ರಣರಂಗವಾದ ಪಂಚಾಯ್ತಿ ಚುನಾವಣೆ
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ವ್ಯಾಪಕ ಹಿಂಸಾಚಾರ. ಅಮಾಯಕರ ಸಾವು-ನೋವು. ಪಂಚಾಯ್ತಿ ಚುನಾವಣೆಗಳಲ್ಲಿ ಭುಗಿಲೆದ್ದ ರಾಜಕೀಯ ವೈಷಮ್ಯ. ರಾಜಕೀಯ ಜಿದ್ದಾಜಿದ್ದಿಗೆ ಶಾಂತಿಯುತ ಚುನಾವಣೆಯೇ ಬಲಿ !
ಶನಿವಾರದಂದು (ಜುಲೈ ೮) ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸಂಭವಿಸಿದ ಹಿಂಸಾಚಾರ ಖಂಡನೀಯ, ರಾಜ್ಯ ಚುನಾವಣೆ ಆಯೋಗಕ್ಕೆ ಕೋಲ್ಕತ್ತ ಹೈಕೋರ್ಟ್ ಎಚ್ಚರಿಕೆ ನೀಡಿದ್ದರೂ, ವ್ಯಾಪಕ ಪ್ರಮಾಣದಲ್ಲಿ ಹಿಂಸೆ ತಲೆದೋರಿದ್ದು ನಿಜಕ್ಕೂ ಅಘಾತಕಾರಿ. ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ. ರಾಜಕೀಯ ಹಗೆತನ ಮತ್ತು ವೈಷಮ್ಯಗಳಿಂದು ಪರಾಕಾಷ್ಟೆ ತಲುಪಿದೆ. ಇದಕ್ಕೆ ಯಾರ್ಯಾರ ಕೊಡುಗೆ ಇದೆ ಮತ್ತು ಹಿಂಸಾಚಾರ ಘಟನೆಗಳ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಆದರೆ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಾಂತಿಯುತ ಮತ್ತು ನ್ಯಾಯಯುತ ಮಾರ್ಗದಲ್ಲಿ ನಡೆಯಬೇಕಿದ್ದ ಚುನಾವಣೆಗಳು ದೊಂಬಿ ಮತ್ತು ರಕ್ತಮಯವಾಗಿರುವುದು ಕಳವಳಕಾರಿ.
ಪಂಚಾಯ್ತಿ ಚುನಾವಣೆಗೂ ಮುನ್ನ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ ಎಂಬುದು ರಾಜ್ಯ ಸರಕಾರಕ್ಕೆ ಗೊತ್ತಿಲ್ಲದ ವಿಷಯವೇನಲ್ಲ. ಆದರೂ ಈ ದಿಶೆಯಲ್ಲಿ ರಾಜ್ಯ ಸರಕಾರ ಸಮರ್ಪಕವಾದ ಮುನ್ನೆಚ್ಚರಿಕೆಯನ್ನು ವಹಿಸದೇ ಕೈ ಚೆಲ್ಲಿದ್ದು ಸರಿಯಲ್ಲ. ಇಲ್ಲಿನ ಬಿಗುವಿನ ಪರಿಸ್ಥಿತಿಯನ್ನು ಮನಗಂಡು ಕೇಂದ್ರ ಸರಕಾರ ಸಿ ಆರ್ ಪಿ ಎಫ್ ಪಡೆಗಳನ್ನು ನಿಯೋಜಿಸಲು ಮುಂದಾಗಿದ್ದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರಿ ಪ್ರತಿರೋಧ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯ ಚುನಾವಣಾಧಿಕಾರಿಗಳ ನೇಮಕ ವಿಚಾರದಲ್ಲಿಯೂ ಮಮತಾ ಮೊಂಡು ಪಟ್ಟು ಹಿಡಿದರು. ಒಟ್ಟಿನಲ್ಲಿ ಚುನಾವಣೆಗಳನ್ನು ಶಾಂತಿಯುತವಾಗಿ ನಿರ್ವಹಿಸಬೇಕಾದಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಪೋಲೀಸ್ ಜಂಟಿಯಾಗಿ ಕಾರ್ಯನಿರ್ವಹಿಸುವುದು ಅನಿವಾರ್ಯ. ಆದರೆ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಮಹತ್ತರದ್ದು. ಇವೆಲ್ಲವನ್ನೂ ಬದಿಗಿಟ್ಟು ಕಿಡಿಗೇಡಿಗಳು ಮತ್ತು ದುಷ್ಕರ್ಮಿಗಳು ಇಡೀ ಚುನಾವಣೆಗಳನ್ನು ರಣಭೀಕರವಾಗಿ ಮಾಡಿದರೆ ಇದನ್ನು ನೋಡಿಕೊಂಡು ಸುಮ್ಮನಿರಲಾದೀತೇ?
ಬಾಂಬ್ ಸಂಸ್ಕೃತಿ, ಬಡಿದಾಟ ಮತ್ತು ಲಾಂಗ್ ಮಚ್ಚುಗಳು ಮತ ಕೇಂದ್ರಗಳಲ್ಲಿ ಅವ್ಯಾಹತವಾಗಿ ಹರಿದಾಡುವುದೆಂದರೆ ಇದನ್ನು ಪ್ರಜಾತಂತ್ರದಡಿ ನಡೆಯುವ ಚುನಾವಣೆ ಎನ್ನಲಾಗದು. ಮತಗಟ್ಟೆಗೆ ಜನತೆ ನಿರ್ಭೀತ ಮತ್ತು ನಿರ್ಭಯದಿಂದ ತೆರಳಿ ಮುಕ್ತವಾಗಿ ಮತ ಚಲಾಯಿಸುವ ವಾತಾವರಣವೇ ಈಗ ಪ.ಬಂಗಾಳದಲ್ಲಿ ಮಾಯವಾಗಿದೆ ಎಂಬುದು ಒಂದು ದುರಂತ. ಏಟಿಗೆ ಪ್ರತಿಯೇಟು ಮತ್ತು ಸೇಡಿಗೆ ಸೇಡು. ಇಂತಹ ದುಷ್ಟ ಪ್ರವೃತ್ತಿಗಳೇ ರಾಜ್ಯದಲ್ಲಿ ವಿಜೃಂಭಿಸಿದರೆ ಇನ್ನು ಪ್ರಜಾತಂತ್ರವಾದರೂ ಹೇಗೆ ಬದುಕುಳಿಯಲು ಸಾಧ್ಯ? ಹಣ ಮತ್ತು ತೋಳ್ಬಲದ ಜೊತೆ ರಾಜಕೀಯ ಪಕ್ಷಗಳ ಪ್ರತಿಷ್ಟೆ ಮತ್ತು ಪ್ರತಿಸವಾಲುಗಳು ಪ್ರಜಾತಂತ್ರದ ಜೀವಾಳವಾದ ಶಾಂತಿಯುತ ಚುನಾವಣೆಗಳನ್ನು ಕಬಳಿಸಬಾರದಷ್ಟೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೦-೦೭-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ