ಯೌವನವು ಜಾರಿದಾಗ...
ಯೌವನವು ಜಾರುತ ಸೋರಿ ಹೋಗಿದೆ ತನುವ ಬೆಸೆಯುವಲ್ಲಿ
ಚೆಲುವು ಸರಿಯುತ ಮುಖವು ಸುರುಟಿದೆ ಧ್ವನಿಯು ಒಡೆಯಿತಿಲ್ಲಿ
ಮನಸಿನಲಿ ನೋವು ಹೆಚ್ಚಾಗಿಯಿಂದು ಎದೆಯಾಳ ಕುಸಿಯಿತಿಂದು
ತೊದಲು ಮಾತಿನಲಿ ಕಣ್ಣು ಕುರುಡಾಯ್ತು ಏನು ತೋರದಿಂದು
ಮೂಲೆ ಕೋಣೆಯಲಿ ಕಂಬ ಹಿಡಿದು ಮಲಗಿದ್ದೆ ನಾನು ಅಲ್ಲಿ
ಮಗುವೊಂದು ಬಂದು ಕೈಯನ್ನು ಮುಗಿದು ಕುಳಿತಿತ್ತು ಪಕ್ಕದಲ್ಲಿ
ಮನೆಯೊಡತಿ ಸಿಡುಕಿ ಬೈಯುತ್ತ ನಿಂದು ಕೆಕ್ಕರಿಸಿ ಕುಣಿದಳಿಂದು
ವೇದನೆಯ ಜೊತೆಗೆ ಒಡಲೆಲ್ಲ ಬೆಂದು ಹುಸಿಯಾಯ್ತು ಸ್ವರ್ಗವಿಂದು
ಯಾರ ಬಳಿಯಲಿ ಹೇಳಲೇನು ಮೈಮನಕೆ ಸೋಲು ಇಲ್ಲಿ
ಛಲವು ಇಲ್ಲದೆ ಬುದ್ಧಿ ಒಣಗಿದೆ ಮೌನ ಮುಸುಕಿತಿಲ್ಲಿ
ಸಂಸಾರ ಸುಖಕೆ ಎಲ್ಲವನು ನೀಡುತಲೆ ಸೋತು ಹೋದೆನಿಂದು
ಮುಂದೊಂದು ದಿನಕೆ ಕಾಯುತ್ತಲಿರುವೆ ಕರೆದೊಯ್ವ ಬರುವನೆಂದು
***
ಗಝಲ್
ಪ್ರೀತಿ ಒಳಗಿನ ಅರ್ಥ ನಿನ್ನಿಂದ ಕಲಿತೆ ಗಾಲಿಬ್
ಬಾಳುವ ಕಲೆಯನು ಅವನಿಂದ ಕಲಿತೆ ಗಾಲಿಬ್
ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು
ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಗಾಲಿಬ್
ನಿನ್ನೆಸರಿನಿಂದ ಪ್ರಣಯವು ಹೇಗೆ ಸಾಗಿದೆಯಿಂದು
ಸುಖದಲ್ಲಿಯ ಪಾಠವ ಜತನದಿಂದ ಕಲಿತೆ ಗಾಲಿಬ್
ಮದಿರೆಯ ಸ್ನೇಹಾಚಾರವ ನೀ ಆರಾಧಿಸುತ ಕುಳಿತೆ
ಉದರಕೆ ಬೇಕಾದ್ದ ಸಂಬಂಧದಿಂದ ಕಲಿತೆ ಗಾಲಿಬ್
ನಿನಿತ್ತ ಕೊಡುಗೆಗಳ ಬಳಸಿ ಈಶಾ ಸಾಗುತಿಹನಿಂದು
ಬೆಸುಗೆಯ ಒಲವನ್ನು ಸವಿಯಿಂದ ಕಲಿತೆ ಗಾಲಿಬ್
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ