ರಕ್ಷಾಬಂಧನದ ಶುಭದಿನ...
ಶ್ರಾವಣ ಮಾಸದ ಹುಣ್ಣಿಮೆ ದಿನದಲಿ
ಅಣ್ಣ-ತಂಗಿ ಸಂಬಂಧವ ಗಟ್ಟಿಯಾಗಿಸುತಲಿ
ಪರಸ್ಪರ ರಕ್ಟಣೆ ಸಹಕಾರದ ಪ್ರತೀಕವಾಗಲಿ
ಶುಭಹಾರೈಕೆ ಉಡುಗೊರೆಗಳ ವಿನಿಮಯವಾಗಲಿ
ಅಣ್ಣ-ತಂಗಿಯರ ಸಂಬಂಧ
ಬೇರ್ಪಡಿಸಲಾಗದ ಅನುಬಂಧ
ಮಣಿಕಟ್ಟಿಗೆ ಕಟ್ಟುವಳು ರಕ್ಷಾಬಂಧನ
ಸಂಭ್ರಮಿಸುವರು ಹಬ್ಬವ ಒಲವಿಂದ
ಯಾವುದೇ ಹಬ್ಬಹರಿದಿನಗಳ ಆಚರಣೆಯ ಹಿಂದೆ ಒಂದಷ್ಟು ಕಥೆಗಳು, ಘಟನೆಗಳು ನಮಗೆ ಓದಲು ಸಿಗುವುದು ಸಾಮಾನ್ಯ. ಆಚರಣೆಗಳ ಹಿಂದೆ ಸಂಸ್ಕೃತಿ -ಸಂಪ್ರದಾಯಗಳ ಚಾಪೆ ಹಾಸಲ್ಪಟ್ಟಿದೆ. ಬಹಳ ಹಿಂದಕ್ಕೆ ನಾವು ತಿರುಗಿ ನೋಡಿದರೆ ಹಬ್ಬದ ದಿನ ಎಲ್ಲರೂ ಒಟ್ಟಾಗಿ ಸೇರಿ, ಹಲವು ವಿಶೇಷ ಖಾದ್ಯಗಳನ್ನು ತಯಾರಿಸಿ, ಹಿರಿಯರ ಆಶೀರ್ವಾದ ಪಡೆಯುವುದು, ಭಗವಂತನಿಗೆ ನೈವೇದ್ಯ ಅರ್ಪಿಸಿ ಎಲ್ಲರೊಂದಿಗೆ ಊಟ ಉಪಾಹಾರ ಕಂಡು ಬರುತ್ತದೆ. ಒಟ್ಟು ಕುಳಿತು ಉಣ್ಣುವುದೇ ಸಂತಸದ ಕ್ಷಣಗಳು.
ಸಹೋದರಿ ಸಹೋದರರ ನಡುವಿನ ಬಂಧ, ಅನುಬಂಧ ಇನ್ನಷ್ಟು ಗಟ್ಟಿಯಾಗಿಸಿ, ಸೋದರಿಗೆ ಅಭಯ, ರಕ್ಷಣೆ ಸೋದರನಿಂದ, ಸದಾ ದುಷ್ಟ ಶಕ್ತಿಗಳಿಂದ ರಕ್ಷಿಸಲ್ಪಡಲಿ ಸಹೋದರನೆಂಬ ಆಶಯ ಆಕೆಗೆ, ಅದಕ್ಕಾಗಿ ರಕ್ಷೆಯನ್ನು (ರಾಖಿ) ಆತನ ಮಣಿಕಟ್ಟಿಗೆ ಕಟ್ಟಿ ಶುಭ ಹಾರೈಸುವ ಪದ್ಧತಿಯೇ ‘ರಕ್ಷಾಬಂಧನ’ ಎಂದಾಯಿತು. ರಕ್ಷೆ ಕಟ್ಟಿ ಶುಭಹಾರೈಸಿದ ಸೋದರಿಗೆ ಉಡುಗೊರೆ ನೀಡುವುದೂ ಇದೆ.
ಒಂದಷ್ಟು ಪುರಾಣದತ್ತ ಕಣ್ಣು ಹಾಯಿಸೋಣ. ವ್ರತ್ರ ಎಂಬ ರಾಕ್ಷಸನೋರ್ವ ಪದೇಪದೇ ಪುರಂದರನಿಗೆ ಅಮರಾವತಿಯಲ್ಲಿ ಕಿರುಕುಳ ನೀಡುತ್ತಿದ್ದನಂತೆ. ರೋಸಿಹೋದ ಶಚಿ ವಿಷ್ಣುವಿನ ಮೊರೆಹೊಕ್ಕಳಂತೆ. ಸೋದರಿಯ ಕೇಳಿಕೆಯ ಮನ್ನಿಸಿ ಶಚಿಗೆ ವಿಶೇಷವಾದ ದಾರವೊಂದನ್ನು ನೀಡಿ, ಇಂದ್ರನ ಕೈಯ ಮಣಿಕಟ್ಟಿಗೆ ಕಟ್ಟು ಎಂದನಂತೆ . ರಾಕ್ಷಸನಿಗೆ ಸೋಲಾಯಿತಂತೆ. ಇದೇ ರಕ್ಷಾಬಂಧನವೆಂದು ಪ್ರಸಿದ್ಧಿ ಯಾಯಿತು.
ಇನ್ನೊಂದು ಉದಾಹರಣೆ ಮಹಾಭಾರತದಲ್ಲಿ ಓದಬಹುದು. ದ್ರೌಪದಿ ಲೀಲಾವಿನೋದ, ಮೋಹನ ಮುರಲಿಲೋಲನಿಗೆ ವಿಶೇಷವಾದ ದಾರವನ್ನು ಕಟ್ಟಿ ಅಣ್ಣನಾಗಿ ಸ್ವೀಕಾರ ಮಾಡಿದಳಂತೆ. ಇದಕ್ಕೆ ಪ್ರತಿಯಾಗಿ ವೈಕುಂಠವಾಸಿ ಭಗವಾನ್ ವಿಷ್ಣು ಪಾರ್ವತಿದೇವಿಗೆ ಸಂಕಷ್ಟ ಬಂದಾಗ ರಕ್ಷಣೆ ಮಾಡುವುದಾಗಿ ಅಭಯವಿತ್ತನಂತೆ.
ಐತಿಹಾಸಿಕವಾಗಿ ನೋಡಿದರೆ ಚರಿತ್ರೆ ಯ ಪುಟಗಳಲ್ಲಿ ಅಲೆಕ್ಸಾಂಡರ್ ದಂಡಯಾತ್ರೆ ನಾವೆಲ್ಲರೂ ಓದಿದವರೇ. ಅಲೆಕ್ಸಾಂಡರ್ ಮತ್ತು ಪೋರಸ್ ಕಾಳಗದಲ್ಲಿ ಅದೆಷ್ಟೋ ಕಷ್ಟನಷ್ಟಗಳಾಯಿತು. ಅಮಾಯಕರ ಬಲಿಯಾಯಿತು.ಈ ಸಂದರ್ಭದಲ್ಲಿ ಅಲೆಕ್ಸಾಂಡರ್ ಪತ್ನಿ ರುಕ್ಸಾನಳು ಒಂದು ಪವಿತ್ರ ದಾರವನ್ನು ಪೋರಸ್ ನ ಕೈಯ ಮಣಿಕಟ್ಟಿಗೆ ಕಟ್ಟುವಂತೆ ಯಾರದ್ದೋ ಕೈಯಲ್ಲಿ ಕೊಟ್ಟು ಕಳುಹಿಸಿ ಮನವಿಮಾಡಿಕೊಂಡಳಂತೆ, ತನ್ನ ಪತಿಯನ್ನು ಕೊಲ್ಲದಿರೆಂದು. ಈ ಕಾರಣದಿಂದ ಪೋರಸ್ ಸೆರೆಸಿಕ್ಕ ಮತ್ತು ಯುದ್ಧದಲ್ಲಿ ಅಲೆಕ್ಸಾಂಡರ್ ವಿರುದ್ಧ ಹೋರಾಡಲಿಲ್ಲ. ಆ ಪವಿತ್ರ ರಾಖಿ ಕಳುಹಿಸಿದ ದಿನವೇ ಪೂರ್ಣಿಮೆ.
ಶ್ರಾವಣ ಮಾಸದ ಹುಣ್ಣಿಮೆ ದಿನ ಆಚರಿಸುವ ಅಣ್ಣ ತಂಗಿಯ ಪವಿತ್ರ ಹಬ್ಬ. ಸೋದರಿ ತನ್ನ ಒಡಹುಟ್ಟಿದವರಿಗೆ ಮಾತ್ರ ಅಲ್ಲ, ಯಾರಿಗೆ ಬೇಕಾದರೂ ರಾಖಿಯನ್ನು ಕಟ್ಟಿ ಸೋದರನಂತೆ ಕಾಣಬಹುದು. ಸೋದರನಲ್ಲಿ ನಂಬಿಕೆ, ವಿಶ್ವಾಸ, ನಿಷ್ಕಲ್ಮಶ ಪ್ರೀತಿಯ ಧ್ಯೋತಕವಿದು. ಸದಾ ತನ್ನ ಸೋದರಿಯನ್ನು ರಕ್ಷಣೆ ಮಾಡಬೇಕೆಂದು ರಾಖಿ ಎಚ್ಚರಿಸುತ್ತಾ ಇರುತ್ತದೆ. ಆಕೆಗೆ ಅಷ್ಟೂ ಭರವಸೆ ಸೋದರನ ಮೇಲಿರುತ್ತದೆ.
ಭೂಮಿಯ ಮೇಲೆ ಕೆಲವು ಸಂಬಂಧಗಳನ್ನು ಹೇಳಿಕೊಳ್ಳಲಾಗದು, ಬೆಲೆಕಟ್ಟಲಾಗದು. ಇಷ್ಟವಾದ ಉಡುಗೊರೆ ವಿನಿಮಯ, ಸೋದರನಿಗೆ ದೀರ್ಘಾಯುಷ್ಯ ಕೋರುವಳು. ಕೆಲವು ಪ್ರಾಂತ್ಯದಲ್ಲಿ ಭಗವತಿಯ ಆರಾಧನೆ ಮಾಡುವರು. ಎಷ್ಟೇ ದೂರದಲ್ಲಿದ್ದರೂ ಸದಾ ಸೋದರ ಸೋದರಿಯರ ಬೆಸುಗೆ,ಬಾಂಧವ್ಯ ಪವಿತ್ರ ವಾದುದು.
ನಮ್ಮ ದೇಶದ ಗಡಿಯನ್ನು ಕಾಯುವ ಯೋಧರಿಗೆ ಪ್ರತೀವರುಷ ಸಹ ರಾಖಿಯನ್ನು ಕಳುಹಿಸಿಕೊಟ್ಟು ಶುಭಕೋರುತ್ತಾರೆ. ಪವಿತ್ರವಾದ ಈ ದಾರವನ್ನು ಇತ್ತೀಚೆಗೆ ಬಣ್ಣ ಬಣ್ಣದ ಅಲಂಕಾರ ಮಾಡುವುದು, ಅದೇ ಒಂದು ಉದ್ಯಮ ಸಹ ಆಗಿ ಬೆಳೆದಿದೆ. ‘ರಕ್ಷಾ -ರಕ್ಷಣೆ, ಬಂಧನ-ಬಂಧ--ಸಂಬಂಧ-ಅನುಬಂಧ--ರಕ್ಷಾಬಂಧನ’ ಎಂದು ಪ್ರಸಿದ್ಧವಾಯಿತು.
ಈ ಕಾಲಘಟ್ಟದಲ್ಲಿ ಯಾರು ಯಾರಿಗೆ ರಕ್ಷಣೆ ಕೊಡಬೇಕೋ ಒಂದೂ ಅರಿಯದು.ಆದರೂ ನಾವು ನಮ್ಮ ಸಂಪ್ರದಾಯ, ಆಚಾರ ವಿಚಾರಗಳನ್ನು ಎಲ್ಲಾ ಬಿಡಲಾಗದು.ಎಲ್ಲಾ ಧಾರ್ಮಿಕ ತಳಹದಿಯ ಮೇಲೆ ಬೆಸೆಯಲ್ಪಟ್ಟಿದೆ. ಒಟ್ಟಿನಲ್ಲಿ ರಾಕ್ಷಸೀ ಪ್ರವೃತ್ತಿಯನ್ನು ತ್ಯಜಿಸಿ, ಒಬ್ಬರಿಗೊಬ್ಬರು ನೆರವಾಗಿ ಮನುಷ್ಯರಾಗಿ ಬಾಳೋಣ.
-ರತ್ನಾ ಕೆ.ಭಟ್, ತಲಂಜೇರಿ
(ಆಕರ: ಭಾರತದಲ್ಲಿ ಧಾರ್ಮಿಕ ಆಚರಣೆ ಮತ್ತು ಹಬ್ಬಗಳು)
ಚಿತ್ರ ಕೃಪೆ: ಇಂಟರ್ನೆಟ್ ತಾಣ