ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾ

ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾ

ರಜನಿಕಾಂತ್ ತಾಣ:ಅಂತರ್ಜಾಲ ಇಲ್ಲದಾಗ ಮಾತ್ರಾ
ಅಂತರ್ಜಾಲ ತಾಣವನ್ನು ಅಂತರ್ಜಾಲ ಸಂಪರ್ಕ ಇದ್ದಾಗ ಮಾತ್ರಾ ನಮಗೆ ನೋಡಲು ಬರುತ್ತದೆ.ಆದರೆ ರಜನಿಕಾಂತ್ ಅಸಾಧ್ಯವಾದುದನ್ನು ಮಾಡುವಾತ ತಾನೇ?ಹೀಗಾಗಿ ಆತನ ವೆಬ್‌ಸೈಟ್ ಅಂತರ್ಜಾಲ ಸಂಪರ್ಕ ತೆಗೆದಾಗ ಮಾತ್ರಾ ನಿಮ್ಮ ವೀಕ್ಷಣೆಗೆ ಲಭ್ಯವಾಗುತ್ತದೆ.ಇದನ್ನು ತಮಾಷೆ ಎಂದು ಕೊಳ್ಳಬೇಡಿ.ಆ ತಾಣವು ಅಂತರ್ಜಾಲ ಸಂಪರ್ಕ ಇಲ್ಲದಾಗ ಮಾತ್ರಾ ತೆರೆದುಕೊಳ್ಳುವಂತೆ ರಚಿತವಾಗಿದೆ.www.allaboutrajni.com ಎನ್ನುವ ಈ ತಾಣವು ವಿಶಿಷ್ಟ ವಿನ್ಯಾಸ,ಸಂಗೀತ ಮತ್ತು ವಿವರಗಳೊಂದಿಗೆ ರಚಿತವಾಗಿದೆ.ಹಾಗೆಂದು ಮೊದಲ ಬಾರಿಗೆ ತಾಣವು ಅಂತರ್ಜಾಲ ಇಲ್ಲದೆ ತೆರೆಯುತ್ತದೆ ಎಂದು ತಪ್ಪಾಗಿ ಭಾವಿಸಬೇಡಿ.ಅಂತರ್ಜಾಲ ಸಂಪರ್ಕವಿದ್ದಾಗ,ಈ ತಾಣವು ಲೋಡ್ ಆಗಿ,ನಂತರ ಅಂತರ್ಜಾಲ ಸಂಪರ್ಕವನ್ನು ತೆಗೆದಾಗ ಮಾತ್ರಾ ಮುಂದುವರಿಯುತ್ತದೆ.
--------------------------------------
ಟ್ಯಾಬ್ಲೆಟ್,ಲ್ಯಾಪ್‌ಟಾಪ್ ಭರವಸೆ ನೀಡುವ ಪಕ್ಷ ಪ್ರಣಾಳಿಕೆ
ಉತ್ತರಪ್ರದೇಶದಲ್ಲಿ ಮುಲಾಯಮ್ ಸಿಂಗ್ ಅವರ ಸಮಾಜವಾದಿ ಪಕ್ಷದ ಚುನಾವಣಾ ಕಾರ್ಯತಂತ್ರ ಅವರ ಮಗ ಅಖಿಲೇಶ್ ಸಿಂಗ್ ಯಾದವ್ ಅವರ ಕೈಯಲ್ಲಿದೆ.ಹೀಗಾಗಿ,ಅವರ ಪಕ್ಷದ ಪ್ರಣಾಳಿಕೆಯಲ್ಲೂ ಹೊಸ ಛಾಪು ಕಾಣಿಸುತ್ತದೆ.ಕಂಪ್ಯೂಟರಿನಿಂದ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ,ಹೀಗಾಗಿ ಕಂಪ್ಯೂಟರ್ ಬಳಕೆಯನ್ನು ಪಕ್ಷ ವಿರೋಧಿಸುತ್ತದೆ ಎನ್ನುವ ಹಳೆಯ ಪ್ರಣಾಳಿಕೆಯ ಅಂಶವನ್ನು ಕೈಬಿಟ್ಟು,ಹತ್ತನೆ ತರಗತಿ ಪಾಸಾದರೆ ಟ್ಯಾಬ್ಲೆಟ್ ಸಾಧನ ಮತ್ತು ಹನ್ನೆರಡನೇ ತರಗತಿ ಮುಗಿಸಿದರೆ ಲ್ಯಾಪ್‌ಟಾಪ್ ನೀಡುವ ಆಶ್ವಾಸನೆ ನೀಡುವ ಪ್ರಣಾಳಿಕೆಯನ್ನು ಪಕ್ಷ ಹೊರಡಿಸಿದೆ.ಕಂಪ್ಯೂಟರ್ ಉದ್ಯೋಗ ಕಿತ್ತುಕೊಳ್ಳುತ್ತದೋ,ಬಿಡುತ್ತದೋ-ವೋಟನ್ನಾದರೂ ತರುತ್ತದೆ ಎನ್ನುವುದು ಯಾದವ್ ವಿಶ್ವಾಸ ಇರಬೇಕು!
--------------------------------------------------------
ಹೆಜ್ಜೆ:ಕನ್ನಡ ಮತ್ತು ತಂತ್ರಜ್ಞಾನ ಜತೆ ಜತೆಗೆ
ಕನ್ನಡದ ಬಳಕೆ,ಇಂಗ್ಲಿಷ್ ಪದಗಳನ್ನು ಅನುವಾದ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆ,ತಂತ್ರಜ್ಞಾನ ಸಂಬಂಧಿತ ಪದಗಳಿಗೆ ಇಂಗ್ಲಿಷ್-ಕನ್ನಡ ಪದಕೋಶ ರಚನೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ,ತೀರ್ಮಾನ ತೆಗೆದುಕೊಳ್ಳಲು ತಂತ್ರಜ್ಞರು ಬೆಂಗಳೂರಲ್ಲಿ ರವಿವಾರ ಸೇರಿದ್ದರು.ನಾಗೇಶ್ ಹೆಗಡೆ,ವಸುದೇಂಧ್ರ,ಸುದರ್ಶನ್,ಓಂ‌ಶಿವಪ್ರಕಾಶ್,ಅರವಿಂದ,ವಾಸುದೇವ್ ಕಾಮತ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿವರಗಳಿಗೆ http://hejje.sanchaya.net ನೋಡಿ.
---------------------------------
ಅಂತರ್ಜಾಲ:ನಿಯಂತ್ರಣಕ್ಕೆ ಶಾಸನಅಮೆರಿಕಾದಲ್ಲಿ ಹಕ್ಕುಸ್ವಾಮ್ಯ ಕಾಯಿದೆಯ ರಕ್ಷಣೆಯ ನೆವದಲ್ಲಿ ಅಂತರ್ಜಾಲ ನಿಯಂತ್ರಣಕ್ಕೆ ಶಾಸನ ರೂಪಿಸಲು ಪ್ರಯತ್ನ ನಡೆದಿದೆ.ಯಾವುದೇ ತಾಣದಲ್ಲಿ ಕಾಪಿರೈಟ್ ಕಾಯಿದೆಯ ಉಲ್ಲಂಘನೆ ನಡೆದರೆ,ಅದರ ವಿರುದ್ಧ ಕ್ರಮ ಕೈಗೊಳ್ಳಲು ಅನುವು ಮಾಡುವ ಶಾಸನ ರೂಪಿಸಲು ಅಲ್ಲಿನ ಸಂಸತ್‌ನಲ್ಲಿ ಮಸೂದೆ ಮಂಡನೆಯಾಗುವುದರಲ್ಲಿತ್ತು.ಆದರೀಗ ಮಸೂದೆಯ ಮೇಲಿನ ಮತದಾನವನ್ನು ಮುಂದೂಡಲು ನಿರ್ಧರಿಸಲಾಗಿದೆ.
ಅಂತರ್ಜಾಲ ತಾಣಗಳ ಮೆಲೆ ಕ್ರಮ ತೆಗೆದುಕೊಳ್ಳಲು ಅನುವು ಮಾಡುವ ಮಸೂದೆಯನ್ನು, ಅಂತರ್ಜಾಲದ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಅರ್ಥೈಸಿರುವ ಹಿನ್ನೆಲೆಯಲ್ಲಿ ಅಮೆರಿಕಾದ ಸಂಸತ್ ತುಸು ಯೋಚಿಸುವಂತಾಗಿದೆ.ವಿಕಿಪೀಡಿಯಾ ತಾಣವು ತನ್ನ ಇಂಗ್ಲೀಷ್ ಅವೃತ್ತಿಯನ್ನು ಬ್ಲಾಕೌಟ್ ಮಾಡಿ,ಮಸೂದೆಯ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತು.ಗೂಗಲ್ ತನ್ನ ಅಮೆರಿಕಾದ ಪುಟದ ಲೋಗೋದಲ್ಲಿ ಕರಿಚುಕ್ಕಿ ಮೂಡಿಸಿ,ಪ್ರತಿಭಟನೆ ವ್ಯಕ್ತ ಮಾಡಿತು.ಚಲನಚಿತ್ರಗಳು,ಸಂಗೀತ,ಇ-ಪುಸ್ತಕಗಳು ಮತ್ತು ಬರಹಗಳ ಮೇಲಿನ ಕಾಪಿರೈಟ್ ಉಲ್ಲಂಘನೆಯಿಂದ ಸರಕಾರದ ಆದಾಯದಲ್ಲಿ ನಷ್ಟವಾಗುತ್ತದೆ.ಸೃಜನಶೀಲ ವ್ಯಕ್ತಿಗಳಿಗೂ ಅನ್ಯಾಯವಾಗುತ್ತದೆ ಎನ್ನುವುದು ಒಂದು ಮುಖ.ತನ್ನ ಬಳಕೆದಾರರಿಂದ ಕಾಯಿದೆ ಉಲ್ಲಂಘನೆಯಾಯಿತೆಂದು ಅಂತರ್ಜಾಲ ತಾಣವೇ ತಲೆಕೊಡಬೇಕೇ ಎನ್ನುವುದು ಇನ್ನೊಂದು ಕಡೆ.ವಿಕಿಪೀಡಿಯಾದಂತಹ ತಾಣದಲ್ಲಿ ಜನರೇ ಸೇರಿ, ವಿಶ್ವಕೋಶವನ್ನು ರಚಿಸಿದ್ದಾರೆ. ಇವರಿಂದ ಚೌರ್ಯ ನಡೆದಿದ್ದರೆ,ಅಂತರ್ಜಾಲ ತಾಣವನ್ನು ನಿರ್ಬಂಧಿಸುವುದು ಸರಿಯೆ ಎನ್ನುವ ವಾದದಲ್ಲೂ ಹುರುಳಿದೆ.ಸಾಮಾಜಿಕ ಜಾಲತಾಣಗಳಲ್ಲೂ ಜನರು ತಮ್ಮ ಗುಂಪುಗಳ ಜತೆ ಏನೇನೋ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.ಅವುಗಳಲ್ಲೆಲ್ಲಾ ಕಾನೂನಿನ ಉಲ್ಲಘನೆಯ ಬಗ್ಗೆ ಖಚಿತ ಪಡಿಸಿ ಕೊಳ್ಳುವುದು ಅಸಾಧ್ಯ.ಹಾಗಾಗಿ ಅಂತರ್ಜಾಲ ತಾಣಗಳನ್ನು ಇದಕ್ಕೆ ಬಾಧ್ಯರನ್ನಾಗಿಸುವುದು ಸರಿಯಲ್ಲ.ಹಾಗಾಗಿ ಅಂತಹ ಮಸೂದೆಗಳು ಬೇಡ ಎನ್ನುವುದು ಅಂತರ್ಜಾಲ ಬಳಕೆದಾರರಿಂದ ಬೇಡಿಕೆ.
----------------------------------------------------------
ಆಕಾಶ್:ಆಗಸ ಮುಟ್ಟಿದ ಬೇಡಿಕೆ
ಅಗ್ಗದ ಬೆಲೆಯ ಟ್ಯಾಬ್ಲೆಟ್ ಈಗ ಜನರ ಕೈಗೆ ತಲುಪಿದೆ.ಕಡಿಮೆ ಬ್ಯಾಟರಿ ಬಾಳಿಕೆ ಅವಧಿ,ನಿಧಾನ ಪ್ರತಿಕ್ರಿಯೆ ತೋರುವ ಸ್ಪರ್ಶ ಸಂವೇದಿ ತೆರೆಯಂತಹ ಕೆಲವು ಕೊರತೆಗಳ ನಡುವೆಯೂ,ಈ ಸಾಧನಕ್ಕೆ ಬಹು ಬೇಡಿಕೆ ಬಂದಿದೆ.ಅಂತರ್ಜಾಲದ ಮೂಲಕ ಸಾಧನಕ್ಕೆ ಬೇಡಿಕೆ ಸಲ್ಲಿಸಹುದಾದ್ದರಿಂದ,ದಿನಕ್ಕೆ ಕಡಿಮೆಯೆಂದರೂ ಇಪ್ಪತ್ತೈದು ಕೋಟಿ ರುಪಾಯಿ ಬೆಲೆ ಬಾಳುವಷ್ಟು ಸಂಖ್ಯೆಯ ಆಕಾಶ್ ಟ್ಯಾಬ್ಲೆಟ್‌ಗೆ ಬೇಡಿಕೆ ಬರುತ್ತಿದೆ.ಡೇಟಾವಿಂಡ್ ಕಂಪೆನಿಯು ಇದುವರೆಗೆ ಏಳುನೂರು ಕೋಟಿ ರೂಪಾಯಿಗಳ ಬೇಡಿಕೆ ಸ್ವೀಕರಿಸಿದೆ ಎಂದು ಹೇಳಿಕೊಂಡಿದೆ.ಮೊದಲ ಆವೃತ್ತಿಗೆ ಎರಡೂವರೆ ಸಾವಿರ ರೂಪಾಯಿ ಬೆಲೆಯಾದರೆ,ಸುಧಾರಿತ ಆವೃತ್ತಿಗೆ ಮೂರು ಸಾವಿರ ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದೆ.ದೊಡ್ದ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸದವರಲ್ಲಿ ಅಕ್ಸೆಂಚರ್,ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್,ಧಾರವಾಡದಎಸ್ ಡಿ ಎಂ ಕಾಲೇಜು,ರಾಜಸ್ತಾನ್ ಪತ್ರಿಕಾ,ಇಟಲಿ ಸರಕಾರಗಳೂ ಸೇರಿವೆಯಂತೆ.ಈ ಬೇಡಿಕೆಯನ್ನು ತಣಿಸಲು,ಕಂಪೆನಿಯು ಹೊಸ ಘಟಕಗಳನ್ನು ಅರಂಭಿಸಲು ಬಯಸಿದೆ.ಕಂಪೆನಿಯ ಶೇರುಗಳನ್ನು ಸಾರ್ವಜನಿಕರಿಗೆ ಮಾರಿ,ಹೊಸ ಘಟಕಗಳಿಗೆ ದುಡ್ಡು ಒಟ್ಟು ಮಾಡುವ ಬಗ್ಗೆಯೂ ಯೋಚಿಸುತ್ತಿದೆ.ಇತರ ಕಂಪೆನಿಗಳ ಹೂಡಿಕೆಗೆ ಹಸಿರು ನಿಶಾನೆ ತೋರಿಸುವ ಬಗ್ಗೆಯೂ ಒಲವಿದೆ.ಸರಕಾರಕ್ಕೀಗಾಗಲೇ ಹತ್ತು ಸಾವಿರ ಟ್ಯಾಬ್ಲೆಟ್‌ಗಳನ್ನು ಪೂರೈಸಿದ್ದರೂ,ಅದಿನ್ನೂ ಹಣ ಪಾವತಿಸಿಲ್ಲವೆನ್ನುವುದು ಡೇಟಾವಿಂಡ್ ಅಳಲು.ಮುಂದಿನ ದಿನಗಳಲ್ಲಿ ಸುಮಾರು ಎರಡು ದಶಲಕ್ಷ ಆಕಾಶ್ ಟ್ಯಾಬ್ಲೆಟ್‌ಗಳು ಜನರನ್ನು ಮುಟ್ಟಲಿವೆ.
--------------------------------------------------
ಮೆಗಾ ಅಪ್ಲೋಡ್:ಅಮೆರಿಕಾ ಕೇಸು
ಮೆಗಾ‌ಅಪ್ಲೋಡ್ ಎನ್ನುವ ಅಂತರ್ಜಾಲ ತಾಣವು ಸಾರಾಸಗಟು ಕಾಪಿರೈಟ್ ಕಾಯಿದೆಯನ್ನು ಉಲ್ಲಂಘಿಸುವ ಮೂಲಕ ಚಲನಚಿತ್ರ ನಿರ್ಮಾಪಕರಿಗೆ,ಸರಕಾರಕ್ಕೆ ಮತ್ತು ಸಂಗೀತ ಕಂಪೆನಿಗಳಿಗೆ ನಷ್ಟ ಉಂಟು ಮಾಡುತ್ತಿದೆಯೆಂದು ಆರೋಪಿಸಿ,ತಾಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಮೆರಿಕಾವು  ಉದ್ಯುಕ್ತವಾಗಿದೆ.ಈ ತಾಣದ ನಿರ್ವಾಹಕರುಗಳು ತಮ್ಮ ಬಳಕೆದಾರರು ಮಾಡುವ ಅನ್ಯಾಯಗಳ ಅರಿವಿದ್ದೂ,ಮೌನವಾಗಿದ್ದರೆ ಎಂದು ಎಫ್ ಬಿ ಐ ಆರೋಪಿಸಿದೆ.ಈ ತಾಣವು ಬಳಕೆದಾರರ ನಡುವಣ ಕಡತ ವಿನಿಮಯಕ್ಕೆ ಅನುವು ಮಾಡುವ ತಾಣವಾದರೂ,ಇಲ್ಲಿ ನಿಜವಾಗಿ ನಡೆಯುತ್ತಿರುವುದು,ಇನ್ನೂ ಬಿಡುಗಡೆಯಾಗದ ಅಥವಾ ಹೊಚ್ಚ ಹೊಸ ಚಲನಚಿತ್ರ,ಸೀರಿಯಲ್‌ಗಳು ಮತ್ತು ಸಂಗೀತ ಕಡತಗಳ ವಿನಿಮಯವಾಗಿದೆ.ಈ ಮೂಲಕ ಜನಪ್ರಿಯವಾದ ತಾಣ,ಒಳ್ಳೆಯ ಜಾಹೀರಾತು ಆದಾಯ ಗಳಿಸುತ್ತಿದೆ.ಜರ್ಮನ್,ನ್ಯೂಜಿಲ್ಯಾಂಡ್,ಎಸ್ಟೋನಿಯಾ,ಹಾಂಕಾಂಗ್,ಹಾಲೆಂಡ್ ದೇಶದ ತಂತ್ರಜ್ಞರು ಈ ತಾಣದ ನಿರ್ವಹಣೆಯಲ್ಲಿ ಕೈಜೋಡಿಸಿದ್ದಾರೆ.

------------------------------------------------------------
ಅಶೋಕ್‌ಕುಮಾರ್ ಎ