ರಕ್ಷಾಬಂಧನ ಕವನಗಳು

ರಕ್ಷಾಬಂಧನ ಕವನಗಳು

ಕವನ

ಶುಭ ಹಾರೈಕೆಗಳ ರಕ್ಷಾ ಬಂಧನ

ಶ್ರಾವಣ ಮಾಸದ ಹುಣ್ಣಿಮೆ ದಿನದಂದು

ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು|

ರಕ್ಷಣೆ ಸಹಕಾರ ನಂಬಿಕೆಯೊಂದು

ಶುಭ ಹಾರೈಕೆಗಳ ರಕ್ಷಾಬಂಧನವಂದು||

 

ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ

ಪುರಂದರನ ಕಾಪಿಡಲು ವಿಷ್ಣುವ ಧ್ಯಾನಿಸಲು|

ವಿಶೇಷತೆಯ ದಾರವನು ಒಲಿದು ನೀಡಿದನು

ಇನಿಯನ ಕೈಯ ಮಣಿಕಟ್ಟಿಗೆ ಬಂಧಿಸೆಂದನು||

 

ಪಂಚ ಪಾಂಡವರ ಮನದನ್ನೆ ದ್ರೌಪದಿ

ಮಹಾ ಮಹಿಮ ಗೋಕುಲ ವಾಸನ ಸ್ಮರಿಸುತ|

ಸೋದರನಾಗಿ ಸ್ವೀಕರಿಸಿ ಬಿಗಿದಳು ದಾರ

ಹರಸಿದನು ದಯಾಸಿಂಧು ಪಾಂಚಾಲಿಯ||

 

ಸೋದರತ್ವದ ಶೃಂಖಲೆ ಅಭಯ ಆಶ್ವಾಸನೆ

ಸೋದರಿಯ ಭರವಸೆ  ಪ್ರೀತಿಗಳ ಬೆಸುಗೆಯು|

ಸಂಬಂಧಗಳ ಓಘ ಮೇಘಮಾಲೆಯ ಬಂಧ

ಅಡಗಿದೆ ರಕ್ಷಾಬಂಧನದ ಪವಿತ್ರ ಸಂಬಂಧವು||

 

ಉಡುಗೊರೆ ಅಕ್ಷತೆ ಹಾರೈಕೆ ಆಶೀರ್ವಾದವು

ರಾಖಿಯಲಿ ಬೆಸೆದಿದೆ ರಕ್ಷಾ ಕವಚವು|

ಧಾರ್ಮಿಕವಾಗಿ ಬೇರೂರಿದ ಸಂಪ್ರದಾಯಗಳು

ಬೇರ್ಪಡಿಸಲಾಗದ ಅನುಬಂಧಗಳ  ಕಡಲು||

***

ಪವಿತ್ರ ಬಂಧನ

ಸಂಸ್ಕಾರ ಬೃಹದಾದ ಆಲದ ಮರ 

ಆಚರಣೆಗಳು ಬಿಳಲುಗಳ ತರ

ಸಂಭ್ರಮ ಸಡಗರ ಹಬ್ಬದ ಲಿ

ಒಗ್ಗಟ್ಟಿನ ಸಂತೋಷ ಕೂಟದಲಿ

 

ಶ್ರಾವಣ ಮಾಸದ ಪೌರ್ಣಿಮೆಯ ದಿನ

ಪವಿತ್ರ ಬಂಧದ ರಕ್ಷಾಬಂಧನ

ಯಮುನಾ ದೇವತೆ ಯಮನಿಗೆ ಬಿಗಿದಳು

ಮಣಿಕಟ್ಟಿನ ಸುತ್ತಲೂ ಪವಿತ್ರ ದಾರದೊಳು

 

ಬಲಿ ಚಕ್ರವರ್ತಿಗೆ ಲಕ್ಷ್ಮೀ ಮಾತೆ ರಾಖಿ ಕಟ್ಟಿ

ತನ್ನ ಇನಿಯನ ಪಾತಾಳದಿಂದ ಬಿಡಿಸಿದ ದಿನ

ದ್ರೌಪದಿ ದೇವ ಮುಕುಂದನ ಕಿರುಬೆರಳ ರಕ್ಷಿಸಿದ ಫಲ

ಅಕ್ಷಯಾಂಬರ ಕರುಣಿಸಿದ ನಂದ ಕಂದ ಲೋಲ

 

ಸಹೋದರಿಗೆ ಸಹೋದರನ ಭರವಸೆಯ ಆಶ್ವಾಸನೆ

ಸಾತ್ವಿಕ ಉಡುಗೊರೆಯ ನೀಡಿ ಹಾರೈಸುವ ಮನದುಂಬಿ

ಮಣಿಕಟ್ಟಿಗೆ ಬಿಗಿದ ರಾಖಿ ದಾರ

ತುಪ್ಪ ದೀಪವ ಬೆಳಗುವ ಅಧಿಕಾರ

 

ನೈತಿಕ ಮೌಲ್ಯಂಗಳ ಅಧ:ಪತನ ಸಲ್ಲದು

ಸದಾ ಕಾಪಾಡುವೆ ಎಂಬ ‌ ಭಾಷೆಯ ಸೊಲ್ಲದು

ನಿರ್ಮಲ ಪ್ರೇಮದ ಹೃದಯ ವೈಶಾಲ್ಯ

ಅಣ್ಣ-ತಂಗಿಯರ ಬೆಸೆಯುವ ಮಹಾಸೇತುವೆ

 

ಬನ್ನಿ ಸಹೋದರ ಸಹೋದರಿಯರೇ ಒಂದಾಗೋಣ

ರಾಷ್ಟ್ರಧರ್ಮದ ಪರಿಕಲ್ಪನೆಯ ಸಾಕಾರಗೊಳಿಸೋಣ

ಮಹಿಳೆಯರ ಮಾನಪ್ರಾಣ ರಕ್ಷಿಸೋಣ

ವಿಶ್ವ ಬಂಧುತ್ವ ಮಾನವೀಯತೆಯ ಹಾದಿಯಲಿ ಸಾಗೋಣ

-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್