ರಂಜಿತ, ಬಾಗಿಲ್ತೆಗಿ ಪುಟ್ಟಾ........!

ರಂಜಿತ, ಬಾಗಿಲ್ತೆಗಿ ಪುಟ್ಟಾ........!

ಬರಹ

ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳು ದೊಡ್ಡವರಾಗಿ ಬೆಳೆದು, ರೆಕ್ಕೆ-ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್, ನಲ್ಲಿದ್ದೇವೆ. ಆದರೂ ನಾವು ಬೊಂಬಾಯಿನ ಶಿವಾಜಿ ಪಾರ್ಕ್ ನಲ್ಲಿ ಕಳೆದ ೧೦ ವರ್ಷಗಳು ನಿಜಕ್ಕೂ ಅವಿಸ್ಮರಣನೀಯ. ಏಕೆಂದರೆ ಇಲ್ಲಿ ನಮ್ಮ ಇಬ್ಬರು ಮಕ್ಕಳ ಮೊದಲ ಪ್ರಾಥಶಾಲೆಯ ವಿದ್ಯಾಭ್ಯಾಸದ 'ವಿಧಿ' ನಡೆಯಿತು. ೨-೩ ಕನ್ನಡ ಪರಿವಾರಗಳು ನಮ್ಮ ಸಹವರ್ತಿಗಳು ನಮ್ಮೊಡನೆ ವಾಸವಾಗಿದ್ದರು. ಮೇಲಾಗಿ ಕರ್ನಾಟಕಸಂಘ ನಮಗೆ ಅತಿ ಸಮೀಪ. ಎಲ್ಲಾ ಕಾರ್ಯಕ್ರಮಗಳಿಗೂ ಬಿಡದೆ ಹೋಗುತ್ತಿದ್ದೆವು.

ಆಗ ವ್ಯಾಸರಾವ್ ಬಲ್ಲಾಳ್, ಶ್ರೀಪತಿ ಬಲ್ಲಾಳ್, ಅವರ ಪತ್ನಿ, ಕಿಶೋರಿ ಬಲ್ಲಾಳ್, ವರದರಾಜ್ ಆದ್ಯ, ಅವರ ಪತ್ನಿ, ಮತ್ತು ಸನದಿಯವರ ಭಾಷಣಗಳನ್ನು ಕೇಳುತ್ತಿದ್ದೆವು. ಎಮ್.ವಿ. ಕಾಮತ್, ಜಯದೇವ ಹಟ್ಟಂಗಡಿ, ಗಿರೀಶ್ ಕಾರ್ನಾಡ್, ವಿಶೇಷ ಅತಿಥಿಯಾಗಿ ಆಗಾಗ ಬರುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಲು, ಆಗ ನಮಗೇನೊ ಖುಷಿ ! ಶಿವಾಜಿ ಪಾರ್ಕ್,ನಲ್ಲಿ ಒಂದು ತರಹ ಕಾಸ್ಮೊಪಾಲಿಟನ್ 'ಅಟ್ಮೋಸ್ ಫಿಯರ್' ಇತ್ತು. ಮರಾಠಿ, ಫಿಲಮ್ ಸಂಗೀತಕಾರರು, ಕ್ರಿಕೆಟ್ ಪಟುಗಳು, ಕವಿಗಳು, ಉದ್ಯಮಿಗಳು, ರಾಜಕಾರಣಿಗಳು, ಮೀಡಿಯಾದವರು ಎಲ್ಲ ವರ್ಗದವರೂ ನಮಗೆ ನೋಡಲು ಸಿಗುತ್ತಿದ್ದರು. ಮಧ್ಯಮ ವರ್ಗ ಹಾಗೂ ಶ್ರಿಮಂತರೆಲ್ಲ ಒಟ್ಟಿಗೆ ಇರುವ ಜಾಗ . ಇಲ್ಲಿ ಹಳೆ ಕಾಲದ ಆಚಾರವಿಚಾರ ಸಂಸ್ಕೃತಿಯ ಮರಾಠಿ ಜನ ಹೆಚ್ಚು. ಬೇರೆ ಜನ ಅಂದರೆ ಗುಜರಾತಿ, ಮಾರ್ವಾಡಿ, ಕನ್ನಡದ ಜನ, ಮತ್ತು ಸಿಂಧಿಗಳು. ಯು.ಪಿ ಭಯ್ಯಾಗಳು ಹಾಲಿನ ವ್ಯಾಪಾರ, ಹಾಗೂ ತರಕಾರಿ ಮಾರ್ಕೆಟ್ ನಲ್ಲಿ ಇದ್ದಾರೆ. ಮುಂಬೈನ ೮೦% ಹೋಟೆಲ್ ಗಳು ನಮ್ಮ ದಕ್ಷಿಣ ಕನ್ನಡದವರದು. ಶೆಟ್ಟಿಗಳೇ ಹೆಚ್ಚು. ೩ ದಶಕಗಳ ಹಿಂದೆ ನೆನೆಪಿಸಿಕೊಂಡರೆ,

ನಗರದ ಪ್ರತಿ ಮುಖ್ಯ ವೃತ್ತಗಳಲ್ಲೂ ಇರಾನಿ ಹೋಟೆಲ್ ಗಳಿರುತ್ತಿದ್ದವು. ಉದಾ: ದಾದರ್, ಸಯಾನ್ ಮಾಟುಂಗಾ, ಪರೇಲ್, ಭೈಖಲ್ಲ, ವಿಟಿ. ಇತ್ಯಾದಿ. ಈಗ ಅವೆಲ್ಲಾ ಸಾಕಷ್ಟು ಬದಲಾವಣೆ ಕಂಡಿವೆ. ಅಂದರೆ, ಅವು ಐಸ್ಕ್ರೀಮ್, ಪೀಝ, ಇತ್ಯಾದಿಗಳಾನ್ನು ಮಾರುವ ಅಂಗಡಿಗಳಾಗಿ ಬೆಳೆದಿವೆ. ಪಂಜಾಬಿ ಹೋಟೆಲ್ ಗಳೂ ಸಾಕಷ್ಟಿವೆ. ಆದರೆ ಅವೆಲ್ಲಾ ಬಹಳ ದುಬಾರಿ ಹೋಟೆಲ್ ಗಳು. ಕಡಿಮೆ ದರದ ರುಚಿಯಾದ ಶುದ್ಧ, ಊಟ ಉಡುಪಿಯವರದೆ ಆಗಿದ್ದರಿಂದ ಯಾವಾಗಲೂ 'ಉಡಿಪಿ ಹೋಟೆಲ್' ಗೆ ರಶ್ ಹೆಚ್ಚು.(ಮುಂಬೈ ನಲ್ಲಿ ಎಲ್ಲ ಜನ ಕರೆಯುವುದು 'ಉಡಿಪಿ ಹೋಟೆಲ್ ಎಂದೇ) ಶಿವಾಜಿಪಾರ್ಕ್ ನಲ್ಲೇ 'ಉದ್ಯಾನ್ ಗಣಪತಿ'ಯ ದೇವಸ್ಥಾನ ಇದೆ. ಇದು ತುಂಬಾ ಅಚ್ಚುಕಟ್ಟಾಗಿದೆ !

ಶಿವಾಜಿ ಪಾರ್ಕ್, ನಮಗೆ ಬಹಳ ಒಗ್ಗಿದ ಪ್ರಿಯವಾದ ಸ್ಥಳ. ಅಲ್ಲಿ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯ್ ನಿಂದ ಹಿಡಿದು ನೂರಾರು ದೇಶದ ನಾಯಕರ ಭಾಷಣ ಬಿಡದೆ ಅಲ್ಲಿ ಕೇಳಿದ್ದೇನೆ ಸಮಾರಂಭಗಳನ್ನು ವೀಕ್ಷಿಸಿದ್ದೇನೆ. ಅವರಲ್ಲಿ ವಸಂತರಾವ್ ನಾಯಕ್, ವಿ.ಬಿ.ಚವ್ಹಾನ್. ಎಸ್.ಬಿ ಚವ್ಹಾನ್, ಶರದ್ ಪವಾರ್, ಪೂಲಾ ದೇಷ್ಪಾಂಡೆ, ಆಚಾರ್ಯ ಅತ್ರೆ, ಎಸ್.ಎ. ಡಾಂಗೆ, ಮಧು ದಂಡವತೆ, ವಸಂತ್ ದಾದ ಪಾಟೀಲ್, ಜಗನ್ನಾಥರಾವ್ ಜೋಶಿ, ಅತಲ್ ಬಿಹಾರಿ ವಾಜ್ಪೇಯಿ, ಜಾರ್ಜ್ ಫರ್ನಾಂಡೆಸ್, ಎಸ್.ಕೆ.ಪಾಟೀಲ್, ರಾಜೀವ್ ಗಾಂಧಿ, ಬಾಲ್ ಠಾಕ್ರೆ, ವಿ.ಪಿ.ಸಿಂಘ್, ವಗೈರೆ ವಗೈರೆ. ನಮಗೆ ಅಲಾಟ್ ಆಗಿದ್ದ ಮನೆಯೊಳಗೆ ಬೆಳಿಗ್ಯೆ ಸೂರ್ಯೋದಯ ನೋಡುವುದೇ ಒಂದು ಸೊಗಸು ! ಶಿವಾಜಿಪಾರ್ಕಿನ, 'ಸಮರ್ಥ್ ವ್ಯಾಮಶಾಲೆ'ಯಲ್ಲಿ ನಡೆಸಿದ 'ಲೆಝಿಮ್ ಸ್ಪರ್ಧೆ'ಯಲ್ಲಿ ನಮ್ಮ ಮಗ ರವಿಗೆ, 'ಪ್ರಥಮ ಬಹುಮಾನ' ಬಂದಿತ್ತು ! ಪಾರ್ಕಿನಲ್ಲಿ ಆಚರಿಸಿದ ಅನೇಕ ಹಬ್ಬಗಳನ್ನು ನಾವು ನೋಡಿದ್ದೇವೆ. ಅಲ್ಲಿನ 'ಬೆಂಗಾಲಿ ಅಸೋಸಿಯೇಷನ್' ನವರು ಪ್ರತಿವರ್ಷವೂ ನಡೆಸುವ 'ದುರ್ಗಾಪೂಜ' ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಬಾಲಿವುಡ್ಡಿನ ನಾಯಕ ನಾಯಕಿಯರೆಲ್ಲ ಭಾಗವಹಿಸುತ್ತಾರೆ. ಅನೇಕ ಬಂಗಾಲಿ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರನ್ನು ನಾವು ಬಹಳ ಹತ್ತಿರದಿಂದ ಕಂಡಿದ್ದೇವೆ. ಅಶೋಕ್ ಕುಮಾರ್, ಮಿಥುನ್ ಚಕ್ರವೊರ್ತಿ, ಮೌಶಮಿ, ಕಿಶೋರ್ ಕುಮಾರ್, ಉತ್ತಮ್ ಕುಮಾರ್, ಬಪ್ಪಿ ಲಹರಿ,ಶಕ್ತಿ ಸಾಮಂತ, ಮತ್ತು ಅನೇಕ ಚಟರ್ಜಿ, ಬ್ಯಾನರ್ಜಿಗಳು. ಬಂಗಾಲಿಗಳಿಗೆ 'ದುರ್ಗಾಪೂಜ' ಒಂದು ಅತಿ ಮುಖ್ಯ ಹಬ್ಬ. ಅದನ್ನು ಅವರು ತಮ್ಮ ಪ್ರತಿಷ್ಠೆಯ ಸಂಕೇತವೆಂದು ಭಾವಿಸುತ್ತಾರೆ !

'ದಸರೆ'ಯಲ್ಲಿ ನಡೆಯುವ 'ರಾಮ್ ಲೀಲ ಉತ್ಸವ', 'ಸ್ವಾತಂತ್ರೋತ್ಸವ'ದ ದಿನದ ಬೆಳಗಿನ 'ಧ್ವಜಾರೋಹಣ ಸಮಾರಂಭ' ಮಕ್ಕಳಿಗೆ ಮುದ ನೀಡುತ್ತದೆ ! ನಮ್ಮ ಬಿಲ್ಡಿಂಗ್ ಎದುರಿಗೆ 'ಮಹಾಲಕ್ಷ್ಮಿ ಸಿಂಧಿ ಹೌಸಿಂಗ್ ಸೊಸೈಟಿ, ಅದರ ಬಲಭಾಗದಲ್ಲಿ ೩ ಸಿನೆಮ ಥಿಯೇಟರ್ ಗಳು- ಬಾದಲ್, ಬಿಜಲಿ, ಬರ್ಖಾ. ಹತ್ತಿರದಲ್ಲೇ ಇರುವ ಜಮ್ ಶೆಡ್ ಜಿ ರೋಡ್ ದಾಟಿದರೆ ಶಿವಾಜಿಪಾರ್ಕ್ ಮೈದಾನ, ದಾದರ್ ಬೀಚ್. ಹತ್ತಿರದಲ್ಲಿ ರೂಪರೇಲ್ ಕಾಲೆಜ್, ಪಕ್ಕದಲ್ಲೆ ದಾದರ್ ರೈಲ್ವೆ ಸ್ಟೇಶನ್. ಸೆಂಟ್ರೆಲ್ ರೈಲ್ವೆ ಮತ್ತು ವೆಸ್ಟೆರ್ನ್ ರೈಲ್ವೆ ಗಳು ಸೇರುವ ಜಾಗ. ಹಿಂದೆ ಮ್ಯುನಿಸಿಪಲ್ ಉದ್ಯಾನ, ಪಕ್ಕದಲ್ಲೇ ರೂಪರೆಲ್ ಕಾಲೆಜ್, ಬಲಗಡೆ ಹೊದರೆ ಮನಮಾಲ ದೇವಿಯ ಗುಡಿ, ಪಕ್ಕದಲ್ಲೆ ಬಾವಿ. ಹಿಂದೆ ಅಲ್ಲಿ ಒಂದು ದೊಡ್ಡ ಕೆರೆಯಿತ್ತಂತೆ-'ಮನಮಾಲಾ ಟ್ಯಾಂಕ್', ಅಥವ 'ವನಮಾಲಾ ಟ್ಯಾಂಕ್'. ಊರಿನಿಂದ ಬಂದರೆ ಲಗೇಜ್ ಕಡಿಮೆ ಇದ್ದರೆ ನಡೆದುಕೊಂಡೇ ಮನೆ ತಲುಪಬಹುದು.

ಹತ್ತಿರದಲ್ಲಿ ಕರ್ನಾಟಕಸಂಘ. ಹೊಸದಾಗಿ ಕಟ್ಟಿದ ಕಟ್ಟಡ. ವರದರಾಜ ಆದ್ಯ,ಮತ್ತು ಅವರ ಸಹಯೋಗಿಗಳು ಅಸ್ಥೆಯಿಂದ ಕಷ್ಟಪಟ್ಟು ಸಂಘಟಿಸಿ ನಿರ್ಮಿಸಿದ ವಿಶ್ವೇಶ್ವರಯ್ಯ ಹಾಲ್. ಇದನ್ನು 'ಝವೇರಿಭಾಯ್ ಹಾಲ್' ಎಂದೂ ಕರೆಯುತ್ತಾರೆ ! ರಿಟೈರ್ ಆದಮೇಲೆ ಹಿಂದಿನ ನಡೆದ ಘಟನೆಗಳು ತಲೆಯಲ್ಲಿ ಮುತ್ತಿಗೆ ಹಾಕುತ್ತವೆ. ಏಕೆಂದರೆ ಅವುಗಳಜೊತೆಗೆ ನಮ್ಮ ಬಹಳ ವರ್ಷಗಳು ಜೊತೆಗೂಡಿರುವುದರಿಂದ ! ಬಿಡುವಿನವೇಳೆಯಲ್ಲಿ ನಮ್ಮ ನೆನೆಪುಗಳ ಸುರಳಿಯನ್ನು ಒಂದೊಂದೊಂದಾಗಿ ಬಿಚ್ಚಿದಾಗ ಅವುಗಳಿಂದ ಪುಟಿದು ಬರುವ ನೆನಪಿನ ಸೋಪಿನ ಗುಳ್ಳೆಗಳು, ಇವತ್ತೇ ನಮ್ಮಮುಂದೆ ಜರುಗಿದಂತೆ ತೋರುತ್ತವೆ ! ಮತ್ತೆ ಕೆಲವನ್ನು ಮಕ್ಕಳು ಜ್ಞಾಪಿಸುತ್ತಾರೆ; ಕೆಲವು ಬೇಗ ಬರುತ್ತವೆ. ಇನ್ನು ಕೆಲವು ಸ್ಮೃತಿಪಟಲದಲ್ಲಿ ಬೇಗ ಬರಲೊಲ್ಲವು.

ಈಗ ನಾನು ನಿಮಗೆ ಹೇಳಲು ಹೊರಟವಿಶಯ ಬಹುಶಃ ನಮ್ಮ ಮನೆಯಲ್ಲಿ ಯಾರಿಗೂ ಮರೆಯಲು ಸಾಧ್ಯವಾಗಿಲ್ಲವೆಂಬುದು ನನ್ನ ನಂಬಿಕೆ ! ಅದು ನಡೆದದ್ದು ನಮ್ಮ ೮ ನೆ ನಂಬರ್ ಫ್ಲಾಟ್ ನಲ್ಲಿ. ಅಂದರೆ ಇದಾದ ವಾರದನಂತರ ನಾವು ವಡಾಲದಿಂದ ಇಲ್ಲಿಗೆ ಮನೆ ಬದಲಾಯಿಸಿದೆವು. ಇದೊಂದು ರೋಚಕ ಸನ್ನಿವೇಶ ! ಯಾವ ತೊಂದರೆಯೂ ಇಲ್ಲದೆ ಸುಖವಾಗಿ ಕೊನೆಗೊಂಡಿದ್ದರಿಂದ ! ಇದರ ಕಥೆಯನ್ನು ಉತ್ತಮ ಟಿ.ವಿ ನಿರ್ದೇಶಕರಿಗೆ ಕೊಟ್ಟರೆ ಬಹಳ ಒಳ್ಳೆ ಸೀರಿಯಲ್ ತೆಗೆಯಬಹುದೇನೊ ! ಈಗಲೂ ಕಾಲ ಮೀರಿಲ್ಲ.ಯಾರು ಬೇಕಾದರೂ ಪ್ರಯತ್ನಿಸಬಹುದು !

ನಾವು ಶಿವಾಜಿಪಾರ್ಕ್ ನ ಸಾವಂತ್ ಮಾರ್ಗ್ ನಲ್ಲಿರುವ (ಮೊದಲು ಮನಮಾಲಾ ಟ್ಯಾಂಕ್ ರೋಡ್ ಎಂದು ಕರೆಯುತ್ತಿದ್ದರು.) ನಮ್ಮ ಆಫೀಸ್ ಕ್ವಾರ್ಟರ್ಸ್ ನಲ್ಲಿ ಇದ್ದೆವು. ಆಗ ಕೇವಲ ೩ ಕಟ್ಟಡಗಳಿದ್ದವು.ಮಧ್ಯೆ ವಿಶಾಲವಾದ ಹುಲ್ಲಿನ ಮೇಲೆ ಮಕ್ಕಳೆಲ್ಲಾ ಖೊ ಖೊ, ಫುಟ್ಬಾಲ್, ವಾಲಿಬಾಲ್ ಆಡುತ್ತಿದ್ದರು. ಅಲ್ಲಿಯೇ ಕಾಂಪೌಂಡಿನ ಗೇಟಿನ ಬಳಿ ಒಂದು ದೊಡ್ಡ ನೆಲಭಾವಿ ಇತ್ತು. ಅದನ್ನು ಮುಚ್ಚಿದ್ದರು. ನಮಗೆ ನೀರಿನ ತೊಂದರೆ ಯಾವಾಗಲೂ ಇರಲಿಲ್ಲ. ಒಮ್ಮೆ ಆದಾಗ ಇದರ ನೀರನ್ನು ಪಂಪ್ ಹಾಕಿ ಮೇಲಕ್ಕೆಳೆದು ಉಪ್ಯೊಗಿಸಿದ್ದಾಗಿ ನಮ್ಮ ವಾಚ್ ಮನ್ ಪಾಟೇಕರ್ ಜ್ಞಾಪಿಸಿಕೊಳ್ಳುತ್ತಾರೆ. ಈಗ ಇವೆರಡರ ಮಧ್ಯೆ ಇನ್ನೊಂದು ದೊಡ್ಡ 'ಆಪರೇಟಿವ್ ಗಲ (ಕೆಲಸಗಾರರ) ಕ್ವಾರ್‍ಟರ್ಸ್ ಬಂದಿದೆ. ಅರಳಿಮರದಮೇಲೆ ಚಿಲಿ-ಪಿಲಿಗುಟ್ಟುವ ಪಕ್ಷಿಗಳ ಶಬ್ದ ಅಲ್ಲಿ ಆವರಿಸಿದೆ. ನಾಯಿಗಳು ಹಾಗೂ ವಯಸ್ಸಾದ ಹೆಂಗಸರು ನಿಗವಹಿಸುವುದರಿಂದ ಅವರನ್ನು ಲೆಕ್ಕಿಸಿ ಕಾಂಪೌಂಡ್ ಒಳಗೆ ಬರಲು ಯಾರಿಗೆ ಧರ್ಯ ?

ನಾನು ನಿಮ್ಮನ್ನು ೨ ದಶಕಗಳ ಹಿಂದಕ್ಕೆ ಕರದುಕೊಂಡು ಹೋಗುತ್ತೇನೆ. ಮುಂಭಾಗದ ಎರಡು ಕಟ್ಟಡಗಳು ಟೈಪ್ 'ಎ' ಗ್ರುಪ್ ನವು ಮಧ್ಯಭಾಗದ್ದು ಟೈಪ್ 'ಬಿ' ಟಪ್ ಎ ನಲ್ಲಿ ಕಾರಕೂನರು, ರಿಸರ್ಚ್ ಅಸಿಸ್ಟೆಂಟ್ ಗಳು ಇರುತ್ತಿದ್ದರು. ಟೈಪ್ 'ಬಿ' ನಲ್ಲಿ ಸೀನಿಯರ್ ಅಸಿಸ್ಟೇಂಟ್ ಗಳು, ಅಡ್ಮಿನಿಸ್ಟ್ರೇಟಿವ್ ಆಫೀಸರ್, ಮತ್ತು ಕೆಲವು ಆಫೀಸರ್ಗಳು. ಏರಿಯದಲ್ಲಿ ಕೇವಲ ೮೦ ಸ್ಕ್ವೇರ್ ಫೀಟ್ ಅಂತರಮಾತ್ರ. ಮುಂಬೈನಲ್ಲಿ ಜಾಗದ ಕೊರತೆ ಅಲ್ವೆ ?

ನನಗೆ ಫ್ಲಾಟ್ ನಂ. ೮, ಅಲಾಟ್ ಆಗಿತ್ತು. ಅಲ್ಲಿ ವಾಸವಾಗಿದ್ದ *ಗಾಯ್ತೊಂಡೆಯವರು ಟೈಪ್ 'ಬಿ 'ನಲ್ಲಿ ಖಾಲಿಯಾಗಿದ್ದ ಫ್ಲಾಟಿಗೆ ಸದ್ಯದಲ್ಲೇ ಹೋಗುವವರಿದ್ದರು. ಅವರಿದ್ದ ಈಗಿನ ಫ್ಲಾಟನ್ನು ನನಗೆ ಅಲಾಟ್ ಮಾಡಿದ್ದರು.ಮಿಸೆಸ್ ಗಾಯ್ತೊಂಡೆ, ಆಯಕರ್ ವಿಭಾಗದಲ್ಲಿ ಆಫೀಸರಾಗಿ ಕೆಲಸಮಾಡುತ್ತಿದ್ದರು. ಮನೆಯಲ್ಲಿ ಮಹೇಶ್, ೬ ನೆತರತಿ ವಿಧ್ಯಾರ್ಥಿ- ಮಗಳು *ರಂಜಿತ, ದಾದರ್ ನಲ್ಲೇ ಒಂದು ಖಾಸಗಿ ಸ್ಕೂಲಿನಲ್ಲಿ ಕೆ.ಜಿ. ಕ್ಲಾಸಿನಲ್ಲಿ ಓದುತ್ತಾಳೆ. ಇದುವರೆಗೂ 'ಗಾ' ಅವರ ತಂದೆ- ತಾಯಿ ಅವರ ಜೋಡಿ ಇದ್ದರು. ಆದರೆ ಅವರ ಥಾಣೆಯಲ್ಲಿರುವ ಎರಡನೆಯ ಮಗನ ಆರೋಗ್ಯ ಸರಿಯಿರದ ಕಾರಣ ಅವರು ಅಲ್ಲಿಗೆ ಹೋಗಿದ್ದರು. ಈಗ ಮಕ್ಕಳನ್ನು ನೋಡಿಕೊಳ್ಳುವುದು ಸಮಸ್ಯೆಯೇ ಆಗಿತ್ತು. ಮಿಸೆಸ್ ಗಾಯ್ತೊಂಡೆಯವರ ಸಮೀಪದ ಬಂಧು, ಗಂಗ ಮೌಶಿ ಪಕ್ಕದ 'ತುಳಸಿವಾಡಿ'ಯಲ್ಲಿದ್ದರು. ಮಕ್ಕಳಿಗೆ ಅವರೆಂದರೆ ಪ್ರಾಣ ! *ಮಹೇಶ್ ಸ್ಕೂಲಿನಿಂದ ಬಂದವನೆ ಯೂನಿಫಾರ್ಮ್ ಬಿಚ್ಚಿಟ್ಟು, ಉಡುಪು ಬದಲಾಯಿಸಿ 'ಲೆಝಿಮ್ 'ಕಲಿಯಲು 'ವ್ಯಾಯಾಮಶಾಲೆ'ಗೆ ಹೋಗುತ್ತಾನೆ ಅವರ ಅಮ್ಮ ಬರುವ ಹೊತ್ತಿಗೆ ಅವನು ಮನೆಗೆ ಬರುವುದು.

ರಂಜಿತ ಶಾಲೆಯಿಂದ ನೇರವಾಗಿ ಗಂಗ ಮೌಶಿ ಮನೆಗೆ ಬಂದು 'ಫ್ರೆಶ್' ಆದ ನಂತರ, ಅವರ 'ಬಾಬ' ಬಂದು ಅವಳನ್ನು ಕರೆದುಕೊಂಡು ಹೋಗುವ ತನಕ, ಅಲ್ಲೇ ಆಟ ಆಡುತ್ತಿರುತ್ತಾಳೆ. ಮೊದಲು ಗಾಯ್ತೊಂಡೆ ಆಫೀಸ್ ಮುಗಿಸಿಕೊಂಡು ಬರುತ್ತಾರೆ. ಅವರ ಪತ್ನಿಯವರು ೬-೪೫ ರ ಹೊತ್ತಿಗೆ ಮನೆಗೆ ಬರುತ್ತಾರೆ. ಅವರ ಆಯ್ಕರ್ ಆಫೀಸ್ ( Income tax office ) ಇರುವುದು ಚರ್ಚ್ ಗೇಟ್ ನಲ್ಲಿ. ಈ ಹೊಸ ಏರ್ಪಡು ಚೆನ್ನಾಗಿಯೇ ಕೆಲಸಮಾಡುತ್ತಿತ್ತು. ಅಂದು ಗಾಯ್ತೊಂಡೆ ಯಾವಾಗಲೂ ಬರುವಂತೆ ಆಫೀಸ್ನಿಂದ ೫-೩೦ ಕ್ಕೆ ಬಂದವರೆ ಮಗಳನ್ನು ಕರೆದುಕೊಂಡು ಮನೆಗೆ ಬಂದರು. ಒಳಗೆಬಂದು ಹಾಲನ್ನು ಕಾಯಿಸಲು ಗ್ಯಾಸ್ ಒಲೆಯಮೇಲೆ ಮದ್ಯಮ ಗತಿಯಲ್ಲಿ ಇಟ್ಟು ಮಗಳ ಕಾಲಿನ ಶೂಸ್ ಬಿಚ್ಚಿ ಯೂನಿಫಾರ್ಮ್ ಕಳಚಿ, ಬೇರೆ ಉಡುಪು ತೊಡಿಸಿ ತಾವು 'ಟಾಯ್ ಲೆಟ್' ನೊಳಗೆ ಹೋದರು. ಇದು ದೈನಂದಿನ ಚಟುವಟಿಕೆ. ಆದರೆ ಈ ದಿನ ಅದು ವಿಪರೀತಕ್ಕೆ ಹೋಗಿತ್ತು. ಆಕಸ್ಮಿಕಗಳು ಹೇಳಿ ಕೇಳಿ ಬರುತ್ತವೆಯೇ ? ರಂಜು, ಏನಾದರು ಆಟ ಆಡಿಕೊಳ್ಳುತ್ತಿದ್ದಳು. ಇಂದು ೩ ಗಾಲಿ ಸೈಕಲ್ಲನ್ನು ನಡೆಸಿಕೊಂಡು ಬಂದು ಟರ್ನ್ ತೆಗೆದುಕೊಳ್ಳುವ ಸಮಯದಲ್ಲಿ 'ಟಾಯ್ ಲೆಟ್ಟಿನ' 'ಕಡಿ'ಯನ್ನು ನೂಕಿ ಮುಂದೆ ಹೋದಳು. ಇದು ಅವಳಿಗೇನುಗೊತ್ತು ! ಗೈತೊಂಡೆ, ಬಾಗಿಲನ್ನು ತೆರೆಯಲು ಯತ್ನಿಸುತ್ತಾರೆ. ಆಗಲಿಲ್ಲ. ಅವರು ಮೃದುವಾಗಿ "ರಂಜು ಬಾಗಿಲು ತೆಗಿಯಮ್ಮ," ಎಂದರೆ ಅವಳಿಗೆ ಆಗಬೇಕಲ್ಲ. ಕಡಿ ಭದ್ರವಾಗಿ ಕೂತಿದೆ. ಒಲೆಯ ಮೆಲಿನ ಮಿಲ್ಕ್ ಕುಕರ್ ಶಬ್ದಮಾಡಲು ಪ್ರಾರಂಬಿಸಿತು. ಹೋಗಲಿ ನಿಧಾನವಾಗಿ ಹೊರಗಿನಬಾಗಿಲು ತೆಗಿಯಮ್ಮ ಏಂದರೆ ಅವಳಿಗೆ ಅರ್ಥವಾಗುತ್ತಿಲ್ಲ. ಆಬಾಗಿಲುಗಳು ಬಹಳ ಬಿಗಿ. ಆ ಬಾಗಿಲುಗಳನ್ನು ಪ್ರತಿದಿನ ಎಳೆದು ಹಲವು ಬಾರಿ ಹೊಡೆದು ತೆಗೆಯುವುದು ವಾಡಿಕೆ. ಇನ್ನು ಈ ಪುಟ್ಟ ಮಗುವಿಗೆ ಸಾಧ್ಯವೇ ? ಚಳಿಗಾಲದಲ್ಲಂತೂ ಸಾಧ್ಯವೇ ಇಲ್ಲ. ಅವಳಾಗಿಯೇ ತೆಗೆದದ್ದು ನೆನಪಿಲ್ಲ. ಸಹಾಯಕ್ಕೆ ಯಾರೂ ಇಲ್ಲ. ಆ ದಿನಗಳಲ್ಲಿ ಮನೆಯಲ್ಲಿ ಫೋನೂ ಇರಲಿಲ್ಲ. ನಮ್ಮ ಆಫೀಸ್ ಕ್ಯಾಂಪಸ್ ನಲ್ಲಿ ೨ ಅಥವ ೩ ಮನೆಯಲ್ಲಿ ಫೋನ್ ಇದ್ದದ್ದು ! ಬರಬರಬರುತ್ತಾ, ಮಿಲ್ಕ್-ಕುಕರ್, ಶಬ್ದ ತೀವ್ರವಾಗುತ್ತಾ ಬಂತು. ಗಾ ಅವರು ಗಾಬರಿಯಾದರು. ಮಗುವಿಗೆ ಎಷ್ಟು ಹೇಳಿದರೂ ಗೊತ್ತಾಗುತ್ತಿಲ್ಲ. ಅವಳು ಜೋರಾಗಿ ಅಳಲು ಪ್ರಾರಂಭಿಸಿದಳು. ಮಿಲ್ಕ್ ಕುಕರ್ ಶಬ್ದದಲ್ಲಿ ಏನು ಕೇಳುತ್ತಿಲ್ಲ. ಎದುರಿನ ಮನೆ ಮಿಸೆಸ್ ವರ್ಗಿಸ್, ಮೇಲಿನ ಮನೆ ಮಿಸೆಸ್ ರಾವ್, ಓಡಿ ಬಂದರು. ಅವರೂ, 'ಪುಟ್ಟ ಮರಿ ರಂಜೂ, ಮೆತ್ತಗೆ ಕಡಿ ತಳ್ಳು;ಬಂಗಾರ, ಹೆದರಬೇಡ, ಹೊರಗೆ ನಾವಿದೀವಿ, ನಿಮ್ಮ ಡ್ಯಾಡಿಗೆ ಏನೂ ಆಗಲ್ಲ' ಎಂದು ಎಷ್ಟು ಹೇಳಿದರೂ ಉಪಯೋಗವಾಗಲಿಲ್ಲ. ಅವಳ ರೋದನ ಕುಕ್ಕರ್ ನ ಶಬ್ದದಷ್ಟೇ ಜೊರಾಗಿತ್ತು. ಸಾಮಾನ್ಯವಾಗಿ ಒಂದು ಡೂಪ್ಲಿಕೇಟ್ ಚಾವಿ ಪಕ್ಕದ ಮನೆಯಲ್ಲಿ ಇಟ್ಟಿರುವುದು ವಾಡಿಕೆ. ಒಂದು ಚಾವಿ ಕೆಳಗೆ, ಗ್ರೌಂಡ್ ಫ್ಲೋರ್ ನಲ್ಲಿ -ಪೌಂಪ್ ಹೌಸ್ ನೊಳಗೆ ಇರುತ್ತಿತ್ತು. ಆದರೆ ಹೋದವಾರ ಬೀಗದ ಕೈ ಕಳೆದುಕೊಂಡು, ಬೀಗ ಬದಲಾಯಿಸಿದ್ದರಿಂದ ಈ ತಾಪತ್ರಯ ಅನುಭವಿಸಬೇಕಾಯಿತು. !

ಬೀಗದ ಜೊತೆಗೆ ಲ್ಯಾಚನ್ನೂ, ಬದಲಾಯಿಸಿದ್ದರು ! ಕೆಳಗಿನ ಮನೆಯ ಗಾವ್ಡೆ, ಹೋಗಿ ವಾಚ್ಮನ್ ನನ್ನು ಕರೆದುಕೊಂಡು ಬಂದರು. ನಮ್ಮ ಗೆಳೆಯ ಮೋಹಿತೆಯವರ ಮನೆಯಿಂದ ಹತ್ತಿರದಲ್ಲೇ ಇದ್ದ 'ಅಗ್ನಿಶಾಮಕ ದಳ'ಕ್ಕೆ ಫೋನ್ ಮಾಡಿದರು. ಕೆಳಗೆ, ನಮ್ಮ ಆಫೀಸ್ ಕಾಂಪೌನ್ಡ್ ನಲ್ಲಿ ಬಹಳಜನ ನೆರೆದಿದ್ದರು. ನಿಮಿಷಾರ್ಧದಲ್ಲಿ ಗಂಟೆ ಹೊಡೆಯುತ್ತ ಅಗ್ನಿಶಾಮಕ ವ್ಯಾನ್ ಬಂತು. ೩ ಸಿನಿಮಾ ಥಿಯೇಟರ್ ಇರುವ ಜಾಗ ಕೇಳಬೇಕೇ ? ಥಿಯೇಟರ್ ನ ಕ್ಯೂ ನಲ್ಲಿ ನಿಂತಿದ್ದ ಎಲ್ಲಾ ಜನ ನಮ್ಮ ಆಫೀಸ್ ಕಾಂಪೌಂಡ್ನಲ್ಲೆ ! ಜನರನ್ನು ಒತ್ತರಿಸಿ ಜಾಗಮಾಡಿಕೊಂಡು ವ್ಯಾನ್ ತನ್ನ ಏಣಿಗಳನ್ನು ನಿಧಾನವಾಗಿ ಮೇಲಕ್ಕೇರಿಸಿತು. ಅದರ ಜೊತೆಗೆ ಡಾರ್ಕ್ ನೀಲಿ ಉಡುಪಿನ ಹೊಳೆಯುವ ಹೆಲ್ಮೆಟನ್ನು ಧರಿಸಿದ ಇಬ್ಬರು ಏಣಿಯನ್ನು ಹತ್ತಿ ಎರಡನೆಯ ಅಂತಸ್ತಿನಲ್ಲಿದ್ದ 'ಗಾ'ರವರ ಬಾಲ್ಕನಿಯಲ್ಲಿ ಇಳಿದು ಮನೆಯೊಳಗೆ ಬಂದರು. ಪುಣ್ಯಕ್ಕೆ ಬಾಲ್ಕನಿ ಬಾಗಿಲು ಒಡೆಯುವ ಪ್ರಮೇಯ ಬರಲಿಲ್ಲ. ಬಾಗಿಲು ತೆರೆದಿತ್ತು. ಒಳಗೆ ಇಳಿದು ಮೊದಲು ಮಗುವನ್ನು ಎತ್ತಿಕೊಂಡು ಆಡಿಗೆಮನೆಗೆ ಹೋಗಿ ಒಲೆ ಆರಿಸಿ, 'ಲ್ಯಾವೆಟೊರಿ' ಚಿಲಕ ತೆಗೆದರು. ಗಾಯ್ತೊಂಡೆಯವರು ತಕ್ಷಣ ಹೊರಗೆ ಬಂದರು. ತಂದೆ ಮಗಳನ್ನು ಎತ್ತಿಕೊಂಡು ಮುದ್ದಾಡಿದರು !

ಮಿಸೆಸ್ 'ಗಾ' ಗೆ ಆ ದಿನ, ಚರ್ಚ್ ಗೇಟ್ ನಲ್ಲಿ ೫-೩೦ ರ ಲೋಕಲ್ ಗಾಡಿ ತಪ್ಪಿಹೋಯಿತು. ೫-೩೬ ಬೋರಿವಲಿಗಾಡಿ ಸಿಕ್ಕಿದ್ದರಿಂದ ಬರುವುದು ತಡವಾಯಿತು. ಕ್ವಾರ್ಟರ್ಸ್ ಮುಂದೆ ಬೃಹದಾಕಾರದ ಕೆಂಪು ಅಗ್ನಿಶಾಮಕಗಾಡಿ ಇದೆ. ಮತ್ತು ಎಲ್ಲ ದೃಷ್ಟಿಯೂ ಅವರಮನೆಯ ಮೇಲೆ ಕೆಂದ್ರೀಕೃತವಾಗಿದೆ. ಆ ಗುಂಪಿನಲ್ಲಿ ಮೇಲೆಬರುವುದು ಅವರಿಗೆ ಸಾಧ್ಯವಾಗಿರಲಿಲ್ಲ.ಅವರಿಗೆ ಜೀವವೇ ಹೋದಹಾಗಾಯಿತು. ಗುಂಪಿನಲ್ಲಿ ಮೂಕವಿಸ್ಮಿತರಾಗಿ ನೋಡುತ್ತಿದ್ದ ಮಿಸೆಸ್ ಗಾ ರವರು ಓಡಿ ಮೆಟ್ಟಿಲೇರಿ ಅವರ ಫ್ಲಾಟಿನ ಮುಂದೆ ಬಂದು ತಮ್ಮ ಪರ್ಸಿನಿಂದ ’ಮನೆಯ ಕೀ” ಹೊರಗೆ ತೆಗೆಯುತ್ತಿದ್ದಂತೆ ಬಾಗಿಲು ಒಳಗಿನಿಂದ ತೆರೆಯಿತು. ಅವರು ಒಳಗೆ ಓಡಿ ಮಗಳನ್ನು ಅಪ್ಪಿ-ಮುದ್ದಿಟ್ಟರು. ಮುಖ್ಯವಾಗಿ ಮಗುವಿಗೇನಾಗಲಿಲ್ಲ. ಸುರಕ್ಷಿತವಾಗಿದೆ. ಅಷ್ಟುಹೊತ್ತಿಗೆ ಮಹೇಶ್ ಬಂದ. ಅವನಿಗೆ ಈಗಾಗಲೆ ಗ್ರೌಂಡ್ ಫ್ಲೊರ್ ನವರಿಂದ ಎಲ್ಲಾ ವಿಚಾರ ತಿಳಿದಿತ್ತು. ಆಯಿ ಬಾಬ ಮತ್ತು ತಂಗಿ ಎಷ್ಟೋ ವರ್ಷಗಳು ಅಗಲಿ ಮತ್ತೆ ಭೇಟಿಯಾದವರಂತೆ ಅಪ್ಪಿಕೊಂಡು ರೋದಿಸಿದರು. ಸುಖಾಂತ್ಯದಲ್ಲಿ ಬಗೆ ಹರಿದ ಸಮಸ್ಯೆ ಎಲ್ಲರಿಗೂ ಸಮಾಧಾನ ತಂದಿತ್ತು. ಆಫೀಸಿನಲ್ಲಿ ಸಮಾಧಾನವಾಗಿದ್ದ 'ಗಾಯ್ತೊಂಡೆ'ಯವರನ್ನು ಮಾರನೆದಿನ ಭೆಟ್ಟಿಯಾದಾಗ ನನಗೆ ಎಲ್ಲಾವಿಚಾರ ಅವರಿಂದ ತಿಳಿಯಿತು. ಹಿಂದಿನ ರಾತ್ರಿಯೇ ಎಲ್ಲರೂ ಒಟ್ಟಿಗೆ 'ಸಿದ್ಧಿವಿನಾಯಕ್ ಮಂದಿರ'ಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರೆಂಬ ವಿಷಯ ನಮಗೆ ಸಮಾಧಾನ ತಂದಿತ್ತು !

ಈ ಘಟನೆ ನಡೆದು ಒಂದು ವಾರ ಅಗಿದೆ. ನಮ್ಮ ಮನೆಯ ಬಾಲ್ಕನಿಯಲ್ಲಿ ಹೂವಿನಗಿಡದ ಕುಂಡದ ಬಳಿ ರವಿ, ಮಹೇಶ್, ರಂಜು ಆಟ ಆಡಿಕೊಳ್ಳುತ್ತಿದ್ದಾರೆ. ಮಿಸೆಸ್ ಗಾಯ್ತೊಂಡೆ, ನಮ್ಮ ಮನೆಗೆ ಬಂದಿದ್ದರು. ಆಗ ಅವರು ಹೇಳಿದ ಮೇಲಿನ ಕಥೆಯಿಂದ ನಮಗೆ ವಿಷಯ ಎಲ್ಲ ವಿವರವಾಗಿ ತಿಳಿಯಿತು. ಆಫೀಸಿನಲ್ಲಿ ಎಲ್ಲರೂ ಹೇಳಿದಂತೆ ಏಕೆ 'Fire brigade van' ಬಂದಿತ್ತು, ಇತ್ಯಾದಿಗಳ ಮಾಹಿತಿ ಸರಿಯಾಗಿ ಗೊತ್ತಿರಲಿಲ್ಲ. ಮಕ್ಕಳೆಲ್ಲಾ ಓಡುತ್ತ, ಕೇಕೆಹಾಕುತ್ತಾ, ಬಾಗಿಲು ತೆಗೆದುಕೊಂಡು ಕೆಳಗೆ ಓಡಿದರು. ಮಿಸೆಸ್ ಗಾಯ್ತೊಂಡೆಯವರ ಕಣ್ಣಂಚಿನಲ್ಲಿ ಸ್ವಲ್ಪ ನೀರಿನ ಹನಿಯನ್ನು ನನ್ನ ಹೆಂಡತಿ ತಕ್ಷಣ ಗುರುತಿಸಿದಳು !

ಮಾತೃ ಹೃದಯದ ಪರಿತಾಪ ಇನ್ನೊಬ್ಬ ತಾಯಿಗೆ ಮಾತ್ರ ಅರ್ಥವಾಗಬಲ್ಲದು ಅಲ್ಲವೆ ! *ವಿ.ಸೂ:ಇದು ನಿಜವಾಗಿ ನಡೆದ ಘಟನೆ ! ಗಾಯ್ತೊಂಡೆ, ಮಿಸೆಸ್ ರಾವ್, ಮಹೇಶ್, ರಂಜಿತ, ವರ್ಗಿಸ್, ಜೂಲಿ, ಗಾವ್ಡೆ, ಮೋಹಿತೆ ಕಾಲ್ಪನಿಕ ಹೆಸರುಗಳು. ನಿಜವಾದ ಹೆಸರುಗಳು ಬೇರೆಯೆ ಇವೆ.