ರಕ್ಷಾಬಂಧನದ ಪೌರಾಣಿಕ ಹಿನ್ನಲೆ ಮತ್ತು ಮಹತ್ವ

ರಕ್ಷಾಬಂಧನದ ಪೌರಾಣಿಕ ಹಿನ್ನಲೆ ಮತ್ತು ಮಹತ್ವ

ಭಾರತ ದೇಶ ಸಂಸ್ಕೃತಿ-ಸಂಸ್ಕಾರಗಳ ನೆಲೆಬೀಡು, ಆಡೊಂಬಲವಾಗಿದೆ. ಇಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ. ಆಷಾಢ ಕಳೆದು ಬರುವ ಶ್ರಾವಣವೆಂದರೆ ಹಬ್ಬಗಳ ಮಾಸವೇ ಆಗಿದೆ. ಪವಿತ್ರವಾದ ಸಹೋದರತ್ವದ ಸಂಕೇತವಾದ ರಕ್ಷಾಬಂಧನ ಹಬ್ಬ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವುದು. ಈ ಹಬ್ಬದ ಪೌರಾಣಿಕ ಹಿನ್ನೆಲೆ ಅವಲೋಕಿಸಿದರೆ 'ವ್ರತನೆಂಬ ದಾನವನ ಉಪಟಳದಿಂದ ತನ್ನವನಾದ ಪುರಂದರನ ಕಾಪಾಡಲು ಶಚಿಯು ತ್ರಿಮೂರ್ತಿಗಳಲ್ಲಿ ಓರ್ವನಾದ ವಿಷ್ಣುವನ್ನು ಧ್ಯಾನಿಸಿ, ವಿಶೇಷವಾದ ದಾರವನ್ನು ಪಡೆದು ಪುರಂದರನ ಮಣಿಕಟ್ಟಿಗೆ ರಕ್ಷೆಯಾಗಿ ಕಟ್ಟಿದಳಂತೆ. ಪಂಚವಲ್ಲಭೆ ಪಾಂಚಾಲಿಯು ಶ್ರೀಕೃಷ್ಣನಿಗೆ ದಾರವನ್ನು ಬಿಗಿದು ಸಹೋದರನಾಗಿ ಸ್ವೀಕರಿಸಿ, ಪಾಂಡವರ ರಕ್ಷಣೆ ಮಾಡೆಂದು ಪ್ರಾರ್ಥಿಸಿದಳಂತೆ. ಯಮನಿಗೆ ಸಹೋದರಿ ಯಮಿ ರಕ್ಷೆಯನ್ನು ಬಿಗಿದು ಆಶೀರ್ವಾದ ಬೇಡಿದಳಂತೆ. ಬಲಿ ಚಕ್ರವರ್ತಿಗೆ ರಾಖಿಯನ್ನು ಕಟ್ಟಿ ಮಾತೆ ಲಕ್ಷ್ಮೀದೇವಿ ತನ್ನ ಇನಿಯನನ್ನು ಬಂಧನದಿಂದ ಬಿಡಿಸಿದಳಂತೆ.

ಭ್ರಾತೃತ್ವದ ಅರ್ಥ ಬಹಳ ವಿಶಾಲವಾದುದು. ಸೋದರ ಸೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿ ನಿಂತು ಜವಾಬ್ದಾರಿ ತೆಗೆದುಕೊಳ್ಳಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ, ವಾತ್ಸಲ್ಯ ಅನುಪಮ, ಅವರ್ಣನೀಯ, ಊಹೆಗೂ ನಿಲುಕದ್ದು, ಗಾಢವಾದ್ದು. ತನ್ನ ಪುಟ್ಟ ತಂಗಿಯನ್ನು ಕೈಹಿಡಿದು ಜಾಗ್ರತೆಯಿಂದ ನಡೆಸಿಕೊಂಡುಹೋಗುವ ಸನ್ನಿವೇಶದ ಕಲ್ಪನೆಯೇ ಸೊಗಸು.

ಬಂಧುತ್ವದ ಬೆಲೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆಯೇ ಎನುವ ಸಂಶಯ ಕಾಡತೊಡಗಿದೆ. ಟಿ.ವಿ ಸಂಸ್ಕೃತಿಯಿಂದ ಮೊಬೈಲ್ ಪ್ರಪಂಚಕ್ಕೆ ಬಂದಾಗಿದೆ, ಸಂಬಂಧಗಳು ಕೇವಲ ಮೊಬೈಲ್ ಮಾತುಗಳಲ್ಲಿ ಅಡಗಿದೆ. ಕಳೆದುಕೊಂಡ ಬೆಸುಗೆ ಮತ್ತೆ ಚಿಗುರಲು ಈ 'ರಕ್ಷಾಬಂಧನ' ನಾಂದಿಯಾಗಬಹುದು. ಆಶ್ವಾಸನೆ, ವಿಶ್ವಾಸ, ನಂಬಿಕೆ ಮರಳಿ ತರುವ ಕೆಲಸವಾಗಲಿ. ಒಂಟಿತನ, ಖಿನ್ನತೆ, ಹತಾಶೆ, ಬೇಸರ ಕಾಡಿದಾಗ ಪರಸ್ಪರ ಸಹೋದರ ಸಹೋದರಿಯಲ್ಲಿ ತನಗಾಗುವ ಮನಸ್ಸಿನ ತುಮುಲಗಳನ್ನು ಮನಬಿಚ್ಚಿ ಹೇಳಿಕೊಳ್ಳಬಹುದು. ಹೃದಯದಲ್ಲಡಗಿದ ಬೇನೆ-ಬೇಸರಿಕೆ ಹೊರಬರಬಹುದಲ್ಲವೇ? ತಾಯಿ, ಸಹೋದರಿಗಿರುವ ತಾಳ್ಮೆ ಮತ್ತೊಬ್ಬರಿಗೆ ಬರಲು ಸಾಧ್ಯವಿಲ್ಲ. ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಬೇಕು. ಇದುವೇ ಸೋದರ-ಸೋದರಿಯರ ಮಧುರ ಬಾಂಧವ್ಯದ ಗುಟ್ಟು. ಶಾಶ್ವತ ಸಂಬಂಧದ ನಡುವೆ ಇತರರ ಪ್ರವೇಶ ಸಲ್ಲದು, ಬರಲೂ ಬಾರದು.

ಕೇವಲ ಬಂಧಿಸುವ ಬಣ್ಣದ ದಾರವಾಗದೆ ಭಾವನೆಗಳ ಗುಚ್ಛವಾಗಲಿ, ಮೌಲ್ಯಗಳ ಸೇತುವಾಗಲಿ.ಇತಿಹಾಸದತ್ತ ನೋಡಿದರೆ ವೀರ ಸಾವರ್ಕರ್ ಸಾಮೂಹಿಕವಾಗಿ ಸಕಲರಿಗೂ ಅರಶಿನ ಕುಂಕುಮ ಕೊಡಿಸಿ, ಭರವಸೆಯನ್ನು ನೀಡಿದ ಉಲ್ಲೇಖವಿದೆ. ವೀರ ಭಗತ್ ಸಿಂಗನಿಗೆ ಆಶ್ರಯ ಕಲ್ಪಿಸಿದ ದುರ್ಗಾದೀದಿ, ತಾನಾಜಿ ಕುಟುಂಬಕ್ಕೆ ಸಹೋದರನಾಗಿ ಬೆಂಬಲವಿತ್ತ ಛತ್ರಪತಿ ಶಿವಾಜಿ, ಲಕ್ಷ್ಮೀಬಾಯಿ ರಣಸಿಂಹಿಣಿಯನ್ನು ವೀರವನಿತೆಯಾಗಿ ರೂಪಿಸಿದ ತಾತ್ಯಾಟೋಪಿ ಸಹೋದರನ ಸ್ಥಾನ ನೀಡಿ ಹರಸಿದ್ದು ಎಲ್ಲವನ್ನೂ ಓದುವಾಗ ಮೈರೋಮಾಂಚನಗೊಳಿಸುವುದು. ಅಣ್ಣ-ತಮ್ಮಂದಿರಿಗೆ,ಅಕ್ಕ-ತಂಗಿಯರು ರಕ್ಷೆಯಾಗಿ ರಾಖಿಯನ್ನು ಕಟ್ಟಿ 'ರಕ್ಷಾ ಬಂಧನ' ಆಚರಿಸಿ ಸಂಭ್ರಮಿಸುವರು.ಪರಸ್ಪರ ಉಡುಗೊರೆ ನೀಡುವರು. ಒಂದು ರೀತಿಯ ರಕ್ಷಾ ಕವಚದಂತೆ. ಧಾರ್ಮಿಕ ಹಿನ್ನೆಲೆಯಂತೆ, ಏನೇ ಕಷ್ಟ ಬಂದರೂ ಸಹೋದರರ ರಕ್ಷಣೆಯಿದೆ ಎನುವ ನಂಬಿಕೆ, ವಿಶ್ವಾಸ ಸಹೋದರಿಯರಿಗೆ.ಸೋದರಿಗೆ ಅಣ್ಣತಮ್ಮಂದಿರ ‘ನಾನಿದ್ದೇನೆ, ಹೆದರದಿರು’ ಎನ್ನುವ ಆಶ್ವಾಸನೆ ಇದರ ಹಿನ್ನೆಲೆ ಮತ್ತು ಸಂಕೇತ. ಭರವಸೆಗಳ ಹೂರಣ, ಸಂಬಂಧಗಳನ್ನು ಗಟ್ಟಿಗೊಳಿಸುವಿಕೆ. ಅಕ್ಷತೆಯ ಮೂಲಕ ಆಶೀರ್ವಾದ.ಪವಿತ್ರವಾದ 'ರಕ್ಷಾಬಂಧನ' ಹಬ್ಬವನ್ನು ಖುಷಿಯಿಂದ ಆಚರಿಸಿ ಸಂಭ್ರಮಿಸೋಣ.

-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ