ಯೋಗ ಮತ್ತು ಧ್ಯಾನ (ಭಾಗ 1)

ಯೋಗ ಮತ್ತು ಧ್ಯಾನ (ಭಾಗ 1)

ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು.

ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ ನಿಷ್ಠೆಯಿಂದ ಬದುಕು ಸಾಗಿಸುತ್ತಿದ್ದರೆ ಅದೇ ಖಂಡಿತವಾಗಲೂ ಅತ್ಯುತ್ತಮ ಜೀವನ ಶೈಲಿ. ಬಹುಶಃ ನಾಗರಿಕತೆಯ ಪ್ರಾರಂಭದಲ್ಲಿ ಮನುಷ್ಯ ಹೀಗೆ ಇತರ ಎಲ್ಲಾ ಪ್ರಾಣಿಗಳಂತೆ ಜೀವಿಸುತ್ತಿದ್ದನು.  ಅಂದರೆ ಹೆಚ್ಚು ದೈಹಿಕ ಶ್ರಮ, ಕಡಿಮೆ ಮಾನಸಿಕ ಒತ್ತಡ, ಹಸಿವಾದಾಗ ತಿನ್ನುವುದು, ನಿದ್ದೆ ಬಂದಾಗ ನಿದ್ದೆ ಮಾಡುವುದು, ಅಗತ್ಯಕ್ಕೆ ಅನುಗುಣವಾಗಿ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದು, ಎಲ್ಲಿಂದ ಎಲ್ಲಿಗೋ ಪಯಣ, ನಾಳೆಯ ಚಿಂತೆ ಇಲ್ಲ, ಹಿಂದಿನ ನೆನಪುಗಳಿಲ್ಲ, ಇಂದಿನ ಬದುಕಷ್ಟೇ ಮುಖ್ಯ ಎಂಬ ಸನ್ನಿವೇಶದಲ್ಲಿ ಯೋಗ ಧ್ಯಾನಗಳ ಅವಶ್ಯಕತೆ ಅಷ್ಟಾಗಿ ಇರಲಿಲ್ಲ.

ಆದರೆ ಸಮಾಜ ಮುಂದುವರಿದಷ್ಟು ಮನುಷ್ಯನ ಅಗತ್ಯಗಳು ಹೆಚ್ಚಾಗಿ, ಕುಟುಂಬ ವ್ಯವಸ್ಥೆ ಸಂಕೀರ್ಣವಾದಷ್ಟು ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಅಧಿಕ ಒತ್ತಡ ಬೀಳತೊಡಗುತ್ತದೆ, ಮನಸ್ಸು ಮತ್ತು ದೇಹ ವಿಚಲಿತಗೊಳ್ಳತೊಡಗುತ್ತದೆ. ಅದರಲ್ಲೂ ಈ ಆಧುನಿಕ ಕಾಲದಲ್ಲಿ ಕಳೆದ 25/30 ವರ್ಷಗಳ ಬೆಳವಣಿಗೆಯಲ್ಲಿ ಮನುಷ್ಯನ ನಿಯಂತ್ರಣ ಮೀರಿ ಘಟನೆಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ದೇಹ ಮತ್ತು ಮನಸ್ಸು ಶಿಥಿಲವಾದ ತೊಡಗಿದೆ. ಕೆಲವೇ ಜನಗಳಲ್ಲಿ ಮಾತ್ರ ಇದ್ದ ಒತ್ತಡ ಇಂದು ವ್ಯಾಪಕವಾಗಿ ಎಲ್ಲ ವರ್ಗಗಳಲ್ಲೂ ಕಂಡು ಬರುತ್ತಿದೆ.

ಎಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಂಡ ನಂತರ ಆತನ ಬೇಡಿಕೆಗಳು ತುಂಬಾ ಜಾಸ್ತಿ ಆಗುತ್ತಿದೆ. ಒಂದು ರೀತಿ ಅತೃಪ್ತ ಆತ್ಮಗಳು ಎಲ್ಲಾ ಕಡೆ ಹರಿದಾಡುತ್ತಿವೆ. ಮಂತ್ರಿ ಆಗಿ ಸರಿಯಾದ ಖಾತೆ ಸಿಗದಿದ್ದರೆ ಆತ ಅನ್ಯಾಯವಾಗಿದೆ ಎನ್ನುತ್ತಾನೆ. ದೊಡ್ಡ ಐಎಎಸ್ ಹುದ್ದೆಯಲ್ಲಿದ್ದು ಮುಖ್ಯ ಕಾರ್ಯದರ್ಶಿ ಸ್ಥಾನ ಸಿಗದಿದ್ದರೆ ಅನ್ಯಾಯವಾಯಿತು ಎನ್ನುತ್ತಾನೆ. ಕೋಟ್ಯಂತರ ಹಣದ ಒಡೆಯನಾಗಿದ್ದರೂ ಸ್ವಲ್ಪ ನಷ್ಟವಾದರೆ ಆಘಾತಕ್ಕೆ ಒಳಗಾಗುತ್ತಾನೆ. ರ‌ಸ್ತೆಯಲ್ಲಿ ಉಪವಾಸ ಮಲಗುವ ಲಕ್ಷಾಂತರ ಜನ ಅವರಿಗೆ ನೆನಪಾಗುವುದಿಲ್ಲ.

ಹೀಗೆ ಅತೃಪ್ತ, ಅಸಮಾಧಾನಿತ, ಅಸಹಿಷ್ಣು ಆತ್ಮಗಳು ಎಲ್ಲೆಲ್ಲೋ ಅಲೆದಾಡುತ್ತಾ ತನ್ನ ಇರುವನ್ನೇ ಮರೆತಿದೆ. ಇಂತಹ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಖಂಡಿತವಾಗಲೂ ಮನುಷ್ಯನಿಗೆ ಅವಶ್ಯಕವಾದ ಪರಿಕಲ್ಪನೆಗಳಾಗಿದೆ. ಯೋಗ ಮತ್ತು ಧ್ಯಾನಗಳು ಪವಾಡಗಳಲ್ಲ. ವಿಶೇಷ ಶಕ್ತಿಯು ಅಲ್ಲ. ಎಲ್ಲಾ ಸಮಸ್ಯೆಗಳ ಪರಿಹಾರಗಳೂ ಅಲ್ಲ. ಅದೊಂದು ಪ್ರಾಕೃತಿಕ ಔಷದ. ಅಂದರೆ ದೇಹ ಮತ್ತು ಮನಸ್ಸು ನಿಯಂತ್ರಣ ತಪ್ಪಿದಾಗ ಅದನ್ನು ಸ್ವಲ್ಪ ಮಟ್ಟಿಗೆ ತಹಬಂದಿಗೆ ತರಲು ಅನುಸರಿಸಬಹುದಾದ ದೈಹಿಕ ಮತ್ತು ಮಾನಸಿಕ ಚಟುವಟಿಕೆ. ಆದರೆ ಯೋಗ ಕೇವಲ ದೈಹಿಕ ಮತ್ತು ಮಾನಸಿಕ ನಿಯಂತ್ರಣ ಅಥವಾ ಕಸರತ್ತು ಆಗಬಾರದು. ಅದೊಂದು ಬದುಕಿನ ತಿಳುವಳಿಕೆ, ನಡವಳಿಕೆ ಮತ್ತು ವ್ಯಕ್ತಿತ್ವವಾಗಬೇಕು ಎಂಬುದು ನಮ್ಮೆಲ್ಲರ ಆಶಯ.

ಯೋಗ ವಿಶ್ವಕ್ಕೆ ಭಾರತದ ಬಹುದೊಡ್ಡ ಕೊಡುಗೆ. ತಂತ್ರಜ್ಞಾನ ಬೆಳೆದಂತೆಲ್ಲಾ ದೇಹ ಮತ್ತು ಮನಸ್ಸುಗಳು ನಿಧಾನವಾಗಿ ಘಾಸಿಯಾಗಲು ಪ್ರಾರಂಭವಾಯಿತು. ಅದರಿಂದ ಹೊರ ಬರಲು ವಿಶ್ವದ ಎಲ್ಲಾ ಪ್ರಾಚೀನ ನಾಗರಿಕತೆಗಳು ವಿವಿಧ ರೀತಿಯ ವಿಧಾನಗಳನ್ನು ಪರಿಶೋಧಿಸಿದವು. ಅದರ ಭಾರತೀಯ ವಿಧಾನಗಳಲ್ಲಿ ಪ್ರಮುಖವಾದುದು ಯೋಗ. ಅದಕ್ಕೆ ವೈಜ್ಞಾನಿಕ ರೂಪ ನೀಡಿ, ಕ್ರಮಬದ್ದವಾಗಿ ಅಳವಡಿಸಿ, ಅದನ್ನು ಜನಪ್ರಿಯಗೊಳಿಸಿದ್ದು ಪಂತಂಜಲಿ ಎಂಬ ಮಹರ್ಷಿ ಎಂದು ಗುರುತಿಸಲಾಗಿದೆ. ಇದು ನನ್ನ ತಿಳಿವಳಿಕೆ. ಇನ್ನೂ ಸ್ಪಷ್ಟ ಇತಿಹಾಸ ತಿಳಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು.

ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಹೆಚ್ಚು ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನ. ಇದು‌ ಜಾತಿ‌, ಧರ್ಮ, ಭಾಷೆ, ಪ್ರದೇಶ ಎಲ್ಲವನ್ನೂ ಮೀರಿದ್ದು. ಪ್ರಾಕೃತಿಕವಾದ ಸರಳ‌ ಸಹಜ ಸ್ವಾಭಾವಿಕ ವಿಧಾನ. ಇದು ಭಕ್ತಿ ಪೂರ್ವಕ ಆಧ್ಯಾತ್ಮವಲ್ಲ. ಎಲ್ಲೋ ಕೆಲವರು ಆಧುನಿಕವಾಗಿ ವ್ಯಾಪಾರೀಕರಣದ‌ ದೃಷ್ಟಿಯಿಂದ ಇದಕ್ಕೆ ಧಾರ್ಮಿಕ ರೂಪ ನೀಡಿರಬಹುದು. ವಾಸ್ತವದಲ್ಲಿ ಇದು ಆರೋಗ್ಯ ಪೂರ್ಣ ಜೀವನ ಶೈಲಿಯ ಒಂದು ಅದ್ಬುತ ಮಾರ್ಗ.

ಯೋಗ ಮತ್ತು ಪ್ರಾಣಾಯಾಮ ಆರೋಗ್ಯ ಪೂರ್ಣ ಜೀವನದ ಒಂದು ವೈಜ್ಞಾನಿಕ ವಿಧಾನ ಎಂಬುದನ್ನು ವೈದ್ಯಲೋಕ ಸಹ ಸ್ವೀಕರಿಸುತ್ತದೆ. ಇದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ದಯವಿಟ್ಟು ‌ಸಾಧ್ಯವಿರುವ ಮತ್ತು ಅವಕಾಶವಿರುವ ಎಲ್ಲರೂ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಯೋಗವನ್ನು ಅಳವಡಿಸಿಕೊಂಡರೆ ಬದುಕು ಹೆಚ್ಚು ಸಹನೀಯ ಎನಿಸುತ್ತದೆ. ತಪ್ಪುಗಳು ಕಡಿಮೆಯಾಗುತ್ತದೆ. ಸುಖ ಸಂತೋಷ ಹೆಚ್ಚಾಗುತ್ತದೆ ಎಂದು ನಿಶ್ಚಿತವಾಗಿ ಹೇಳಬಹುದು. ಒತ್ತಡದ ಬದುಕಿನಲ್ಲಿ  ಧ್ಯಾನದ ಮಹತ್ವ ನೆನಪಿಸುತ್ತಾ…

(ಇನ್ನೂ ಇದೆ)

-ವಿವೇಕಾನಂದ ಹೆಚ್ ಕೆ. ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ