ರಬಡಿ ಜಿಲೇಬಿ

ರಬಡಿ ಜಿಲೇಬಿ

ಮಥುರೆಯೆಂದರೆ ಶ್ರೀ ಕೃಷ್ಣನ ನೆನಪಾಗುತ್ತಾ ಇದೆ. ಶ್ರೀಕೃಷ್ಣನೋ ಹಾಲು-ಕೆನೆ-ಬೆಣ್ಣೆಗಳನ್ನು ಮದ್ದು ಮುದ್ದಾಗಿ ಬೆಳೆದಂಥವ. ಬೃಂದಾವನದಲ್ಲಿ ತನ್ನ ಲೀಲೆಗಳನ್ನು ತೋರಿದಂಥವ. ಅಂಥ ನಾಡಿನದೊಂದು ಪಕ್ವಾನ್ನ ಈ ರಬಡಿ ಜಿಲೇಬಿ.

ಹಾಲನ್ನು ಸ್ವಚ್ಛವಾದ ಕಡಾಯಿಯಲ್ಲಿ ಹಾಕಿ ಕಾಯಿಸಿ. ಸ್ವಲ್ಪ ಅಟ್ಟಿಸಲಿ. ಕೆನೆಗಟ್ಟತೊಡಗುತ್ತದೆ. ಆ ಕೆನೆಯನ್ನೆಲ್ಲ ತೆಗೆದು ಒಂದೆಡೆ ಸೇರಿಸಿಡಿ. ಅದು ಉಂಡೆಯಂತೆ ಕಟ್ಟಲ್ಪಟ್ಟರೆ ಇನ್ನೂ ಒಳ್ಳೆಯದು. ಹಾಲು ಕಾಯುತ್ತಲೇ ಇರಲಿ. ಅದು ಗಟ್ಟಿಗೊಂಡಾಗ ಕೆನೆಯ ಉಂಡೆಯನ್ನು ಅದರಲ್ಲಿ ಹಾಕಿ. ಜತೆಗೆ ಸಕ್ಕರೆ, ಗೋಡಂಬಿ, ದ್ರಾಕ್ಷಿಗಳನ್ನು ಹಾಕಿ ಕೈ ಆಡಿಸಿ, ಕೆಳಗೆ ಇಳಿಸಿದ ಮೇಲೆ ಕೇದಿಗೆ ಹಾಗೂ ಗುಲಾಬಿ ನೀರನ್ನು ಅದಕ್ಕೆ ಸಿಂಪಡಿಸಿರಿ. ಸ್ವಲ್ಪ ಹೊತ್ತಿನವರೆಗೆ ಅದನ್ನು ಹಾಗೆ ಇಟ್ಟು ತುಸು ಬಿಸಿಯಾಗಿ ಕರಿದ ಜಿಲೇಬಿಯನ್ನು ಈ ರಬಡಿಯಲ್ಲಿ ಮುಳುಗಿಸಿ.

ಹೀಗೆ ರಬಡಿಯಲ್ಲಿ ಮುಳುಗಿಸಿಟ್ಟ ಜಿಲೇಬಿಗಳನ್ನು ಆಕರ್ಷಕವಾದ ಬೌಲ್‌ಗಳಲ್ಲಿ ಹಾಕಿ ನಿಮ್ಮ ಆತ್ಮೀಯರಿಗೆ ಕೊಡಿ. ಗೋಡಂಬಿ - ದ್ರಾಕ್ಷಿ ಸಹಿತದ ರಬಡಿಗೆ ಬೇಕೆಂದರೆ ಬಾದಾಮಿ ಪುಡಿ ಹಾಗೂ ವರ್ಕ್ (ಬೆಳ್ಳಿಯ ತೆಳು ಹಾಳೆ) ಸೇರಿಸಿದರಂತೂ ಇನ್ನೂ ಸ್ವಾದಿಷ್ಟ.

-ರಾಧಿಕಾ ಜಿ ಎಸ್, ಚಿಕ್ಕಜಾಜೂರು