ರಂಗಸ್ಥಳ

ರಂಗಸ್ಥಳ

ಬರಹ

ನಿಸರ್ಗವೇ ಹೀಗೆ. ಮನುಷ್ಯನು ಯೋಚಿಸಲು ಪ್ರಾರಂಭಿಸಿದಾಗಿನಿಂದಲೂ, ತನ್ನ ಸೌಂದರ್ಯದಿಂದ ಅವನನ್ನು ಆಕರ್ಷಿಸಿ ತನ್ನ ಆರಾಧಕನನ್ನಾಗಿಸುವುದು. ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಕವಿಗಳ ಕೊನೆಯಿಲ್ಲದ ಸಾಲು ಇದಕ್ಕೆ ಸಾಕ್ಷಿ.ಆದರೆ ಅದೇ ಸೌಂದರ್ಯದೊಳಗೆ ಅಡಗಿರುವ ಭೀಕರತೆ ಕಂಡವರು ಕೆಲವೇ ಮಂದಿ. ಆ ಭೀಕರತೆಯನ್ನು ಕಂಡವರು ನಿಸರ್ಗದ ನಿಷ್ಕರುಣ ವ್ಯವಸ್ಥೆಗೆ ತಲೆದೂಗಿ ಗೌರವಿಸುವುದುಂಟು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ. ನಿಸರ್ಗವನ್ನು ಹತ್ತಿರದಿಂದ ನೋಡಿರದಿದ್ದರೆ ಅದನ್ನು “ಕವಿಗಣ್ಣಿ”ನಿಂದ ನೋಡಿದಾಗಲೇ ಅದನ್ನು ಗೌರವದಿಂದ ಕಾಣಲು ಸಾಧ್ಯ. ಬಹುಶಃ ಇದು ನಿಸರ್ಗದ ಭೀಕರತೆಯ ಮುಖವನ್ನು ಬದಿಗಿಟ್ಟು, ಅದರ ಸೌಂದರ್ಯವನ್ನು ಹೊಗಳುವ,ಗೌರವಿಸುವ ಪ್ರಯತ್ನ. ಹೀಗೆ ನೋಡಿದಾಗಲೇ ನಿಸರ್ಗವನ್ನು ಕಾಪಾಡಬೇಕೆಂಬ ಮನಸ್ಸಾಗುವುದು.

ಅಂದು ನಿಸರ್ಗವನ್ನು ರಂಗಸ್ಥಳವಾಗಿ ಕಂಡಾಗ, ಅದರ ಸ್ತಬ್ಧಚಿತ್ರವನ್ನು ಮನಸ್ಸಿನಲ್ಲೇ ಹಿಡಿದಿಡಬೇಕೆಂಬ ಪ್ರಯತ್ನವೇ ಇಲ್ಲಿನ ಕಥನವಸ್ತು. ಈ ಕಥನವು ನಿಸರ್ಗ ವರ್ಣನೆ ಮಾಡುವ ಕಥನಗಳ ಅನಂತ ಸಾಲಿನಲ್ಲಿ ಕರಗಿಹೋದರೂ, ಮನಸ್ಸಿನಲ್ಲಿ ಕರಗದಿರಲಿ ಎಂಬ ಆಶಯ.

ಕಾರಿನೊಳಗಿಂದ ಹೊರಗೆ ಇಣುಕಿ ನೋಡಿದಾಗ ಮೋಡಗಳ ಗುಂಪುಗಳು ಆಕಾಶದಲ್ಲೆಲ್ಲಾ ಚದುರಿತ್ತು.ಕೆಲವೆಡೆ ಪುಟ್ಟ ಪುಟ್ಟ ಬಿಡಿ ಮೋಡಗಳಿದ್ದರೆ, ಮತ್ತೆ ಕೆಲವೆಡೆ ಬೃಹದಾಕಾರದ ಒಂದೇ ಮೋಡ ಆಕಾಶವನ್ನು ನುಂಗುವ ವ್ಯರ್ಥ ಪ್ರಯತ್ನದಲ್ಲಿ ನಿರತವಾಗಿತ್ತು. ಇಂತಹ ಪ್ರಯತ್ನದಲ್ಲೇ ತೊಡಗಿದ್ದ ಅದೆಷ್ಟು ಮೋಡಗಳನ್ನು ಆಗ ನೋಡಲಿಲ್ಲ ? ಬಿಳಿ ಮೋಡ, ಕರಿ ಮೋಡ, ಚಪ್ಪಟೆ ಮೋಡ ಹೀಗೆ ವಿವಿಧ ಸಾಮನ್ಯ ವರ್ಣವಿನ್ಯಾಸದ ಮೋಡಗಳಿಂದ ಪ್ರಾರಂಭವಾಗಿ , ವರ್ಣಶಿಲ್ಪಿಯ ಅರೆಬರೆ ಚಿತ್ರಗಳನ್ನು ಹೋಲುವ ಕ್ಲಿಷ್ಟ ವರ್ಣ ವಿನ್ಯಾಸಗಳ ಮೋಡಗಳನ್ನು ನೋಡಿದ್ದಾಯಿತು. ಅಂದು ಆ ಮೋಡಗಳು ವಾತಾವರಣದಲ್ಲಿನ ತುಂಟತನವನ್ನೇ ಅನುಕರಿಸಿತ್ತಿದ್ದವೆನ್ನಿಸುತ್ತಿತ್ತು.ದೂರದಿಂದ ಕಂಡಾಗ, ಮಳೆಗರೆಯುವ ಕಾರ್ಮೋಡಗಳಂತೆ ತೋರಿ, ಹತ್ತಿರವಾದೊಡನೆ ಶಾಂತ ತೇಲುವ ಮೋಡಗಳಂತೆ ಮಾರ್ಪಾಡಾಗುತ್ತಿತ್ತು. ಈ ತುಂಟತನಕ್ಕೆ ಪಾಪ ಅವುಗಳು ಹೊಣೆಗಾರರಲ್ಲವೇ ಅಲ್ಲ. ಆ ಮೋಡಗಳ ಹೊಳೆಯುತ್ತಿರುವ ಅಂಚನ್ನು ಕಂಡಾಗ ನಿಜವಾದ ತುಂಟನನ್ನು ಪತ್ತೆ ಹಚ್ಚಬಹುದಿತ್ತು. ಅವನು ಆಗಾಗ್ಗೆ ಹೊರಬಂದು ಮುಖವನ್ನು ತೋರಿ ಮತ್ತೆ ಮೋಡಗಳೊಳಗೆ ಬಚ್ಚಿಟ್ಟುಕೊಳ್ಳುವ ಕಳ್ಳಾಟವಾಡುತ್ತಿದ್ದನು.ಆ ಮೋಡಗಳೂ ಸಹ ಅವನ ಈ ಕಳ್ಳಾಟದಲ್ಲಿ ಸಹಕರಿಸಿ, ಅವನ ಕಾಂತಿಯನ್ನು ತಡೆಯುವ ಶತಪ್ರಯತ್ನ ಮಾಡುತ್ತಿದ್ದವು.ಆದರೆ ಗಾಳಿಯ ರಭಸಕ್ಕೆ ಸಿಲುಕಿ ದಿಕ್ಕಾಪಾಲಾಗಿ ಚದುರಿದಾಗ ನಿರ್ವಾಹವಿಲ್ಲದೆ, ಅವಿತ ರವಿಯು ಹೊರಬಂದು, ಮತ್ತೊಮ್ಮೆ ಮೋಡಗಳ ಮರೆಯಲ್ಲಿ ಮರೆಯಾಗುವವರೆಗೆ ಬೆಳಕಿನ ಕಣಗಳನ್ನು ಧರೆಗಿಳಿಸಬೇಕಾಗುತ್ತಿತ್ತು.ತನ್ನ ಸೌಂದರ್ಯವನ್ನು ಪ್ರದರ್ಶಿಸಲು ಕಾತರಳಾಗಿದ್ದ ಧರಿತ್ರಿ,ಬೆಳಕಿನ ಮಳೆಯಲ್ಲಿ ಕುಣಿದಾಡತೊಡಗಿದಳು. ರಸ್ತೆಯನ್ನು ಸಾಲುಗಟ್ಟಿದ್ದ ಸಾಸಿವೆ ಗಿಡಗಳ ಹಳದಿ ಹೂಗಳಿಗೆ ಗಾಳಿಯು ಮೆಲ್ಲನೆ ಸೋಕಿ ಅವುಗಳನ್ನು ಅತ್ತಿತ್ತ ಬಾಗುವಂತೆ ಮಾಡುತ್ತಿತ್ತು.ಮೋಡಗಳನ್ನು ತನ್ನ ಶಕ್ತಿಯಿಂದ ಚದುರುವಂತೆ ಮಾಡಿದ್ದ ಅದೇ ಗಾಳಿಯು ಈಗ ಸಾಸಿವೆ ಹೂಗಳನ್ನು ಕೋಮಲವಾಗಿ ಅಲುಗಾಡುವಂತೆ ಮಾಡಿ ತನ್ನ ಸೌಮ್ಯತೆಯ ಪ್ರದರ್ಶನ ಮಾಡುತ್ತಿತ್ತು.ಅಂದು ಅಲ್ಲಿ ಎಲ್ಲರೂ ಪ್ರದರ್ಶಕರೇ. ಬಹುಶಃ ಬೆಟ್ಟದ ಮೇಲೆ ಮೇಯುತ್ತಿರುವ ಮೊದ್ದು ದನಗಳು, ತಮ್ಮಲ್ಲೇ ಕಿತ್ತಾಡುತ್ತಾ ಗಲಾಟೆ ಮಾಡುತ್ತಿದ್ದ ಗುಬ್ಬಿಗಳು ಮಾತ್ರ ಅಪವಾದವೆನ್ನಬಹುದು.

ಅಂದು ಮುಂಜಾನೆ ತೆರೆ ಸರಿದಾಗಿನಿಂದ ಆ ಪ್ರದರ್ಶನ ಎಡಬಿಡದೆ ಸಾಗಿತ್ತು.ಮೋಡಗಳು ಆಗಿಂದ್ದಾಗ್ಗೆ ಮಂಕು ಕವಿಯುವಂತೆ ಮಾಡುತ್ತಿದ್ದುದು ಅವುಗಳ ಶಕ್ತಿ ಪ್ರದರ್ಶನವೇ ಆಗಿರಬಹುದು.ಆದರೂ ಆ ಪ್ರದರ್ಶನ ಅದೆಷ್ಟು ಮನಸ್ಸುಗಳನ್ನು ಕಲಕಿತ್ತೋ ? ಅದೆಷ್ಟು ಪ್ರಶಂಸಕರನ್ನು ಗಳಿಸಿತ್ತೋ ?

ಇಲ್ಲಿಯವರೆಗೂ ತಮ್ಮ ಶಕ್ತಿಯ ಮದದಲ್ಲಿ ಮುಳುಗಿದ್ದ ಮೋಡಗಳು ಕರಗಿ ಹನಿಯಾಗುವ ಸಮಯ ಬಂದಾಗ, ಅವುಗಳ ಮದವೂ ಕರಗಿ ಗಂಭೀರವಾಗಿ ಭೂಮಿಗೆ ಸೇರುತ್ತಿದ್ದವು.ಆ ಸೋನೆ ಮಳೆಯೇ ಬಹು ಹೊತ್ತು ಸುರಿದು ಆಗಸವನ್ನೆಲ್ಲಾ ಸ್ವಚ್ಛಗೊಳಿಸಿತು. ಆಕಾಶದಲ್ಲಿ ಮಿಕ್ಕ ಮೋಡಗಳು ತಮ್ಮ ಅದೃಷ್ಟವನ್ನು ನೆನೆಸುತ್ತಾ, ಸಂತೋಷದಿಂದ ಇನ್ನೂ ಮೇಲಕ್ಕೆ ಸರಿದವು. ಮಳೆ ಹನಿಯಾದ ಮೋಡಗಳಿಗೆ ಕೆಳಗಿಳಿವ ಭಯವು ಪೊಳ್ಳೆಂದೆನಿಸಿ, ನೆಲಕ್ಕೆ ಬಿದ್ದು ಸಾರ್ಥಕತೆಯಲ್ಲಿ ಸಂತೋಷವನ್ನು ಕಾಣುತ್ತಿದ್ದವು. ಈಗ ತಪ್ಪಿಸಿಕೊಳ್ಳುವ ಸ್ಥಳವಿಲ್ಲದೇ, ಸೂರ್ಯನೂ ಮಂಕಾಗಿ ನಿಲ್ಲಬೇಕಾಯಿತು.ಬಹುಹೊತ್ತಿನಿಂದ ಈ ಆಟವಾಡಿ ದಣಿದಿದ್ದರಿಂದ ಆ ಪ್ರದರ್ಶನಕ್ಕೆ ತೆರೆ ಎಳೆಯತೊಡಗಿದನು.
ತೆರೆ ಇಳಿಯುವಾಗಲೂ, ಅಲ್ಲಿದ್ದ ಎಲ್ಲ ಪ್ರದರ್ಶಕರೂ ತಮ್ಮ ಸೌಂದರ್ಯ, ಶಕ್ತಿಗಳ ಕೊನೆಯ ನೋಟವನ್ನು ತೋರಿಸಬೇಕೆಂಬ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದವು.ಹುಲ್ಲಿನ ಮೇಲಿನ ಮಳೆಹನಿ, ಮೋಡಗಳ ವಿವಿಧ ವಿನ್ಯಾಸ, ತಂಗಾಳಿಯ ಶಾಂತತೆಗಳೊಡನೆ ಅಂದು ಆ ರಂಗಸ್ಥಳಕ್ಕೆ ತೆರೆಬಿತ್ತು. ಆದರೂ ಅಲ್ಲಿನ ಕಲಾವಿದರ ಕಲಾ ಪ್ರದರ್ಶನದ ಕಾತರ ತಣಿಯಲಿಲ್ಲ.ನಾಳೆ ಖಂಡಿತ ತೆರೆ ಮೇಲೇರುತ್ತದೆ ಎಂಬ ನಂಬಿಕೆಯೊಂದೇ ಅವುಗಳಲ್ಲಿ ಸಮಾಧಾನ ಮೂಡಿಸಿರಬೇಕು. ಅದೇ ಸಮಾಧಾನವು ರಾತ್ರಿಯ ವಾತವರಣದಲ್ಲಿ ಪಸರಿಸಿತು. ಅದೇ ಸಮಧಾನ ಭಾವದಲ್ಲಿ ನಾನು ಮುಂದೆ ಸಾಗಿದೆ.