ರಂಗಾರಂಗ್ ಖೀರ್

ರಂಗಾರಂಗ್ ಖೀರ್

ಬೇಕಿರುವ ಸಾಮಗ್ರಿ

ಒಂದು ಲೀಟರ್ ಹಾಲು, ಅರ್ಧ ಲೋಟ ಸಣ್ಣ ರವೆ, ಎರಡು ಚಮಚ ಮೈದಾ, ಕಾಲು ಲೋಟ ಖೋವಾ, ಅರ್ಧ ಲೋಟ ಸಕ್ಕರೆ, ಅರ್ಧ ಲೋಟ ಹಸಿ ಕೊಬ್ಬರಿ ತುರಿ, ಬಾದಾಮಿ, ತಿಂಡಿಗಳಿಗೆ ಬಳಸುವ ವಿವಿಧ ಬಣ್ಣಗಳು (ಬೇಕಿದ್ದಲ್ಲಿ), ತುಪ್ಪ, ಕಾರ್ನ್‌ಫ್ಲವರ್ (ಒಂದು ಚಮಚದಷ್ಟು)

ತಯಾರಿಸುವ ವಿಧಾನ

ಎರಡು ಚಮಚದಷ್ಟು ಗಟ್ಟಿ ತುಪ್ಪವನ್ನು ಕಡಾಯಿಗೆ ಹಾಕಿ ಬಿಸಿ ಮಾಡಿ. ಅದರಲ್ಲಿ ರವೆ, ಮೈದಾ ಹಾಕಿ ಮಂದಾಗ್ನಿಯ ಮೇಲಿಟ್ಟು ಹುರಿಯಿರಿ. ಕಮ್ಮಗೆ ಹುರಿದ ಮೇಲೆ ಕೆಳಗಿಳಿಸಿ. ಬಿಸಿ ಇರುವಂತೆಯೇ ಅದರಲ್ಲಿ ಮುಕ್ಕಾಲು ಲೋಟ ಸಕ್ಕರೆ, ತುರಿದ ಕೊಬ್ಬರಿ ಹಾಗೂ ಪ್ರತ್ಯೇಕವಾಗಿ ಖೋವಾ ಹಾಕಿ. ಮಂದಾಗ್ನಿಯ ಮೇಲಿರಿಸಿ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಿ. ನಂತರ ಕೆಳಗಿಳಿಸಿ. ಆರಿದ ಮೇಲೆ ಎಷ್ಟು ತೆರನಾದ ಬಣ್ಣಗಳಿವೆಯೋ ಈ ಸಾಮಗ್ರಿಯನ್ನು ಅಷ್ಟು ಭಾಗಗಳನ್ನಾಗಿ ಮಾಡಿ. ಒಂದೊಂದು ಭಾಗಕ್ಕೂ ಒಂದೊಂದು ಬಣ್ಣ ಸೇರಿಸಿ. ತುಪ್ಪದ ಕೈಯಿಂದ ಒಂದೊಂದೇ ಭಾಗದ ಸಿದ್ಧ ವಸ್ತುವನ್ನು ಕಡಲೆ ಗಾತ್ರದ ಉಂಡೆಗಳನ್ನಾಗಿ ಕಟ್ಟಿ, ಈ ಹಲವು ಬಣ್ಣದ ಉಂಡೆಗಳು ಎದುರಿ ಗಿವೆ. ಈ ಉಂಡೆಗಳು ಗಟ್ಟಿಯಾಗಿರಲಿ. ಪೊಳ್ಳಿದ್ದರೆ ಒಡೆಯುತ್ತವೆ.

ಈಗ ಒಂದು ಲೀಟರ್ ಇದ್ದದ್ದು ಮುಕ್ಕಾಲು ಲೀಟರಿಗೆ ಇಳಿಯುವಂತೆ ಹಾಲನ್ನು ಅಟ್ಟಿಸಿ ಅದರಲ್ಲಿ ಕಾರ್ನ್‌ಫ್ಲಾವರ್ ಹಾಕಿ. ಅಂದರೆ ಖೀರು ಗಟ್ಟಿಯಾಗಿರಬಲ್ಲದು. ಆ ಮೇಲೆ ಉಳಿದ ಸಕ್ಕರೆ, ಬಾದಾಮಿ ಪುಡಿ ಹಾಕಿ. ಇದರ ಮೇಲೆ ಬಣ್ಣ ಬಣ್ಣದ ಆ ಉಂಡೆಗಳನ್ನು ಕುದಿಯುತ್ತಿರುವ ಹಾಲಿನಲ್ಲಿ ಹಾಕಿ. ಒಂದು ಉಕ್ಕು ಬರಲಿ. ನಂತರ ಕೆಳಗಿಳಿಸಿ. ಒಂದು ಸುಂದರವಾದ ಗಾಜಿನ ಬಟ್ಟಲಲ್ಲಿ ನಿಮಿಷ್ಟದವರಿಗೆ ಕೊಡಿ. ಆಹಾ! ಒಂದೊಂದು ಉಂಡೆಯೂ ಅವರಿಗೆ ರುಚಿಯೊಂದಿಗೆ ಖುಷಿಯನ್ನೂ ಕೊಡುತ್ತದೆ. ಬಂಗಾಲಿಗಳಂತೂ ಈ ರಂಗಾರಂಗ್ ಖೀರನ್ನು ಊಟದ ನಂತರ ಪೂರಿಯೊಂದಿಗೆ ಆಸ್ವಾದಿಸುತ್ತಾರೆ.

(ಸಂಗ್ರಹ)

-ರಾಧಿಕಾ ಜಿ ಎಸ್, ಚಿಕ್ಕಜಾಜೂರು