ರಷ್ಯಾದಲ್ಲಿ ಉಲ್ಕಾಪಾತ
ಎಂದಿನಂತೆ ಶುಕ್ರವಾರವೂ ರಷ್ಯಾದ ಉರುಲ್ ಪ್ರಾಂತ್ಯದ ಜನ ಮುಂಜಾನೆ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಚೇರಿಗೆ ಹೊರಟವರು ಹಲವರಾದರೆ, ಮಕ್ಕಳೆಲ್ಲಾ ಶಾಲೆಗೆ ಹೋಗುತ್ತಿದ್ದರು. ಚುಮುಚುಮು ಚಳಿಯ ನಡುವಣ ಮಂಜಿನ ವಾತಾವರಣ ಇದ್ದಕ್ಕಿದ್ದಂತೆ ಒಮ್ಮೆಲೆ ಬೆಳಕಾಗುತ್ತಿರುವಂತೆ ಭಾಸವಾಯಿತು. ಕತ್ತೆತ್ತಿ ನೋಡಿದರೆ ಬೆಂಕಿಯ ಉಂಡೆಯಂತೆ ಪ್ರಜ್ವಲಿಸುತ್ತಿತ್ತು. ಬಾಂಬ್ ಅಸ್ಪೋಟದಂತೆ ಸಿಡಿಯಿತು ಬೆಂಕಿ ಉಂಡೆ. ದೈತ್ಯ ಬೆಂಕಿ ಉಂಡೆಯೊಂದು ಆಕಾಶದಿಂದ ಕಳಚಿ ಬಿದ್ದ ಸದ್ದು. ರಷ್ಯಾದ ಉರುಲ್ ಪರ್ವತ ಶ್ರೇಣಿಗೆ ಹೊಂದಿಕೊಂಡಂತಿರುವ ಚೆಲ್ಯಾಬಿನ್ಸ್ಕ ನಗರದಲ್ಲಿ ಶುಕ್ರವಾರ ಉಲ್ಕಾಪಾತವಾಯಿತು. ಸೆಕೆಂಡ್ಗೆ 30ಕಿ.ಮೀ ಶರವೇಗದಲ್ಲಿ ಚಲಿಸುತ್ತಿದ್ದ ಬೆಂಕಿಯುಂಡೆ ಭೂ ವಾತಾವರಣ ಪ್ರವೇಶಿಸಿ ಬೂದಿಯಾಯಿತು. ಸುಮಾರು ೨೦೦ ಕಿ.ಮೀ.ವರೆಗೂ ಇದರ ಹೊಗೆಯ ದಟ್ಟವಾಗಿ ಗೋಚರಿಸುತ್ತಿತ್ತು. ಸುಮಾರು ಹತ್ತು ಸಾವಿರ ಮೀಟರ್ (೩೨,೮೦೦ಅಡಿ) ಎತ್ತರದಲ್ಲಿ ಉಲ್ಕೆ ಸ್ಪೋಟಗೊಂಡಿತ್ತು.
ಉಲ್ಕಾಪಾತದ ತೀವ್ರತೆಗೆ ಸಿಕ್ಕಿ ಕಟ್ಟಡಗಳು, ಶಾಲೆಗಳು, ಬಿರುಕು ಬಿಟ್ಟವು. ಹಲವಾರು ಮಕ್ಕಳು, ಜನರು ಗಾಯಗೊಂಡರು. ಮೊಬೈಲ್ ಮತ್ತು ಅಂತರ್ಜಾಲ ಸೇವೆ ಕಡಿತಗೊಂಡಿದೆ. ಯಾರೂ ಮನೆಯಿಂದ ಹೊರಗಡೆ ಬರದಂತೆ ಸೂಚಿಸಲಾಗಿದ್ದು, ಸಾವಿರಾರು ಯೋಧರು ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಣು, ರಾಸಾಯನಿಕ ಮತ್ತು ಜೈವಿಕ ಸ್ಥಾವರಗಳಲ್ಲಿ ವಿಕಿರಣ ಸೋರಿಕೆಯಾಗಬಹುದಾದ ಭೀತಿ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಉಲ್ಕಾಪಾತ ಎಂದರೇನು?
ಸಾವಿರಾರು ಸಣ್ಣಪುಟ್ಟ ಆಕಾಶಕಾಯಗಳ ರಾಶಿ ವಿವಿಧ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಸುತ್ತುತ್ತಿರುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ಚಲಿಸುತ್ತಿರುವ ಸಮಯದಲ್ಲಿ ಇವು ಸಂಪರ್ಕಕ್ಕೆ ಬಂದರೆ ತಕ್ಷಣವೇ ಬೆಂಕಿ ಹೊತ್ತಿಕೊಂಡು ಸಾವಿರ ಹೋಳಾಗಿ ಉರಿದು ಬೀಳುತ್ತವೆ. ಇವೇ ಉಲ್ಕಾಪಾತ.
(ಸುದ್ದಿ ಮಾಹಿತಿ)
Comments
ಚೆನ್ನಾಗಿದೆ ಲೇಖನ . ಕಡೆಯಲ್ಲೊಂದು
In reply to ಚೆನ್ನಾಗಿದೆ ಲೇಖನ . ಕಡೆಯಲ್ಲೊಂದು by partha1059
ಮಾಹಿತಿ ಹಾಗೂ ಬದಲಾವಣೆಗೆ ಸ್ವಾಗತ