ರಕ್ಷಾಬಂಧನಕ್ಕಾಗಿ ಪರಿಸರಸ್ನೇಹಿ “ರಾಖಿ”
“ರಕ್ಷಾಬಂಧನ" ಮತ್ತೆ ಬರುತ್ತಿದೆ - ೨೨ ಆಗಸ್ಟ್ ೨೦೨೧ ಸೋದರಿಯರು ಸೋದರರ ಕೈಗಳ ಮಣಿಕಟ್ಟುಗಳಿಗೆ “ರಾಖಿ" ಕಟ್ಟಿ ಸಂಭ್ರಮಿಸುವ ಪಾವನ ದಿನ.
ಈ ಹಬ್ಬ ಮುಗಿದ ನಂತರ ಎದುರಾಗುವ ಪ್ರಶ್ನೆ: ರಾಖಿಗಳನ್ನು ಏನು ಮಾಡುವುದು? ಅವನ್ನು ಸಿಕ್ಕಸಿಕ್ಕಲ್ಲಿ ಎಸೆದರೆ ಪರಿಸರದಲ್ಲಿ ಕಸವಾಗಿ ಸಮಸ್ಯೆ. ರಾಖಿಗಳನ್ನು ಪ್ಲಾಸ್ಟಿಕಿನಿಂದ ತಯಾರಿಸಿದರಂತೂ ಅವು ಕರಗದ ಕಸವಾಗಿ ಹಲವಾರು ವರುಷ ಉಳಿದು, ಸಮಸ್ಯೆಯನ್ನು ಬಿಗಡಾಯಿಸುತ್ತವೆ.
ಇದಕ್ಕೊಂದು ಪರಿಹಾರ: ಪ್ರಕೃತಿಯಲ್ಲಿ ತಾನಾಗಿಯೇ ನಾಶವಾಗುವ (ಬಯೋ-ಡಿಗ್ರೇಡಬಲ್) ವಸ್ತುಗಳಿಂದ ರಾಖಿ ತಯಾರಿಸುವುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಖಿಯಲ್ಲೊಂದು ಬೀಜ ಇಡುವುದು; ಹಬ್ಬದ ನಂತರ ಆ ರಾಖಿಯನ್ನು ಮಣ್ಣಿನಲ್ಲಿ ಊರಿ, ವಾರಕ್ಕೊಮ್ಮೆ ನೀರೆರೆದರೆ, ಅದರಿಂದೊಂದು ಸಸಿ ಹುಟ್ಟಿ, ಮುಂದೆ ಹೆಮ್ಮರವಾಗಿ ಬೆಳೆದೀತು.
ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ - ಒರಿಸ್ಸಾದ “ಓರ್-ಮಾಸ್" ಎಂಬ ಸ್ವಸಹಾಯ ಗುಂಪು. ಒಂದು ತಿಂಗಳಿಂದೀಚೆಗೆ ಈ ಗುಂಪಿನ ೨,೦೦೦ ಮಹಿಳೆಯರು ಪರಿಸರಸ್ನೇಹಿ ರಾಖಿಗಳ ತಯಾರಿಯಲ್ಲಿ ನಿರತರು. ಇವರು ಖೋರ್ಡಾ, ಜೈಪುರ್, ಜಗತ್ ಸಿಂಗ್ ಪುರ, ಮಯೂರ್-ಭಂಜ್ ಮತ್ತು ಕಿಯೋನ್‌ಜಾರ್ ಜಿಲ್ಲೆಗಳ ಮಹಿಳೆಯರು.
ಈ ರಾಖಿಗಳ ತಯಾರಿಗೆ ಅವರು ಬಳಸುವುದು: ಮೆಕ್ಕಲು ಮಣ್ಣು, ಹುಲ್ಲು, ಚಿನ್ನದ ಬಣ್ಣದ ಹುಲ್ಲು, ಕಾಗದಕಸ, ಬಿದಿರು, ದ್ವಿದಳ ಧಾನ್ಯಗಳು ಮತ್ತು ತೆಂಗಿನಕಾಯಿ ಚಿಪ್ಪು ಇತ್ಯಾದಿ ವಸ್ತುಗಳನ್ನು. ಈಗಾಗಲೇ ಹಲವಾರು ಸ್ಥಳಗಳಲ್ಲಿ ಇವುಗಳ ಮಾರಾಟ ಮಳಿಗೆಗಳನ್ನು ತೆರೆದಿದ್ದಾರೆ. ಅಲ್ಲೆಲ್ಲ ಬಿರುಸಿನಿಂದ ಮಾರಾಟವಾಗುತ್ತಿವೆ ಈ ಪರಿಸರಸ್ನೇಹಿ ರಾಖಿಗಳು. ಇವುಗಳ ಬೆಲೆ ರೂ.೨೦ರಿಂದ ರೂ.೫೦.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರೂ ಭಾರತ ಸರಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಸಹಯೋಗದಲ್ಲಿ ಪರಿಸರಸ್ನೇಹಿ ರಾಖಿಗಳ ತಯಾರಿ ಮತ್ತು ಮಾರಾಟಕ್ಕೆ ಕೈಜೋಡಿಸಿದ್ದಾರೆ. “ವೃಕ್ಷಬಂಧನ್" ಎಂಬ ಈ ಯೋಜನೆಯಲ್ಲಿ ಭಾಗಿಗಳಾಗಿರುವ ಬುಡಕಟ್ಟು ಮಹಿಳೆಯರ ಸಂಖ್ಯೆ ಸುಮಾರು ೧,೧೦೦. ಈ ಯೋಜನೆಯ ಕೇಂದ್ರ ಮಹಾರಾಷ್ಟ್ರದ ಔರಂಗಾಬಾದ್ ನಗರ.
ಸಾಂಪ್ರದಾಯಿಕವಾಗಿ, ರಾಖಿಯ ಮೇಲ್ಮೈಯಲ್ಲಿ ಒಂದು ಮಣಿ ಅಥವಾ ಹೊಳೆಯುವ ನಕ್ಷತ್ರ ಆಕೃತಿಯ ತುಂಡು ಇರಿಸುವುದು ವಾಡಿಕೆ. ಈ ಯೋಜನೆಯಲ್ಲಿ ತಯಾರಿಸುವ ರಾಖಿಗಳ ಮೇಲ್ಮೈಯಲ್ಲಿ ಅದರ ಬದಲಾಗಿ ಸ್ಥಳೀಯ ಮರಗಳ ಬೀಜಗಳನ್ನು ಇರಿಸಲಾಗುತ್ತದೆ. ಹಬ್ಬದ ನಂತರ, ಈ ರಾಖಿಗಳನ್ನು ಮಣ್ಣಿನಲ್ಲಿ ಹೂತು, ಕ್ರಮವಾಗಿ ನೀರೆರೆಯುತ್ತ, ಅದರಲ್ಲಿರುವ ಬೀಜದಿಂದ ಮರ ಬೆಳೆಸುವ ಅವಕಾಶ.
ಮಂಗಳೂರಿನ ಹತ್ತಿರದ ಪಕ್ಷಿಕೆರೆಯ ನಿತಿನ್ ವಾಸ್ ಈ ನಿಟ್ಟಿನಲ್ಲಿ ಮಾಡಿರುವ ಕೆಲಸವೂ ಗಮನಾರ್ಹ. ಅವರು “ಪೇಪರ್ ಸೀಡ್” ಘಟಕದ ಪರಿಸರಸ್ನೇಹಿ ಉತ್ಪನ್ನಗಳಾದ ಮಾಸ್ಕ್ ಮತ್ತು ತರಕಾರಿ ಬೀಜಗಳ ರಾಖಿ ಕಳೆದ ವರುಷವೇ ಸುದ್ದಿ ಮಾಡಿವೆ.
ಈ ಸಾಲಿನಲ್ಲಿ ಅವರ ಆವಿಷ್ಕಾರ: ಅಡಿಕೆ ಹಾಳೆಯ ರಾಖಿ. ಇವನ್ನು ರೂ.೩೫ ಬೆಲೆಗೆ ಆನ್-ಲೈನಿನಲ್ಲಿ ಮಾರಾಟ ಮಾಡುತ್ತಾರೆ. “ರಕ್ಷಾಬಂಧನ"ದ ಸಮಯದಲ್ಲಿ ಮಂಗಳೂರು ಪರಿಸರದಲ್ಲಿ ಮಳೆಗಾಲ. ಕಾಗದದಿಂದ ರಾಖಿ ರಚಿಸಿದರೆ, ಮಳೆಗೆ ಒದ್ದೆಯಾಗಿ ಹಾಳಾಗುತ್ತದೆ. ಒಣಗಿದ ಅಡಿಕೆ ಹಾಳೆಯ ಚೂರುಗಳಿಂದ ರಾಖಿ ಮಾಡುವುದು ಈ ಸಮಸ್ಯೆಗೊಂದು ಪರಿಹಾರ. ಈ ರಾಖಿಗಳ ಒಳಭಾಗದಲ್ಲಿ ಟೊಮೆಟೊ, ಬದನೆ ಮತ್ತು ತುಳಸಿ ಬೀಜಗಳನ್ನು ಇರಿಸಲಾಗಿದೆ. ಆದ್ದರಿಂದ, ಹಬ್ಬದ ನಂತರ ರಾಖಿ ಮಣ್ಣಿಗೆ ಎಸೆದರೂ ಬೀಜಗಳು ಮೊಳೆತು ಸಸಿಗಳಾಗ ಬಲ್ಲವು.
ಪರಿಸರ ಮಾಲಿನ್ಯ ಮಾನವ ಕುಲಕ್ಕೇ ಮಾರಕವಾಗಿರುವ ಈ ಹೊತ್ತಿನಲ್ಲಿ, ಪರಿಸರ ಕಾಳಜಿಯ ಇಂತಹ ಪುಟ್ಟ ಪ್ರಯತ್ನಗಳೂ ಸ್ವಾಗತಾರ್ಹ. ಸೋದರಿ ಕಟ್ಟಿದ ರಾಖಿಯ ಬೀಜದಿಂದ ಮೊಳೆತ ಸಸಿಯನ್ನು ಮರವಾಗಿ ಬೆಳೆಸುವುದು ಬಹುದೊಡ್ಡ ಕನಸು, ಅಲ್ಲವೇ?
ಫೋಟೋ ೧: ಮಂಗಳೂರಿನ ಪೇಪರ್ ಸೀಡ್ ಘಟಕದ "ಬೀಜವಿರುವ ರಾಖಿ" ..... ಕೃಪೆ: ಮ್ಯಾಂಗಲೋರಿಯನ್.ಕೋಮ್
ಫೋಟೋ ೨: ಅದೇ ಘಟಕದ ಪರಿಸರಸ್ನೇಹಿ ರಾಖಿಗಳು ..... ಕೃಪೆ: ಡೆಕ್ಕನ್ ಹೆರಾಲ್ಡ್.ಕೋಮ್
ಫೋಟೋ ೩: ಮರಗಳ ಬೀಜಗಳಿರುವ "ವೃಕ್ಷಬಂಧನ್" ರಾಖಿಗಳು ..... ಕೃಪೆ: ಫಸ್ಟ್ ಪೋಸ್ಟ್