ರಜಾಕಾಲದ ಚಟುವಟಿಕೆ 3: ಸ್ಟೆನ್ಸಿಲ್‌ಗಳನ್ನು ಬಳಸಿ ಚಿತ್ರ ರಚನೆ

ರಜಾಕಾಲದ ಚಟುವಟಿಕೆ 3: ಸ್ಟೆನ್ಸಿಲ್‌ಗಳನ್ನು ಬಳಸಿ ಚಿತ್ರ ರಚನೆ

ಈಗಾಗಲೇ ಬೀಜಗಳಿಂದ ಚಿತ್ರಾಕೃತಿಗಳ ರಚನೆ ಮತ್ತು ಮಂಡಲಗಳಿಗೆ ಬಣ್ಣ ತುಂಬುವ ಬಗ್ಗೆ ತಿಳಿದುಕೊಂಡಿದ್ದೇವೆ. ರಜಾಕಾಲದ ಮತ್ತೊಂದು ಚಟುವಟಿಕೆ ಬಗ್ಗೆ ಈಗ ತಿಳಿಯೋಣ.
 
ಸ್ಟೆನ್ಸಿಲ್‌ಗಳನ್ನು ಬಳಸಿ ಚಿತ್ರ ರಚನೆ
ಬಹಳ ಸುಲಭವಾದ ಚಟುವಟಿಕೆ ಇದು: ಚಿತ್ರರಚನೆ ಕಲಿಯದೇ ಸ್ಟೆನ್ಸಿಲ್‌ಗಳ ಸಹಾಯದಿಂದ ಚಿತ್ರ ಮೂಡಿಸುವ ಚಟುವಟಿಕೆ. ಇದಕ್ಕೆ ವಿವಿಧ ವಿನ್ಯಾಸಗಳ ಮತ್ತು ಪಕ್ಷಿ/ ಪ್ರಾಣಿಗಳ ಆಕಾರದ ಸ್ಟೆನ್ಸಿಲ್‌ಗಳು ಅಗತ್ಯ. ಸ್ಟೇಷನರಿ ಮಳಿಗೆಗಳಲ್ಲಿ ಇವು ಸಿಗುತ್ತವೆ.

ಉದಾಹರಣೆ 1: “ನೃತ್ಯಗಾರರು" ಎಂಬ ವರ್ಲಿ ಚಿತ್ರಕಲೆಯ ವಿನ್ಯಾಸ. ಅಳತೆ: 10 ಸೆಮೀ ೱ 10 ಸೆ.ಮೀ ಪ್ಲಾಸ್ಟಿಕ್ ತುಂಡು. ಇದರ ಮೇಲ್ಬದಿ ಎಡ ಮೂಲೆಯಲ್ಲಿ ಅರೆ-ಸೂರ್ಯನ ಚಿತ್ರ; ಅದಕ್ಕೆ ವಿರುದ್ಧವಾಗಿ ಕಂಸಾಕಾರದ ಮೂರು ಸಾಲುಗಳಲ್ಲಿ ನೃತ್ಯಗಾರರ ವಿನ್ಯಾಸಗಳು. ಇದರ ಕ್ರಮಸಂಖ್ಯೆ: ಎಲ್‌ಬಿಎಸ್‌ಸಿ 54330. ಬೆಲೆ: ರೂ.129/- (ಫೋಟೋ 1 ನೋಡಿ. ಇದರಲ್ಲಿ ಕಪ್ಪಾಗಿ ಕಾಣಿಸುವುದೆಲ್ಲ ಟೊಳ್ಳು ಭಾಗಗಳು)

ಲಿಟಲ್ ಬರ್ಡಿ ಬ್ರ್ಯಾಂಡಿನ ಇಂತಹ ಹಲವಾರು ವಿನ್ಯಾಸಗಳು ಲಭ್ಯ. ಇದನ್ನು ಮಾರಾಟ ಮಾಡುವ ಕಂಪೆನಿ: ಎಇಸಿ ಆಫ್- ಶೋರ್ ಟ್ರೇಡಿಂಗ್ ಪ್ರೈ.ಲಿ. ಅಂಚೆ ಪೆಟ್ಟಿಗೆ ಸಂಖ್ಯೆ: 11101 ಫೋನ್: 080-42124379

ವಿಧಾನ: ಈ ಸ್ಟೆನ್ಸಿಲನ್ನು ಬಟ್ಟೆ, ಗಾಜು, ರಟ್ಟು, ಚೀಲ ಅಥವಾ ಗೋಡೆಯಲ್ಲಿಟ್ಟು, ಸ್ಟೆನ್ಸಿಲಿನ ಟೊಳ್ಳು ಜಾಗದಲ್ಲಿ ಸೂಕ್ತ ಬಣ್ಣ ಅಥವಾ ಪೈಂಟ್ ತುಂಬಬೇಕು. ಒಂದು ವಿನ್ಯಾಸದ ಅಕ್ಕಪಕ್ಕದಲ್ಲಿ ಅಥವಾ ಹತ್ತಿರ ಅದೇ ಮೇಲ್ಮೈಯಲ್ಲಿ ಪುನಃ ಇದೇ ರೀತಿ ವಿನ್ಯಾಸ ಮೂಡಿಸಬಹುದು. ಒಂದೇ ಮೇಲ್ಮೈಯಲ್ಲಿ (ಬಟ್ಟೆ, ಗಾಜು, ರಟ್ಟು ಇತ್ಯಾದಿ) ಬೇರೆಬೇರೆ ವಿನ್ಯಾಸದ ಸ್ಟೆನ್ಸಿಲ್ ಬಳಸಿ ಹಲವು ಚಿತ್ರ ಮೂಡಿಸಬಹುದು. ಅನಂತರ ಸ್ಟೆನ್ಸಿಲನ್ನು ಮೇಲೆತ್ತಿ, ಸಾಬೂನು ಹಾಗೂ ನೀರಿನಿಂದ ತೊಳೆಯಬೇಕು.
 
ಉದಾಹರಣೆ 2: "ಫನ್ ವಿದ್ ಬರ್ಡ್ಸ್” ಹೆಸರಿನ ಪುಟ್ಟ ಸ್ಟೆನ್ಸಿಲ್ ಪುಸ್ತಕ (ಫೋಟೋ 2). ಇದರಲ್ಲಿ ಆರು ಹಕ್ಕಿಗಳ ಸ್ಟೆನ್ಸಿಲ್‌ಗಳಿವೆ: ಸ್ವಾಲೋ, ಬಾತುಕೋಳಿ, ಟೌಕನ್, ಸೀಗಲ್, ಹಾಡುಹಕ್ಕಿ (ಸಾಂಗ್ ಬರ್ಡ್), ರಾಜಗಿಡುಗ.
(ಫೋಟೋ 3: ಬಾತುಕೋಳಿಯ ಸ್ಟೆನ್ಸಿಲ್. ಫೋಟೋ 4: ಹಾಡುಹಕ್ಕಿಯ ಸ್ಟೆನ್ಸಿಲ್ - ಬಿಳಿಯಾಗಿ ಕಾಣಿಸುವ ಭಾಗ ಟೊಳ್ಳು)

ಈ ಪುಸ್ತಕ ರಚಿಸಿದವರು ಪಾವುಲ್ ಇ. ಕೆನ್ನೆಡಿ. ಪ್ರಕಾಶಕರು: ಡೋವರ್ ಪಬ್ಲಿಕೇಷನ್ಸ್, ನ್ಯೂಯಾರ್ಕ್. ಬೆಲೆ: ಒಂದು ಡಾಲರ್.
ಪುಸ್ತಕದ ಸಂಖ್ಯೆ: ಐಎಸ್‌ಬಿಎನ್ 0-486-26606-0

ವಿಧಾನ: ಇದರ ಆರು ಪುಟಗಳಲ್ಲಿ ಆರು ಹಕ್ಕಿಗಳ ಆಕೃತಿಗಳನ್ನು ಕತ್ತರಿಸಿ ತೆಗೆಯಲಾಗಿದೆ. ಕಾಗದ ಅಥವಾ ರಟ್ಟಿನಲ್ಲಿ ಬಾತುಕೋಳಿಯ ಪುಟ ಇಟ್ಟು, ಆ ಪುಟದ ಟೊಳ್ಳಾದ ಜಾಗದಲ್ಲಿ ತಿಳಿಗಂದು ಬಣ್ಣ ತುಂಬಬೇಕು. ಅನಂತರ ಆ ಪುಟವನ್ನು ಮೇಲೆತ್ತಿದಾಗ, ಕೆಳಗಿನ ಕಾಗದ ಅಥವಾ ರಟ್ಟಿನಲ್ಲಿ ಬಾತುಕೋಳಿಯ ಚಂದದ ಆಕೃತಿ ಮೂಡಿರುತ್ತದೆ. ಹೀಗೆ ಆರು ಕಾಗದ ಹಾಳೆಗಳಲ್ಲಿ ಆರು ಹಕ್ಕಿಗಳ ಆಕೃತಿ ರಚಿಸಿ, ಅವನ್ನು ಪುಟ್ಟ ಪುಸ್ತಕವಾಗಿ ಜೋಡಿಸಿ, ಮಕ್ಕಳಿಗೆ ಉಡುಗೊರೆಯಾಗಿ ನೀಡಬಹುದು. ಅಥವಾ, ಪ್ರತಿಯೊಂದು ಹಕ್ಕಿಯ ಚಿತ್ರದ ಪುಟದ ಖಾಲಿ ಜಾಗದಲ್ಲಿ, ಚೇತೋಹಾರಿಯಾದ ಸೂಕ್ತಿ ಬರೆದು, “ಶುಭಾಶಯ ಕಾರ್ಡು"ಗಳನ್ನು ರಚಿಸಬಹುದು. ಅಥವಾ, ಬಿಳಿ ಕಾಗದದಲ್ಲಿರುವ ಹಕ್ಕಿಯ ಚಿತ್ರವನ್ನು ಕತ್ತರಿಸಿ, ಅದನ್ನು ರಟ್ಟಿಗೆ ಅಂಟಿಸಿ, ರಟ್ಟಿನ ತುಂಡಿನ ನಾಲ್ಕು ಅಂಚುಗಳಲ್ಲಿ ಸುಂದರ ವಿನ್ಯಾಸ ಬರೆದು, ಮೇಲ್ಭಾಗದಲ್ಲಿ ನೂಲು ತೂರಿಸಿ, ಫಲಕಗಳನ್ನು ರಚಿಸಬಹುದು. ಇದು ರಜಾಕಾಲದಲ್ಲಿ ನಮಗೂ ಇತರರಿಗೂ ಖುಷಿ ನೀಡುವ ಚಟುವಟಿಕೆ ಅಲ್ಲವೇ?