ರವಿಯೇ ಚೆಂಡು!
ಕವನ
ಬೆಂಕಿಯುಗುಳುವ ವೇಗದಿಂದಲಿ
ಚೆಂಡನೆಸದನೆ ಎಸೆವವ
ಭಯವ ತೋರದೆ ಅದನು ಎದುರಿಸಿ
ಆಡುತಿರುವನು ದಾಂಡಿಗ
ತನ್ನ ನಿಗದಿತ ಜಾಗದಲ್ಲಿಯೆ
ನಿಂತು ಆಡುತಲಿರುವನು
ಪೂರ್ಣ ಪರಿಣಿತ ಆಟಗಾರನು
ಭಯವನೇತಕೆ ಪಡುವನು?
ಉರಿವ ಸೂರ್ಯನು ಮುಗಿಸಿ ದಿನಚರಿ
ಶರಧಿ ಕಡೆಗವ ಸಾಗುತ
ಹೊಳೆವ ಚೆಂಡಿನ ತರದಿ ಕಾಣುವ
ರವಿಯ ಚೆಲುವಿದು ಅದ್ಭುತ
ಮುಳುಗೊ ಸೂರ್ಯನ ಆಟಗಾರನು
ಚೆಂಡು ಎನ್ನುವ ತರದಲಿ
ಬೀಸಿ ದಾಂಡನು ಭ್ರಮೆಯ ತರಿಸುವ
ಸೆಳೆವ ಯತ್ನವು ಮನದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
