ರಜಾಕಾಲದ ಚಟುವಟಿಕೆ 5: ಕೊಲ್ಲಾಜ್

ರಜಾಕಾಲದ ಚಟುವಟಿಕೆ 5: ಕೊಲ್ಲಾಜ್

ಕೊಲ್ಲಾಜ್ - ಇದು ಅತ್ಯಂತ ಸುಲಭವಾದ ಹಾಗೂ ನಮ್ಮ ಸೃಜನಶೀಲತೆಗೆ ಸವಾಲೆಸೆಯುವ ಕಲಾ ಚಟುವಟಿಕೆ. ಚಿತ್ರಕಲೆಯ ಒಂದು ರೂಪ ಇದು. ಇದರಲ್ಲಿ ವಿವಿಧ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ/ ಹೊಂದಿಸಿ, ಒಂದು ಸಂದೇಶ ಅಥವಾ ಐಡಿಯಾ ವ್ಯಕ್ತಪಡಿಸುವ ಹೊಸತೊಂದು ಚಿತ್ರಣವನ್ನು ರೂಪಿಸಲಾಗುತ್ತದೆ.

ಕೊಲ್ಲಾಜ್ ಬಗ್ಗೆ ಇಂಗ್ಲಿಷಿನಲ್ಲಿ ಹಲವಾರು ಪುಸ್ತಕಗಳಿವೆ: ಕೊಲ್ಲಾಜ್; ದ ಕೊಲ್ಲಾಜ್ ಐಡಿಯಾಸ್ ಬುಕ್; ದ ಕೊಲ್ಲಾಜ್ ವರ್ಕ್ ಬುಕ್; ಪ್ರಾಜೆಕ್ಟ್ ಕೊಲ್ಲಾಜ್ ಇತ್ಯಾದಿ. ಎಲ್ಲದರಲ್ಲಿಯೂ ಉಪಯುಕ್ತ ಮಾಹಿತಿ ಲಭ್ಯ.

ಟಾಮ್ ಕ್ವಿಗ್ಲೆ ಎಂಬವರ 26 ಮಾರ್ಚ್ 2021ರ ಯೂಟ್ಯೂಬ್ ವಿಡಿಯೋದಿಂದಲೂ ಆಕರ್ಷಕ ಕೊಲ್ಲಾಜ್ ರಚಿಸುವುದು ಹೇಗೆಂದು ಮಾಹಿತಿ ಪಡೆಯಬಹುದು.

ಹಲವು ವೆಬ್-ಸೈಟ್‌ಗಳಲ್ಲಿ ಸಾವಿರಾರು ಕೊಲ್ಲಾಜ್ ಪುಕ್ಕಟೆಯಾಗಿ ಲಭ್ಯ. ಉದಾಹರಣೆಗೆ, ಮೂರು ವೆಬ್-ಸೈಟ್‌ಗಳು ಮತ್ತು ಅವುಗಳಲ್ಲಿರುವ ಕೊಲ್ಲಾಜ್ ಫೋಟೋಗಳ ಸಂಖ್ಯೆ ಹೀಗಿದೆ:
www.freepik.com        95,000
www.istockphoto.com        2,30,000
unsplash.com            1,000

ಕೊಲ್ಲಾಜ್ ರಚಿಸುವುದು ಹೇಗೆ? ಬಹಳ ಸುಲಭ. ಒಂದು ವಿಧಾನ: ನಿಮಗೆ ಇಷ್ಟವಾದ ಅಳತೆಯ ಕಾಗದದ ಹಾಳೆ ಅಥವಾ ಬಟ್ಟೆ ತುಂಡು ತಗೊಳ್ಳಿ. ಅದರ ಮೇಲೆ ಅಂಟಿಸಲು ಕಾಗದ ಚೂರುಗಳನ್ನು ಅಥವಾ ಬಟ್ಟೆ ಚೂರುಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಕಾಗದದ ಚೂರುಗಳಿಗಾಗಿ ಹಳೆಯ ಮ್ಯಾಗಝೀನ್‌ಗಳ ಪುಟಗಳನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಬಹುದು. (ಅಂಟು ಪಕ್ಕದಲ್ಲಿರಲಿ.)

ನಿಮಗೆ ಚಿತ್ರದ ಮೂಲಕ ಯಾವ ಸಂದೇಶ ನೀಡಬೇಕಾಗಿದೆ? ಅಥವಾ ಎಂತಹ ಆಕಾರ ಮೂಡಿಸಬೇಕಾಗಿದೆ? ಎಂದು ಕೆಲವು ಕ್ಷಣ ಯೋಚಿಸಿ. ಅನಂತರ, ಕಾಗದದ ಚೂರುಗಳಿಗೆ ಅಂಟು ಹಾಕಿ, ಅವನ್ನು ಕಾಗದದ ಹಾಳೆಯಲ್ಲಿ ಜೋಡಿಸುತ್ತಾ ಬನ್ನಿ. ಅವು ಭಾಗಶಃ ಒಂದರ ಮೇಲೊಂದು ಅಂಟಿಕೊಂಡರೂ ಪರವಾಗಿಲ್ಲ. (ಅಥವಾ ಬಟ್ಟೆ ಚೂರುಗಳಿಗೆ ಅಂಟು ಹಾಕಿ ಬಟ್ಟೆ ತುಂಡಿನಲ್ಲಿ ಅಂಟಿಸುತ್ತಾ ಬನ್ನಿ.) ನಿಮ್ಮ ಸುಪ್ತ ಮನಸ್ಸು ದಾರಿ ತೋರಿದಂತೆ ಆ ಕಲಾಕೃತಿ ರೂಪ ತಳೆಯಲಿ. (ನಡುವೆ ಯೋಚಿಸುತ್ತಾ ಹೊಸ ಚಿತ್ರ ರಚನೆಯ ಕೆಲಸ ನಿಲ್ಲಿಸಬೇಡಿ.) ಒಂದು ಹಂತದಲ್ಲಿ, ಹೊಸ ಚಿತ್ರ ಮೈದಳೆದಿದೆ ಅನ್ನಿಸಿದಾಗ, ಕೆಲಸ ನಿಲ್ಲಿಸಿ. ಈಗ ನಿಮ್ಮೆದುರು ಇರುವುದೇ ಕೊಲ್ಲಾಜ್.

ಪ್ರಸಿದ್ಧ ಚಿತ್ರ ಕಲಾವಿದ ಮಂಗಳೂರಿನ ಬಿ. ಗಣೇಶ ಸೋಮಯಾಜಿ ಅವರನ್ನು ನಾನು ವಿನಂತಿಸಿದ್ದೆ: “ಬಳಕೆದಾರರ ಸಂಗಾತಿ” ಪುಸ್ತಕದ ಮುಖಪುಟಕ್ಕೆ ಕೊಡೆಯ ಕೊಲ್ಲಾಜ್ ರಚಿಸಿ ಕೊಡಬೇಕೆಂದು. (ಮಳೆಬಿಸಿಲಿನಿಂದ ಕೊಡೆ ರಕ್ಷಿಸುವಂತೆ ಪುಸ್ತಕದ ಮಾಹಿತಿ ಬಳಕೆದಾರರನ್ನು ರಕ್ಷಿಸಲು ಸಹಾಯಕ ಎಂಬ ಸಂದೇಶ.) ಅವರು ರಚಿಸಿದ ಕೊಲ್ಲಾಜ್ ಮುಖಪುಟ ಇಲ್ಲಿದೆ. ಬಣ್ಣಬಣ್ಣದ ಕಾಗದದ ಚೂರುಗಳನ್ನು ಕಲಾತ್ಮಕವಾಗಿ ಜೋಡಿಸಿ ಎಷ್ಟು ಚಂದದ ಮತ್ತು ಅರ್ಥಪೂರ್ಣವಾದ ಕೊಲ್ಲಾಜ್ ರಚಿಸಬಹುದು ಎಂಬುದಕ್ಕೆ ಇದೊಂದು ಮಾದರಿ.
ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆಧುನಿಕ ಚಿತ್ರಕಲೆಯ ಒಂದು ರೂಪವಾಗಿ ಕೊಲ್ಲಾಜ್ ಚಿತ್ರಕಲೆ ಬೆಳಕಿಗೆ ಬಂತು ಎನ್ನಬಹುದು. ಕ್ಯೂಬಿಸ್ಟ್ ಕಲಾಕಾರರಾದ ಪಾಬ್ಲೋ ಪಿಕಾಸೊ ಮತ್ತು ಜಾರ್ಜಸ್ ಬ್ರಾಕ್ ವಿವಿಧ ವಸ್ತುಗಳನ್ನು (ಕಾಗದದ ಚೂರುಗಳು, ಬಟ್ಟೆಚೂರುಗಳು ಇತ್ಯಾದಿ) ಕ್ಯಾನ್‌ವಾಸ್ ಮತ್ತು ಇತರ ಮೇಲ್ಮೈಗಳಿಗೆ ಅಂಟಿಸಿ ಕಲಾಕೃತಿಗಳನ್ನು ರಚಿಸಿದರು. ಹೀಗೆ ಶುರುವಾಯಿತು ಕೊಲ್ಲಾಜ್ ಕಲೆ.

ಕೊಲ್ಲಾಜ್ ಕಲಾಕೃತಿಗಳ ರಚನೆಯಲ್ಲಿ ವಿವಿಧ ವಿಧಾನಗಳಿವೆ. ಬಣ್ಣಬಣ್ಣದ ಕಾಗದದ ಚುರುಗಳನ್ನು ಜೋಡಿಸಿ/ ಹೊಂದಿಸಿ ಕೊಲ್ಲಾಜ್ ರಚಿಸುವುದು ಒಂದು ವಿಧಾನ. ಇದನ್ನು ಪೇಪಿಯರ್ ಕೊಲ್ಲೆ ವಿಧಾನ ಎಂದು ಕರೆಯುತ್ತಾರೆ. ಇನ್ನೆರಡು ವಿಧಾನಗಳು: ಬೇರೆಬೇರೆ ಫೋಟೋಗ್ರಾಫ್‌ಗಳನ್ನು ಕತ್ತರಿಸಿ, ಆ ಚೂರುಗಳನ್ನು ಜೋಡಿಸಿ, ಹೊಸತೊಂದು ಚಿತ್ರಣ ರೂಪಿಸುವುದಕ್ಕೆ ಫೋಟೋಮೊಂಟೇಜ್ ಅಥವಾ ಕೊಂಪೊಸಿಟಿಂಗ್ ಎನ್ನುತ್ತಾರೆ. ಹಾಗೆಯೇ, ವಿವಿಧ ವಸ್ತುಗಳನ್ನು ಮಟ್ಟಸವಾದ ಮೇಲ್ಮೈಗೆ (ಉದಾ: ಗೋಡೆ) ಕಲಾತ್ಮಕವಾಗಿ ಅಂಟಿಸಿ, ಕಲಾಕೃತಿ ರಚಿಸುವುದಕ್ಕೆ ಅಸೆಂಬ್ಲೇಜ್ ಎಂಬ ಹೆಸರು.

ಇನ್ನೇಕೆ ತಡ ಮಾಡುವಿರಿ? ರಜಾಕಾಲದಲ್ಲಿ ದಿನಕ್ಕೊಂದು ಕೊಲ್ಲಾಜ್ ರಚಿಸಿ. ನೀವು ಇದರಲ್ಲಿ ತೊಡಗಿಸಿಕೊಂಡರೆ ನಿಮಗೆ ರಜಾದಿನಗಳು ಸರಿಯುವುದೇ ಗೊತ್ತಾಗಲಿಕ್ಕಿಲ್ಲ. ಜೊತೆಗೆ, ನಿಮ್ಮ ಸೃಜನಶೀಲತೆ ಅರಳಿದಂತೆ ನಿಮಗೇ ವಿಸ್ಮಯವಾಗಲಿದೆ.

ಮೂರು ಕೊಲ್ಲಾಜ್ ಫೋಟೋಗಳು: ಕೃಪೆ: ಐಸ್ಟೋಕ್ ಫೋಟೋ.ಕೋಮ್