ಯೋಗಿ ಶ್ರೀ ಅರವಿಂದರ ಸ್ವಾತಂತ್ರ್ಯ ಹೋರಾಟ - ಒಂದು ಪರಿಚಯ
ಆಗಸ್ಟ್ 15 ಭಾರತ ಮಾತೆ ಇನ್ನೂರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿದ ದಿನ. ಗಾಂಧಿ, ಪಟೇಲ್, ನೇತಾಜಿ, ಟ್ಯಾಗೂರರಂತಹಾ ಮುಂಚೂಣಿ ನಾಯಕರಲ್ಲದೆ ಲಕ್ಷಗಳ ಸಂಖ್ಯೆಯ ಯೋಧರು, ನಾಯಕರು, ಜನಸಾಮಾನ್ಯರ ರಕ್ತದ ಕೋಡಿ ಹರಿಸಿ, ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು. ಅದೇ ಆಗಸ್ಟ್ 15 ರಂದು ಭಾರತಮಾತೆಯ ಅಪ್ರತಿಮ ದೇಶಭಕ್ತ, ಮಹಾನ್ ಯೋಗಿ, ದಿವ್ಯ ಚೇತನರಾದ ಶ್ರೀ ಅರವಿಂದರ ಜನುಮದಿನ. ಆಗಸ್ಟ್ 15, 1872 ರಂದು ಜನಿಸಿದ ಅರವಿಂದರು ಪಾಂಡಿಚೇರಿಯಲ್ಲಿ ನೆಲೆಸಿ ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾಲ್ಲಿ ಒಂದೆನಿಸಿದ “ಸಾವಿತ್ರಿ” ಯನ್ನು ರಚಿಸಿದವರೂ, ಆದ್ಯಾತ್ಮಿಕ ಸಾಧನೆ, ಯೋಗಗಳಿಂದ ಅಪಾರ ಸಿದ್ದಿಯನ್ನು ಪಡೆದವರೆನ್ನುವುದೂ ನಮಗೆಲ್ಲಾ ಚಿರಪರಿಚಿತ ಸಂಗತಿ. ಅದೇ ಅರವಿಂದರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಸಕ್ರಿಯವಾದ ಪಾತ್ರ ವಹಿಸಿದ್ದರೆನ್ನುವುದು ಬಹುಷಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಶ್ರೀ ಅರವಿಂದರು ಜನಿಸಿ ಇದೇ ಆಗಸ್ಟ್ 15 ಕ್ಕೆ 142 ವರ್ಷಗಳಾಗುತ್ತಿದೆ. ಆ ಸಮಯದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅರವಿಂದರ ಪಾತ್ರವೇನೆನ್ನುವುದರ ಕುರಿ ತು ತಿಳಿಸಿಕೊಡುವ ಚಿಕ್ಕ ಪ್ರಯತ್ನವಿದು....
ಆಗಸ್ಟ್ 15, 1872 ರಂದು ಜನಿಸಿದ ಅರವಿಂದರು ತಮ್ಮ ವಿದ್ಯಾಭ್ಯಾಸವನ್ನು ಅವರ ತಂದೆ ಡಾ. ಕೃಷ್ಣಧರ ಘೋಷ್ ರವರ ಒತ್ತಾಸೆಯಂತೆ ಇಂಗ್ಲೆಂಡಿನಲ್ಲಿ ಪೂರೈಸಿದರು. ಶ್ರೀ ಅರವಿಂದರ ತಂದೆ ಕೃಷ್ಣ್ ಧರ ಘೋಷ್ ರವರಿಗೆ ಮಕ್ಕಳು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು, ಇಲ್ಲಿನ ಭಾಷೆಯನ್ನೂ ಕಲಿಯುವುದು ಇಷ್ಟವಿಲ್ಲದ ಕಾರಣ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ದೂರದೇಶಕ್ಕೆ ಕಳಿಸಿದ್ದರು. ಆದರೆ ಭಾರತಮಾತೆಯ ಅಪೇಕ್ಷೆಯೋ, ವಿಧಿಯ ಲೀಲೆಯೋ ಎನ್ನುವಂತೆ ಅರವಿಂದರು ಇಂಗ್ಲೆಂಡಿನಲ್ಲಿಯೇ ಇದ್ದರೂ ಅವರಿಗೆ ಜನ್ಮಭೂಮಿಯ ಸೆಳೆತ ತಪ್ಪಲಿಲ್ಲ. ಬಿಳಿ ದೊರೆಗಳು ತಾವು ಭಾರತದಲ್ಲಿ ನಡೆಸುತ್ತಿದ್ದ ಸತತ ದಬ್ಬಾಳಿಕೆಯ ವರದಿಯನ್ನು ಅಲ್ಲಿದ್ದುಕೊಂಡೇ ತಿಳಿಯುತ್ತಿದ್ದ ಅರವಿಂದರ ಮನಸ್ಸಿಗೆ ಬಹಳವೇ ನೋವಾಗುತ್ತಲಿದ್ದಿತು. ಈ ಬ್ರಿಟೀಷರ ದಾಸ್ಯದಿಂದ ನಮ್ಮ ತಆಯಿಯನ್ನು ಬಿಡುಗಡೆಗೊಳಿಸುವುದಕ್ಕಾಗಿ ನಾನೇನಾದರೂ ಮಾಡಲೇಬೇಕು ಎನ್ನುವ ಸಂಕಲ್ಪವನ್ನು ಅವರೌ ಅಂದೇ ಮಾಡಿದ್ದರು. ಇದಕ್ಕಾಗಿಯೇ ಪ್ರತಿಷ್ಠಿತ ಐ.ಸಿ.ಎಸ್. ಪರೀಕ್ಷೆಯಲ್ಲಿ ಹನ್ನೊಂದನೇ ರ್ಯಾಂಕ್ ಪಡೆದಿದ್ದ ಅರವಿಂದರು ಐ.ಸಿ.ಎಸ್. ಹುದ್ದೆಯನ್ನು ತಿರಸ್ಕರಿಸಿ ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟರು!
ಆ ಸಮಯದಲ್ಲಿ ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು “ಇಂಡಿಯನ್ ಮಜಲೀಸ್” ಎನ್ನುವ ಸಂಘವನ್ನು ಸ್ಥಾಪಿಸಿ ಅದರ ಮೂಲಕ ಭಾರತದ ಸ್ವಾತಂತ್ರ್ಯ ಸಂಪಾದನೆಗೆ ಪ್ರಯತ್ನಿಸುತ್ತಿದ್ದರು. ಆ ಸಂಘಟನೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅರವಿಂದರು ಬಹುಬೇಗನೇ ಅದರ ಮುಖ್ಯ ಕಾರ್ಯನಿರ್ವಾಹಕರಾದರು. ಆದರೆ ಆ ಸಂಘಟನೆಯವರು ನಡೆಸುತ್ತಿದ್ದ ತೀರಾ ಸಾವಧಾನಕರ ಪ್ರತಿಭಟನೆಗಳಿಂದ ಮಾತ್ರವೇ ಭಾರತ ಸ್ವಾತಂತ್ರ್ಯ ಹೊಂದುವುದಿಲ್ಲವೆನ್ನುವುದನ್ನು ಅರಿತುಕೊಂಡ ಅರವಿಂದರು ಅದಕ್ಕಾಗಿ ಸಶಸ್ತ್ರ ಹೋರಾಟದ ಅಗತ್ಯವನ್ನು ಮನಗಂಡರು. ಅದೇ ಸಮಯದಲ್ಲಿ ತಮ್ಮಂತೆಯೇ ನಂಬಿಕೆ ಹೊಂದಿದ್ದ ಆ ತಲೆಮಾರಿನ ಕೆಲವು ಯುವಕರನ್ನು ಸೇರಿಸಿಕೊಂಡು ಒಂದು ಉಗ್ರಗಾಮಿಗಳ ಗುಂಪು ರಚಿಸಿಕೊಂಡರು, ಮತ್ತು ಆ ಗುಂಪಿಗೆ “Lotus and Dagger (ಕಮಲ ಮತ್ತು ಕಠಾರಿ)” ಎಂಬ ಹೆಸರು ನೀಡಿದರು. ಈ ಗುಂಪು ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಬಾಂಬ್ ಗಳ ತಯಾರಿಕೆಯ ಕುರಿತಾಗಿ ಕಲಿಯುವುದು, ಪರದೇಶಗಳಿಂದ ಬಾಂಬ್ ಗಳು, ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸಾಗಿಸುವುದು ಇದರ ಕಾರ್ಯಗಳಾಗಿದ್ದವು. ಗುಂಪಿನ ಸದಸ್ಯರು ಭಾರತದ ಸ್ವಾತಂತ್ರಕ್ಕಾಗಿ ಏನಾದರೂ ಮಾಡಲು ಸಿದ್ದ ಎನ್ನುವುದಾಗಿ ಪ್ರತಿಜ್ಜೆಗೈಯ್ಯಬೇಕಿತ್ತು. ಅರವಿಂದರು ತಾವೂ ಕೂಡ ಅಂತಹಾ ಪ್ರತಿಜ್ಞೆಯನ್ನು ಕೈಗೊಂಡು 1893 ರ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿಳಿದರು.
ಅರವಿಂದರು ಭಾರತ್ಕ್ಕೆ ಹಿಂತಿರುಗುವ ವೇಳೆಯಲ್ಲಿ ಅವರ ತಂದೆ ಕೃಷ್ಣ್ಧರ ಘೋಷ್ ದೈವಾಧೀನರಾಗಿದ್ದರು. ಅರವಿಂದರಿಗೆ ತಾವು ಜೀವನ ನಡೆಸಲಿಕ್ಕಾಗಿ ಏನಾದರೂ ಕೆಲಸ ಹುಡುಕಬೇಕಿತ್ತು. ಪಾಲಿಗೆ ಬಂದಿದ್ದ ಐ.ಸಿ.ಎಸ್. ಅಧಿಕಾರಿ ಹುದ್ದೆಯನ್ನು ಕಾಲಿನಿಂದ ತುಳಿದು ಬಂದುದಾಗಿತ್ತು. ಅಂತಹಾ ಸಮಯದಲ್ಲಿ ದೈವ ಸಂಕಲ್ಪವೆನ್ನುವಂತೆ ಬರೋಡಾದ ಮಹಾರಾಜರಿಗೆ ತಮ್ಮಲ್ಲಿನ ಆಡಳಿತ ನೋಡಿಕೊಳ್ಲಲು ಒಬ್ಬ ದಕ್ಷ ಅಧಿಕಾರಿಯು ಬೇಕಾಗಿದ್ದಿತು. ಅದೇ ಸಮಯದಲ್ಲಿ ಅವರ ಸಂಪರ್ಕಕ್ಕೆ ಬಂದ ಅರವಿಂದರಿಗೆ ಆ ಹುದ್ದೆ ದೊರೆಯಿತು. ಹೀಗೆ ಅರವಿಂದರು ಫೆಬ್ರವರಿ 8, 1893 ರಿಂದ ಬರೋಡಾ ಮಹಾರಾಜರ ಸೇವೆಗಾಗಿ ನಿಂತರು. ಪ್ರಾರಂಭದ ಎರಡು ವರ್ಷಗಳು 1893 ರಿಂದ 1895 ರ ನಡುವೆ ಬರೋಡಾದ ಸರ್ವೆ ಸೆಟ್ಲಮೆಂಟ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಅರವಿಂದರು 1895 ರಲ್ಲಿ ಬರೋಡಾ ಕಾಲೇಜಿನಲ್ಲಿ ಫ್ರೆಂಚ್ ಭಾಷಾ ಶಿಕ್ಷಕರಾಗಿ ನೇಮಕಗೊಂಡರು. ಬಳಿಇಕ 1899 ರಲ್ಲಿ ಅರವಿಂದರನ್ನು ಅದೇ ಕಾಲೇಜಿನ ಆಂಗ್ಲ ಭಾಷಾ ಪ್ರದ್ಯಾಪಕ ಹುದ್ದೆಗೆ ಖಾಯಂ ಆಗಿ ನೇಮಿಸಲಾಯಿತು. ಕ್ರಮೇಣ ತಮ್ಮ ಹುದ್ದೆಗಳಲ್ಲಿ ಮುಂಭಡ್ತಿ ಪಡೆದುಕೊಳ್ಳುತ್ತಾ ಸಾಗಿದ್ದ ಅರವಿಂದರು 1906 ರಲ್ಲಿ ಬರೋಡಾ ಸರ್ಕಾರದ ಹುದ್ದೆಗೆ ರಾಜೀನಾಮೆ ನೀಡುವಾಗ ಅಲ್ಲಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅರವಿಂದರು ತಾವು ಬರೋಡಾದಲ್ಲಿದ್ದಷ್ಟು ಸಮಯದಲ್ಲಿ ತಮ್ಮ ತಾಯ್ನುಡಿಯಾದ ಬಂಗಾಳಿ ಹಾಗೂ ಭಾರತೀಯರ ದೈವ ಭಾಶೆ ಸಂಸ್ಕೃತದಲಿ ಪಾಂಡಿತ್ಯವನ್ನು ಗಳಿಸಿದರು. ಇದರೊಡನೆ ಭಾರತೀಯ ಪರಂಪರೆ, ಸಂಸ್ಕೃತಿ, ಪುರಾಣ ಎಲ್ಲದರ ಆಳ ಅಧ್ಯಯನ ನಡೆಸಿದರು. ಈ ಎಲ್ಲದರಿಂದಾಗಿ ಅರವಿಂದರಲ್ಲಿ ಭಾರತದ ಕುರಿತ ಸ್ಪಷ್ಟ ಕಲ್ಪನೆಯೊಂದು ಉದಯವಾಯಿತು. ಅಲ್ಲದೆ ತಾಯ್ನೆಲಕ್ಕಾಗಿ ಹೋರಾಡುವ ಬಯಕೆ ದುಪ್ಪಟ್ಟಾಯಿತು.
ಅರವಿಂದರದು ಈ ಮೊದಲೇ ಹೇಳಿದಂತೆ ತೀವ್ರಗಾಮಿ ಚಿಂತನೆಯಾಗಿತ್ತು. 1885 - 1905 ರ ನಡುವೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರು ಅನುಸರಿಸುತ್ತಾ ಬಂದಿದ್ದ ದೀನತೆಯ ಧೋರಣೆಯನ್ನು ಖಂಡಿಸಿದ ಅರವಿಂದರು ಮುಂಬೈನಿಂದ ಪ್ರಕಟಗೊಳ್ಳುತ್ತಿದ್ದ “ಇಂದು ಪ್ರಕಾಶ” ಪತ್ರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಕಟುವಾಗಿ ಟೀಕಿಸಿ ಒಂದು ಲೇಖನವನ್ನು ಬರೆದರು. “ಅಖಂಡ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು.” ಎಂದು ಮೊತ್ತ ಮೊದಲಿಗೆ ಪ್ರತಿಪಾದಿಸಿದವರಿ ಶ್ರೀ ಅರವಿಂದರು! ಅಖಂಡ ಭಾರತ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳಾಗಬೇಕು. ಇದು ಇತಿಹಾಸ ಕಲಿಸಿದ ಪಾಠ. ಇದಕ್ಕಾಗಿ ಅರವಿಂದರು ಫ್ರೆಂಚ್ ಕ್ರಾಂತಿಯನ್ನು ಉದಾಹರಿಸಿದರು. ಫ್ರಾನ್ಸ್ ಕ್ರಾಂತಿಯಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರು ಕೃಷಿಕರಾಗಿದ್ದರು. ಸಾಮಾನ್ಯ ಅನಕ್ಷರಸ್ಥ ವರ್ಗದವರಾಗಿದ್ದರು ಎಂದ ಅರವಿಂದರು ಕೃಷಿ ಕಾರ್ಮಿಕರೇ ಭವ್ಯ ಸ್ವಂತಂತ್ರ ಭಾರತದ ಭವಿಷ್ಯದ ನಿಕವಾದ ಕೀಲಿಕೈ ಯಾರು ನಮ್ಮ ದೇಶದ ಕೃಷಿ ಕಾರ್ಮಿಕರಲ್ಲಿನ ಬಲವನ್ನು ಅವರಿಗೆ ತಿಳಿಸಿ ಅವರನ್ನು ಎಚ್ಚರಿಸುವರೋ ಅವರೇ ಭವಿತವ್ಯದ ನಾಯಕರಾಗುತ್ತಾರೆ ಎನ್ನುವ ಮೂಲಕ ಕೃಷಿ ಕಾರ್ಮಿಕರ ಶಕ್ತಿಯನ್ನು ಗುರುತಿಸಿದವರು ಅರವಿಂದರು.
ತ್ಯಾಗ, ಬಲಿದಾನ, ರಕ್ತಪಾತಗಳಿಲ್ಲದೆ ಸ್ವಾತಂತ್ರ್ಯ ಮರೀಚಿಕೆಯಾಗುವುದೆನ್ನುವ ನಂಬಿಕೆ ಹೊಂದಿದ್ದ ಅರವಿಂದರು ಅದಕ್ಕಾಗಿ “ಭವಾನಿ ಮಂದಿರ” ದ ಪರಿಕಲ್ಪನೆಯೊಂದನ್ನು ರೂಪಿಸಿದರು. ಬಂಕಿಮ ವಂದ್ರರ “ಆನಂದ ಮಠ” ಕಾದಂಬರಿಯಲ್ಲಿ ಬರುವಂತೆ ಆರಾಧಕರಾದವರಿಗೆ ಆರಾಧಿಸಲು ಒಂದು ದೇವಿಯು ಬೇಕು. ಭಾರತಾಂಬೆಯೇ ಆ ತಾಯಿ. ಜನ್ಮಭೂಮಿಯ ಮುಕ್ತಿಗಾಗಿ ಸರ್ವತ್ಯಾಗಕ್ಕೂ ಸಿದ್ದರಾಗಿರಿ ಎನ್ನುವುದಾಗಿ ಕರೆ ನೀಡಿದ ಅರವಿಂದರು ಭಾರ್ತ ಮಾತೆಯೇ ಭವಾನಿ ಎನ್ನುವುದಾಗಿ ಬಿಂಬಿಸಿ ಈ “ಭವಾನಿ ಮಂದಿರ” ಯೋಜನೆ ರೂಪಿಸಿದರು. 1899 ರಲ್ಲಿ ಅರವಿಂದರ ಸಂಪರ್ಕಕ್ಕೆ ಬಂದ ಜತೀಂದ್ರನಾಥ ಬ್ಯಾನರ್ಜಿ ಎನ್ನುವ ಯುವಕರೋರ್ವರಿಗೆ ಬರೋಡಾಸಂಸ್ಥಾನದ ಸೈನ್ಯದಲ್ಲಿ ಸೇರಿಕೊಳ್ಲಲು ತಿಳಿಸಿ ಅಲ್ಲಿ ಅವರಿಗೆ ಸೈನ್ಯದ ಬಗ್ಗೆ ಸಾಕಷ್ಟು ತಿಳುವಳಿಕೆ ಬರುವ/ಮ್ತೆ ಮಾಡಿದರು. ಭವಿಷ್ಯದಲ್ಲಿ ತಾವು ಕಟ್ತಬೇಕೆಂದಿದ್ದ ಸೈನ್ಯದಲ್ಲಿ ಭಾಗಿಯಾಗುವಂತೆ ಪ್ರೊತ್ಸಾಹ ನೀಡಿದರು. ಇದಕ್ಕೆ ಒಪ್ಪಿದ ಜತೀಂದ್ರರು ಶ್ರೀ ಅರವಿಂದರ ನಿಷ್ಠೆಯ ಅನುಯಾಯಿಗಳಾದರು. ಆಗಾಗ ಕಲ್ಕತ್ತೆಗೆ ಹೋಗಿ ಬರುತ್ತಲಿದ್ದ ಜತೀಂದ್ರನಾಥರು ಅಲ್ಲಿ ಶ್ರೀ ಅರವಿಂದರ ಆದೇಶದಂತೆ ಬಾರತ ಮಾತೆಯನ್ನು ದಾಸ್ಯದಿಂದ ಬಿಡಿಸುವ ಉದ್ದೇಶದಿಂದ ರೂಪುಗೊಳ್ಳಬೇಕಾದ ಕ್ರಾಂತಿಗಾಗಿ ಜನ, ಧನ ಬಲಗಳನ್ನು ಸಂಚಯಿಸತೊಡಗಿದರು. ಅದೇ ಸಮಯದಲ್ಲಿ ಬರೋಡಾಗೆ ಆಗಮಿಸಿದ ಅರವಿಂದರ ಸಹೋದರರಾದ ಬಾರೀಂದ್ರ ಪ್ರಸಾದ್ ರವರನ್ನು ಸಹ ತಮ್ಮ ಕಾರ್ಯಯೋಜನೆಯಲ್ಲಿ ಪಾಲ್ಗೊಳ್ಳುವದಕ್ಕೆ ಮನವೊಲಿಸಿದರು. ಅವರ ಮೂಲಕ “ಭವಾನಿ ಮಂದಿರ” ಸ್ಥಾಪನೆಗಾಗಿ ನಿರ್ಜನವಾಗಿರುವ ಸೂಕ್ತ ಸ್ಥಳವನ್ನು ಗೊತ್ತು ಮಾದಿದರು.
ಮಹಾರಾಷ್ಟ್ರದ ಥಾಣೆಯಲ್ಲಿ ಆ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಂಗಾಳದ ಐ.ಸಿ.ಎಸ್. ಅಧಿಕಾರಿ ಚಾರುಚಂದ್ರ ದತ್ತರ ಪರಿಚಯವು ಶ್ರೀ ಅರವಿಂದರಿಗೆ ಒದಗಿ “ಭವಾನಿ ಮಂದಿರ” ಯೋಜನೆಯ ಭವಿಷ್ಯದ ರೂಪುರೇಷೆಗೆ ಸಾಕಷ್ಟು ಸಹಕಾರ ಒದಗಿತು. ದತ್ತರವರು ತಾವು ಬ್ರಿಟೀಷ್ ಸರ್ಕಾರದ ಸೇವೆಯಲ್ಲಿದ್ದೂ ಅರವಿಂದರ ಸಿದ್ದಾಂತಕ್ಕೆ ಸಂಪೂರ್ಣ್ ಬೆಂಬಲಿಸಿದರು. ಇನ್ನು ದತ್ತರವರ ಭಾವನವರಾದ ಶ್ರೀಮಂತರಾಗಿದ್ದ ರಾಣಾ ಸುಬೋಧ ಮಲಿಕ್ ರವರ ಬೆಂಬಲವೂ ಅರವಿಂದರಿಗೆ ದೊರಕಿತು. ಮಹಾರಾಷ್ಟ್ರದಲ್ಲಿ ಜನಪ್ರಿಯ ನಾಯಕರಾಗಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರನ್ನು ಸಂಧಿಸಿದ ಅರವಿಂದರು ತಾವು ರೂಪಿಸಿಕೊಂಡ ಯೋಜನೆಯ ವಿವರಗಳನ್ನು ತಿಲಕರಿಗೆ ನೀಡಲಾಗಿ ಅವರು ಆ ಯೋಜನೆಗೆ ತಮ್ಮದೇ ಶೈಲಿಯಲ್ಲಿ ಸ್ಪಷ್ಟ ಸ್ವರೂಪವನ್ನು ನೀಡಿದರು. ಹೀಗೆ ಮಹಾರಾಷ್ಟ್ರದಲ್ಲಿ “ಭವಾನಿ ಮಂದಿರ” ಚಳುವಳಿ ಬಲವಾಗುವುದಕ್ಕೆ ಕಾರಣಾರಾದರು.
ಇತ್ತ ಬಂಗಾಳದಲ್ಲಿಯೂ ಕಲ್ಕತ್ತಾ, ದೇವಘಡ, ಮಿಡ್ನಾಪುರ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಒಟ್ಟು ಆರು ಕ್ರಾಂತಿಕಾರಿ ಚಳುವಳಿ ಕೇಂದ್ರಗಳನ್ನು ಸ್ಥಾಪನೆ ಮಾಡಿದರು. ಅರವಿಂದರ ನಿಕಟವರ್ತಿಗಳಾಗಿದ್ದ ಜತೀಂದ್ರದಾಸ್ ಬ್ಯಾನರ್ಜಿಯವರು ತಾವೂ ಆ ಬಗೆಯ ಕೇಂದ್ರವನ್ನು ಸ್ಥಾಪಿಸುತ್ತಲಿದ್ದು ತಮ್ಮ ಮೇಲಾಧಿಕಾರಿಗಳ ಕಚೇರಿ ಕಂಪೌಂಡಿನಲ್ಲಿಯೇ ಅಂತಹುದೊಂದು ಕೇಂದ್ರವನ್ನು ಸ್ಥಾಪನೆ ಮಾಡಿದ್ದರು!
ದಿನಗಳೆದಂತೆಲ್ಲಾ ಅರವಿಂದರ ಈ ಗುಪ್ತ ಕ್ರಾಂತಿ ಚಳುವಳಿ ಬಂಗಾಳ ಸೇರಿದಂತೆ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿತು. ದೊಡ್ಡ ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಇದ್ದವರೂ ಸಹ ಅರವಿಂದರ ಸಿದ್ದಾಂತಗಳನ್ನು ಅಂಗೀಕರಿಸಿ ಭಾರತಮಾತೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದರು. ಅದೇ ವೇಳೆಯಲ್ಲಿ ಲೋಕಮಾನ್ಯ ತಿಲಕರು ಹಾಗೂ ಅರವಿಂದರ ಮೈತ್ರಿ ಗಾಡವಾಗಿ ಬೆಳೆಯಿತು. ಇಬ್ಬರದೂ ಏಕಮಾತ್ರಗುರಿ – ‘’ಸಂಪೂರ್ಣ ಸ್ವಾರಂತ್ರ್ಯ’’ ಆಗಿದ್ದುದರಿಂದ ಇಬ್ಬರ ಯೋಜನೆಗಳೂ ಏಕಪ್ರಕಾರವಾಗಿ ಸಾಗಿದ್ದವು.
ಹೀಗಿರಲು 1907 ರ ಸೂರತ್ ಕಾಂಗ್ರೆಸ್ ಅಧಿವೇಶನದ ವೇಳೆಯಲ್ಲಿ ಬಂಗಾಳ ಹಾಗೂ ಮಹಾರಾಷ್ಟ್ರದಿಂದ ಅನೇಕ ತೀವ್ರಗಾಮಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪರಿಣಾಮವಾಗಿ ಅಂದಿನವರೆಗೂ ಮಂದಗಾಮಿಗಳ ಪ್ರಾಬಲ್ಯವಿದ್ದ ಕಾಂಗ್ರೆಸ್ ಪಕ್ಷವು ತಿಲಕರು ಹಾಗೂ ಅರವಿಂದ ಮಾರ್ಗದರ್ಶನ, ನಾಯಕತ್ವದೊಡನೆ ಪ್ರಥಮ ಬಾರಿಗೆ ತೀವ್ರಗಾಮಿಗಳ ವಶವಾಯಿತು.
1900 ರ ಪ್ರಾರಂಭದ ವರ್ಷಗಳು ನಮ್ಮ ಭರತಭೂಮಿ ಸಾಕಷ್ಟು ಕ್ರಾಂತಿಗಳು, ಬದಲಾವಣೆಯನ್ನು ಕಾಣುವಂತಾಯಿತು. ಅದರಲ್ಲಿಯೂ 1905 ರಲ್ಲಾದ ಬಂಗಾಳ ವಿಭಜನೆಯು ದೇಶಾದ್ಯಂತ ಜನರಲ್ಲಿ ಬ್ರಿಟೀಷರ ವಿರುದ್ದ ರೋಷದ ಜ್ವಾಲೆಯನ್ನೇ ಪಸರಿಸಿತು. ಅದೇ ಸಮಯದಲ್ಲಿ ಅರವಿಂದರ ಸಹೋದರ ಬಾರೀಂದ್ರರು 1906 ಮಾರ್ಚ್ ನಲ್ಲಿ “ಯುಗಾಂತರ” ಎನ್ನುವ ವಾರಪತ್ರಿಕೆಯೊಂದನ್ನು ಪ್ರಾರಂಭ ಮಾಡಿದರು. ಆ ಪತ್ರಿಕೆಯಲಿ ಪ್ರಕಟವಾಗುತ್ತಿದ್ದ ಅರವಿಂದರ ಲೇಖನಗಳು ಕ್ರಾಂತಿಗೆ ಇನ್ನಷ್ಟು ಸ್ಪೂರ್ತಿ ನೀಡುತ್ತಿದ್ದವು.
ಏತನ್ಮಧ್ಯೆ 1906 ರಲ್ಲಿ ಬರೋಡಾ ಸರ್ಕಾರದ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಅರವಿಂದರು ಅದಾಗ ಬಂಗಾಳ ನಾಯಕರಾಗಿದ್ದ ಬಿಪಿನ್ ಚಂದ್ರ ಪಾಲ್ ನಡೆಸುತ್ತಿದ್ದ ಆಂಗ್ಲ ವಾರಪತ್ರಿಕೆ “ವಂದೇ ಮಾತರಂ” ಸಂಪಾದಕತ್ವವನ್ನು ವಹಿಸಿಕೊಂಡರು. ಮುಂದೆ ಅರವಿಂದರು ಆ ಪತ್ರಿಕೆಯಲ್ಲಿ ಬರೆದ ಒಂದೊಂದು ಲೇಖನವೂ ಬ್ರಿಟೀಷ್ ಸರ್ಕಾರದ ವಿರುದ್ದ ಬೆಂಕಿಯುಂಡೆಗಳನ್ನುಗುಳುವಂತಿದ್ದವು. “ಏಟಿಗೆ ಏಟಿ! ಮುಯ್ಯಿಗೆ ಮುಯ್ಯಿ!!” ಎನ್ನುವಂತಹಾ ಧೋರಣೆಯ ಆ ಲೇಖನಗಳಿಂದ ಬಂಗಾಳವಷ್ಟೇ ಅಲ್ಲದೆ ದೇಶದ ನಾನಾ ಕಡೆಗಳಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ಬಿರುಸುಗೊಂಡವು. ಇಂತಹಾ ಸಮಯದಲ್ಲಿ ಶ್ರೀ ಅರವಿಂದರನ್ನು ಬಂಧಿಸಬೇಕು, ರಾಜದ್ರೋಹದ ಆಪಾದನೆಯೊಂದಿಗೆ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಬ್ರಿಟೀಷ್ ಸರ್ಕಾರದ ಅಧಿಕಾರಿಗಳು ನಾನಾ ವಿಧದಲ್ಲಿ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರಿಗೆಅರವಿಂದರ ವಿರುದ್ದ ಯಾವುದೇ ರೀತಿಯ ಸಾಕ್ಷ್ಯವು ದೊರೆಯದ ಕಾರಣ ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು!
ಶ್ರೀ ಅರವಿಂದರ ಸಹೋದರ ಬಾರೀಂದ್ರರು ಮಾಣಿಕ್ ತೋರಾ ಎನ್ನುವಲ್ಲಿ ತೋಟದ ಮನೆಯೊಂದನ್ನು ಬಾಡಿಗೆಗ್ ಪಡೆದು ಅಲ್ಲಿ ಭವಾನಿ ಮಂದಿರದ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅದೇ ಸಮಯದಲಿ ಖುದಿರಾಂ ಬೋಸ್ ಎನ್ನುವ ಕ್ರಾಂತಿಕಾರಿಯೋರ್ವರು ಪಪುಲ್ಲ ಜಾಕಿ ಎನ್ನುವ ಇನ್ನೋರ್ವರೊಡನೆ ಕೂಡಿ ನಡೆಸಿದ ಬಂಬ್ ಧಾಳಿಯಲ್ಲಿ ಬ್ರಿಟೀಷ್ ಮಹಿಳೆಯೋರ್ವರು ಮೃತರಾದರು. ಆ ಸಂಬಂಧದಲ್ಲಿ ಖುದಿರಾಂ ಬೋಸ್ ಗೆ ಗಲ್ಲುಶಿಕ್ಷೆಯಾಯಿತು. ಅದೇ ಸಮಯದಲ್ಲಿ ಬಂಗಾಳದ ಪೋಲೀಸರು ತಮಗೆ ಅನುಮಾನ ಹುಟ್ಟಿಸುವ ಚಿಕ್ಕ ದೊಡ್ದ ಮನೆಗಳೆಲ್ಲದರ ಮೇಲೆ ಧಾಳಿಗೆ ಮುಂದಾದರು. ಹಾಗೆಯೇ ಬಾರೀಂದ್ರರ ತೋಟದ ಮನೆಯೂ ಜಪ್ತಿಯಾಗಿ ಅಲ್ಲಿ ಸಾಕ್ಷ್ಟು ಪ್ರಮಾಣದ ಬಾಂಬ್ ಗಳು ಶಸ್ತ್ರಾಸ್ತ್ರಗಳೂ ದೊರಕಿದಾಗ ಆ ಸಮಯದಲ್ಲಿ ಆ ಮನೆಯಲ್ಲಿದ್ದ ಬಾರೀಂದ್ರ, ಅರವಿಂದರೂ ಸೇರಿದಂತೆ ಅನೇಕ ಜನರನ್ನು ಸುಪರ್ದಿಗೆ ತೆಗೆದುಕೊಂಡ ಪೋಲೀಸರು ಎಲ್ಲರ ಮೇಲೆಯೂ ಬಹು ದೊಡ್ಡ ಪ್ರಮಾಣದ ಆರೋಪವನ್ನು ಹೊರಿಸಿದರು.
ಈ ಪ್ರಕರಣದಲ್ಲಿ ಶ್ರೀ ಅರವಿಂದರು ೧1908 ಮೇ 4 ರಂದು ಪೋಲೀಸರಿಂದ ಬಂಧಿಸಲ್ಪಟ್ಟಿದ್ದರು. 1909 ಏಪ್ರಿಲ್ 13 ರವ್ರೆಗೆ ವಿಚಾರಣೆ ನಡೆಯಿತು. 777 ಸಾಕ್ಷಿಗ್ಳ ಹೇಳಿಕೆಗಳು, 4000 ಪುತಗಳ ದಸ್ತಾವೇಜು ದಾಖಲಾದವು. ಅರವಿಂದರ ಪರವಾಗಿ ಅಂದಿನ ಪ್ರಖ್ಯಾತ ವಕೀಲರಾದ ಚಿತ್ತರಂಜನ್ ದಾಸ್ ರವರು ಸತತ ಒಂಭತ್ತು ದಿನಗಳ ಕಾಲ ವಾದ ಮಂಡಿಸಿದರು. ಶ್ರೀ ಅರವಿಂದರನ್ನು ಬಂಧಿಸಿದ ವರ್ಷದ ಮೇಲೆ ಎರಡು ದಿನಗಳ ತರುವಾಯ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶರು ಅರವಿಂದರು ನಿರ್ದೋಷಿಗಳೆಂದು ತೀರ್ಪು ಬರೆದು ಪ್ರಕರಣಕ್ಕೆ ಮುಕ್ತಾಯ ಹಾಡಿದರು.
ಜೈಲಿನಲ್ಲಿದ್ದಷ್ಟೂ ಕಾಲ “ದೇವರು ನನ್ನನ್ನು ಪರೀಕ್ಷೆಗೊಡ್ಡಿದ್ದಾನೆ... ಅವನೇ ಎಲ್ಲದಕ್ಕೂ ಕಾರಣನು.” ಎಂದು ನಿಶ್ಚಲವಾಗಿ ನಂಬಿದ್ದ ಅರವಿಂದರು ತಾವು ಯಾವುದೇ ಉದ್ವೇಗ, ಆವೇಶ್ಗಳಿಗೆ ಸಿಲುಕದೆ ನಿರ್ಲಿಪ್ತರಾಗಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ದೇಶಸೇವೆಯನ್ನೇ ಮುಂದುವರಿಸಿದ ಅರವಿಂದರು “ಕರ್ಮಯೋಗಿ” ಹಾಗೂ “ಧರ್ಮ” ಎನ್ನುವ ಪತ್ರಿಕೆಗಳ ಮೂಲಕ ತಮ್ಮ ರಾಜಕೀಯ ನಿಲುವನ್ನು ಪ್ರಚುರಪಡಿಸುತ್ತಿದ್ದರು. ಅವರು ಬರೆಯುತ್ತಿದ್ದ ಉಗ್ರ ಲೇಖನಗಳಿಂದ ಜನರು ಸ್ಪೂರ್ತಿಗೊಂಡು ಸ್ವತಂತ್ರ್ಯ ಚಳುವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಇದು ಕಾರಣವಾಗಿ ಅಂದಿನ ಬ್ರಿಟೀಷ್ ಸತ್ತೆ ಮತ್ತೆ ಪುನಃ ಅರವಿಂದರನ್ನು ಬಂಧಿಸಿ ಸೆರೆಮನೆಗಟ್ತಬೇಕೆಂದು ಯೋಚಿಸಿತು. ಆ ವಿಚಾರವನ್ನು ಸೋದರಿ ನಿವೇದಿತಾರವರು ಶ್ರೀ ಅರವಿಂದರಿಗೆ ತಿಳಿಸಿದಾಗ ಅವರು ಮತ್ತೆ ತಡ ಮಾಡದೆಯೇ ಕಲ್ಕತ್ತಾವನ್ನು ತೊರೆದು ಚಂದ್ರನಗರವೆಂಬಲ್ಲಿಗೆ ಹೋದರು. ಅಲ್ಲಿ ಒಂದು ತಿಂಗಳ ಕಾಲ ನೆಲೆಸಿದ್ದ ಅರವಿಂದರು 1910 ಏಪ್ರಿಲ್ 1 ರಂದು ಅಲ್ಲಿಂದ ಹೊರಟು ಏಪ್ರಿಲ್ 4 ಕ್ಕೆ ಪಾಂಡಿಚೇರಿಗೆ ಬಂದು ತಲುಪಿದರು. ಅಲ್ಲಿಂದ ಮುಂದೆ ಶ್ರೀ ಅರವಿಂದರು ರಾಜಕೀಯದಿಂದ ಶಾಶ್ವತವಾಗಿ ದೂರ ಸರಿದರು. 1950 ಡಿಸೆಂಬರ್ 5 ರಂದು ತಾವು ದೇಹತ್ಯಾಗ ಮಾಡುವ ದಿನದ ವರೆವಿಗೂ ಪಾಂಡಿಚೇರಿಯನ್ನು ಬಿಟ್ಟು ಹೊರಬರಲಿಲ್ಲ.
ಸ್ನೇಹಿತರೆ, ಇದು ಮಹರ್ಷಿ ಅರವಿಂದರ ಸ್ವಾತಂತ್ರ್ಯ ಹೋರಾಟಗಾಥೆ. ಇಂದು ನಾವೆಲ್ಲಾ ಆಚರಿಸುತ್ತಿರುವ ಈ ಸ್ವಾತಂತ್ರ್ಯೋತ್ಸವದಂದೇ ಶ್ರೀ ಅರವಿಂದರ ಜನ್ಮದಿನವೂ ಆಗಿದ್ದು ಅವರು ಭರತ ಭೂಮಿಗೆ ಸಲ್ಲಿಸಿದ ಸೇವೆ, ಮಾಡಿದ ತ್ಯಾಗವನ್ನು ನೆನೆಯುತ್ತಾ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ........
ಜೈ ಹಿಂದ್....!