ರಜಾಕಾಲದ ಚಟುವಟಿಕೆ 4: ಒರಿಗಾಮಿ - ಕಾಗದ ಮಡಚಿ ಕಲಾಕೃತಿ ರಚಿಸುವ ಜಪಾನಿ ಕಲೆ
ಜಗತ್ತಿನಲ್ಲೆಲ್ಲ ಜನಜನಿತವಾದ ಜಪಾನಿನ ಕಲೆ: ಒರಿಗಾಮಿ. ಇದು ಕಾಗದದ ಹಾಳೆ ಮಡಚಿ ವಿವಿಧ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ವಾಹನ ಅಥವಾ ವ್ಯಕ್ತಿಗಳ ಪ್ರತಿಕೃತಿ ರಚಿಸುವ ಅದ್ಭುತ ಕಲೆ. ಜಪಾನಿ ಭಾಷೆಯಲ್ಲಿ ಒರಿಗಾಮಿ ಅಂದರೆ ಕಾಗದ ಮಡಚುವುದು
ಇದರ ಬಗ್ಗೆ ನೂರಾರು ಪುಸ್ತಕಗಳು ಪುಸ್ತಕ ಮಳಿಗೆಗಳಲ್ಲಿ ಲಭ್ಯ. ಕನ್ನಡದಲ್ಲಿಯೂ ಒರಿಗಾಮಿ ಪುಸ್ತಕಗಳಿವೆ. ಕನ್ನಡದ ವಾರಪತ್ರಿಕೆ “ತರಂಗ"ದಲ್ಲಿ ಒರಿಗಾಮಿ ಲೇಖನ ಸರಣಿ ಪ್ರಕಟವಾಗಿತ್ತು. ಹಲವು ಸಂಸ್ಥೆಗಳು ಒರಿಗಾಮಿ ತರಬೇತಿ ನೀಡುತ್ತವೆ ಹಾಗೂ ಒರಿಗಾಮಿ ಕಲಾಕೃತಿ ರಚಿಸುವ ಸ್ಪರ್ಧೆಗಳನ್ನು ನಡೆಸುತ್ತವೆ.
"ಒರಿಗಾಮಿ ಪೇಪರ್ ಫೋಲ್ಡಿಂಗ್” ಎಂಬುದು ಐದು ಪುಸ್ತಕಗಳ ಸಂಪುಟ. (ಫೋಟೋ 1: ಮೊದಲ ಪುಸ್ತಕದ ಮುಖಪುಟ) ಪ್ರಕಾಶಕರು: ಮನೋಜ್ ಪಬ್ಲಿಕೇಷನ್ಸ್, 761, ಮುಖ್ಯ ರಸ್ತೆ, ಬುರಾರಿ, ಡೆಲ್ಲಿ 110084. ಇದರ ಕ್ರಮಸಂಖ್ಯೆ: ಐಎಸ್‌ಬಿಎನ್ 978-81-310-2390-7.
ಪ್ರತಿಯೊಂದು ಸಂಪುಟದಲ್ಲಿ 26ರಿಂದ 28 ಕಲಾಕೃತಿಗಳನ್ನು (ಸಂಪುಟ 5ರಲ್ಲಿ 22) ರಚಿಸಲಿಕ್ಕಾಗಿ ಕಾಗದದ ಹಾಳೆಯನ್ನು ಹೇಗೆ ಮಡಚಬೇಕೆಂದು ಫೋಟೋಗಳ ಮೂಲಕ ನಿರ್ದೇಶನ ನೀಡಲಾಗಿದೆ. ಉದಾಹರಣೆಗೆ ಮೊದಲ ಪುಸ್ತಕದಲ್ಲಿ: ಕಾಗದವನ್ನು ನಾಲ್ಕು ಸಲ ಮಡಚಿ “ಜೋಕರ್" ಕಲಾಕೃತಿ ರಚಿಸುವ ವಿಧಾನವನ್ನು ತೋರಿಸಲಾಗಿದೆ (ಫೋಟೋ 3). ಹಾಗೆಯೇ ಕಾಗದವನ್ನು ಐದು ಸಲ ಮಡಚಿ ನಾಯಿಯ ಕಲಾಕೃತಿ; ಕಾಗದವನ್ನು ಆರು ಸಲ ಮಡಚಿ ಹಾಯಿದೋಣಿಯ ಕಲಾಕೃತಿ; ಕಾಗದವನ್ನು ಏಳು ಸಲ ಮಡಚಿ ಮೀನಿನ ಕಲಾಕೃತಿ ರಚಿಸುವ ವಿಧಾನಗಳೂ ಇದರಲ್ಲಿವೆ.
ಇವಲ್ಲದೆ, ಫ್ಯಾನ್, ಷರಟು, ಟೈ, ಮರ, ಬಾತುಕೋಳಿ, ಸೀಟಿ, ಗುಡಿಸಲು, ಕೋಗಿಲೆ, ವಿಮಾನ, ಹಕ್ಕಿ, ಟೊಪ್ಪಿ ಇತ್ಯಾದಿಗಳನ್ನೂ ಕಾಗದದ ಹಾಳೆ ಮಡಚಿ ರಚಿಸುವ ವಿಧಾನಗಳನ್ನೂ ಒಂದನೆಯ ಸಂಪುಟದಲ್ಲಿ ತೋರಿಸಲಾಗಿದೆ. ಕೆಲವು ಕಲಾಕೃತಿಗಳ ರಚನೆಗೆ ಕಾಗದವನ್ನು ಹೆಚ್ಚು ಸಲ ಮಡಚಬೇಕಾಗುತ್ತದೆ. ಉದಾಹರಣೆಗೆ: ನೀಲಿ ಹಕ್ಕಿ, ಹಸುರು ಗಿಳಿ, ಹಾವು, ಹಂಸ, ಕಾರಂಜಿ ಮತ್ತು ಚಿಟ್ಟೆ ಕಲಾಕೃತಿ ರಚಿಸಲಿಕ್ಕಾಗಿ ಎಂಟು ಸಲ; ತಾವರೆಯ ಕಲಾಕೃತಿ ರಚನೆಗೆ 9 ಸಲ; ಖಡ್ಗಮೃಗ ಮತ್ತು ನೀರುಕುದುರೆ ರಚನೆಗಾಗಿ 10 ಸಲ; ಹಾರುಕಪ್ಪೆ ಮತ್ತು ಆಮೆ ರಚನೆಗಾಗಿ 12 ಸಲ ಕಾಗದ ಮಡಚುವುದು ಅವಶ್ಯ. ಅಂಚೆ ಕವರಿನಂತಹ ಕವರ್ ರಚಿಸಲಿಕ್ಕಾಗಿ ಮಾಡಬೇಕಾದ ಮಡಚುವಿಕೆಯ ಸಂಖ್ಯೆ 17.
ಒರಿಗಾಮಿಯನ್ನು ಜನಪ್ರಿಯಗೊಳಿಸಲು ಹಲವು ಜಪಾನೀಯರೂ ಇತರರೂ ಶ್ರಮಿಸಿದ್ದಾರೆ. ಜಪಾನಿನ ಟೋಕಿಯೋದಲ್ಲಿರುವ ನಿಪ್ಪೋನ್ ಒರಿಗಾಮಿ ಅಸೋಸಿಯೇಷನ್ ಮತ್ತು ಜಪಾನ್ ಒರಿಗಾಮಿ ಅಕಾಡೆಮಿಕ್ ಸೊಸೈಟಿ - ಈ ಸಂಘಟನೆಗಳ ಮುತುವರ್ಜಿ ಉಲ್ಲೇಖಾರ್ಹ. ಬ್ರಿಟಿಷ್ ಒರಿಗಾಮಿ ಸೊಸೈಟಿಯ ಸ್ಥಾಪಕ ಅಧ್ಯಕ್ಷ ದಿ. ರೊಬರ್ಟ್ ಹಾರ್-ಬಿನ್ ಬರೆದ “ಟೀಚ್ ಯುವರ್-ಸೆಲ್ಫ್ - ಒರಿಗಾಮಿ" ಎಂಬ 400 ಚಿತ್ರಗಳಿರುವ ಪುಸ್ತಕ ಹಲವು ಮರುಮುದ್ರಣಗಳನ್ನು ಕಂಡಿರುವ ಕೈಪಿಡಿ. ಇದರ ಕ್ರಮಸಂಖ್ಯೆ ಐಎಸ್‌ಬಿಎನ್ 978-0-340-86008-3. ಬೆಲೆ ರೂ.150/-
ಒರಿಗಾಮಿಯನ್ನು ವಯಸ್ಕರೂ ಮಕ್ಕಳೂ ಕಲಿಯಬಹುದು. ವಯಸ್ಕರು ಕಲಿತು ಮಕ್ಕಳಿಗೆ ಕಲಿಸುವುದು ಉಲ್ಲಾಸದ ಚಟುವಟಿಕೆ. ಇದನ್ನು ಕಲಿತ ಮಕ್ಕಳಿಂದ ವಯಸ್ಕರು ಕಲಿಯುವುದು ಆನಂದದ ಅನುಭವ. ಮುಂದಿನ ಹಂತದಲ್ಲಿ, ಪುಸ್ತಕದ ನಿರ್ದೇಶನಗಳನ್ನು ನೋಡದೆ ಒರಿಗಾಮಿ ಕಲಾಕೃತಿಗಳನ್ನು ರಚಿಸುವುದು ಮೆದುಳಿಗೆ ಒಳ್ಳೆಯ ಕಸರತ್ತು. ಅನಂತರ, ಹೊಸಹೊಸ ಒರಿಗಾಮಿ ಕಲಾಕೃತಿಗಳನ್ನು ರಚಿಸುವುದು ನಮ್ಮ ಸೃಜನಶೀಲತೆಗೊಂದು ಸವಾಲು, ಅಲ್ಲವೇ?
ಫೋಟೋ 2: ಒರಿಗಾಮಿ ಪೇಪರ್ ಫೋಲ್ಡಿಂಗ್ ಸಂಪುಟದ ಐದು ಪುಸ್ತಕಗಳ ಮುಖಪುಟ