ರಂಗಿನರಮನೆ
ಕವನ
ಸೆರೆಮನೆಯೋ ಇದು ಸುರೆಮನೆಯೋ?
ಕಾಣದ ಆಟದಲ್ಲಿ ಅರಮನೆಯೋ?
ಕಾಂಚಾಣದ ಮಹಿಮೆಯ ನರ್ತನದಲ್ಲಿ
ಏನಿಲ್ಲ, ಏನುಂಟು ದುಗ್ಗಾಣಿಯಾಟದಲ್ಲಿ?
ಗಾಳಿ ಬೆಳಕು ಇಲ್ಲದ ಸೆರೆಮನೆಯಲ್ಲಿ
ಪರಪ್ಪನ ಅಗ್ರಹಾರವು ಅಮಲಿನಲ್ಲಿ
ಬೀಡಿ, ಸೀಗರೇಟು ಬಹು ಸಿರಿಯಲ್ಲಿ
ದೊರೆವುದು ಸಕಲವು ಪರಿಪರಿಯಲ್ಲಿ.
‘ಸುರೆ’ಸುರಿಯುವುದು ಸೆರೆಮನೆಯಲ್ಲಿ
ಅಮಲಿನಲ್ಲಿ ತೇಲುವರು ಸ್ವರ್ಗದಲ್ಲಿ
‘ಶಿಕ್ಷೆ’ ಅಲ್ಲಿ ಎಲ್ಲಿ? ಎಲ್ಲಾ ನೋಟಿನಲ್ಲಿ
ನಾಚಿಕೆ, ಮರ್ಯಾದೆ ಓಡಿ ಹೋಯಿತಲ್ಲಿ.
ಅಪ್ಪನ ಕಾಸಿನ ದೌಲತ್ತಿನಾಟ
ಕಲಿಯುವುದಿಲ್ಲ ಅವರೆಂದೂ ಪಾಠ
ಅವರಿವರ ಒತ್ತಡದ ಮಸಲತ್ತು
ಭರಪೂರ ಸಿಗುವ ಬಹು ಸವಲತ್ತು.
ನ್ಯಾಯ, ನೀತಿ, ಸತ್ಯ ಕಿಸಿಕಿಸಿ ನಗುತ್ತಿತ್ತು
ಅಮಲಿನ ಧೂಮದಲೆಯಲ್ಲಿ ಬಾಡಿತ್ತು
ಪ್ರಲೋಭನೆಯಲ್ಲಿ ಎಲ್ಲವೂ ಬುಡ ಮೇಲು
ರಂಗಿನರಮನೆಯ ಆಟದಲ್ಲಿ ಬಡಪಾಯಿಗೆ ಮಹಾ ಸೋಲು !!
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್