ರತನ್ ಟಾಟಾ : ಭಾರತವು ಎಂದೂ ಮರೆಯದ ಉದ್ಯಮಿ

ರತನ್ ಟಾಟಾ : ಭಾರತವು ಎಂದೂ ಮರೆಯದ ಉದ್ಯಮಿ

ಭಾರತದ ಇತಿಹಾಸದಲ್ಲಿ ಭವ್ಯ ಉದ್ದಿಮೆ ಪರಂಪರೆಯನ್ನು ಹೊಂದಿರುವ ಟಾಟಾ ಸಮೂಹದ ವಿಶ್ರಾಂತ ಮುಖ್ಯಸ್ಥರಾಗಿದ್ದ ರತನ್ ನಾವಲ್ ಟಾಟಾ ಅವರ ವಿಧಿವಶ ಆ ಸಮೂಹಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೆ ಹಾಗೂ ವಿಶ್ವದ ಉದ್ಯಮರಂಗಕ್ಕೆ ತುಂಬಲಾರದಂತಹ ನಷ್ಟ. ಉದಾತ್ತ ಧ್ಯೇಯ, ನೈತಿಕತೆ, ಪ್ರಾಮಾಣಿಕ ಸೇವೆ, ರಾಷ್ಟ್ರಾಭಿವೃದ್ಧಿ, ದಾನ - ದತ್ತಿ, ಉದ್ಯೋಗಿಗಳ ಹಿತರಕ್ಷಣೆ ಸೇರಿದಂತೆ ವಿಶಿಷ್ತ ಸೇವೆಯ ಮೂಲಕವೇ ಟಾಟಾ ಗ್ರೂಪ್ ಗುರುತಿಸಿಕೊಂಡಿದೆ. ಕಂಪೆನಿ ಎಷ್ಟೇ ಬೆಳೆದರೂ, ಹಲವು ದೇಶಗಳಿಗೆ ಚಾಚಿದರೂ, ಮುಖ್ಯಸ್ಥರು ಬದಲಾದರೂ ಆ ಗೌರವಕ್ಕೆ ಎಂದೂ ಕುಂದು ಆಗಿಲ್ಲ. ಆ ಪರಂಪರೆಯನ್ನು ಹಾಗೂ ಟಾಟಾ ಸಮೂಹವನ್ನು ಹೊಸ ಎತ್ತರಕ್ಕೆ ಒಯ್ದವರು ರತನ್ ಟಾಟಾ. ಅವರು ೯೧ರ ಸುಮಾರಿಗೆ ಕಂಪೆನಿಯ ಮುಖ್ಯಸ್ಥ ಸ್ಥಾನದ ನೊಗ ಹೊತ್ತಾಗ ಟಾಟಾ ಸಮೂಹ ೪ ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿತ್ತು. ೨೦೧೨ರಲ್ಲಿ ಅವರು ಅಧಿಕಾರದಿಂದ ಇಳಿಯುವಷ್ಟರಲ್ಲಿ ಅದು ೧೦೦ ಶತಕೋಟಿ ಡಾಲರ್ ಗೆ ಏರಿಕೆಯಾಗಿತ್ತು. ಈಗ ಆ ಮೌಲ್ಯ ೨೦೦ ಕೋಟಿ ಶತಕೋಟಿ ಡಾಲರ್ ಸನಿಹದತ್ತ ದಾಪುಗಾಲು ಇಡುತ್ತಿದೆ ಎಂದರೆ ರತನ್ ಟಾಟಾ ಅವರ ಉದ್ಯಮ ಚಾಕಚಕ್ಯತೆ, ದೂರದೃಷ್ಟಿ, ಯೋಜನೆಯ ಬಗ್ಗೆ ಸ್ಪಷ್ಟ ಅರಿವು ಮೂಡಬಹುದು.

ದೇಶದ ಬೇರೆಲ್ಲಾ ಉದ್ಯಮಿಗಳಿಗೆ ಹೋಲಿಸಿದರೆ ರತನ್ ಟಾಟಾ ಅವರು ಭಿನ್ನ. ತಮ್ಮ ಬಳಿ ಸಂಪತ್ತಿದೆ ಎಂದು ಅವರು ಎಂದಿಗೂ ಹಮ್ಮುಬಿಮ್ಮು ಪ್ರದರ್ಶಿಸಿದವರಲ್ಲ. ಎಲ್ಲ ವಿಚಾರಗಳಿಗೂ ಮೂಗು ತೂರಿಸಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲ. ವಿರೋಧಿಗಳನ್ನು ಕಟ್ಟಿಕೊಂಡವರಲ್ಲ. ತಮ್ಮ ಬಗ್ಗೆ ಅವಹೇಳನ ಮಾಡಿದವರಿಗೆ ಉದ್ಯಮ ತಂತ್ರಗಾರಿಕೆಯ ಮೂಲಕ ಉತ್ತರ ನೀಡುವ ಚಾಲಾಕಿತನ ಅವರಲ್ಲಿತ್ತು. ಸಹಸ್ರಾರು ಕೋಟಿ ರೂ. ಒಡೆಯರಾಗಿದ್ದರೂ ಮಧ್ಯಮ ವರ್ಗ ಹಾಗೂ ಭಾರತ ಬಗ್ಗೆ ಅವರಿಗೆ ಇದ್ದ ಗೌರವ ಎಂತಹದ್ದು ಎಂಬುದಕ್ಕೆ ಇಂಡಿಕಾ ಮತ್ತು ನ್ಯಾನೋ ಕಾರುಗಳೇ ಸಾಕ್ಷಿ. ಇವತ್ತಿಗೂ ಟಾಟಾ ಸಮೂಹದಲ್ಲಿ ೧೦ ಲಕ್ಷಕ್ಕೂ ಅಧಿಕ ಜನರು ಉದ್ಯೋಗ ಮಾಡುತ್ತಿದ್ದಾರೆ. ತಾನು ಬೆಳೆದಷ್ಟೂ ಜನರಿಗೆ, ದೇಶಕ್ಕೆ ಆ ಕಂಪೆನಿ ಸಹಾಯ ಮಾಡಿದೆ. ಉಪ್ಪಿನಿಂದ ಉಕ್ಕಿನವರೆಗೆ ಎಲ್ಲ ಕ್ಷೇತ್ರಗಳಲ್ಲೂ ಉದ್ಯಮ ಹೊಂದಿರುವ ಟಾಟಾ ಸಮೂಹ ‘ಆಡು ಮುಟ್ಟದ ಸೊಪ್ಪಿಲ್ಲ' ಎಂಬ ಮಾತಿಗೆ ಅನ್ವರ್ಥ. ದೇಶದಲ್ಲಿ ಉದ್ಯಮಿಗಳನ್ನು ಕಾಣಬಹುದು. ಆದರೆ ರತನ್ ಟಾಟಾರಂಥವರು ಸಿಗುವುದಿಲ್ಲ. ಅವರು ಭಾರತ ಎಂದೂ ಮರೆಯಲು ಆಗದ ಉದ್ಯಮಿ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೧-೧೦-೨೦೨೪

 ಚಿತ್ರ ಕೃಪೆ: ಅಂತರ್ಜಾಲ ತಾಣ