ರಣಜಿ ಪಂದ್ಯಗಳಲ್ಲಿ ಗರಿಷ್ಟ ವಿಕೆಟ್ ದಾಖಲೆಯ ರಾಜೀಂದರ್ ಗೋಯೆಲ್
ಸಾಮಾಜಿಕ ಜಾಲತಾಣದಲ್ಲಿ ಹೀಗೆಯೇ ಕಣ್ಣಾಡಿಸುತ್ತಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆಯವರ ಟ್ವೀಟ್ ಒಂದು ಗಮನ ಸೆಳೆಯಿತು. ಒಂದು ಕಾಲದಲ್ಲಿ ದೇಶೀಯ ಕ್ರಿಕೆಟ್ ಜಗತ್ತಿನ ಪ್ರಮುಖ ಆಧಾರ ಸ್ತಂಭವಾಗಿದ್ದ ರಾಜೀಂದರ್ ಗೊಯೆಲ್ ಅವರ ನಿಧನಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದೇನೆ ಎಂಬುದು ಆ ಟ್ವೀಟ್ ನ ಸಾರ. ಅದನ್ನು ಗಮನಿಸಿದ ನನಗೆ ರಾಜೀಂದರ್ ಗೋಯೆಲ್ ಎಂಬ ವ್ಯಕ್ತಿಯ ಬಗ್ಗೆ ತಿಳಿಯುವ ಮನಸ್ಸಾಯಿತು. ನನಗೆ ಸಿಕ್ಕಿದ ಮಾಹಿತಿಯನ್ನು ಗೋಯೆಲ್ ಎಂಬ ವ್ಯಕ್ತಿ ನಮ್ಮ ಮನಸ್ಸಿನ ಪಟಲದಿಂದ ಮರೆಯುವ ಮುನ್ನ (ಮರೆಯ ಬಾರದು) ಹಂಚಿಕೊಳ್ಳ ಬಯಸುವೆ.
೧೯೪೨ ಸೆಪ್ಟೆಂಬರ್ ೨೦ರಂದು ಹರಿಯಾಣಾದ ರೋಹ್ಟಾಕ್ ಎಂಬ ಊರಿನಲ್ಲಿ ಜನಿಸಿದ ರಾಜೀಂದರ್ ಗೋಯೆಲ್ ಅವರ ತಂದೆ ರೈಲ್ವೇ ಇಲಾಖೆಯಲ್ಲಿ ಸಹಾಯಕ ಸ್ಟೇಶನ್ ಮಾಸ್ಟರ್ ಆಗಿದ್ದರು. ಬಾಲ್ಯದಿಂದಲೂ ಕ್ರಿಕೆಟ್ ಆಟದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ ರಾಜೀಂದರ್ ೧೯೫೭ರಲ್ಲಿ ಶಾಲಾ ಸಮಯದಲ್ಲಿ ಉತ್ತರವಲಯದ ಪರವಾಗಿ ಪಶ್ಚಿಮ ವಲಯದ ವಿರುದ್ಧ ನಾಲ್ಕು ವಿಕೆಟ್ ಬೇಟೆಯಾಡಿದ್ದರು. ಇದು ಆಲ್ ಇಂಡಿಯಾ ಸ್ಕೂಲ್ ಟೂರ್ನಮೆಂಟ್ ಪಂದ್ಯಗಳ ಅಂತಿಮ ಪಂದ್ಯವಾಗಿತ್ತು ಮತ್ತು ರಾಜೀಂದರ್ ಗೋಯೆಲ್ ಅವರು ಉತ್ತಮ ಕ್ರಿಕೆಟ್ ಪಟು ಎಂಬ ಪ್ರಶಸ್ತಿಗೂ ಪಾತ್ರರಾದರು. ಈ ಪಂದ್ಯದ ನಂತರ ಮುಂದಿನ ವರ್ಷವೇ ಗೋಯೆಲ್ ಅವರಿಗೆ ರಣಜಿ ಪಂದ್ಯದ ಬಾಗಿಲು ತೆರೆಯಿತು. ಇವರು ತಮ್ಮ ಜೀವಿತಾವಧಿಯಲ್ಲಿ ಪಾಟಿಯಾಲ, ದಕ್ಷಿಣ ಪಂಜಾಬ್, ಡೆಲ್ಲಿ ಹಾಗೂ ಹರಿಯಾಣಾ ಪರವಾಗಿ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು. ಇವರು ಓರ್ವ ಪ್ರತಿಭಾವಂತ ಎಡಗೈ ಸ್ಪಿನ್ನರ್ ಆಗಿದ್ದರೂ ರಣಜಿಯಲ್ಲಿ ದಾಖಲೆಯ ವಿಕೆಟ್ ಕಿತ್ತಿದ್ದರೂ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲೇ ಇಲ್ಲ. ಇದು ಒಂದು ದೊಡ್ಡ ಅಚ್ಚರಿಯೇ ಸರಿ.
ಬಹುಷಃ ಇವರ ಸಮಕಾಲೀನ ಕ್ರಿಕೆಟಿಗ ಹಾಗೂ ಇವರಂತೇ ಬೌಲಿಂಗ್ ಶೈಲಿಯನ್ನು ಹೊಂದಿದ್ದ ಬಿಷನ್ ಸಿಂಗ್ ಬೇಡಿಯವರು ಆ ಸಮಯ ಉತ್ತಮವಾಗಿ ಆಟವಾಡುತ್ತಿದ್ದುದೇ, ಇವರು ಭಾರತ ತಂಡಕ್ಕೆ ಆಯ್ಕೆಯಾಗದೇ ಹೋದದ್ದು ಆಗಿರಬಹುದು ಅನಿಸುತ್ತೆ. ಕೆಲವೊಮ್ಮೆ ಅದೃಷ್ಟ ಲಕ್ಷ್ಮಿ ಎಷ್ಟು ಚಂಚಲವಾಗಿರುತ್ತಾಳೆ ಎಂಬುದಕ್ಕೆ ಗೋಯೆಲ್ ಜೀವನದಲ್ಲಿ ಆಗಿ ಹೋದ ಈ ಘಟನೆಯೇ ಸಾಕ್ಷಿ. ೧೯೭೪-೭೫ರಲ್ಲಿ ಭಾರತ ಬೆಂಗಳೂರಿನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಎದುರು ಟೆಸ್ಟ್ ಆಡಲು ತಯಾರಾಗಿತ್ತು. ಅದೇ ಸಮಯ ಬಿಬಿಸಿಗೆ ಕ್ರಿಕೆಟ್ ಬೋರ್ಡ್ ನ ಅನುಮತಿ ಪಡೆಯದೇ ಸಂದರ್ಶನ ನೀಡಿದುದಕ್ಕೆ ಬಿಷನ್ ಸಿಂಗ್ ಬೇಡಿಯನ್ನು ತಂಡದಿಂದ ಕೈ ಬಿಡುತ್ತಾರೆ ಮತ್ತು ಗೋಯಲ್ ಇವರನ್ನು ಆರಿಸುತ್ತಾರೆ. ಆದರೆ ಕೊನೆಯ ಕ್ಷಣದಲ್ಲಿ ಗೋಯಲ್ ಅವರೂ ತಂಡದಿಂದ ಹೊರಗೆ ಉಳಿಯ ಬೇಕಾಗುತ್ತದೆ. ಹೀಗೆ ತಂಡಕ್ಕೆ ಆಯ್ಕೆಯಾದರೂ ಆಡುವ ತಂಡದಲ್ಲಿ ಅವಕಾಶ ಪಡೆಯದೇ ಇರುವುದು ಅವರ ದುರಾದೃಷ್ಟವೇ ಸರಿ. ಮುಂದೆಂದೂ ಅವರು ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆಯುವುದೇ ಇಲ್ಲ.
ಆದರೂ ರಣಜಿ (೬೩೭ ವಿಕೆಟ್) ಹಾಗೂ ಪ್ರಥಮ ದರ್ಜೆ ಪಂದ್ಯಾವಳಿಗಳಲ್ಲಿ ಒಟ್ಟು ೭೫೦ ವಿಕೆಟ್ ಪಡೆದಿರುವುದು ರಾಜೀಂದರ್ ಗೋಯೆಲ್ ಅವರ ಬೌಲಿಂಗ್ ಕ್ಷಮತೆಗೆ ಹಿಡಿದ ಕನ್ನಡಿ. ರಣಜಿ ಪಂದ್ಯಾಟಗಳಲ್ಲಿ ಇವರು ಪಡೆದ ೬೩೭ ವಿಕೆಟ್ ದಾಖಲೆ ಇನ್ನೂ ಹಾಗೇ ಇದೆ. ಇವರ ಉತ್ತಮ ಬೌಲಿಂಗ್ ೫೫ ರನ್ನಿಗೆ ೮ ವಿಕೆಟ್ ಪಡೆದದ್ದು ಆಗಿದೆ. ೫೯ ಸಲ ೫ ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಪಂದ್ಯವೊಂದರಲ್ಲಿ ೧೮ಬಾರಿ ೧೦ಕ್ಕೂ ಅಧಿಕ ವಿಕೆಟ್ ಗಳನ್ನು ಪಡೆದಿದ್ದಾರೆ. ಗೋಯೆಲ್ ಅವರು ಯಾವತ್ತೂ ತಮ್ಮ ಗಮನವನ್ನು ಬ್ಯಾಟಿಂಗ್ ಕಡೆಗೆ ವಾಲಿಸಲೇ ಇಲ್ಲ. ಅವರದ್ದು ಅತ್ಯಧಿಕ ರನ್ ೪೪ ಆಗಿದೆ. ತಾವಾಡಿದ ೧೫೭ ಪ್ರಥಮ ದರ್ಜೆ ಪಂದ್ಯಗಳಿಂದ ೧೦೩೭ ರನ್ ಗಳಿಸಿದ್ದರು. ೧೯೮೫ರವರೆಗೂ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಇವರು ವಿದಾಯ ಹೇಳುವಾಗ ೪೨ವರ್ಷ ವಯಸ್ಸಾಗಿತ್ತು.
ಇವರಂತೆಯೇ ಪ್ರತಿಭೆ ಇದ್ದರೂ ಅದೃಷ್ಟಹೀನರಾಗಿದ್ದ ಇನ್ನೊರ್ವ ಕ್ರಿಕೆಟಿಗ ಪದ್ಮಾಕರ್ ಶಿವಾಲ್ಕರ್ ಇವರಿಬ್ಬರ ಬಗ್ಗೆ ಭಾರತದ ಮಾಜಿ ಆಟಗಾರ ಸುನಿಲ್ ಗಾವಾಸ್ಕರ್ ಇವರು ಪುಸ್ತಕವೊಂದರಲ್ಲಿ ‘ಮಾದರಿಯಾಗಿ ಆರಾಧಿಸುವ ಕ್ರಿಕೆಟಿಗರು' ಎಂದು ಉಲ್ಲೇಖಿಸುತ್ತಾರೆ. ‘ಗೋಯೆಲ್ ಇವರ ಎಡಗೈ ಬೌಲಿಂಗ್ ಶೈಲಿ ನನ್ನನ್ನು ಯಾವಾಗಲೂ ಗಲಿಬಿಲಿ ಮಾಡುತ್ತಿತ್ತು ಮತ್ತು ಹೆದರಿಕೆ ಹುಟ್ಟಿಸುತ್ತಿತ್ತು. ಇವರ ಬೌಲಿಂಗ್ ನನಗೆ ಕ್ರೀಸ್ ಬಿಟ್ಟು ಹೊರಗೆ ಬಂದು ಡೈವ್ ಮಾಡದಂತೆ ಮಾಡುತ್ತಿತ್ತು' ಎಂದು ಹೊಗಳಿದ್ದಾರೆ. ರಾಜೀಂದರ್ ಗೋಯಲ್ ಇವರು ಭಾರತೀಯ ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಹರಿಯಾಣ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಮಗ ನಿತಿನ್ ಗೋಯೆಲ್ ಅಪ್ಪನ ದಾರಿಯಲ್ಲಿ ಸಾಗುತ್ತಾ ಹರಿಯಾಣಾ ಪರ ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ೨೦೨೦ ಜೂನ್ ೨೧ರಂದು ಇವರು ತಮ್ಮ ೭೮ನೇ ವಯಸ್ಸಿನಲ್ಲಿ ನಿಧನರಾದರು. ಪ್ರತಿಭೆ ಇದ್ದರೂ ಅದೃಷ್ಟ ಇವರ ಬೆನ್ನಿಗೆ ಇರಲಿಲ್ಲ. ಇದ್ದಿದ್ದರೆ ಭಾರತ ತಂಡಕ್ಕಾಗಿ ಇನ್ನೆಷ್ಟು ವಿಕೆಟ್ ಕೀಳುತ್ತಿದ್ದರೋ ಏನೋ? ಆದರೂ ಈ ಪ್ರತಿಭೆಗೆ ಶೃದ್ಧಾಂಜಲಿ ಸಲ್ಲಿಸುವುದು ಎಲ್ಲಾ ಕ್ರಿಕೆಟ್ ಪ್ರೇಮಿಗಳ ಆದ್ಯ ಕರ್ತವ್ಯ.
ಚಿತ್ರ ಕೃಪೆ: ಅಂತರ್ಜಾಲ