ಯೋಚಿಸೋಣವೇ...?

ಯೋಚಿಸೋಣವೇ...?

ನಮ್ಮ ಕಣ್ಣ ಮುಂದೆ ಘಟಿಸಿದಂಥ ಹಲವಾರು ಘಟನೆಗಳೋ, ವಿಷಯಗಳೋ ಇರಬಹುದು. ಓರ್ವ ಮನೆಯ ಯಜಮಾನ ಅನಿಸಿಕೊಂಡವನು ಹಗಲಿರುಳು ತನ್ನವರಿಗಾಗಿ ಹೋರಾಟ ಮಾಡ್ತಾನೆ. ಪತ್ನಿಗಾಗಿ, ಮಕ್ಕಳಿಗಾಗಿ, ಹೆತ್ತವರಿಗಾಗಿ ಕಷ್ಟಪಡುವನು. ಧಾರಾಳ ಇದ್ದವನಿಗೆ ತೊಂದರೆಯಿಲ್ಲ. ಆದರೆ ಮಧ್ಯಮ ವರ್ಗದವನ ಪಾಡು ‘ಅತ್ತ ದರಿ ಇತ್ತ ಪುಲಿ’ ಎಂಬ ಹಾಗೆ. ಅಂದರೆ ಆಚೆ ಬರೆ(ಗುಡ್ಡದ ಬದಿ)ಈಚೆ ಹುಲಿ ಎಂಬಂತೆ. ಓಡಲೂ ಅಲ್ಲ, ನಿಲ್ಲಲೂ ಅಲ್ಲ. ಆತ ಎಷ್ಟು ಹೆಣಗಾಡಿದರೂ ಅಲ್ಲಿಂದಲ್ಲಿಗೆ. ನೋಡುವವರ ಕಣ್ಣಿಗೆ ಅವನ ಬದುಕು ಚಂದ. ಒಳಗಿನ ಕಷ್ಟ ಅವನಿಗೆ ಮಾತ್ರ ಗೊತ್ತಿರುವುದು. ಏನೂ ಇಲ್ಲದವನು ಮೂರು ಹೊತ್ತಿನ ಚಿಂತೆ ಮಾತ್ರ ಮಾಡುವನು. ಅವನಿಗೆ ಒಂದಷ್ಟು ಸಹಾಯ, ಸಹಕಾರ ಸಿಗಬಹುದು. ಉಳಿದವರು ಕೈಚಾಚರು.

ಯಾಕೆ ಹೀಗೆ ಎಂದು ನಾವು ಯೋಚಿಸಿದರೆ ಕಾರಣ ಹಲವಾರು. ನಾವು ನಮ್ಮ ಪರಿಸರದ ಪಕ್ಷಿಗಳನ್ನು, ಪ್ರಾಣಿಗಳನ್ನು ನೋಡಿದರೆ ಒಂದು ವಿಷಯ ಅರ್ಥ ವಾಗಬಹುದು. ರೆಕ್ಕೆ ಬಂದ ಮೇಲೆ ಅದರದರ ಆಹಾರ ಅದುವೇ ಹುಡುಕಬೇಕು. ಅಷ್ಟರವರೆಗೆ, ಎದ್ದು ನಿಲ್ಲುವವರೆಗೆ ಮಾತ್ರ ಉಪಚಾರ, ಸಹಕಾರ ಎಲ್ಲ. ನಾವು ಎಡವಿದ್ದು ಇಲ್ಲಿ ಅನ್ನಿಸುತ್ತದೆ. ಮಕ್ಕಳಿಗೆ ಜೋತು ಬೀಳ್ತೇವೆ. ಅರೆಹೊಟ್ಟೆ ಉಂಡು ಮಕ್ಕಳಿಗೆ ಗಂಟಲವರೆಗೆ ತಿನ್ನಿಸುತ್ತೇವೆ. ಕಷ್ಟ ಪಟ್ಟು ಸಂಪಾದನೆ ಮಾಡುವುದು ಇಂದಿಗಲ್ಲ, ಮುಂದೆ ಹೆಂಡತಿ ಮಕ್ಕಳಿಗೆ ಹೇಳ್ತೇವೆ. ಎಲ್ಲಾ ಆಗುವಾಗ ಕಾಲ, ಪ್ರಾಯ ಎರಡೂ ಇಲ್ಲ. ಮುಂದೆ ಮಕ್ಕಳಿಗಾಯಿತು ಅಂಥ ಕಟ್ಟಿಟ್ಟು, ಇವ ಬೀದಿಪಾಲಾದಾಗ ಕಾಪಾಡಲು ಯಾರೂ ಸಿಗರು. ನಾಲ್ಕು ಸಾಂತ್ವನ, ಅನುಕಂಪದ ಮಾತುಗಳು ತೋರಿಕೆಯದ್ದು ಸಿಗಬಹುದು.

ನಮ್ಮ ಪೈಕಿ (ಬಂಧುಗಳಲ್ಲ) ಹೀಗೆ ಪರಿಚಯದವರು, ಬೇಕಾದಷ್ಟು ಆಸ್ತಿ ಬದುಕು ಎಲ್ಲಾ ಇದೆ. ಈಗಲೂ ಇದೆ. ಗಟ್ಟಿಮುಟ್ಟಾದ ಮೂವರು ಗಂಡು ಮಕ್ಕಳು ಉತ್ತಮ ಸ್ಥಿತಿಯಲ್ಲಿದ್ದಾರೆ. ಆದರೆ ಹಳ್ಳಿ ಮನೆಯ ಮಗನಿಗೆ ಮದುವೆಯಾದದ್ದೇ ತಡ, ಹಿರಿಯರ ಅವಸ್ಥೆ ನೋಡಲಾಗದು.ಇಂದು ಆ ಹಿರಿಯರು ವೃದ್ಧಾಶ್ರಮದಲ್ಲಿ (ಹಣನೀಡಿ) ದಿನದೂಡುತ್ತಿದ್ದಾರೆ. ಮಕ್ಕಳಿಗೆ ಎಂದು ಮಾಡಿದ ಆಸ್ತಿ ನಮ್ಮನ್ನು ನೋಡಿ ಅಣಕಿಸುವಂತಿದೆ. ಹೊಂದಾಣಿಕೆ ಕೊರತೆಯೋ, ಅಹಮಿಕೆಯೋ ಗೊತ್ತಿಲ್ಲ. ನೆಮ್ಮದಿ, ಶಾಂತಿ ಬೇಕು ಎಂಬ ಧ್ವನಿ ಕೇಳಿಬಂದಿದೆ.

ನಾವು ಯಾವುದೇ ಸಂತೋಷ, ಸುಖ ಅನುಭವಿಸದೆ, ಮಕ್ಕಳಿಗೆ ಎಂದು ಹೇಳುತ್ತಾ ಇರುವುದು ಎಷ್ಟು ಸರಿ? ಅವರನ್ನು ಕಲಿಸೋಣ, ಜೀವನದ ದಾರಿ ಮಾಡಿ ಕೊಡೋಣ, ಮುಂದೆ ಅವರ ಬದುಕನ್ನು ಅವರೇ ರೂಪಿಸುವಂತೆ, ಒಳ್ಳೆಯ ನೈತಿಕ ಮೌಲ್ಯಗಳನ್ನು ನೀಡಿ ಬೆಳೆಸೋಣ.

ಎಷ್ಟೋ ಮಕ್ಕಳು ಹೊರದೇಶಕ್ಕೆ ಹೋದವರು ಪುನಃ ತಿರುಗಿ ಸಹ ನೋಡುವುದಿಲ್ಲ. ಅಲ್ಲೇ ಮದುವೆಯಾಗಿ ,ಅಲ್ಲೇ ಇರುವರು. ಈ ಹೆತ್ತವರು ಮಕ್ಕಳಿದ್ದೂ ಅನಾಥಲ್ಲವೇ? ದುಡ್ಡಿನ ಹಿಂದೆ ಹೋದವ ಮತ್ತೆ ಹಿಂದಿರುಗಿ ಬಾರದ ಉದಾಹರಣೆಗಳು ಅದೆಷ್ಟೋ ಇದೆ.

ಪಕ್ಷಿ ಪ್ರಾಣಿಗಳಂತೆ ಎಲ್ಲವನ್ನೂ ಹುಡುಕಿ, ಹೆಕ್ಕಿ ತಿನ್ನುವುದನ್ನು ಮಾತ್ರ ಕಲಿಸೋಣ ಆಗದೇ? ಮಕ್ಕಳ ಭವಿಷ್ಯಕ್ಕಾಗಿ ದುಡಿಯೋಣ, ಆದರೆ ಎಲ್ಲದಕ್ಕೂ ಒಂದು ಇತಿಮಿತಿಗಳಿವೆ, ಪರಿಧಿಗಳಿವೆ. ಮಕ್ಕಳೇ ನಮ್ಮ ಸರ್ವಸ್ವ ಎಂಬ ವ್ಯಾಮೋಹದಿಂದ ಹೊರಬಂದು ಕಣ್ತೆರೆದಾಗ, ಅಲ್ಲಿ ನಮ್ಮದೇ ಆದ ಒಂದು ಪುಟ್ಟ ಪ್ರಪಂಚ ಗೋಚರವಾಗಬಹುದು.ಮಕ್ಕಳು ನಮ್ಮ ಬಾಳಿನ, ಬದುಕಿನ ಒಂದು ಭಾಗವೆಂಬುದನ್ನು ತಿಳಿದು ವ್ಯವಹರಿಸೋಣ. ಹುಟ್ಟು ಸಾವಿಗಾಗಿ ಅಂಜದೆ 'ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ, ಬಂದು ಹೋಗುವ ನಡುವೆ ಬರಿಯ ಕತ್ತಲೆ ' ಒಪ್ಪಿಕೊಳ್ಳೋಣ. ನಾಲ್ಕು ಜನ ಒಪ್ಪುವ ಮೆಚ್ಚುವ ಜೀವನ ಸಾಗಿಸೋಣ, ಒಂದು ಕ್ಷಣ ಯೋಚಿಸಿ ಬಂಧುಗಳೇ....

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ