ ಸ್ವಾಸ್ಥ್ಯ ಎನ್ನುವರು. ಅಂಗಗಳು ಎಷ್ಟು ಸೌಮ್ಯವಾಗಿರಬೇಕು,?. ಶಾಂತವಾಗಿರಬೇಕು ? ನೋವಾದರೆ ನಾನು ಇದ್ದೇನೆ ಅಂತ ಹೇಳಿದಂತೆ.ಯಾವ ಭಾಗವಾದರೂ ಸಹಿತ ನೋವು ಇದ್ರೆ ನಾನು ಇದ್ದೇನೆ ಸ್ವಾಸ್ಥ್ಯ ಇಲ್ಲ ಅಂತ ತಿಳಿಯಬೇಕು. ಅದಕ್ಕೆ ಪತಂಜಲಿ ಮಹರ್ಷಿ ಹೇಳಿದ್ದು. ಈ ದೇಹ ಕಾರ್ಯಕ್ಷಮತೆ ಗೊಳಿಸಲು ದಿನಾಲು ದಿನಾಲು ಆಸನ ಮಾಡಬೇಕು. ಆಸನ ಎಂದರೆ ಶರೀರದ ಎಲ್ಲ ಅವಯವಗಳ ಎಲ್ಲಾ ರೀತಿಯ ಚಲನೆ ಮಾಡುವುದು. ಆಮೇಲೆ ಸ್ಥಿರತೆ ತರುವುದು. ಒಂದೊಂದು ಭಂಗಿಯನ್ನು ಸ್ಥಿರಗೊಳಿಸುವುದು. ಸುಮ್ಮನೆ 10 ನಿಮಿಷ ಅರ್ಧ ತಾಸು ಕುಳಿತುಕೊಳ್ಳಲು ಆಗದಿದ್ದರೆ ಸಾಧನೆ ಮಾಡುವುದು ಹೇಗೆ...?
10 ನಿಮಿಷ ನಿಲ್ಲೋದಕ್ಕೆ ಆಗದಿದ್ರೆ ಏನು ಮಾಡುವುದು...? ಈಗ ನೀವು ತರಗತಿಯಲ್ಲಿ 40 ನಿಮಿಷ ಸ್ಥಿರವಾಗಿ ಕುಳಿತುಕೊಳ್ಳಬೇಕು. ಅವರ ಮೇಲೆ ಇವರ ಮೇಲೆ ಬೀಳಬಾರದು. ಆ ಜಾಗ ಬಿಟ್ಟು ಕದಲಬಾರದು. ಆರಾಮಾಗಿ ಕುಳಿತುಕೊಳ್ಳಬೇಕು. ಅದಕ್ಕೆ ಸ್ಥಿರತೆ ಎನ್ನುತ್ತಾರೆ. ಒಂದು ತಾಸು ಕುಳಿತುಕೊಳ್ಳುವಷ್ಟು ಸ್ಥಿರತೆ ಇರಬೇಕು. ಆ ಸ್ಥಿರತೆಗೆ ಒಂದು ಬಗೆಯ ಆಸನ. ಉದಾಹರಣೆ, ಸುಖಾಸನ, ಪದ್ಮಾಸನ ಮತ್ತು ವಜ್ರಾಸನ. ಆ ಬಳಿಕ ಚಲನೆಗೆ ಒಂದು ಬಗೆಯ ಆಸನಗಳು. ಇವೆರಡು ಕೂಡಿದರೆ ಶರೀರಕ್ಕೆ ಒಂದು ಬಗೆಯ ಕಾರ್ಯಕ್ಷಮತೆ ಮತ್ತು ಸ್ಥಿರತೆ ಬರುತ್ತದೆ. ಹೀಗೆ ಶರೀರ ಇಟ್ಟುಕೊಳ್ಳಬೇಕು. ಕುಳಿತರೆ ಸ್ಥಿರ ಸುಖ ಆಸನ ಅಂದರೆ ಸ್ಥಿರವಾಗಿರಬೇಕು, ಸುಖವಾಗಿರಬೇಕು. ಯಾರಾದರೂ ದೇಹವನ್ನು ಬಲವಂತವಾಗಿ ಬಳಸಿದಾಗ ಅದು ಹೇಳುತ್ತದೆ "ಇದಲ್ಲ... ನನಗೆ ಇದು ಒಗ್ಗುವುದಿಲ್ಲ." ಶರೀರದ ಭಾಷೆ ಯಾವುದೆಂದರೆ ಎಲ್ಲೆಲ್ಲಿ ಒಗ್ಗಿಲ್ಲ ಅಲ್ಲಿ ನೋವು ಬರುತ್ತದೆ. ನೋವು ಕಾಣಿಸುತ್ತದೆ. ಏಕೆ ಮಾಡುತ್ತದೆ ಅಂದರೆ ಅದು ಹಿತವಾಗಿಲ್ಲ, ಸರಿಯಾಗಿಲ್ಲ. ಹೀಗೆ ಮಾಡಿದರೆ ಆಗುವುದಿಲ್ಲ ಅಂತ ಹೇಳುತ್ತದೆ. ಅದನ್ನು ಒಗ್ಗಿಸಲು ಕಾಲ ಬೇಕು. ನಿಧಾನವಾಗಿ - ನಿಧಾನವಾಗಿ ಅದಕ್ಕೆ ಹೇಗೆ ಬೇಕೋ ಹಾಗೆ ಹೊಂದಿಸಬೇಕು. ಉದಾಹರಣೆಗೆ, ಎಳೆಯ ಮಗು ನಡಿಯಲು ಶುರು ಮಾಡಿದಾಗ ಗೋಡೆ ಹಿಡಿದು ನಡೆಯುತ್ತದೆ, ಏಳುತ್ತದೆ, ಬೀಳುತ್ತದೆ. ಬೀಳಬೇಡ ಎಂದು ಬಡಿಗೆ ಹಿಡಿದುಕೊಂಡು ನಿಂತರೆ ಸಾಧ್ಯವಿಲ್ಲ. ಎಷ್ಟು ಬಡಿಗೇ ಹಿಡಿದರೆ ಏನು...?
ಅದರ ಕೂಡ ಹೋಗಬೇಕೆ ವಿನಹ, ಬಿದ್ರು ಸಹಿತ ನಿಧಾನವಾಗಿ ಬಿದ್ದಿಲ್ಲ ಅಂತ ಪ್ರೋತ್ಸಾಹ ಕೊಟ್ಟು ನಡೆಸಬೇಕು. ಹಾಗೆಯೇ ಸಾವಕಾಶವಾಗಿ ಒಗ್ಗಿಸಬೇಕು. ಬಲವಂತ ಮಾಡಬಾರದು. ಶರೀರಕ್ಕೆ ತನ್ನದೇ ಆದ ರಚನೆ ಇದೆ. ತನ್ನದೇ ಆದ ಕ್ರಿಯೆ ಇದೆ. ತನ್ನದೇ ಆದ ಚಲನೆ ಇದೆ. ಅದನ್ನೆಲ್ಲ ಚೆನ್ನಾಗಿ ಅರ್ಥ ಮಾಡಿಕೊಂಡು ಶರೀರವನ್ನು ನಿಧಾನವಾಗಿ ಒಗ್ಗಿಸಬೇಕು. ಹೀಗೆ ಚೆನ್ನಾಗಿ ಇಟ್ಟುಕೊಂಡರೆ ಮುಂದೆ ಯೋಗ. ಇಲ್ಲದಿದ್ದರೆ ಪತಂಜಲಿ ಹೇಳುತ್ತಾರೆ ವಿಯೋಗ ಕಡ್ಡಾಯ ಎಂದು. ಯೋಗ ಅಂದರೆ ಚೆನ್ನಾಗಿ ಇಟ್ಟುಕೊಳ್ಳುವುದು. ಕಾರ್ಯಕ್ಷಮತೆ ಇರುವಂತೆ, ಸ್ಥಿರತೆ ಇರುವಂತೆ ಇಟ್ಟುಕೊಳ್ಳುವುದು. ಇದರ ಜೊತೆಗೆ ಶರೀರ ಉಳಿಯಬೇಕಾದರೆ ಒಳ್ಳೆಯ ವಾತಾವರಣ ಇರಬೇಕು. ಒಳ್ಳೆಯ ನೀರು, ಒಳ್ಳೆಯ ಅನ್ನ, ಸುತ್ತಮುತ್ತ ಒಳ್ಳೆಯ ವಾತಾವರಣ ಬೇಕಲ್ಲ. ಅಷ್ಟೆಲ್ಲ ಇದ್ದರೆ ಶರೀರ ಚೆನ್ನಾಗಿರುತ್ತದೆ. ಕಪ್ಪಾಗಿರುವುದು ಮಹತ್ವವಲ್ಲ, ಕೆಂಪಾಗಿರುವುದು ಮಹತ್ವದಲ್ಲ, ಕುಳಿತರೆ ಏಳೋದಿಕೆ ಆಗೋದಿಲ್ಲ, ನಿಂತ್ರೆ ಕುಳಿತುಕೊಳ್ಳಲು ಆಗುವುದಿಲ್ಲ, ಚೆನ್ನಾಗಿ ದುಂಡಗೆ ಇದ್ದಾನೆ ಅಂದ್ರೆ ಏನು ಉಪಯೋಗ ? ಯಾವ ಬಣ್ಣ ಇದ್ದರೆ ಏನಾಯ್ತು...? ಕಾರ್ಯಕ್ಷಮತೆ ಸ್ಥಿರತೆ ಇರಬೇಕು. ಮನುಷ್ಯನಲ್ಲಿ ಇರುವ ಶಕ್ತಿ ಸಾಮರ್ಥ್ಯವನ್ನು ಮೆಲ್ಲ ಮೆಲ್ಲನೆ ಬಳಸಿಕೊಳ್ಳುತ್ತಾ ಹೋದರೆ ಶರೀರ ಅನುಕೂಲವಾಗುತ್ತದೆ, ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ