ರಜಾಕಾಲದ ಚಟುವಟಿಕೆ 1: ಬೀಜಗಳಿಂದ ಚಿತ್ರಾಕೃತಿಗಳ ರಚನೆ



ಶಾಲೆಕಾಲೇಜುಗಳ ಪಾಠಪರೀಕ್ಷೆಗಳು ಮುಗಿದು ಬೇಸಗೆ ರಜೆ ಆರಂಭವಾಗುತ್ತಿದ್ದಂತೆ ಹಲವರಿಗೆ "ರಜೆಯಲ್ಲಿ ಏನು ಮಾಡುವುದು?" ಎಂಬ ಚಿಂತೆ. ಪ್ರವಾಸ ಹೋಗುವುದು; ಜಾತ್ರೆಗಳಲ್ಲಿ ತಿರುಗಾಡುವುದು; ಬಂಧುಗಳ ಮನೆಗೆ ಹೋಗುವುದು; ಓದುವುದು; ಬರೆಯುವುದು; ಸಂಗೀತ, ಚಿತ್ರಕಲೆ, ನೃತ್ಯ, ಈಜು, ಸಂಗೀತ ಸಾಧನಗಳನ್ನು ನುಡಿಸುವುದು; ಈಜು - ಇವನ್ನು ಕಲಿಯುವುದು ರಜಾಕಾಲಕ್ಕೆ ಸೂಕ್ತವಾದ ಕೆಲವು ಚಟುವಟಿಕೆಗಳು.
ಇವಲ್ಲದೆ ಸರಳವಾದ ಚೇತೋಹಾರಿಯಾದ ಹತ್ತಾರು ಇತರ ಚಟುವಟಿಕೆಗಳೂ ಇವೆ. ಅಂತಹ ಕೆಲವು ಚಟುವಟಿಕೆಗಳ ಬಗ್ಗೆ ತಿಳಿಯೋಣ.
ಬೀಜಗಳಿಂದ ಚಿತ್ರಾಕೃತಿಗಳ ರಚನೆ
ಅಗತ್ಯವಾದ ವಸ್ತುಗಳು: ವಿವಿಧ ಬೀಜಗಳು; ಅಂಟು; ದಪ್ಪ ಕಾಗದ. ವಸಂತ ಕಾಲದಲ್ಲಿ ವಿವಿಧ ಸಸ್ಯಗಳ ಕಾಯಿ/ ಕೋಡು ಒಣಗಿದಾಗ ಅವುಗಳ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.
ವಿಧಾನ: ಬೀಜಗಳನ್ನು 3 - 5 ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಕೊಳ್ಳಬೇಕು.
ಅನಂತರ, ಕಾಗದದಲ್ಲಿ ನಮಗೆ ಇಷ್ಟವಾದ ಆಕೃತಿಗಳ ರೇಖಾಚಿತ್ರ ಬಿಡಿಸಬೇಕು.
ಆ ರೇಖಾಚಿತ್ರಗಳನ್ನು ಸೂಕ್ತವಾದ ಅಳತೆಯ ಮತ್ತು ಬಣ್ಣಬಣ್ಣದ ಬೀಜಗಳಿಗೆ ಅಂಟು ಹಾಕಿ ಕಲಾತ್ಮಕವಾಗಿ ತುಂಬಬೇಕು.
ಹೀಗೆ ರಚಿಸಿದ ಕೆಲವು ಕಲಾಕೃತಿಗಳು ಇಲ್ಲಿವೆ: ಎರಡು ಹೂಗಳು; ಉದ್ದದ ಹುಳ ಮತ್ತು ಮೀನು. ಇಂತಹ ಸೃಜನಾತ್ಮಕ ಬೀಜದ ಕಲಾಕೃತಿಗಳನ್ನು ಯಾರೂ ರಚಿಸಬಹುದು. ಅವನ್ನು ಹೀಗೆ ಚೌಕಟ್ಟು ಹಾಕಿಟ್ಟರೆ, ಹಲವು ವರುಷ ಅವು ಉಳಿಯುತ್ತವೆ;
ಅವುಗಳನ್ನು ಸೃಷ್ಟಿಸಿದ ನೆನಪುಗಳು ಯಾವತ್ತೂ ಚೇತೋಹಾರಿ, ಅಲ್ಲವೇ?
ಫೋಟೋಗಳು: ಬೀಜಗಳಿಂದ ರಚಿಸಿದ ಹೂಗಳು; ಹುಳ ಮತ್ತು ಮೀನು … ಕಲಾಕಾರರು: ಸಮನ ಮತ್ತು ಸುಮ