ರಣಹೇಡಿಗಳ ಪೈಶಾಚಿಕ ದಾಳಿ

ರಣಹೇಡಿಗಳ ಪೈಶಾಚಿಕ ದಾಳಿ

ಜಮ್ಮು ಕಾಶ್ಮೀರದಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿ ಹಲವರನ್ನು ಕೊಂದಿದ್ದಾರೆ ಹಾಗೂ ಇನ್ನು ಹಲವರನ್ನು ಗಾಯಗೊಳಿಸಿದ್ದಾರೆ. ಸಶಸ್ತ್ರ ಸೈನಿಕರನ್ನು ಎದುರಿಸುವ ಧೈರ್ಯವಿಲ್ಲದ ಈ ಹೇಡಿ ಭಯೋತ್ಪಾದಕರು ನಿಶಸ್ತ್ರ ಪ್ರವಾಸಿಗರ ಮೇಲೆ ತಮ್ಮ 'ಪ್ರತಾಪ' ತೋರಿಸಿದ್ದಾರೆ. ಅದೂ ಸಾಲದೆಂಬಂತೆ ಭಯೋತ್ಪಾದಕ ಸಂಘಟನೆಯೊಂದು ತಾವೇ ಈ ಕಾರ್ಯ ಮಾಡಿದ್ದು ಎಂಬುದಾಗಿಯೂ ನಿರ್ಲಜ್ಜವಾಗಿ ಹೇಳಿಕೊಂಡಿದೆ. ದಾಳಿಗೆ ಗುರಿಯಾದವರೆಲ್ಲರೂ ಹಿಂದುಗಳು, ಹಿಂದುಗಳೆಂದು ಗುರುತಿಸಿ ಬಳಿಕವೇ ಅವರನ್ನು ಹತ್ಯೆಗೈಯಲಾಗಿದೆ. ಭಯೋತ್ಪಾದಕರು ಇಸ್ಲಾಮಿನ ಆಫೀಮು ಸೇವಿಸಿದವರು ಎಂಬುದು ಇದರಿಂದ ಸ್ಪಷ್ಟ.

ಈ ದಾಳಿಯ ಹಿಂದೆ ನೆರೆಯ ಪಾಕಿಸ್ಥಾನದ ಕೈವಾಡ ಇದೆ ಎಂಬುದರಲ್ಲಿ ಅನುಮಾನವಿಲ್ಲ. ''ಇದರಲ್ಲಿ ನಮ್ಮ ಕೈವಾಡವಿಲ್ಲ'' ಎಂಬುದಾಗಿ ಪಾಕಿಸ್ಥಾನದ ವಿದೇಶಾಂಗ ಸಚಿವರು ತಕ್ಷಣವೇ ಪ್ರತಿಕ್ರಿಯೆ ನೀಡುತ್ತಾರೆಂದರೆ ಇದು ಪಾಕಿಸ್ಥಾನದ್ದೇ ಕೃತ್ಯ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ. ಕಾಶ್ಮೀರವು ಪ್ರವಾಸಿಗರ ಮೆಚ್ಚಿನ ತಾಣವಾಗಿ ಬದಲಾಗುತ್ತಿರುವುದು, ಅಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಪಾಕಿಸ್ಥಾನಕ್ಕೆ ತೀರಾ ಹತಾಶೆ ತಂದ ಬೆಳವಣಿಗೆ, ಕಾಶ್ಮೀರವು ತನ್ನ ಕೈತಪ್ಪಿ ಹೋಯಿತೆಂಬುದು ಅವರ ಅರಿವಿಗೆ ಬರತೊಡಗಿದೆ. ಇತ್ತೀಚೆಗೆ ಪಾಕಿಸ್ಥಾನದ ಸೇನಾ ಮುಖ್ಯಸ್ಥ ಮುನೀರ್ ಕಾಶ್ಮೀರದ ಕುರಿತಂತೆ, ಹಿಂದುಗಳ ಕುರಿತಂತೆ ನುಡಿದ ಮಾತುಗಳು ಕೂಡಾ ಆತನ ಹತಾಶೆಯನ್ನು ಬಿಂಬಿಸುತ್ತಿತ್ತು. ಆಗಲೇ ಕಾಶ್ಮೀರದಲ್ಲಿ ಏನಾದರೂ ಉತ್ಪಾತವೆಬ್ಬಿಸಲು ಪಾಕ್ ಸೇನೆಯು ಸಂಚು ಹೂಡಲಿದೆ ಎಂಬುದರ ಸಂಕೇತ ದೊರಕಿತ್ತು. ಕಾಶ್ಮೀರಕ್ಕೆ ಪ್ರವಾಸಿಗರು ಬರದಂತೆ ಭಯಭೀತಗೊಳಿಸುವ ಮತ್ತು ಇದರ ಜತೆಗೇ ಪಾಕಿಸ್ಥಾನದ ಆಂತರಿಕ ಶೋಭೆಯಿಂದ ಜನರ ಗಮನವನ್ನು ಬೇರೆಡೆ ಸರಿಸುವ ಯೋಚನೆಯೂ ಪಾಕ್ ಆಡಳಿತದ್ದಾಗಿದೆ.

ಹಾಗೆಂದು ಈ ದಾಳಿಯಲ್ಲಿ ಸ್ಥಳೀಯರ ಪಾತ್ರವೂ ಇಲ್ಲ ಎಂದೆನ್ನಲಾಗದು. ಕಾಶ್ಮೀರಕ್ಕೆ ಎಷ್ಟೇ ಸೌಲಭ್ಯವೊದಗಿಸಿದರೂ, ಅಲ್ಲಿನ ಜನರಿಗೆ ಅದೆಷ್ಟೇ ಒಳಿತನ್ನು ಮಾಡಿದರೂ ಅಲ್ಲಿನ ಕೆಲವರಾದರೂ ದೇಶದ್ರೋಹಿ ಚಿಂತನೆಯನ್ನು ಮೈಗೂಡಿಸಿಕೊಂಡೇ ಇದ್ದಾರೆ. ಕಾಶ್ಮೀರವು ಸ್ವರ್ಗವಾಗುವುದಕ್ಕಿಂತಲೂ 'ಮೂಲಭೂತವಾದಿ ನರಕ’ ವಾಗಿರುವುದರಲ್ಲೇ ಅವರಿಗೆ ಹಿತ.

ಇಂತಹ ಪೈಶಾಚಿಕ ಕೃತ್ಯಕ್ಕೆ ಸೂಕ್ತ ತಿರುಗೇಟು ನೀಡುವುದು ಅಗತ್ಯವಾಗಿದೆ. ಭಾರತ ಸರಕಾರವು ಅಂತಹ ಬದಲು ತೀರಿಸುವುದೆಂಬ ವಿಶ್ವಾಸವೂ ಜನರಲ್ಲಿದೆ. ಕೇವಲ ನರಸಂಹಾರದಲ್ಲಿ ಪಾಲ್ಗೊಂಡ ಭಯೋತ್ಪಾದಕರಷ್ಟೇ ಅಲ್ಲದೆ ಅವರಿಗೆ ಬೆಂಬಲವಾಗಿ ಕಾರ್ಯಾಚರಿಸಿದ ಎಲ್ಲರಿಗೂ ಸೂಕ್ತ ಶಾಸ್ತಿಯಾಗಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೪-೦೪-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ