ರಜನೀಶನ ಹುಡುಗಿಯರು

ರಜನೀಶನ ಹುಡುಗಿಯರು

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ ೨೦೨೪

ಖ್ಯಾತ ಪತ್ರಕರ್ತ, ಲೇಖಕ ದಿ. ರವಿ ಬೆಳಗೆರೆ ಅವರ ನೂರನೇ ಪುಸ್ತಕದ ರೂಪದಲ್ಲಿ ‘ರಜನೀಶನ ಹುಡುಗಿಯರು' ಹೊರಬಂದಿದೆ. ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್ ಅಥವಾ ಓಶೋ ರಜನೀಶ್ ಎಂಬ ವ್ಯಕ್ತಿ ೮೦-೯೦ ರ ದಶಕದಲ್ಲಿ ವಿಶ್ವದಾದ್ಯಂತ ಮಾಡಿದ ಮೋಡಿಗೆ ಸಾಟಿ ಇಲ್ಲ. ರಜನೀಶ್ ಆಶ್ರಮದಲ್ಲಿ ಯಾವುದಕ್ಕೂ ನಿರ್ಭಂಧವಿರಲಿಲ್ಲ. ಹುಡುಗಿಯರು, ಸ್ವಚ್ಛಂದ ಕಾಮ, ಡ್ರಗ್ಸ್, ಹಾಡು, ಸಂಗೀತ, ನೃತ್ಯ ಯಾವುದಕ್ಕೂ ನಿಷೇಧವಿರಲಿಲ್ಲ. ಈ ಕಾರಣದಿಂದ ಬಹುತೇಕ ವಿದೇಶೀಯರೇ ಈ ಆಶ್ರಮದ ವಾಸಿಗಳಾಗಿದ್ದರು. ಎಲ್ಲಾ ವಿದೇಶೀಯರಿಗೆ ಅದರಲ್ಲೂ ಮಹಿಳೆಯರಿಗೆ ಭಾರತೀಯ ಹೆಸರುಗಳನ್ನು ನೀಡಿ ಅವರನ್ನು ತನ್ನ ಅಂತರಂಗದ ಶಿಷ್ಯರನ್ನಾಗಿಸಿಕೊಂಡಿದ್ದರು ರಜನೀಶ್. 

ಈ ಕೃತಿಯಲ್ಲಿ ರಜನೀಶರ ಸಾಮೀಪ್ಯವನ್ನು ಸಂಪಾದಿಸಿದ ನೂರಾರು ಹುಡುಗಿಯರ ಪೈಕಿ ಪ್ರಮುಖವಾದ ಕೆಲವು ಹುಡುಗಿಯರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಈ ಬರಹಗಳು ರವಿ ಬೆಳಗೆರೆಯವರ ಸಾರಥ್ಯದಲ್ಲಿ ಹೊರಬರುತ್ತಿದ್ದ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಮೂಡಿಬರುತ್ತಿತ್ತು. ಮೋಹನ್ ಚಂದ್ರ ರಜನೀಶ್ ಎನ್ನುವ ಓರ್ವ ಮಾಮೂಲಿ ಜೈನ ಸಮುದಾಯದ ಬಟ್ಟೆ ವ್ಯಾಪಾರಿಯ ಮಗ, ಭವಿಷ್ಯದಲ್ಲಿ ೯೩ ರಾಲ್ಸ್ ರಾಯ್ ಕಾರುಗಳ, ಕೋಟ್ಯಾಂತರ ಆಸ್ತಿಯ ಒಡೆಯನಾಗುತ್ತಾನೆ ಎಂದು ಯಾರು ಅಂದುಕೊಂಡಿದ್ದರು? ೧೯೬೪ರಲ್ಲಿ ಭಾರತದ ಉದ್ದಗಲ ತಿರುಗಾಡಿದ ಮೋಹನ್ ಚಂದ್ರ ರಜನೀಶ್ ಸಿಕ್ಕ ಸಿಕ್ಕಲ್ಲಿ ಭಾಷಣ ಮಾಡಿ ಜನರನ್ನು ಆಕರ್ಷಿಸುತ್ತಾನೆ. ‘ತಾನು ಜೈಪುರ ಯೂನಿವರ್ಸಿಟಿಯ ಮಹಾಕೋಶಲ ಆರ್ಟ್ಸ್ ಕಾಲೇಜಿನಲ್ಲಿ ಪ್ರೊಫೆಸರಾಗಿದ್ದೆ’ ಎಂದು ಹೇಳಿಕೊಂಡರೂ ಆತನನ್ನು ನಂಬುವವರು ಯಾರೂ ಇರಲಿಲ್ಲ. ರಜನೀಶ್ ಉತ್ತಮ ವಾಗ್ಮಿ, ಉತ್ತಮ ಓದುಗ. ಆ ಕಾಲದಲ್ಲಿ ಸಮಾಜವಾದಿಯಾಗಿದ್ದ ರಜನೀಶ್ ಸಿಕ್ಕ ಸಿಕ್ಕ ರೈಲು ಹತ್ತಿಕೊಂಡು ಹೋಗಿ ಭಾರತದ ನಾನಾ ಭಾಗಗಳಲ್ಲಿ ಭಾಷಣ ಮಾಡುತ್ತಿದ್ದ. ಅಂತಹ ಒಂದು ಭಾಷಣ ಕೇಳಿದವಳೇ ಲಕ್ಷ್ಮಿ ತಕಾರ್ಸಿ ಕುರುವ ಎನ್ನುವ ಐ ಎ ಎಸ್ ಅಧಿಕಾರಿಗೆ ರಜನೀಶ್ ಮೇಲೆ ಮೊದಲ ನೋಟದಲ್ಲೇ ಪ್ರೇಮಭಾವ ಉಂಟಾಗುತ್ತದೆ. ಸಾವಿರಗಟ್ಟಲೆ ಸಂಬಳ ತರುತ್ತಿದ್ದ ಉದ್ಯೋಗವನ್ನು ತ್ಯಜಿಸಿ ರಜನೀಶರ ಹಿಂದೆ ಸುತ್ತಿದ ಲಕ್ಷ್ಮಿಯೇ ಆತನ ಶ್ರೀಮಂತಿಕೆಗೂ ಕಾರಣಳು ಎನ್ನುವ ಮಾತಿದೆ. 

ಆಚಾರ್ಯ ರಜನೀಶನ ಸಮೀಪದ ಬಂಧು ಕ್ರಾಂತಿಯೂ ಆತನ ಸಮೀಪವರ್ತಿ. ಈ ಕೃತಿಯಲ್ಲಿನ ವಿವರಗಳು ಎಲ್ಲವನ್ನೂ ವಿದೇಶೀ ಶಿಷ್ಯ ಸ್ವಾಮಿ ಶಿವಮೂರ್ತಿ (ಶಿವದಾಸ್) ಅವರೇ ಹೇಳಿಕೊಂಡಂತೆ ಚಿತ್ರಿಸಲಾಗಿದೆ. ಅವರಿಗೆ ರಜನೀಶರ ಸಾಮೀಪ್ಯ ದೊರೆತದ್ದಾದರೂ ಹೇಗೆ ? ವೀಣಾ ಎನ್ನುವ ಮಹಿಳೆಯಿಂದ. ಆಕೆ ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದಳು. ರಜನೀಶ್ ಆಕೆಗೆ ವೀಣಾ ಎಂದು ನಾಮಕರಣ ಮಾಡಿದ್ದರು. ವೀಣಾ ಜೊತೆಗಿನ ಒಡನಾಟ ಶಿವಮೂರ್ತಿಯವರನ್ನು ರಜನೀಶರ ಸಾಮೀಪ್ಯಕ್ಕೆ ತಂದಿತು. ಬಾಂಬೆಯ (ಇಂದಿನ ಮುಂಬೈ) ಪುಟ್ಟದೊಂದು ಫ್ಲಾಟ್ ನಲ್ಲಿ ತಂತ್ರ ಕಲಿಸುತ್ತಿದ್ದ ರಜನೀಶ್ ಕ್ರಮೇಣ ಕೋಟ್ಯಾಂತರ ಆಸ್ತಿಯ ಒಡೆಯನಾಗುತ್ತಾರೆ. 

ಶಿವಮೂರ್ತಿ ಹೇಳುವಂತೆ “ರಜನೀಶನ ಆಶ್ರಮವೊಂದು ಸುಖದ ಜಾತ್ರೆ. ಅದು ಸಂಭೋಗದ ಸಂತೆ. ವಿಚಿತ್ರ, ವಿಲಕ್ಷಣ ಪ್ರಯೋಗಗಳಾಗುತ್ತಿದ್ದವು. ಖುದ್ದು ರಜನೀಶ್ ಪ್ರಯೋಗಗಳನ್ನು ಹೇಳಿಕೊಡುತ್ತಿದ್ದ. ಸಮೂಹ ನೃತ್ಯ, ಸಮೂಹ ಭೋಗ, ಸಮೂಹ ಗಾಯನ, ಸಮೃದ್ಧ ನಗೆ ! ಒಮ್ಮೊಮ್ಮೆ ಲೈಂಗಿಕ ಪ್ರಯೋಗಗಳು ವಿಪರೀತಕ್ಕೆ ಹೋಗಿ ಬಿಡುತ್ತಿದ್ದವು. ಆಶ್ರಮದ ತುಂಬಾ ರಕ್ತ. ಚೀತ್ಕಾರಗಳಿಗೆ ಊರೆಂಬ ಊರೇ ಎದ್ದು ಕೂಡುತ್ತಿತ್ತು. ಪುಣೆಯ ಆಶ್ರಮ ಕೆಲವೊಮ್ಮೆ ಭಯಾನಕ ಸನ್ನಿವೇಶ ಸೃಷ್ಟಿಸಿ ಬಿಡುತ್ತಿತ್ತು. ಆದರೆ ಯಾರೂ ದೂರುತ್ತಿರಲಿಲ್ಲ. ಮೆಟ್ಟಿಲು ಜಾರಿ ಕೈ ಮುರಿಯಿತು ಅನ್ನುತ್ತಿದ್ದರು. ಗಾಯ ಮಾಯುವ ತನಕ ಕೋಣೆಯಿಂದ ಈಚೆಗೇ ಬರುತ್ತಿರಲಿಲ್ಲ. ಪೋಲೀಸರು ಯಾವ ಕಾರಣಕ್ಕೂ ಆಶ್ರಮದೊಳಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ರಜನೀಶರ ಶಿಷ್ಯ ಸಮೂಹ ಒಂದು ಬೃಹತ್ ಕುಟುಂಬದಂತಿತ್ತು. ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆಚಾರ್ಯನೆಡೆಗೆ ಎಲ್ಲರಲ್ಲೂ ಅದಮ್ಯ ಪ್ರೇಮವಿತ್ತು. ಯಾರೂ ಕೋರ್ಟಿಗೆ ಹೋಗಲಿಲ್ಲ. ಪೋಲೀಸರಿಗೆ ದೂರು ಕೊಡಲಿಲ್ಲ. ನಮಗೆ ವಿವೇಕ ಕರುಣಿಸುತ್ತಿದ್ದ, ನಾವು ಸ್ವಾತಂತ್ರ್ಯ ಶಾಲೆಯ ಪದವಿ ಪಡೆದವರಂತಿದ್ದೆವು. ರಜನೀಶ್ ನಮ್ಮನ್ನು ಹೊಸದೊಂದು ಸ್ವರ್ಗದತ್ತ ಕರೆದೊಯ್ಯುವ ಕಿಂದರಿಜೋಗಿಯಂತಿದ್ದ. ಆತನ ಹುಡುಗಿಯರು ದೇವರ ಸುತ್ತಲಿನ ಅಪ್ಸರೆಯರಾಗಿದ್ದರು. 

ಅಂಥ ರಜನೀಶನ ಆಶ್ರಮಕ್ಕೆ ನಾನು ಇಂಗ್ಲೆಂಡಿನಲ್ಲಿದ್ದ ನನ್ನ ಸರ್ವಸ್ವವನ್ನೂ ತ್ಯಜಿಸಿ ಹೊರಟುಹೋದೆ. ಹದಿಮೂರು ವರುಷ ಹಿಂದಿರುಗಿ ನೋಡಲಿಲ್ಲ. ಇವತ್ತು ನೋಡಿದರೆ ಏನಿದೆ? ಸೆಕ್ಸು, ರಕ್ತ, ಮತ್ಸರ, ಹತ್ಯೆ, ಡ್ರಗ್, ವಂಚನೆ, ವಿನಾಶ.. ನನ್ನ ಕತೆ ದೊಡ್ಡದಿದೆ". ಇದು ರಜನೀಶನ ನಂಬಿ ಬಂದ ಭಕ್ತನೊಬ್ಬನ ಕನವರಿಕೆ. ಇಂತಹ ಹಲವಾರು ಭಕ್ತರು ಈ ಕೃತಿಯಲ್ಲಿ ನಿಮಗೆ ಪರಿಚಯವಾಗುತ್ತಾ ಹೋಗುತ್ತಾರೆ. ಮಾ ಶೀಲಾ, ಮಾ ಮನೀಷಾ, ಮಾ ವಿವೇಕಾ, ಮಾ ವೀಣಾ, ಮಾ ಆನಂದೋ, ಮಾ ಯೋಗ ಪ್ರೇಮ, ಮಾ ಜ್ಯೋತಿ, ಪ್ರತಿಮಾ, ದಿವ್ಯಾ ಹೀಗೆ ಅಸಂಖ್ಯಾತ ರಜನೀಶರ ಶಿಷ್ಯೆಯರು ಈ ಕೃತಿಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ. ಪುಸ್ತಕವನ್ನು ಓದುವಾಗ ಕೆಲವೆಡೆ ನಿರಂತರತೆ ದೊರೆಯುವುದಿಲ್ಲ. ಅಲ್ಲಲ್ಲಿ ತುಂಡರಿಸಿದ ಕಥಾನಕವಂತೆ ಭಾಸವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ರವಿ ಬೆಳಗೆರೆ ಅವರ ಅಕಾಲ ನಿಧನ ಇರಬಹುದು. ಈ ಕೃತಿ ಅವರ ನಿಧನಾ ನಂತರ ಹೊರ ಬರುತ್ತಿರುವುದರಿಂದ ಇದೊಂದು ಸಂಪೂರ್ಣ ಕಥಾನಕ ಎಂದು ಹೇಳಲು ಸಾಧ್ಯವಾಗದು ಎಂದು ಅನಿಸಿಬಿಡುತ್ತದೆ. 

ಆದರೂ ಈ ಕೃತಿ ಆಚಾರ್ಯ ರಜನೀಶರ ವಿಲಕ್ಷಣ ವ್ಯಕ್ತಿತ್ವದ ಒಂದು ಹಂತದ ಪರಿಚಯ ಮಾಡಿಬಿಡುತ್ತದೆ. ಯಾರು ಏನೇ ಅಂದರೂ ರಜನೀಶರಿಗೆ ಒಂದು ಭಯಾನಕ ಶಕ್ತಿ ಇತ್ತು. ಅವರು ನೂರಾರು ಪುಟದ ಪುಸ್ತಕಗಳನ್ನು ಕೆಲವೇ ಗಂಟೆಗಳಲ್ಲಿ ಓದಿ ಮುಗಿಸುತ್ತಿದ್ದರು. ಇವರು ಓರ್ವ ಉತ್ತಮ ಓದುಗ. ದಿನಾಲೂ ಓದದೇ ಮಲಗುತ್ತಿರಲಿಲ್ಲ. ಉತ್ತಮ ಗ್ರಂಥಾಲಯವನ್ನು ಹೊಂದಿದ್ದರು. ಪುಸ್ತಕ ತೆರೆದು ಪುಟ ನೋಡಿದರೆ ಸಾಕು, ವಿಷಯವೆಲ್ಲ ಅವರಲ್ಲಿ ದಾಖಲಾಗಿ ಬಿಡುತ್ತಿತ್ತು. ದಿನಕ್ಕೆ ಹದಿನೈದು ಪುಸ್ತಕ ಓದಿ ಇಳಿಸಂಜೆ ಪ್ರವಚನಕ್ಕೆಂದು ಹೊರಬೀಳುತ್ತಿದ್ದ ಆಚಾರ್ಯ ರಜನೀಶರ ಕಣ್ಣುಗಳು ತೇಜಸ್ಸಿನಿಂದ ಹೊಳೆಯುತ್ತಿದ್ದವು. ಅವರಿಗೆ ಮಾತನಾಡುವ ಕಲೆ ಸಿದ್ದಿಸಿತ್ತು. ಎಷ್ಟೇ ಮಾತನಾಡಿದರೂ ವಿಚಾರಗಳು ಪುನರಾವರ್ತನೆಯಾಗುತ್ತಿರಲಿಲ್ಲ. ಒಮ್ಮೆ ಓದಿದ ಪುಸ್ತಕವನ್ನು ಮತ್ತೆ ಓದುತ್ತಿರಲಿಲ್ಲ. 

ನಿಮಗೆ ಗೊತ್ತೇ ಇಂತಹ ಪ್ರಭಾವಶಾಲಿ ವ್ಯಕ್ತಿ ರಜನೀಶರೂ ಒಮ್ಮೆ ವಿದೇಶದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಹಿಂದಿ ಚಿತ್ರರಂಗದ ಖ್ಯಾತ ನಟ ದಿ. ವಿನೋದ್ ಖನ್ನಾ ರಜನೀಶರ ಶಿಷ್ಯರಾಗಿದ್ದರು. ಈ ರೀತಿಯ ಹಲವಾರು ಆಸಕ್ತಿದಾಯಕ ಮಾಹಿತಿಗಳು ಈ ಕೃತಿಯಲ್ಲಿವೆ. ಲೇಖನಗಳಿಗೆ ಪೂರಕವಾದ ಫೋಟೋಗಳಿವೆ. ಸುಮಾರು ೮೦ ಪುಟಗಳ ಈ ಪುಸ್ತಕವನ್ನು ಪ್ರಕಾಶಕಿಯಾದ ಭಾವನಾ ಬೆಳಗೆರೆ ಅವರು ಕವಿ ಯೋಗರಾಜ್ ಭಟ್ ಅವರಿಗೆ ಅರ್ಪಿಸಿದ್ದಾರೆ. ರಜನೀಶರ ಬಗ್ಗೆ ತಿಳಿದವರೂ, ತಿಳಿಯದವರೂ ಒಮ್ಮೆ ಓದಿ ನೋಡಬೇಕಾದ ಕೃತಿ ಇದು.