ರವಿಯುದಯದ ವೈಭೋಗ

ರವಿಯುದಯದ ವೈಭೋಗ

ಕವನ

ಕವಿದಿಹ ಕತ್ತಲ ತೆರೆಯನು ಸರಿಸುತ

ರವಿ ಮೂಡಿದ ನೋಡ
ಕವಿಗಳ ಮನದಲಿ ಬರೆಸುತ ಕಾವ್ಯವ 
ಸವಿಯಾಗಿಸೆ ನಾಡ
 
ಹಳದಿಯ ಓಕುಳಿಯಾಡುತ ಕೇಸರಿ ವರ್ಣವ ಲೇಪಿಸಿದ
ಇಳಿದನೋ ಧರೆಗದೊ ಮೆಲ್ಲನೆ ನೇಸರ ಕಣ್ಣೋ ಪರಿಸರದ
ಕೊಳೆಯನು ಕಳೆಯುತ ಕಿರಣದ ಮಳೆಗರೆಯುತ ಇನ ಭೂತಳದಿ
ಥಳಥಳಿಸುತ ಮೂಡಣದಲಿ ಬಿರಿದನು ಹೊಳೆಯುತ ತಾ ಮುದದಿ
 
ಸೂರ್ಯೋದಯದ ಮಕರಂದವನು ಬೊಗಸೆಲಿ ಹಿಡಿ ನೀನು
ಆರ್ಯಮ ಚೆಲ್ಲಿದ ರಶ್ಮಿಯಮೃತವನು ಹೀರುವಳಿಯು ನಾನು
                                      ಹೀರುವಳಿಯು ನಾನು
 
ಆಗಸದಲಿ ಬಣ್ಣಗಳೋಕುಳಿಯಲಿ ಮಿಂದಿಹ ದಿನಮೌಳಿ
ರಾಗಾಲಾಪನೆ ಹಕ್ಕಿಗಳುಲಿಯಲಿ ಮಂಜುಳ ರವ ಕೇಳಿ
ಸಾಗರ ಮೊರೆಯಿತು ನೀರಿನ ಮೇಗಡೆ ಕೆಂಪಿನ್ಹೊದಿಕೆಯುಟ್ಟು
ಮೇಘಗಳವು ಹೊಂಬಣ್ಣದ ಸೀರೆಗೆ ಕೆಂಪುರವಿಕೆ ತೊಟ್ಟು
                              ಕಾದಿರೆ ಇಳೆ ತಾ ಕಣ್ಬಿಟ್ಟು
                              ನಾಚುತ ಹಸಿರ ಸೀರೆಯುಟ್ಟು
 
ಭ್ರಮರಗಳವು ಸುಮಕರನೋಲಗಕೆ ಸುಮಗಳನರಸುತ-
ಸಂಭ್ರಮದಲಿ ಝೇಂಕರಿಸುತಲರಳಿದ ಹೂಗಳ ಹೀರ್ವುದ ನೋಡು
ಭ್ರಮೆಯಾಯ್ತೆನಗಿದೋ ಭಾನುವಿಗಿಲ್ಲವೋ ಮೇಲು ಕೀಳೆಂಬ ನೋಟ
ದ್ರುಮವಾಗಲಿ ಮೇಣ್ ಸುಮವಾಗಲಿ ಆದಿತ್ಯನಿಗಿಲ್ಲ ಹಠ
 
ಜಲದಲಿ ವನದಲಿ ಮನದಲಿ ಮನೆಯಲಿ ಮೂಡುವ ಪ್ರಭೆಯೊಂದೇ
ಮಲಿನತೆಯನು ಹೊಡೆದೋಡಿಸಿ ಕಾಂತಿಯ ಬೀರುವ ಗುರಿಯೊಂದೇ
ಎಲ್ಲೆಡೆ ತೇಜವ ಚೆಲ್ಲುವ ಪರಿಯದು ಒಂದೇ ವಿಭಾಕರಗೆ
ಎಲ್ಲರು ಸರಿಸಮ ತರತಮ ವಿಲ್ಲವು ನಮ್ಮ ಪ್ರಭಾಕರಗೆ
 
ಮೂಡಣದಲಿ ಕಂಗೊಳಿಸುತ ಹೃನ್ಮನ ತಣಿಸಿದ ಹರಿದಶ್ವ
ಪಡುವಣದೆಡೆ ಪಯಣದ ಮುನ್ನದಿ ಜಗ ಬೆಳಗಿಸೆ ಸಪ್ತಾಶ್ವ
ಕಡೆಯಿತು ರಸಿಕರ ದ್ರವಿಸಿದ ಮನ ರವಿಯುದಯದ ವೈಭೋಗ
ಕಡಲ ತೀರದೊಳು ಕವಿಕೋಗಿಲೆಗಳು ಉಲಿಯಲುದಯರಾಗ
 
                           ಸ್ಪೂರ್ತಿಯ ನೀಡುವರುಣರಾಗ
                           ಈರ್ವರದೆಂಥಾ ಸಂಯೋಗ
 

Comments