ರಕ್ಷಣಾ ಕ್ಷೇತ್ರದಲ್ಲಿ ಸುಧಾರಣೆ : ಪ್ರಕ್ರಿಯೆ ಪಾರದರ್ಶಕ ಆಗಿರಲಿ
ಭಾರತದ ರಕ್ಷಣಾ ಕ್ಷೇತ್ರ ದಿನದಿಂದ ದಿನಕ್ಕೆ ಆತ್ಮನಿರ್ಭರತೆ ಸಾಧಿಸುತ್ತಿದೆ. ಕಳೆದ ವರ್ಷ ಭಾರತದ ರಕ್ಷಣಾ ಉತ್ಪಾದನೆ ಹಾಗೂ ರಫ್ತಿನಲ್ಲಿ ದಾಖಲೆ ಸ್ಥಾಪಿಸಿದೆ. ಇದೀಗ ೨೦೨೫ನೇ ವರ್ಷಾರಂಭದಲ್ಲೇ ಕೇಂದ್ರ ಸರಕಾರವು ಈ ವರ್ಷವನ್ನು ‘ರಕ್ಷಣಾ ಸುಧಾರಣೆಗಳ ವರ್ಷ’ ಎಂದು ಘೋಷಿಸಿದೆ. ಹೀಗಾಗಿ ಭಾರತ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಪ್ರಗತಿಯತ್ತ ದಾಪುಗಾಲು ಇರಿಸಿದೆ. ಈ ಹಂತದಲ್ಲಿ ರಕ್ಷಣಾ ಖರೀದಿಗಳಲ್ಲಿ ಪಾರದರ್ಶಕತೆಯ ಅಗತ್ಯವಿದೆ. ೨೦೨೩-೨೪ರಲ್ಲಿ ಭಾರತವು ರಕ್ಷಣಾ ಸಲಕರಣೆ ರಫ್ತಿನಲ್ಲಿ ದಾಖಲೆ ಬರೆದು ೨೧,೦೮೩ ಕೋಟಿ ರೂ. ರಕ್ಷಣಾ ಸಲಕರಣೆಗಳನ್ನು ವಿದೇಶಗಳಿಗೆ ರಫ್ತು ಮಾಡಿತು. ಇದು ಕಳೆದ ಸಾಲಿಗಿಂತ ಶೇ. ೩೨.೪ ರಷ್ಟು ವೃದ್ಧಿಯಾಗಿದೆ.
ಇನ್ನು ಇದೇ ಸಾಲಿನಲ್ಲಿ ಸ್ಥಳೀಯ ರಕ್ಷಣಾ ಉತ್ಪಾದನೆಯು ದಾಖಲೆಯ ಗರಿಷ್ಟ ೧,೨೬,೮೮೭ ಕೋಟಿ ರೂ. ಗೆ ತಲುಪಿತು. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ‘ಮೇಕ್ ಇನ್ ಇಂಡಿಯಾ’ (ಭಾರತದಲ್ಲೇ ಉತ್ಪಾದಿಸಿ) ತತ್ವದಡಿ ದೇಶದ ರಕ್ಷಣಾ ಕ್ಷೇತ್ರವನ್ನು ಮುನ್ನಡೆಸುವುದಾಗಿತ್ತು.
ಇದೀಗ ೨೦೨೫ರ ಆರಂಭದಲ್ಲಿ ಕೇಂದ್ರ ಸರಕಾರ ಇನ್ನೊಂದು ಮಹದೋದ್ದೇಶಿತ ಯೋಜನೆ ಪ್ರಕಟಿಸಿದ್ದು, ‘ರಕ್ಷಣಾ ಕ್ಷೇತ್ರಗಳ ಸುಧಾರಣಾ ವರ್ಷ’ ಎಂದು ಘೋಷಿಸಿದೆ. ದೇಶದ ೩ ಸೇನಾ ಘಟಕಗಳ ಬಲ ಹೆಚ್ಚಿಸುವುದು ಮತ್ತು ಸೇನೆಯನ್ನು ಯುದ್ಧ-ಸನ್ನದ್ಧ ಪಡೆಯನ್ನಾಗಿಸಲು ಸಂಯೋಜಿತ ಸೇನಾ ಕಮಾಂಡ್ ಸ್ಥಾಪಿಸುವುದಾಗಿದೆ.
ಇದಕ್ಕಾಗಿ ರಕ್ಷಣಾ ಖರೀದಿ ಪ್ರಕ್ರಿಯೆ ಸರಳೀಕರಿಸಿ ಕಾಲಮಿತಿಯಲ್ಲಿ ಖರೀದಿ ನಡೆಸಲಾಗುತ್ತದೆ ಹಾಗೂ ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಖರೀದಿ ಪ್ರಕ್ರಿಯೆಯಲ್ಲಿದ್ದ ತೊಡಕು ನಿವಾರಿಸುವ ಉದ್ದೇಶವನ್ನೂ ಹೊಂದಿದೆ. ೨೦೨೫ರಲ್ಲಿ ಸೈಬರ್ ಮತ್ತು ಬಾಹ್ಯಾಕಾಶದಂತಹ ಹೊಸ ಡೊಮೇನ್ ಗಳು, ಕೃತಕ ಬುದ್ದಿಮತ್ತೆ, ಹೈಪರ್ ಸಾನಿಕ್ ಮತ್ತು ರೊಬೊಟಿಕ್ಸ್ ನಂತಹ ಉದಯೋನ್ಮುಖ ತಂತ್ರಜ್ಞಾನಗಳತ್ತ ಗಮನ ಹರಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಆದರೆ ಈ ಹಿಂದಿನ ರಕ್ಷಣಾ ಖರೀದಿಗಳನ್ನು ಗಮನಿಸಿದರೆ ಭಾರತ ಸರ್ಕಾರ ಜಾಗರೂಕತೆಯಿಂದ ಹೆಜ್ಜೆ ಇಡುವ ಅಗತ್ಯವಿದೆ. ಏಕೆಂದರೆ ಈ ಹಿಂದೆ ಬೋಫೋರ್ಸ್ ಹಗರಣ, ರಫೇಲ್ ಹಗರಣ -ಮುಂತಾದ ರಕ್ಷಣಾ ಹಗರಣಗಳು ನಡೆದಿದೆ ಹಾಗೂ ಮಧ್ಯವರ್ತಿಗಳು ದುಡ್ಡು ಮಾಡಿಕೊಂಡ ನಿದರ್ಶನಗಳೂ ಇವೆ. ಇದರ ನಡುವೆ ಭಾರತ ಸರ್ಕಾರ ಆಧುನಿಕ ರಕ್ಷಣಾ ಒಪ್ಪಂದಗಳನ್ನು ಈ ವರ್ಷ ಮಾಡಿಕೊಳ್ಳಲಿದ್ದು, ಅತ್ಯಂತ ಪಾರದರ್ಶಕ ಖರೀದಿ ಪ್ರಕ್ರಿಯೆ ನಡೆಸಿ ಹಗರಣ ಮುಕ್ತ ವ್ಯವಹಾರ ಮಾಡುವ ಅಗತ್ಯವಿದೆ. ಏಕೆಂದರೆ ಇದು ದೇಶದ ರಕ್ಷಣಾ ವಲಯ ಹಾಗೂ ಸಾರ್ವಭೌಮತೆಯ ಪ್ರಶ್ನೆಯಾಗಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೨-೦೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ