ರತ್ನಾ ಭಟ್ ಅವರ ಒಂದು ಗಝಲ್
ಕವನ
ಸಿದ್ಧತೆ ಇದ್ದಾಗ ಗೆಲುವು ಬಾಳಿಗೆ ಗೆಳೆಯಾ
ಬದ್ಧತೆ ಸಿಕ್ಕಾಗ ಒಲವು ಜೋಳಿಗೆ ಗೆಳೆಯಾ
ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಸರಿಯಲ್ಲ
ಧಾತ್ರಿ ಮೇಲೆ ಪಡುವ ಶ್ರಮವು ಕೂಳಿಗೆ ಗೆಳೆಯಾ
ಬೆಂದಿಹ ಬದುಕಿಗೆ ಆಸರೆಯಾಗಿ ನಿಲ್ಲುವುದು ಧರ್ಮವಲ್ಲವೇ
ನೊಂದಿಹ ಮನುಜಗೆ ಭರವಸೆಯ ನುಡಿಗಳು ತೋಳಿಗೆ ಗೆಳೆಯಾ
ಶತ್ರುತ್ವದ ಹಿಂಸೆ ಹೃದಯವನು ಹಿಂಡುವುದು ಸಹಜವಾಗಿದೆ
ಮಿತ್ರತ್ವವ ಶಂಕಿಸಿ ದ್ರೋಹದಿ ಕಾರಣವಾದೆಯಾ ಗೋಳಿಗೆ ಗೆಳೆಯಾ
ಬೆರೆತ ವಾತ್ಸಲ್ಯದ ದಿನಗಳ ಖುಷಿಯು ಮರೆತು ಹೋಯಿತೇ
ಕಳೆದ ಸಂಬಂಧಗಳು ಅಪಾರ್ಥದಲಿ ಕಳಚಿತೇ ಗಾಳಿಗೆ ಗೆಳೆಯಾ
ಬಿಚ್ಚಿಟ್ಟ ನೆನಪುಗಳ ಸಾಲಿಗೆ ಬರ ಎಂಬುದಿಲ್ಲ
ಕಚ್ಚಿ ಚುಚ್ಚಿದ ಕಹಿಗಳು ಮರುಕಳಿಸಿತೇ ಕಾಲದ ಧೂಳಿಗೆ ಗೆಳೆಯಾ
ಅನ್ಯಾಯ ಅಪವಾದಗಳು ಸೆರಗಲ್ಲಿ ಕಟ್ಟಿದ ಕೆಂಡವಿದ್ದಂತೆ
ನ್ಯಾಯದ ಜೀವನ ರತುನಾಳಿಗೆ ಸಿಹಿ ಹೋಳಿಗೆ ಗೆಳೆಯಾ
-ರತ್ನಾ ಭಟ್ ತಲಂಜೇರಿ
ಚಿತ್ರ್