ಯೋಜನೆ ಜಾರಿಯ ಬದ್ಧತೆ ಬೇಕು

ಯೋಜನೆ ಜಾರಿಯ ಬದ್ಧತೆ ಬೇಕು

ಆಡಳಿತ ಸುಧಾರಣೆ, ವಿವಿಧ ಕ್ಷೇತ್ರಗಳ ಅಭಿವೃದ್ದಿಯ ನಿಟ್ಟಿನಲ್ಲಿ ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುವುದು ಸ್ವಾಭಾವಿಕ. ಆದರೆ, ಅದೆಷ್ಟೋ ಯೋಜನೆಗಳು ಜಾರಿಯ ಹಂತದಲ್ಲಿ ಹಳಿ ತಪ್ಪುತ್ತವೆ. ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು ಆರಂಭದಲ್ಲಿ ಸಂಚಲನ ಮೂಡಿಸಿದ್ದು ನಿಜ. ಆ ಪೈಕಿ ನಾಲ್ಕು ಯೋಜನೆಗಳು ಜಾರಿಗೆ ಬಂದಿದ್ದರೂ, ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಆಕ್ಷೇಪದ ದನಿ ಕೆಲವೆಡೆ ಇದೆ. ತಾಂತ್ರಿಕ ಅಡಚಣೆಗಳು, ಇನ್ನಿತರ ಸಂಗತಿಗಳಿಂದ ಯೋಜನೆಗೆ ಗ್ರಹಣ ಹಿಡಿದಂತಾಗಿದೆ. ಈ ನಡುವೆ, ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಜಿಲ್ಲೆಗೊಂದು ಮಾದರಿ ಕಾಲೇಜು ತೆರೆಯಲು ಮುಂದಾಗಿದೆ.

ರಾಜ್ಯದಲ್ಲಿ ಪ್ರಸ್ತುತ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ೧೦೨ ಪಾಲಿಟೆಕ್ನಿಕ್ ಮತ್ತು ೧೬ ಇಂಜಿನಿಯರಿಂಗ್ ಕಾಲೇಜುಗಳಿವೆ. ಇದರಲ್ಲಿ ಜಿಲ್ಲೆಗೆ ತಲಾ ಒಂದರಂತೆ ೩೧ ಪದವಿ ಕಾಲೇಜು, ಪಾಲಿಟೆಕ್ನಿಕ್ ಮತ್ತು ೧೦ ಇಂಜಿನಿಯರಿಂಗ್ ಕಾಲೇಜುಗಳನ್ನು ಮೊದಲ ಹಂತದಲ್ಲಿ ಮಾದರಿ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿಶ್ವಬ್ಯಾಂಕಿನಿಂದ ೧೭೦೦ ಕೋಟಿ ರೂ.ನೆರವು ಪಡೆಯಲು ಉದ್ದೇಶಿಸಲಾಗಿದೆ. ಯೋಜನೆಯ ಉದ್ದೇಶವೇನೋ ಒಳ್ಳೆಯದೇ. ಆದರೆ ಶೈಕ್ಷಣಿಕ ರಂಗಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಹಲವು ಯೋಜನೆಗಳು ಬರೀ ಘೋಷಣೆಗೆ ಸೀಮಿತವಾಗಿ ಉಳಿದವು ಎಂಬುದು ತಿಳಿದಿರುವ ಕಹಿವಾಸ್ತವವೇ ಹೌದು. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ, ಅವುಗಳ ಉನ್ನತೀಕರಣದ ಉದ್ಡೇಶದಿಂದಲೂ ಬೇರೆ ಬೇರೆ ಸರ್ಕಾರಗಳ ಅವಧಿಯಲ್ಲಿ ಯೋಜನೆಗಳು, ಕಾರ್ಯಕ್ರಮಗಳನ್ನು ಘೋಷಿಸಲಾಯಿತು. ಇಂದಿಗೂ ಸರ್ಕಾರಿ ಶಾಲೆಗಳ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಮಾದರಿ ಕಾಲೇಜುಗಳ ನಿರ್ಮಾಣ ಅಗತ್ಯವೂ ಹೌದು. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ - ಅದು ಕಾಟಾಚಾರದ ನಿರ್ಣಯಕ್ಕೆ ಸೀಮಿತವಾಗಿರದೆ ಇಚ್ಛಾಶಕ್ತಿಯಿಂದ ಜಾರಿಗೊಳಿಸುವ ಬದ್ಧತೆ ಬೇಕು. ಬೃಹತ್ ಕಟ್ಟಡದ ನಿರ್ಮಾಣಕ್ಕೆ ಈ ಘೋಷಣೆ ಸೀಮಿತವಾಗಿರಬಾರದು. ಮುಖ್ಯವಾಗಿ, ಮೂಲಸೌಕರ್ಯಕ್ಕಾಗಿ ಮತ್ತು ಕಾಲೇಜುಗಳಿಗೆ ಅಗತ್ಯ ಸಿಬ್ಬಂದಿ ಒದಗಿಸಲು ನಿರಂತರ ಅನುದಾನ ನೀಡಬೇಕು. ಸಾಕಷ್ಟು ಯೋಜನೆಗಳು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ಅಥವಾ ತೆವಳುತ್ತ ಸಾಗುತ್ತಿರುವ ನಿದರ್ಶನಗಳಿಗೆ ಕೊರತೆ ಇಲ್ಲ. ಮಾದರಿ ಕಾಲೇಜುಗಳ ವಿಷಯದಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಪ್ರಭುತ್ವದ್ದು. ಈ ಹಿಂದಿನ ಬಿಜೆಪಿ ಸರ್ಕಾರ ಕೂಡ ಇದೇ ರೀತಿಯ ಯೋಜನೆ ಜಾರಿಗೆ ಮುಂದಾಗಿತ್ತು. ಈಗಿನ ಸರ್ಕಾರ ಅದರ ಹೆಸರು ಮತ್ತು ಸ್ವರೂಪವನ್ನು ಕೊಂಚ ಬದಲಿಸಿ, ಜಾರಿಗೆ ತರಲು ಹೊರಟಿದೆ. ಅದೇನಿದ್ದರೂ, ಯೋಜನೆಯ ಮೂಲೋದ್ದೇಶ ವಿಫಲವಾಗದಂತೆ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೭-೧೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ