ರಂಗವಿಚಿಕಿತ್ಸೆ
*ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ ನಿರೂಪಿಸಿದ "ರಂಗವಿಚಿಕಿತ್ಸೆ" ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು*
"ರಂಗವಿಚಿಕಿತ್ಸೆ" (ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು), ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ, ನಿರೂಪಿಸಿದ ಕೃತಿ. 90 ಪುಟಗಳ, 99 ರೂಪಾಯಿ ಬೆಲೆಯ, 2018ರಲ್ಲಿ ಪ್ರಕಟವಾದ ಕೃತಿಯನ್ನು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಉಡುಪಿ - ಬೆಂಗಳೂರು (ನಂ. 6 - 81 - ಸಿ 2, ಅಡ್ಕದಕಟ್ಟೆ ರಸ್ತೆ, ನಿಟ್ಟೂರು ಅಂಚೆ, ಪುತ್ತೂರು ಗ್ರಾಮ, ಉಡುಪಿ - 576103) ಪ್ರಕಾಶಿಸಿದೆ.
ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ಶುಭಾಕಾಂಕ್ಷೆ , ಕಟೀಲು ಸಿತ್ಲ ರಂಗನಾಥ ರಾವ್ ಅವರ ಅರಿಕೆ ಮತ್ತು ಪಾತಾಳ ವೆಂಕಟರಮಣ ಭಟ್ಟರ ಮುನ್ನುಡಿ ಮೊದಲಿಗಿದೆ. ಕೃತಿಯ ಮುಖ್ಯ ಭಾಗವನ್ನು ಎರಡು ಭಾಗಗಳಾಗಿ ವಿಂಗಡಿಸಿ ಕೊಡಲಾಗಿದೆ. ಮೊದಲ ಭಾಗ, ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ಅಪೂರ್ವ ಸಾಧನೆಗಳು ಕುರಿತಾದರೆ, ಎರಡನೇ ಭಾಗ ಡಾ. ನಂಬಿಯಾರ್ ಜೊತೆಗೆ ಲೇಖಕರು ನಡೆಸಿದ ಸಂದರ್ಶನ ಮತ್ತು ನಿರೂಪಣೆಯಾಗಿದೆ. ಅನುಬಂಧವೂ ಕೃತಿಯ ಮಹತ್ವದ ಭಾಗವಾಗಿದ್ದು, ಅನುಬಂಧದ ಭಾಗ ಒಂದರಲ್ಲಿ , ಕಟೀಲು ಸಿತ್ಲ ರಂಗನಾಥ ರಾವ್ ಅವರೇ ಬರೆದ "ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಮಾಡುವುದೇಕೇ ?" ಲೇಖನವಿದೆ. ಅನುಬಂಧ ಎರಡು "ಇತರರ ಕಣ್ಣಲ್ಲಿ ಡಾ. ಕೆ. ಎಂ. ರಾಘವ ನಂಬಿಯಾರ್" ಎಂಬುದು. ಇದರಲ್ಲಿ ಡಿ. ಎಸ್. ಶ್ರೀಧರ್, ರಾಜಕುಮಾರ ಪೈವಳಿಕೆ, ಬೆಂಗಳೂರು ("ನಂಬಿಯಾರರು ಮಾಡಿಸಿದ ಸತ್ಯದರ್ಶನ"), ಸಮೀರ್ ದಾಮ್ಲೆ ಸುಳ್ಯ, ಬೆಂಗಳೂರು ("ಯಕ್ಷಗಾನದ ಗುಣಲಕ್ಷಣಗಳು: ಪರಂಪರೆ ಮತ್ತು ಹೊಸತನ") ಹಾಗೂ ಧನಂಜಯ ನೆಲ್ಯಾಡಿ, ಮೈಸೂರು ("ಕಲೆಯ ಸತ್ತ್ವದ ಸಾಕ್ಷಾತ್ಕಾರ") ಇವರು ಬರೆದ ಲೇಖನಗಳಿವೆ.
"ವೃತ್ತಿಯಲ್ಲಿ ಪತ್ರಕರ್ತರಾಗಿದ್ದುಕೊಂಡು, ಪ್ರವೃತ್ತಿಯಲ್ಲಿ ಉಪನ್ಯಾಸಕ, ರಂಗಕರ್ಮಿ, ಪ್ರಬೋಧಕ, ಲೇಖಕ, ಯಕ್ಷಗಾನ ಅರ್ಥದಾರಿ, ವೇಷಧಾರಿ, ಹಿಮ್ಮೇಳವಾದಕ, ಭಾಗವತ, ಪ್ರಸಂಗಕರ್ತ, ಭಾಷಣಕಾರ, ವಿಮರ್ಶಕ, ನಿರ್ದೇಶಕ, ಸಂಶೋಧಕ, ಕಾರ್ಯಕ್ರಮ ಸಂಘಟಕ, ಪ್ರೇಕ್ಷಕ ಹೀಗೆ ವಿವಿಧ ನೆಲೆಗಳಿಂದ ಯಕ್ಷಗಾನ ರಂಗಭೂಮಿಯೊಂದಿಗೆ ಕಳೆದ 60 ವರ್ಷಗಳಿಂದ ನಿಕಟವಾದ ಬಾಂಧವ್ಯವಿರಿಸಿಕೊಂಡಿರುವ ಡಾ. ಕೆ. ಎಂ. ರಾಘವ ನಂಬಿಯಾರರು (ಜನನ 1946) ಹತ್ತು ಹಲವು ಕೊಡುಗೆಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದವರು".
"ಉಪನ್ಯಾಸಕರಾಗಿ ಡಾ. ನಂಬಿಯಾರರು ವಿಶ್ವಬ್ರಾಹ್ಮಣ ವಿದ್ಯಾಪೀಠ, ಕೊಡಂಕೂರು, ಉಡುಪಿ ಇಲ್ಲಿ ಸಂಸ್ಕೃತ ಅಧ್ಯಾಪನ (2004 - 2006). ಮಣಿಪಾಲ ವಿಶ್ವವಿದ್ಯಾಲಯದ ಎಂ.ಸಿ.ಪಿ.ಎಚ್. ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಸ್ಕೃತ ಪ್ರವಚನ. ಒಬ್ಬ ನಾಟ್ಯ ಶಿಕ್ಷಾರ್ಥಿಗೆ ವಿಶ್ವವಿದ್ಯಾಲಯದ ಎಂ. ಫಿಲ್. ಪದವಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಅಲ್ಲದೆ ವರ್ಷಗಳಿಂದ ಅನೇಕರ ಸ್ನಾತಕೋತ್ತರ ಅಧ್ಯಯನಕ್ಕೆ ಸಂಪನ್ಮೂಲರಾಗಿ ಮಾರ್ಗದರ್ಶನವಿತ್ತು ಸಹಕರಿಸಿದ್ದಾರೆ".
"ಪ್ರಸಂಗಕರ್ತರಾಗಿ ಡಾ. ನಂಬಿಯಾರರು ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ಅಮರೇಂದ್ರ ಪದವಿಜಯಿ, ವಜ್ರಧರ ವಿಲಾಸ, ರಘುವಂಶ ಇತ್ಯಾದಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಇವು ಪ್ರಸಿದ್ಧ ಶ್ರೀ ಧರ್ಮಸ್ಥಳ ಕ್ಷೇತ್ರದ ವೃತ್ತಿಪರ ಯಕ್ಷಗಾನ ಮಂಡಳಿಗೆ ಖ್ಯಾತಿಯನ್ನು ತಂದುಕೊಟ್ಟ ರಚನೆಗಳು".
ಹೀಗೆ, ಡಾ. ಕೆ. ಎಂ. ರಾಘವ ನಂಬಿಯಾರರ ವಿದ್ವತ್ ಪ್ರತಿಭಾ ಸಂಪನ್ನತೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಹೋಗುವ ಲೇಖಕ ಕಟೀಲು ಸಿತ್ಲ ರಂಗನಾಥ ರಾವ್ ಅವರು ಮುಂದುವರಿದು ಇಷ್ಟೇ ವಿವರಣಾತ್ಮಕವಾಗುವ ರೀತಿಯಲ್ಲಿಯೇ ನಂಬಿಯಾರರ ಸಂದರ್ಶನವನ್ನೂ ನಡೆಸಿದ್ದಾರೆ.
ಈ ಸಂದರ್ಶನದಲ್ಲಿ ನಂಬಿಯಾರರು ಯಕ್ಷಗಾನದ ಮೂಲ ಸತ್ತ್ವ, ನೆಲೆ, ಬೆಳೆದು ಬಂದ ರೀತಿ, ಅಮೂಲ್ಯವಾದುದನ್ನು ಕಳೆದುಕೊಂಡ ರೀತಿ, ಪ್ರಸ್ತುತ ಸ್ಥಿತಿ ಗತಿಯನ್ನು ಯಾವುದೇ ರೀತಿಯ ಅಂಜಿಕೆ, ಅಳುಕು, ಬಿಗುಮಾನಗಳನ್ನೇ ತೋರಿಸದೆ ನೇರಾನೇರವಾಗಿ ಅನಾವರಣಗೊಳಿಸಿದ್ದಾರೆ. ವಿಷಯದ ಮೇಲೆ ಯಾವುದೇ ಕನಿಷ್ಟ ಗೊಂದಲಗಳೂ ಇಲ್ಲದಂತಿರುವ ಸ್ಪಷ್ಟತೆ, ಪ್ರೌಢಿಮೆ, ಅಪಾರ ಅಧ್ಯಯನ, ಸಂಶೋಧನ ನಡೆಸಿದವರಿಗೆ ಮಾತ್ರ ಈ ಸಂದರ್ಶನದಲ್ಲಿ ಏನೇನೆಲ್ಲ ಹೇಳಲಾಗಿದೆಯೋ ಇವುಗಳನ್ನೆಲ್ಲ ಹೇಳಲು ಸಾಧ್ಯ. ಡಾ. ನಂಬಿಯಾರರಿಗೆ ಇದು ಸಾಧ್ಯವಾಗಿದೆ. ಇದಕ್ಕೆ ಕಾರಣ, ನಂಬಿಯಾರರಿಗೆ ವ್ಯಕ್ತಿಗಳಿಗಿಂತಲೂ, ಯಕ್ಷಗಾನದ ಮೇಲೆ ಅನನ್ಯವಾದ ಪ್ರೀತಿ ಮತ್ತು ಯಕ್ಷಗಾನ ನಿಷ್ಟೆಯೇ ಆಗಿದೆ. " ರಂಗವಿಚಿಕಿತ್ಸೆ" ಓದುವಾಗ ಇದು ಸ್ಪಷ್ಟವಾಗುತ್ತದೆ.
ಡಾ. ಕೆ.ಎಂ. ರಾಘವ ನಂಬಿಯಾರರು "ರಂಗವಿಚಿಕಿತ್ಸೆ" ಕೃತಿಯಲ್ಲಿ ಲೇಖಕರ ಪ್ರಶ್ನೆಗಳಿಗೆ ನೀಡಿದ ಉತ್ತರಗಳನ್ನು ಇದಕ್ಕಿಂತ ಹಿಂದೆಯೇ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಬೇರೆ ಬೇರೆ ಕೃತಿಗಳಲ್ಲಿ, ಲೇಖನಗಳಲ್ಲಿ, ಭಾಷಣಗಳಲ್ಲಿ ಹೇಳಿದ ವಿಷಯಗಳೇ. ಸತ್ಯವನ್ನೇ ಹೇಳಲು ಕಾರಣವೇ ಬೇಕಿಲ್ಲ. ಸತ್ಯನಿಷ್ಟೆಯೇ ಸತ್ಯ ಹೇಳಲು ಒಂದು ಮುಖ್ಯ ಕಾರಣವಷ್ಟೆ. ಲೇಖಕ ಸಿತ್ಲ ಹಾಗೂ ಡಾ. ನಂಬಿಯಾರರು ಇಬ್ಬರ ಉದ್ಧೇಶಗಳೂ ಒಂದೇ ಆಗಿರುವುದನ್ನು ಇಲ್ಲಿ ಓದುಗರು ಗಮನಿಸಬಹುದು. ಈ ನಿಟ್ಟಿನಲ್ಲಿ ಲೇಖಕರು ಹೇಳುವುದು ಹೀಗೆ:
"ನಮ್ಮ ಸಮಾಜಕ್ಕೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೈಜವಾದ ಇತಿಹಾಸದ ದರ್ಶನವಾಗಬೇಕು. ನಮ್ಮ ಈಗಿನ ಕಲಾ ಇತಿಹಾಸ ಅನೇಕ ಪೊಳ್ಳುಗಳಿಂದ ಕೂಡಿದೆ. ಅದರ ಆ ಮುಖವಾಡವನ್ನು ಕಳಚಿ ನಿಜವಾದ ಇತಿಹಾಸದ ದಾಖಲೀಕರಣವಾಗಬೇಕು. ಈ ಸತ್ಯದ ಇತಿಹಾಸ ನಮ್ಮ ಮುಂದಿನ ಪೀಳಿಗೆಗೆ ಒದಗಬೇಕು. ಯಾವುದೇ ಕಲೆಗಳ, ಸಾಹಿತ್ಯದ ಮುಖ್ಯವಾಗಿ ಯಕ್ಷಗಾನದ ನಿಜವಾದ ಮೂಲಸತ್ತ್ವದ ದಾಖಲೀಕರಣವಾಗಬೇಕು ಎನ್ನುವ ಮಹತ್ತರವಾದ ಆಶಯವೂ ನನ್ನಿಂದ ಈ ಎಲ್ಲಾ ಕೈಂಕರ್ಯಗಳನ್ನು ಮಾಡಿಸಿತು".
ಇಂಥ ಸದುದ್ಧೇಶದೊಂದಿಗೆ ಡಾ. ನಂಬಿಯಾರರ ಸಂದರ್ಶನ ನಡೆಸಿದ ಲೇಖಕರಿಗೆ , ಈ ಸಂದರ್ಶನದ ಹಿನ್ನೆಲೆ - ಮುನ್ನೆಲೆಯಲ್ಲಿ ನಡೆಯಬಹುದಾದ ಚರ್ಚೆ, ಸಂವಾದ, ವಾಗ್ವಾದ, ವಿವಾದಗಳ ಅರಿವೂ ಇದೆ. ಇದಕ್ಕೇ ಇರಬೇಕು ಲೇಖಕರು ಇನ್ನೊಂದು ಸತ್ಯವನ್ನೂ ಓದುಗರ ಮುಂದೆ ಹರವಿಟ್ಟಿದ್ದಾರೆ.
" ಡಾ. ನಂಬಿಯಾರರು ಪ್ರಖರವಾಗಿ ತಮ್ಮ ಅಭಿಪ್ರಾಯಗಳನ್ನು ಮುಲಾಜಿಲ್ಲದೇ ಹೇಳುವ ಕಾರಣ ಸತ್ಯವೆನ್ನುವಂಥದ್ದನ್ನು ಅರಗಿಸಿಕೊಳ್ಳಲಾಗದ ಮಂದಿಗಳು ಅವರ ವಿಚಾರಧಾರೆಗಳನ್ನು ಒಪ್ಪಿಕೊಳ್ಳದೇ ಇರಬಹುದು. ಸುಳ್ಳಿನ ಪಂಚಾಂಗದ ಆಧಾರದಲ್ಲಿ ಬೃಹತ್ ಸುಳ್ಳಿನ ಸೌಧಗಳನ್ನು ಕಟ್ಟಿ ಸುಳ್ಳನ್ನೇ ಸಮಾಜಕ್ಕೆ ನೀಡುತ್ತಾ ವ್ಯಾಪಾರ ವಹಿವಾಟನ್ನು ಮಾಡುತ್ತಾ ತಮ್ಮ ಜೋಳಿಗೆಯನ್ನು ತುಂಬಿಸುವ ಮಂದಿಗಳಿಗೆ ಪ್ರಾಜ್ಞರ ಸತ್ಯವಾಕ್ಕುಗಳಿಂದ ಅವರ ಜೀವನ ವ್ಯಾಪಾರವೇ ದುಸ್ತರ. ಅಂಥವರ ಸಂಖ್ಯೆ ಸಮಾಜದಲ್ಲಿ ಅಧಿಕವಾಗಿರುವುದು ಸಮಾಜದ ದೌರ್ಭಾಗ್ಯವೆಂದೇ ಹೇಳಬೇಕು".
ಯಕ್ಷಗಾನದಲ್ಲಿ ಹಾಗೆ ಇದೆ, ಸಿನಿಮಾದಲ್ಲಿ ಹೀಗೆ ಇದೆ. ಇವುಗಳಲ್ಲಿ ಹೇಗೆ ಇದೆಯೋ ಇದೇ ಅಂತಿಮ ಸತ್ಯವೆಂದೂ, ಎಲ್ಲವೂ ಇವುಗಳಲ್ಲಿ ತೋರಿಸಿದಂತೆ, ವೇಷಧಾರಿಗಳು ಹೇಳಿದಂತೆಯೇ ಇದೆ, ನಡೆದಿದೆ ಎಂದು ವಾದಿಸುವವರು, ನಂಬಿರುವ ದೊಡ್ಡ ಸಂಖ್ಯೆಯ ಮುಗ್ದ ಜನರು ನಮ್ಮ ನಡುವೆ ಇದ್ದಾರೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ ಎಂಬುದು ಪ್ರಜ್ಞಾವಂತರಿಗೆ ತಿಳಿದೇ ಇರುತ್ತದೆ. ಈ ನಿಟ್ಟಿನಲ್ಲಿ ಸಂವಾದದ ಒಂದು ಭಾಗದ ಆಯ್ದ ಭಾಗವನ್ನು ಇಲ್ಲಿ ಗಮನಿಸಬಹುದು.
"ಮೂಲ ರಾಮಾಯಣ ಮತ್ತು ಭಾರತ ಕಥೆಗಳಿಗೆ ಅನುಗುಣವಾಗಿ ಯಕ್ಷಗಾನ ಪ್ರಸಂಗಗಳಿಲ್ಲ" ಎಂಬ ಸಂದರ್ಶಕರ ಮಾತಿಗೆ ಉತ್ತರವಾಗಿ ಡಾ. ನಂಬಿಯಾರರು ನೀಡಿದ ಪ್ರತಿಕ್ರಿಯೆ ಹೀಗಿದೆ.
"ಮೂಲ ಬೇಕಾದರೆ ವಾಲ್ಮೀಕಿ ರಾಮಾಯಣ, ಮಹಾಭಾರತಗಳೇ ಇವೆಯಲ್ಲ ? ನಿಮಗೆ ಭಾಷೆ ಅರ್ಥವಾಗುವುದಿಲ್ಲವೇ ? ಸಂಸ್ಕೃತ ಅರ್ಥವಾಗುತ್ತದೆ ಅಂದ ಮೇಲೆ ಮತ್ತೆ ರಂಗಕ್ಕೆ ಯಾಕೆ ಬೇಕು. ವಿದ್ವಾಂಸರು ಪಾರಾಯಣ ಮಾಡುವಾಗ, ವ್ಯಾಖ್ಯಾನ ಮಾಡುವಾಗ ಅರ್ಥವಾಗುತ್ತದಲ್ಲ ? ಯಕ್ಷಗಾನ ಪ್ರಸಂಗವು ರಂಗಕೃತಿ. ಆದುದರಿಂದ ರಂಗದಲ್ಲಿ ರಾಮಾಯಣ, ಮಹಾಭಾರತಗಳಲ್ಲಿ ಇದ್ದ ಹಾಗೆ ಕತೆಯನ್ನು ತೋರಿಸುವುದಕ್ಕೆ ಬರುವುದಿಲ್ಲ".
'ಅಜ್ಜ ನೆಟ್ಟ ಆಲದ ಮರಕ್ಕೆ ನೇತು ಬೀಳುವುದು' ಎಂಬ ಒಂದು ಮಾತಿದೆ. ಜನರು ಹೆಚ್ಚಾಗಿ, ಹಿರಿಯರ ಕಾಲದಿಂದಲೇ ಆಚರಿಸಿಕೊಂಡು ಬಂದದ್ದು, ನಂಬಿಕೊಂಡು ಬಂದದ್ದು. ಇದೇ ಸರಿಯಾದುದು ಎಂದು ತಿಳಿದುಕೊಂಡು ಅದು ಯಾವುದೇ ವಿಷಯ ಇರಲಿ, ಲಾಗಾಯ್ತಿನಿಂದಲೂ ನಡೆದುಕೊಂಡು ಬಂದುದನ್ನು ಅದು ಸರಿಯೋ ತಪ್ಪೋ, ಅಗತ್ಯವೋ ಅನಗತ್ಯವೋ ಎಂಬಿತ್ಯಾದಿಯಾಗಿ ಯಾವುದನ್ನೂ ಯೋಚಿಸದೆ ಅದು ಇದ್ದ ಹಾಗೆಯೇ ಮುಂದುವರಿಸುವುದು ನಡೆದುಕೊಂಡುಬಂದಿದೆ. ಯಥಾಸ್ಥಿತಿವಾದದ ಮನಸ್ಥಿತಿ, ಮುಗ್ದತೆ, ಒಂದು ರೀತಿಯ ಭಯ ಇತ್ಯಾದಿಗಳೂ ಇದಕ್ಕೆ ಕಾರಣವಾಗಿರುತ್ತದೆ, ಆಗಿರಬಹುದು. ಯಕ್ಷಗಾನ ರಂಗದಲ್ಲೂ ಇಂಥದ್ದಕ್ಕೇನೂ ಬರವಿಲ್ಲ. ಇಲ್ಲಿ ಒಂದು ವಿಚಾರ ಈ ಕೆಳಗಿನಂತಿದೆ.
*ಮೇಜು ತೆಗೆಸಿದ್ದು*: ದೊಡ್ಡ ಬಲಿಪ ನಾರಾಯಣ ಭಾಗವತರು ಮತ್ತು ಆಟ ಆಡಿಸುವ ಒಂದು ಊರಿನ ಯಜಮಾನನ ನಡುವಿನ ಜಿದ್ದು ರಂಗಸ್ಥಳದಲ್ಲಿ ಮೇಜು ಬರಲು ಕಾರಣವಾಯಿತು. ತಾನು ಬಲಿಪರಿಂದ ಪದ ಹೇಳಿಸಿಯೇ ಸಿದ್ಧ ಎಂದು ಆ ಊರಿನ ಯಜಮಾನನೂ ತಾನು ಪದವನ್ನು ಹೇಳುವುದಿಲ್ಲ ಎಂದು ಬಲಿಪರು. ಆದರೆ ಮೇಳ ಆ ಊರಿಗೆ ಹೋದಾಗ ಬಲಿಪರಿಗೆ ಉಪಾಯವೇ ಇಲ್ಲ. ಆಗ ಬಲಿಪರು, 'ನನಗೆ ಸ್ವಲ್ಪವೂ ಕೂಡುವುದಿಲ್ಲ, ಏನೂ ಸೌಖ್ಯವಿಲ್ಲ, ಮಲಗಬೇಕಾಗುತ್ತದೆ' ಎಂದಾಗ ಆ ಭೂಮಾಲಕರು 'ರಂಗಸ್ಥಳದಲ್ಲಿಯೇ ಮಲಗಲು ನಿಮಗೆ ವ್ಯವಸ್ಥೆ ಮಾಡಿ ಕೊಡುತ್ತೇನೆ' ಎಂದು ಹೇಳಿದರು. ಈ ಜಿದ್ದಿನ ನಾಟಕದಲ್ಲಿ 'ಪಡಿಮಂಚ'ವನ್ನು ರಂಗಸ್ಥಳಕ್ಕೆ ತಂದಿರಿಸಲಾಯಿತು. ಅದರಲ್ಲಿ ಭಾಗವತರು ಕೂತು ಕೆಲ ಪದ ಹಾಡಿ, ಮಲಗಿ ಏನೇನೆಲ್ಲ ಮಾಡಿ ಕೊನೆಗೂ ಆ ರಾತ್ರಿ ಬೆಳಗು ಮಾಡಿದರು. ಅಂತೂ ಈರ್ವರ ಮಾತು ಕೂಡಾ ನಡೆಯಿತು. ಇವರ ಈ ಜಿದ್ದಿನ ಕಾರಣ ರಂಗಸ್ಥಳದಲ್ಲಿ ಶಾಶ್ವತವಾದ ಒಂದು ಹಾನಿಯನ್ನು ಮಾಡಿಟ್ಟುಹೋದರು. ಇದರ ಸುಧಾರಿತ ರೂಪವೇ ಇವತ್ತು ಭಾಗವತ ಮತ್ತು ಮದ್ದಳೆಗಾರನಿಗೆ ಕುಳಿತುಕೊಳ್ಳಲು ರಂಗಸ್ಥಳದಲ್ಲಿರುವ ಅಡ್ಡ ಮೇಜು".
ಪರಂಪರೆ, ಪ್ರಸಂಗಗಳ ಆಶಯ, ಯಕ್ಷಗಾನ ಪ್ರದರ್ಶನಕ್ಕೆ ನಿರ್ದೇಶಕನ ಅಗತ್ಯ, ಹೇಳಿದ್ದನ್ನು ಕೇಳದ ಕಲಾವಿದರು, ಯಕ್ಷಗಾನ ರಂಗದ ಪುನರಚನೆ, ಅಶಿಸ್ತು, ನಾಟ್ಯ ಪರಂಪರೆ, ಭೀಮ, ಪರಶುರಾಮ ಇತ್ಯಾದಿ ವೇಷಗಳು, ಬಣ್ಣಗಾರಿಕೆ, ಪುರಾಣೇತರ ಪ್ರಸಂಗಗಳ ಬಗ್ಗೆ, ಪೂರ್ವರಂಗದ ಪ್ರಾಧಾನ್ಯತೆ, ಹಿಮ್ಮೇಳದ ಕುರಿತು, ದೀವಟಿಗೆಯಲ್ಲಿ ಯಕ್ಷಗಾನ ಹೀಗೆ ಹತ್ತು ಹಲವು ವಿಷಯಗಳ ಮೇಲೆ "ರಂಗವಿಚಿಕಿತ್ಸೆ" ಕೃತಿಯಲ್ಲಿ ಸಂದರ್ಶಕರಾದ ಕಟೀಲು ಸಿತ್ಲ ರಂಗನಾಥ ರಾವ್ ಅವರ ಪ್ರಶ್ನೆಗಳಿಗೆ, ಮಾತುಗಳಿಗೆ ಉತ್ತರವಾಗಿ, ಪ್ರತಿಕ್ರಿಯೆಯಾಗಿ ಡಾ. ಕೆ. ಎಂ. ರಾಘವ ನಂಬಿಯಾರರು ಗೊಂದಲಕ್ಕೆ ಅವಕಾಶವೇ ಇಲ್ಲದಂತೆ 'ಇದಮಿಥ್ಥಂ' ಎಂಬಂತೆ ತಮ್ಮ ಪ್ರೌಢ ವಿಚಾರಗಳನ್ನು ಇಲ್ಲಿ ಮಂಡಿಸಿದ್ದಾರೆ, ತಪ್ಪುಗಳನ್ನು ಸಾಧಾರ ಖಂಡಿಸಿದ್ದಾರೆ.
ಸತ್ಯಾನ್ವೇಷಿಗಳು, ಪ್ರತಿಯೊಬ್ಬ ಯಕ್ಷಗಾನ ಕವಿ, ಹಿಮ್ಮೇಳ - ಮುಮ್ಮೇಳದ ಕಲಾವಿದರು, ವ್ಯವಸ್ಥಾಪಕರು, ಆಟ ಆಡಿಸುವವರು, ಪ್ರೇಕ್ಷಕರು ಹೀಗೆ ಎಲ್ಲರು ಓದಬೇಕಾದ ಕೃತಿಯಿದು. ಚೆಂಡು ಇದೀಗ ರಂಗಸ್ಥಳದಲ್ಲಿದೆ...
~ *ಶ್ರೀರಾಮ ದಿವಾಣ*