ರಂಗು ರಂಗಿನ ಬಣ್ಣಗಳ ಹಬ್ಬ ಹೋಳಿ
‘ಬಣ್ಣಗಳ ಹಬ್ಬ ಹೋಳಿ’ ಎಂದರೆ ಸಣ್ಣವರಿಂದ ತೊಡಗಿ ವಯಸ್ಸಾದವರವರೆಗೂ ಸಂಭ್ರಮದ ಘಳಿಗೆ.ಈ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಹಾಗೆಯೇ ದ.ಭಾರತದ ಕೆಲವು ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉ.ಕರ್ನಾಟಕದ ಕೆಲವು ಭಾಗಗಳಲ್ಲಿ, ಕರ್ನಾಟಕದ ಉತ್ತರದ ಜಿಲ್ಲೆಗಳಲ್ಲಿ ತುಂಬಾ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಹಬ್ಬ. ಫಾಲ್ಗುಣ ಮಾಸ ಶುಕ್ಲ ಪಕ್ಷದ ಪೂರ್ಣಿಮೆ ಅಥವಾ ಹುಣ್ಣಿಮೆ ದಿನ ಈ ಕಾಮದಹನ ಹಬ್ಬ ಅಥವಾ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಹಿಂದೆ ಪೌರಾಣಿಕ ಹಿನ್ನೆಲೆಯ ರೋಚಕ ಕಥೆಗಳಿವೆ.
ತಾರಕಾಸುರ ಎಂಬ ದುಷ್ಟ ರಕ್ಕಸನು ಬ್ರಹ್ಮನ ವರಬಲದಿಂದ ಕೊಬ್ಬಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದನು. ಬಡವರಿಗೆ, ದೀನರಿಗೆ, ಋಷಿಮುನಿಗಳಿಗೆ ಕಾಟಕೊಡುತ್ತಿದ್ದನು. ಇವನಿಗೆ ಶಿವಕುಮಾರ ಏಳು ದಿವಸದ ಮಗುವಿನಿಂದ ಮರಣ ಎಂಬ ವರವಿತ್ತು. ಶಿವನಾದರೋ ದಕ್ಷಾಧ್ವರದ ಪ್ರಸಂಗದಲ್ಲಿ ಯೋಗಾಗ್ನಿಯಿಂದ ಬೆಂದ ದಾಕ್ಷಾಯಿಣಿಯ ನೆನಪಲ್ಲಿ ಭೋಗಸಮಾಧಿಯಲ್ಲಿದ್ದ.ಪಾರ್ವತಿ ಶಿವನಿಗಾಗಿ ತಪೋನಿರತಳಾಗಿದ್ದಳು. ಇವರನ್ನು ಒಂದು ಮಾಡುವ ಸಲುವಾಗಿ ದೇವತೆಗಳು ಒಟ್ಟು ಸೇರಿ ಮನ್ಮಥನನ್ನು ಛೂ ಬಿಟ್ಟರು ಪರಿಣಾಮವಾಗಿ ಶಿವನ ಮೂರನೇ ಕಣ್ಣಿಗೆ ಕಾಮದೇವ ಭಸ್ಮವಾದ. ರತಿ ಶಿವನಲ್ಲಿ ಬಂದು ಗಂಡನ ಪ್ರಾಣಭಿಕ್ಷೆ ಬೇಡುತ್ತಾಳೆ. ಶಿವನು ಕನಿಕರಿಸಿ ಕಾಮದೇವನನ್ನು ಅನಂಗನಾಗಿಯೂ, ಪತ್ನಿ ರತಿಗೆ ಮಾತ್ರ ಕಾಣಿಸುವಂತೆಯೂ ವರ ನೀಡುತ್ತಾನೆ. ಇಲ್ಲಿ ಶಿವಪಾರ್ವತಿಯರಿಗೆ ಹುಟ್ಟಿದ ಷಣ್ಮುಖ ತಾರಕಾಸುರನ ವಧೆ ಮಾಡಿ ಲೋಕಕಲ್ಯಾಣ ಮಾಡುತ್ತಾನೆ.
ನಮ್ಮಲ್ಲಿರುವ ಕಾಮ,ಕ್ರೋಧ,ಮದ, ಮತ್ಸರ, ಕೆಟ್ಟದ್ದನ್ನು ಸುಡುವುದು, ಸದಾಚಾರ ಬೆಳೆಸಿಕೊಳ್ಳವುದೇ ಈ ಹಬ್ಬದ ಮರ್ಮ. ಬೇಡದ ವಸ್ತುಗಳನ್ನು ಸುತ್ತಲಿನ ಮನೆಯವರೆಲ್ಲ ಸೇರಿ ಒಂದೆಡೆ ರಾಶಿ ಹಾಕುವರು. ಬಿದಿರಿನ ಚಪ್ಪರ, ಕಟ್ಟಿಗೆ ಪೇರಿಸಿ, ಸುತ್ತಲೂ ಕುಣಿಯುತ್ತಾ, ಹಾಡು ಹೇಳುತ್ತಾ ಬೆಂಕಿ ಹಚ್ಚುವರು. ಉ.ಭಾರತದಲ್ಲಿ ಹತ್ತು ತಲೆಯ ರಾವಣನ ಆಕೃತಿಗೆ (ಬಿದಿರಿನಿಂದ ಮಾಡುವರು) ಹಳೇ ಬಟ್ಟೆಗಳನ್ನು ಸುತ್ತಿ ಬೆಂಕಿ ಹಚ್ಚುವ ಪದ್ಧತಿ ಇದೆ.
ಹಾಗೆಯೇ ವಿಷ್ಣುಭಕ್ತ ಪ್ರಹ್ಲಾದನ ಮುಗಿಸಲು ಹಿರಣ್ಯಕಶ್ಯಪು ತನ್ನ ಸೋದರಿ ಹೋಲಿಕಾ ಎಂಬುವಳನ್ನು ಕಳುಹಿಸುತ್ತಾನೆ. ಆಕೆಯ ವಿಶೇಷ ಬೆಂಕಿಯಿಂದ ರಕ್ಷಿಸುವ ವಸ್ತ್ರವನ್ನು ಧರಿಸಿರುತ್ತಾಳೆ.ಆದರೆ ಹೋಲಿಕಾಳು ಮಹಾ ದುಷ್ಟೆ. ಮಗು ಪ್ರಹ್ಲಾದನನ್ನು ಎತ್ತಿ ಕೊಂಡು ಬೆಂಕಿಕುಂಡಕ್ಕೆ ಹಾರುವಾಗ, ಅವಳ ಬೆಂಕಿವಿರೋಧಿ ವಸ್ತ್ರ ಗಾಳಿಗೆ ಹಾರಿ ಹೋಗುತ್ತದೆ. ಅವಳು ಅಗ್ನಿಕುಂಡದಲ್ಲಿ ಬೆಂದು ಹೋಗುವಂತೆ ಭಗವಾನ್ ವಿಷ್ಣು ಮಾಡುತ್ತಾನೆ. ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಅಂದಿನಿಂದ ಹೋಳಿ ಹುಣ್ಣಿಮೆ, ಹೋಳಿ ಹಬ್ಬ ಜಾರಿಗೆ ಬಂತು ಎನ್ನುತ್ತಾರೆ.
ಅಸುರೀ ಶಕ್ತಿ ಗೆ ಯಾವತ್ತಿದ್ದರೂ ಸೋಲೇ ದೇವಶಕ್ತಿಯ ಎದುರು. ಇದೆಲ್ಲ ನಾರದ ಪುರಾಣದಲ್ಲಿಯೂ ಇದೆ. ಎಲ್ಲರ ನೋವು, ದು:ಖ, ಕಷ್ಟ ಮರೆಸಿ, ಒಟ್ಟಾಗಿ ಸೇರಿಸುವ, ಬಾಂಧವ್ಯ ಬೆಸೆಯುವ ಹಬ್ಬವಿದು. ಕೆಟ್ಟದ್ದೆಲ್ಲ ಉರಿದು ಭಸ್ಮವಾಗಲಿ ಎನುವ ಸಂದೇಶ ಸಾರುವುದು. ಭಿನ್ನಾಭಿಪ್ರಾಯಗಳನ್ನು ದೂರವಿರಿಸಿ ಸಂಭ್ರಮಿಸುವ ಸಮಯವಿದು. ‘ರಾಧೆಯ ಮನದ ಭಾವನೆಗಳನ್ನು ಭಗವಾನ್ ಶ್ರೀಕೃಷ್ಣನಲ್ಲಿ ಅರುಹುವ ಕಾಲವಿದು, ಪ್ರೇಮದ, ಪ್ರೀತಿಯ ಸಂಕೇತವೇ ಬಣ್ಣಗಳ ಎರಚಾಟ, ನೀರಿನ ಓಕುಳಿಯಾಟ.
ಚಳಿಗಾಲದ ಕೊನೆ ವಸಂತನ ಆಗಮನದ ಧ್ಯೋತಕ. ಕಾಮನ ಕಟ್ಟೆಯನ್ನು ಸಿಂಗರಿಸಿ, ಸುಂದರ ಪ್ರತಿಮೆಯನ್ನು ಇಟ್ಟು, ಮಂಗಳವಾದ್ಯ, ಪರಸ್ಪರ ಬೈಗುಳ, ಬಣ್ಣದ ನೀರ ಎರಚುವಿಕೆ, ಇತ್ಯಾದಿ ಮಾಡಿ ನಲಿದು ಸಂತಸಪಡುತ್ತಾರೆ. ಒಟ್ಟಿನಲ್ಲಿ ‘ದುಷ್ಕೃತ್ಯ’ ಭಗವಂತನೆದುರು ಸೋಲಬೇಕು, ಸೋಲುತ್ತದೆ ಎನ್ನುವ ಪ್ರತೀಕ. ಸಂತಸ, ಸಂಭ್ರಮ, ಇಷ್ಟಾರ್ಥಗಳ ಈಡೇರಿಕೆಯ ಕಾಲವಿದು. ಭಿನ್ನಾಭಿಪ್ರಾಯಗಳ ಬದಿಗಿರಿಸಿ ಒಂದಾಗಿ ಸಂತಸಪಡೋಣ, ಎಲ್ಲರಿಗೂ ಒಳ್ಳೆಯದಾಗಲೆಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳೋಣ.
-ರತ್ನಾ ಕೃಷ್ಣ ಭಟ್, ತಲಂಜೇರಿ
ಚಿತ್ರ: ಹೋಳಿಯ ಆಚರಣೆಯ ಸಂಭ್ರಮದಲ್ಲಿ ಬೋಂದೇಲ್ ಕಂಬ್ಳ ನಿವಾಸಿಗಳು