ರಂಗಭೂಮಿ ಹುಡುಗನ ಕಥೆ
ದೇವರ ಸಮಾನವಾದ ನನ್ನ ಶಿಕ್ಷಕರಾದ ಚಿನ್ನಪ್ಪ ಕೆ ಜಾಲ್ಸೂರು, ಶಿಕ್ಷಕ ದಿನಾಚರಣೆಯ ಶುಭಾಶಯಗಳು...." ಹೀಗೊಂದು ವಾಟ್ಸಾಪ್ ಸಂದೇಶವೊಂದು ಈ ಬಾರಿಯ ಶಿಕ್ಷಕ ದಿನಾಚರಣೆಯಂದು ನನ್ನ ಮೊಬೈಲ್ ನಲ್ಲಿ ನೋಡಿದೆ.. ತಕ್ಷಣ , "ಧನ್ಯವಾದಗಳು, ತಾವು ಯಾರು...?." ಎಂದಾಗ ಅದೇ ನಂಬರಿನಿಂದ ಕರೆ ಬಂತು...ಕರೆ ಸ್ವೀಕರಿಸಿ ಹಲೋ ಎಂದೆ, ಪರಿಚಿತವಾದ ಸ್ವರ ..."ನಾನು ನಿಮ್ಮ ನಾಟಕದ ವಿದ್ಯಾರ್ಥಿ" ಅಂತ ಉತ್ತರ ಬಂತು. ನಾಟಕ ಅಂದ ತಕ್ಷಣ ಹಲವು ಬಾರಿ ಬೇರೆ ಶಾಲೆಗಳಲ್ಲಿಯೂ ನಾಟಕ ಮಾಡಿಸಿದ್ದೆ. ಅದಕ್ಕಾಗಿ ಯಾವ ಶಾಲೆ ಎಂದು ಕೇಳಿದೆ. ಆಗ ಆತ, "ಬಂಟ್ಟಾಳ ತಾಲೂಕಿನ ಶಂಭೂರು ಶಾಲೆ" ಅಂತ ಹೇಳಿದ. ಒಂದು ಕ್ಷಣ ನಾನು ಹರ್ಷಭರಿತನಾದೆ. ಸುಮಾರು ಹದಿನೇಳು ವರುಷ ಕರ್ತವ್ಯ ನಿರ್ವಹಿಸಿದ ಶಂಭೂರಿನ ವಿದ್ಯಾರ್ಥಿಯೊಬ್ಬನ ಬಾಲ್ಯದ ಜೀವನ ಚರಿತ್ರೆಯನ್ನು ತರೆದಿಟ್ಟ ಸುಂದರ ಕ್ಷಣ...!!
ಎಂಟನೇ ತರಗತಿಯಿಂದಲೇ ನಿಧಾನ ಕಲಿಕೆಯ ಪಟ್ಟಿಯಲ್ಲಿ ಹೆಸರು ಬರೆಸಿಕೊಂಡಿರುವ ವಿದ್ಯಾರ್ಥಿ ಈತ. ಹತ್ತನೆಯ ತರಗತಿಯಲ್ಲಿ ಉತ್ತೀರ್ಣನಾಗಲು ಸಾಧ್ಯವಿಲ್ಲ ಎಂಬ ಹಣೆಪಟ್ಟಿಯ ಈ ಪೋರ ಸಲೀಸಾಗಿ ಹತ್ತನೆ ತರಗತಿ ಪಾಸ್ ಮಾಡಿ ಈಗ ಉನ್ನತ ಶಿಕ್ಷಣವನ್ನು ಪಡೆದಿದ್ದಾನೆ. ಎಂಟನೆ ತರಗತಿಯಲ್ಲಿ ಓದುತ್ತಿದ್ದಾಗ ಅಭಿನಯ ನಾಟಕ ತಂಡದ ಸರಂಜಾಮು ಗಳನ್ನು ಜೋಡಿಸುತ್ತಾ ತಂಡಕ್ಕೆ ಎಂಟ್ರಿಕೊಟ್ಟ ಈತ ಮುಂದೆ ತಂಡದ ಪ್ರಬುದ್ಧ ನಟನಾಗಿ ಹಲವು ನಾಟಕಗಳಲ್ಲಿ ಪ್ರೇಕ್ಷಕರಿಂದ ಕರತಾಡನ ಗಿಟ್ಟಿಸಿಕೊಂಡು ಹಲವು ಬಾರಿ ಉತ್ತಮ ನಟ ಪ್ರಶಸ್ತಿಯನ್ನು ಪಡೆದ ನನ್ನ ನೆಚ್ಚಿನ ವಿದ್ಯಾರ್ಥಿ. ಕಲಿಕೆಯು ಕಬ್ಬಿಣದ ಕಡಲೆಕಾಯಿ ಎಂದು ಭಾವಿಸಿದ್ದ ಈತ ಶಾಲೆಯ ಕಲಿಕೆಯಲ್ಲಿ ಹಿಂದೆ ಬಿದಿದ್ದ. ಹಲವು ಬಾರಿ ಪೋಷಕರು ಶಾಲೆಗೆ ಬಂದು ಮಗನ ಈ ಪರಿಸ್ಥಿತಿಯನ್ನು ಕಂಡು ರೋಧಿಸಿ ನನಗೂ ಸ್ವಲ್ಪ ಮಟ್ಟಿಗೆ ಬುದ್ದಿಹೇಳಿದ್ದರು. ಅವನಿಂದ ನಾಟಕ ಮಾಡಿಸ ಬೇಡಿ ಅವನು ಕಲಿಯುವುದಿಲ್ಲ ಎಂದಾಗ ನನಗೂ ಕೆಲವೊಮ್ಮೆ ಹೌದು ಅನ್ನಿಸಿದೆ. ಆದರೆ ನನ್ನ ನಾಟಕಕ್ಕೆ ಅವನೇ ಆಧಾರವಾಗಿದ್ದ ಹುಡುಗ. ಅವನನ್ನು ಬಿಡದೇ ಎಲ್ಲಾ ನಾಟಕಗಳಿಗೆ ಅವಕಾಶವನ್ನು ಕೊಟ್ಟೆ. ಅವನ ಮಾತಿನಲ್ಲೇ ಹೇಳುವುದಾದರೆ, "ನಾನು ನಾಟಕ ತಂಡಕ್ಕೆ ಸೇರಿರದಿದ್ದರೆ ಇಂದು ನನ್ನ ಜೀವನದ ಅದೆಷ್ಟೋ ಅವಕಾಶಗಳು ತಪ್ಪಿಹೋಗುತ್ತಿತ್ತು" ಅಂತ ಭಾವುಕನಾಗಿ ನುಡಿದ. "ನೀವು ನನಗೆ ಕೊಟ್ಟ ಉದ್ದ ಉದ್ದದ ಸಂಭಾಷಣೆ ಗಳನ್ನು ಕಂಠಪಾಠ ಮಾಡಿದೆ. ಅಷ್ಟು ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ಎಲ್ಲರನ್ನು ರಂಜಿಸಲು ನೀವು ಹೇಳಿ ಕೊಟ್ಟ ಪಾಠ ನನ್ನ ಬಾಳಿಗೆ ಬೆಳಕು ನೀಡಿತು. ಹತ್ತನೆಯ ತರಗತಿಯ ಮೆಟ್ಟಿಲೇರಲು ರಂಗಭೂಮಿ ಸಹಾಯವಾಯಿತು. ಅದಕ್ಕಾಗಿ ನೀವು ನನ್ನ ಪಾಲಿನ ದೇವರು" ಎಂದಾಕ್ಷಣ ನನ್ನ ಕಣ್ಣ ಅಂಚಿನಲ್ಲಿ ಒಂದಷ್ಟು ಕಣ್ಣೀರ ಹನಿ ಹರಿಯಿತು. ಹೌದು ಅಂದು ಅವನ ಸ್ಥಿತಿ ಹಾಗಿತ್ತು. ಎಲ್ಲರಿಂದಲೂ ಬೈಗುಳದ ಮಾತುಗಳನ್ನು ಕೇಳುತ್ತಿದ್ದ ಈ ಪೋರ ಇಂದು ನನ್ನಂತಹ ಒಬ್ಬ ಸಾಮಾನ್ಯ ಶಿಕ್ಷಕರನ್ನು ದೇವರು ಅಂತ ಬಿಂಬಿಸುವುದು ಯಾಕೊ ತರವಲ್ಲ ಅನಿಸಿತಾದರೂ ಕೆಲವೊಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ಶಿಲ್ಪಿಗಳಾಗಿರುವುದಂತು ಸತ್ಯ. ನನ್ನ ವೃತ್ತಿ ಬದುಕಿನಲ್ಲಿ ಹತ್ತಾರು ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿದ ನನಗೆ ಇಂತಹ ಅನೇಕ ಶಿಷ್ಯರಿದ್ದಾರೆ. ಇಂತಹ ಹಲವು ಸವಿ ನೆನಪು ನಮ್ಮ ನೆನಪಿನ ಡೈರಿಯಲ್ಲಿದೆ. ಹಾಗಾಗಿ ಬನ್ನಿ ಜೊತೆ ಸೇರಿ ಬೆಳೆಯೋಣ.
-ಚಿನ್ನಪ್ಪ ಕೆ ಜಾಲ್ಸೂರು, ನಾವೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ