ರಷ್ಯಾ ಸಶಸ್ತ್ರ ದಂಗೆ : ವಿಶ್ವ ಸಮುದಾಯಕ್ಕೆ ಪಾಠ
ಉಕ್ರೇನ್ ವಿರುದ್ಧ ಕಳೆದ ೧೬ ತಿಂಗಳುಗಳಿಂದೀಚೆಗೆ ಸೇನಾ ಆಕ್ರಮಣವನ್ನು ನಡೆಸುತ್ತಿರುವ ರಷ್ಯಾಕ್ಕೆ ಶನಿವಾರದಂದು ಭಾರೀ ಸಂಕಷ್ಟವೊಂದು ಎದುರಾಗಿ ರಷ್ಯಾ ವ್ಲಾದಿಮಿರ್ ಪುತಿನ್ ಸ್ವತಃ ದೇಶಬಿಟ್ಟು ಪಲಾಯನಗೈಯುವಂಥ ಪರಿಸ್ಥಿತಿ ಸೃಷ್ಟಿಯಾದದ್ದೇ ಅಲ್ಲದೆ ರಷ್ಯಾದ ಗೋಸುಂಬೆತನವನ್ನು ಬಟಾಬಯಲಾಗಿಸಿತು.
ವ್ಲಾದಿಮಿರ್ ಪುತಿನ್ ಅವರ ಪರಮಾಪ್ತನಾಗಿದ್ದ ಯೆವ್ಗೆನಿ ಪ್ರಿಗೋಝಿನ್ ನೇತೃತ್ವದ ವ್ಯಾಗ್ನರ್ ಪಡೆ ಶನಿವಾರ ಏಕಾಏಕಿಯಾಗಿ ರಷ್ಯಾ ಸೇನೆಯ ವಿರುದ್ಧವೇ ತಿರುಗಿಬಿದ್ದು ಮಾಸ್ಕೋವನ್ನೇ ವಶಪಡಿಸಿಕೊಳ್ಳಲು ಹೊರಟಿತ್ತು. ಈ ಬೆಳವಣಿಗೆ ಇಡೀ ರಷ್ಯಾದ ಆತಂಕಕ್ಕೂ ಕಾರಣವಾಗಿತ್ತು. ಬೆಲಾರೂಸ್ ಅಧ್ಯಕ್ಷರು ನಡೆಸಿದ ಸಂಧಾನ ಮಾತುಕತೆಯ ಫಲವಾಗಿ ಪ್ರಿಗೋಝಿನ್, ತನ್ನ ಪಡೆಗಳನ್ನು ರಾತ್ರಿ ವೇಳೆ ರಷ್ಯಾದಿಂದ ಸಂಪೂರ್ಣವಾಗಿ ವಾಪಾಸ್ ಕರೆಸಿಕೊಂಡು ಭುಗಿಲೆದ್ದ ಆಂತರಿಕ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ. ಇದರೊಂದಿಗೆ ರಷ್ಯಾ ನಿಟ್ಟುಸಿರು ಬಿಡುವಂತಾಯಿತು. ಖಾಸಗಿ ಸೇನೆಯಾದ ವ್ಯಾಗ್ನರ್ ಪಡೆಯ ಬಲವರ್ಧನೆಗಾಗಿ ದಶಕದಿಂದ ನೀರೆರೆಯುತ್ತಾ ಬಂದಿದ್ದ ರಷ್ಯಾಕ್ಕೆ ಈ ಆಂತರಿಕ ಸಶಸ್ತ್ರ ದಂಗೆ ವಿಶ್ವಮಟ್ಟದಲ್ಲಿ ಅಪಮಾನ ಉಂಟು ಮಾಡಿದ್ದೇ ಅಲ್ಲದೆ ವಿಶ್ವದ ಪ್ರಬಲ ರಾಷ್ಟ್ರವಾದ ರಷ್ಯಾದ ನೈಜ ಬಂಡವಾಳವನ್ನು ಜಗಜ್ಜಾಹೀರುಗೊಳಿಸಿದೆ. ಉಕ್ರೇನ್ ವಿರುದ್ಧ ಯುದ್ಧ ಮುಂದುವರಿದಿರುವಂತೆಯೇ ರಷ್ಯಾ ಸೇನೆಗೆ ಎದುರಾಗಿರುವ ಸಂಕಷ್ಟ, ರಾಜಕೀಯ ಬೆಳವಣಿಗೆಗಳ ಬಗೆಗೆ ಜಾಗತಿಕಮಟ್ಟದಲ್ಲಿ ಚರ್ಚೆಗಳು ನಡೆಯಲಾರಂಭಿಸಿದ್ದವು. ಆದರೆ ಈ ಹುಳುಕುಗಳೆಲ್ಲವನ್ನೂ ಮುಚ್ಚಿಟ್ಟು ರಷ್ಯಾ ಸೇನೆ ಉಕ್ರೇನ್ ವಿರುದ್ಧದ ಸಮರವನ್ನು ಮುಂದುವರೆಸಿತ್ತು. ಅಧ್ಯಕ್ಷ ಪುತಿನ್ ಕೂಡ ಈ ಬಗ್ಗೆ ತುಟಿ ಪಿಟಿಕ್ ಎನ್ನದೆ ಯುದ್ಧ ಮುಂದುವರೆಸುವ ನಿಲುವಿಗೆ ಅಂಟಿಕೊಳ್ಳುವ ಮೂಲಕ ತಮ್ಮ ಪ್ರತಿಷ್ಟೆ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಲೇ ಬಂದಿದ್ದರು. ಆ ಆಂತರಿಕ ಸಂಘರ್ಷ ಕೇವಲ ಒಂದು ದಿನಕ್ಕೆ ಸೀಮಿತಗೊಂಡರೂ ಜಗತ್ತಿನ ಎಲ್ಲ ರಾಷ್ಟ್ರಗಳು ಈ ಬೆಳವಣಿಗೆಯಿಂದ ಕಲಿಯಬೇಕಿರುವುದು ಬಹಳಷ್ಟಿದೆ. ಬ್ಯಾಗ್ನರ್ ಪಡೆ, ಇದರ ರೂವಾರಿ ಯೆವ್ಗೆನಿ ಪ್ರಿಗೋಝಿನ್ ಕೇಟರಿಂಗ್ ನಿಂದ ಖಾಸಗಿ ಸೇನೆಯ ಮುಖ್ಯಸ್ಥನಾದುದು, ಈತನ ಪಡೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನಡೆಸಿದ ದೌರ್ಜನ್ಯ, ಕ್ರೌರ್ಯಗಳ ಬಗೆಗೆ ಅರಿವಿದ್ದರೂ ರಷ್ಯಾ ವ್ಯಾಗ್ನರ್ ಪಡೆಯ ಬೆಳವಣಿಗೆಗೆ ಎಲ್ಲ ತೆರನಾದ ಪ್ರೋತ್ಸಾಹ, ಸಹಕಾರ ನೀಡುತ್ತಾ ಬಂದಿರುವುದು ಅನುಮಾನಗಳಿಗೆ ಕಾರಣವಾಗಿದೆ. ರಷ್ಯಾದಲ್ಲಿ ಪರ್ಯಾಯ ಸೇನೆಯನ್ನು ರಚಿಸಲು ಕಾನೂನಿನಲ್ಲಿ ಅವಕಾಶ ಇಲ್ಲವಾದರೂ ಇದನ್ನು ಉಲ್ಲಂಘಿಸಿ ಕಂಪೆನಿಯಾಗಿ ನೋಂದಾಯಿಸಿಕೊಂಡು ಅದನ್ನು ಅಧಿಕೃತಗೊಳಿಸಿ, ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟ ಪುತಿನ ನಡೆ ಕೂಡಾ ಚರ್ಚಾರ್ಹ.
ಈ ಇಡೀ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಯಾವುದೇ ರಾಷ್ಟ್ರ ತನ್ನ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಇನ್ನೊಂದು ಹಂತಕ ಪಡೆಯ ಮೊರೆ ಹೋದ ಸಂದರ್ಭದಲ್ಲಿ ಭವಿಷ್ಯದಲ್ಲಿ ಅದು ತನ್ನ ಪಾಲಿಗೇ ಮುಳುವಾಗಿ ಪರಿಣಮಿಸುತ್ತದೆ ಎಂಬುದು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತಾದಂತಾಗಿದೆ. ಇಂತಹ ಘಟನೆಗಳು ಇದೇ ಮೊದಲಲ್ಲವೇನಾದರೂ ರಷ್ಯಾದಂತಹ ಪ್ರಬಲ ರಾಷ್ಟ್ರಗಳು ಇಷ್ಟೊಂದು ದುರ್ಬಲ ರಕ್ಷಣ ಕಾರ್ಯತಂತ್ರಗಳನ್ನು ಹೊಂದಿರುವುದು ಅಚ್ಚರಿಯೇ ಸರಿ. ಇಂತಹ ಕಾರ್ಯತಂತ್ರಗಳು ತಾತ್ಕಾಲಿಕ ಯಶಸ್ಸನ್ನು ಕಂಡರೂ ಇದನ್ನೇ ಮುಂದುವರೆಸಿದಲ್ಲಿ ಅದು ತಿರುಗುಬಾಣವಾಗಿ ಪರಿಣಮಿಸುವುದು ಖಚಿತ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೬-೦೬-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ