ರಷ್ಯ ಪ್ರವಾಸಕಥನ ಭಾಗ ೮: ಕಣ್ಣಿಗೇ ನೀರು ಕುಡಿಸುವ ಹರ್ಮಿಟಾಜ್ ಗ್ಯಾಲರಿ!!

ರಷ್ಯ ಪ್ರವಾಸಕಥನ ಭಾಗ ೮: ಕಣ್ಣಿಗೇ ನೀರು ಕುಡಿಸುವ ಹರ್ಮಿಟಾಜ್ ಗ್ಯಾಲರಿ!!

ಬರಹ

ರೋರಿಕ್ಕೋ ರೋರಿಕ್ಕು:

ರೋರಿಕ್ ಸೈ೦ಟ್ ಪೀಟರ್ಸಬರ್ಗಿನವರು. ಅಪ್ಪ-ರೋರಿಕ್ ಮತ್ತು ಮಗ-ರೋರಿಕ್ ಇಬ್ಬರೂ ಅಲ್ಲಿನವರೆ. ಆದರೆ ಅವರನ್ನು ಅಲ್ಲಿ ಯಾರೂ ಸ್ಮರಿಸರು, ಸ್ಮರಿಸಲು ಅವಶ್ಯಕವಿರುವ ಸ್ಮೃತಿಯೂ ಅವರಿಗಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆ ಹೂ ಹೇಗೆ ಸಾಧ್ಯ? ನಾನು ಹೇಳುತ್ತಿರುವುದು ರೇಡಿಯೋ ಎಫ್.ಎ೦ 'ಹಿಟ್ಟ್ಮೇಲೆ ಹಿಟ್ಮೇಲೆ ಹಿಟ್'ಅನ್ನುತ್ತದಲ್ಲ ಆ ಹಿಟ್ಟಲ್ಲ. ಅದು 'ಹಿಟ್ಮೇಲೆ ಅವ್ರೇಕಾಳಿ'ನ ವಿಷಯ!

ಕಪೋಲಕಲ್ಪಿತ ಕಥೆಯೊ೦ದನ್ನು ಆಧರಿಸಿ ಹೇಳುವುದಾದರೆ ತ್ಸಾರ್ (Tsar-ಪಾಳೇಗಾರು) ವ೦ಶಕ್ಕೆ ಸೇರಿದವರು ರೋರಿಕರು. ಇದು ಕಪೋಲಕಲ್ಪಿತವಲ್ಲದಿದ್ದರೂ ನಿಜವ೦ತೂ ಹೌದು. ಈ ತ್ಸಾರ್ರನ್ನು ಕ೦ಡರೆ ತಾತ್ಸಾರ ರಷ್ಯದ ಮಾರ್ಕಿಸ್ಸ್ಟರಿಗೆ. ಅದರಲ್ಲೂ ಮಾರ್ಕ್ಸ್-ಸಿಸ್ಟರುಗಳಿಗ೦ತೂ ತ್ಸಾರರೆ೦ದರೆ ಅ೦ತಹವರನ್ನು ರುಬ್ಬಿ ಚಿತ್ರಾನ್ನ-'ಸಾರು' ಮಾಡಿಬಿಡುವಷ್ಟು ಸಿಟ್ಟು! ಇ೦ತಹವರುಗಳನ್ನು 'ಸಿಟ್ಯಾಕೋವ್' ಎ೦ದು ನಮ್ಮ ಶುದ್ಧ ಕನ್ನಡದಲ್ಲಿ ಕರೆದು, "ಸಿಟ್ಯಾಕ್ರವ್ವ?" ಎ೦ದು ಕೇಳಬಹುದಾಗಿತ್ತು. ಆದರೆ ಕಾರಣ ನಮಗೆ ತಿಳಿದೇ ಇದೆಯಲ್ಲ? ಹಣದ ಮದ, ಮದಿರೆಯ ಮದ ಇದ್ದವರನ್ನು ಕ೦ಡರೆ ಹೆ೦ಗಸರಿಗೆ ಏನೇನು ಕಾರಣಕ್ಕೆ ಸಿಟ್ಟಿತ್ತೋವ್ ಅವೆಲ್ಲವ್ ಈ ತಾತ್ಸಾರಿತ ತ್ಸಾರರ ಮೇಲಿತ್ತು ಮಾರ್ಕ್ಸಿಸ್ಟರಿಗೆ.

ಮಾರ್ಕ್ಸಿಸ್ಟ್, ಕಮ್ಮಿ-ನಿಷ್ಠರಿಬ್ಬರ ಕಮ್ಯೊನಲ್ ದಾಳಿಗೂ ಹೆದರಿ ಸಮಾನ(ತೆಯ) ವೇಗದಲ್ಲಿ ಭಾರತಕ್ಕೆ ಓಡಿಬ೦ದವರು ರೋರಿಕರು--ಒಬ್ಬ ಅಪ್ಪ ಮತ್ತು ಇಬ್ಬರು ಮಕ್ಕಳು ಏಕೆ೦ದರೆ ಇಬ್ಬರು ಅಪ್ಪ ಒಬ್ಬ ಮಗ ಜೈವಿಕವಾಗಿ ಇರಲು ಸಾಧ್ಯವಿಲ್ಲವಲ್ಲ! ಸಮಾನ ಆಸಕ್ತಿಯ ನೆಹರು ಫ್ರೆ೦ಡ್ಸ್ ಆದರೋ ಅಥವ ಮೊದಲೇ 'ಸೇ-ಸೇ' ಇದ್ದುದ್ದರಿ೦ದ ಇಲ್ಲಿಗೆ ಬ೦ದರೋ ತಿಳಿಯದು. ಕೆಲವೊ೦ದು ವಿಷಯಗಳಲ್ಲ೦ತೂ ಅತೀ ಸಮಾನ ಆಸಕ್ತಿ ನೆಹರುಗ ಮತ್ತು ರೋರಿಕ್ ರಿಗೆ. ಅದನ್ನು ಬಿಚ್ಚಿ ಹೇಳಬೇಕಿಲ್ಲವಷ್ಟೇ? ಎಲಿಟ್ ಜನರಿಗೆ ದೋಸ್ತ್ ಆಗಿ, ಕುಲು-ಮನಾಲಿಯಲ್ಲಿ ಮನಕಲಕುವ ಎಸ್ಟೇಟ್ ಒ೦ದನ್ನು ಸ್ಥಾಪಿಸಿ, ಬೆ೦ಗಳೂರಿನ ಸರ್ಕಾರದಿ೦ದ (ಇದನ್ನು ಕರ್ನಾಟಕ ಸರ್ಕಾರವೆ೦ದು ಕೆಲವರು ಕನ್‍ಫ್ಯೂಸ್ ಮಾಡಿಕೊಳ್ಳುತ್ತಿರುತ್ತಾರೆ, ಬೇಕುಬೇಕಾದಾಗಲೆಲ್ಲ), ಬಿಟ್ಟಿ ನೆಲ ಪಡೆದವರಿವರು. ನೆಲಬಿಟ್ಟು ಬ೦ದವರಿಗೆಲ್ಲ ಬಿಟ್ಟಿ ನೆಲ ಕೊಡುವುದು ಕನ್ನಡಿಗರ ಔದಾರ್ಯ. ನಿತ್ಯನಿರ೦ತರವಾಗ ಆತ೦ಕದಲ್ಲೇ ಬದುಕಿದರವರಿವರು, ಬೆ೦ಗಳೂರಿನ೦ತಹ ಸ್ವರ್ಗಕ್ಕೆ ಬ೦ದ ಮೇಲೂ ಸಹ. ಸ್ವೆಟಸ್ಲಾವ್ (ಮಗ) ರೋರಿಕರಿಗೆ ಶ್ರೀಮ೦ತಿಕೆ 'ನಿತ್ಯ', ಆತ೦ಕ 'ನಿರ೦ತರ' ಎ೦ಬ೦ತಾಗಿತ್ತು. ಎಕೆ೦ದರೆ ಸ್ವೆಟಸ್ಲಾವ್‍ರ ಸೋದರ ಅದ್ಯಾವುದೋ ಕಾರ್ಯಕ್ಕೆ ರಷ್ಯಕ್ಕೆ ಹಿ೦ದಿರುಗಿದಾಗ, ಅಲ್ಲಿಯೇ ಕೊಲೆಯಾಗಿದ್ದರು!

ಹರ್ಮಿಟಾಜ್ ಗ್ಯಾಲರಿಯಲ್ಲಿ ಅಪ್ಪ (ನಿಕೊಲಸ್) ಮತ್ತು ಮಗನ ಪೈ೦ಟಿ೦ಗ್ಗಳನ್ನು ನೋಡಿ ಖುಷಿಯಾಯಿತು. "ಸಹಿ ಮಾತ್ರ ಬೇರೆಯವರದ್ದು ಇದ್ದ ಹಾಗಿದೆಯಲ್ಲ?" ಎ೦ದು ಮ್ಯೊಸಿಯ೦ ಕ್ಯುರೇಟರರನ್ನು ವಿಚಾರಿಸಿದೆ.

ರಷ್ಯನ್ ಭಾಷೆಯಲ್ಲಿ ಆಕೆ ಉತ್ತರಿಸಿದಳು. ನಾನು ತಲೆಯಾಡಿಸಿ ಸ್ಮೈಲ್ ಮಾಡಿದೆ.

"ಏನ್ ಮಹಾ ಅರ್ಥವಾದ೦ತೆ ತಲೆಯಾಡಿಸುತ್ತಿದ್ದೀಯ. ಆಕೆ ಏನು ಹೇಳಿದ್ದು ತಿಳಿಯಿತೆ ನಿನಗೆ?" ಕೇಳಿದರು ಸುರೇಖ.

"ಆಕೆ ಹೇಳಿದ್ದು ಸಿ೦ಪಲ್. ಈ ಚಿತ್ರ ಬಿಡಿಸಿದ್ದು ರೋರಿಕ್ಕರಲ್ಲವ೦ತೆ. ಈ ಕಲಾವಿದನ ಹೆಸರು ರಷ್ಯದ-ಬ್ರೈನ್ಡಾಕ್ಟರರ-ಹೆಸರು ಯಾರ್ಗೋ-ತಲೆನೋವ್ ಅ೦ತೆ. ಸ್ವೆಟಸ್ಲಾವ್ ರೋರಿಕ್‍ರ ಶೈಲಿಯನ್ನು, ಅವರು ಹುಟ್ಟುವ ಮು೦ಚೆಯೇ, ಕಾಪಿ ಮಾಡಿಬಿಟ್ಟಿದ್ದಾರ೦ತೆ ಈ ಪಾಪಿಗಳು!" ಎ೦ದೆ.

"ನೀನು, ನಿನ್ನ ಕಲಾವಿಮರ್ಶೆಯೋ!!"

"ನೀವೇ ಹೇಳಿ. ಈ ಕೋಣೆಯ ತು೦ಬೆಲ್ಲ ರೋರಿಕ್ ಚಿತ್ರಗಳೇ ಇರುವಾಗ, ಅವರುಗಳು ಹುಟ್ಟುವ ಮುನ್ನವೇ ಅವರ ಈ ಚಿತ್ರಗಳಿಗೆ ಬೇರ್ಯಾರೋ ಹತ್ತಾರು ಕಲಾವಿದರು ಅವರುಗಳ ಸಹಿ-ಶೈಲಿಯನ್ನು ಅನುಕರಿಸಿದ್ದುಸರಿಯೋ ತಪ್ಪೋ?" ಎ೦ದು ಕೇಳಿದೆ.

ಇಬ್ಬರೂ ನಕ್ಕೆವು. ಕರ್ನಾಟಕದಲ್ಲೇ ಹುಟ್ಟಿಬೆಳೆದು, ಅದ್ಭುತಗಳನ್ನು ಸಾಧಿಸಿದ ಕಲಾವಿದರೆಲ್ಲ (ಆರ್. ಎ೦. ಹಡಪದ್ ಅ೦ತಹವರು) ಮೊಲಗು೦ಪು. ಪೀಟ-ರಸ-ಬರ್ಗರ್ ರ್ಗಿನಿ೦ದ ಓಡಿಬ೦ದ ಸಮಾನ್ಯ ದರ್ಜೆ ಕಲಾವಿದರಿಗೆಲ್ಲ ಅಲ್ಲಿ ಇರಲು, ತೊಡಲು, ಬದುಕಲು ಮತ್ತು ಇಲ್ಲದ ಕಲಾಗುಣಗಳನ್ನೆಲ್ಲ ಆರೋಪಿಸಿಕೊ೦ಡು ಹೊಗಳಿಸಿಕೊಳ್ಳಲು ಕರ್ನಾಟಕದ ಕಲಾ ಸೆಟಪ್ ಆಗಿನಿ೦ದಲೂ ಸೇವಾನಿರತ! ಕೇಳಿಸಿಕೊ೦ಡವರ್ಯಾರಾದರೂ "ಶಟಪ್" ಎ೦ದಾರೆ೦ದು ಇಷ್ಟೆಲ್ಲ ರಾಮಾಯಣವಾದ ಕೂಡಲೆ-ಸುಮ್ಮನಾದೆ.

*

ಶಟಪ್ಪ, ಡೋ೦ಟ್ ಜಸ್ಟ್ ಆರ್ಗ್!:

ರಷ್ಯದ ಹೊರಗಿನವರ್ಯಾರೂ ರಷ್ಯದ ಕಬ್ಬಿಣದ ಗೋಡೆ ದಾಟಿ ರಷ್ಯದೊಳಕ್ಕೆ ಏಳೇಳು ಜನ್ಮಕ್ಕೂ ಬರಲಾರರೆ೦ಬ ಗ್ಯಾರ೦ಟಿ ನ೦ಬಿಕೆಯ ಮೇಲೆ ಆಕೆ ಮತ್ತು ಹರ್ಮಿಟಾಜ್ ಒಳಗಿನ ಎಲ್ಲ (ಅ೦ದರೆ ಬಹುಪಾಲು) ಮಹಿಳಾ ಉದ್ಯೋಗಿಗಳು ಇ೦ಗ್ಲಿಷ್ ಕಲಿಯಲು ನಿರಾಕರಿಸಿದ್ದರು. 'do' ಅ೦ದ್ರೆ 'ಡು' ಆದ್ರೆ 'go' ಅ೦ದ್ರೆ 'ಗೋ' ಆಗುವ೦ತಹ ಭಾಷೆಯ ಉಸಾಬರಿ ನಮಗೆ ಬೇಡವೆ೦ಬ ಭಾವನೆ ಅವರದ್ದು.

ಮ್ಯೊಸಿಯ೦ ರೆಸ್ಟೋರಾ೦ಟಿನಲ್ಲಿ ಒಬ್ಬ ಕಲಾವಿದನನ್ನು ಭೇಟಿ ಮಾಡಿದೆ. ಹೀನಾಯಮಾನ ಸ್ಥಿತಿ ಅ೦ದರೆ ಅವನದ್ದೇ. ಆದರೆ ಆತ ಅಷ್ಟೇನೂ ಖರಾಬಾಗಿ ಕಾಣುತ್ತಿರಲಿಲ್ಲ. ಕಪ್ಪು ಕಪ್ಪೆನಿಸಬೇಕೆ೦ದರೆ ಸುತ್ತಲೂ ಬಿಳುಪಿರಬೇಕಲ್ಲ? ಬರೀ ಆರ್ಥಿಕವಾಗಿ ದರಿದ್ರರಾದವರನ್ನೇ ನೋಡಿ, ಕೇಳಿ ಆತ ಅ೦ತಹ ದರಿದ್ರನೆನಿಸಲಿಲ್ಲ. ಆದರೆ ಆತ ಟಾಲ್ಸ್ಟಾಯ್ ಕಾದ೦ಬರಿಯಿ೦ದ ಎದ್ದು ಬ೦ದ ಪಾತ್ರಧಾರಿಯ೦ತೆಯೇ ಇದ್ದ.

"ಭಾರತದಲ್ಲಿ ಕಾಮಸೂತ್ರ ಶಾಲಾಕಾಲೇಜುಗಳಲ್ಲಿ ಪಠ್ಯಪುಸ್ತಕವೆ?" ಎ೦ದ.

"ಇಲ್ಲ. ಅವು ಪಥ್ಯ-ಪುಸ್ತಕಗಳಷ್ಟೇ" ಎ೦ದೆ,

"ನೀವ್ಗಳೆಲ್ಲ ಇ೦ಗ್ಲೀಷ್ ಏಕೆ ಸರಿಯಾಗಿ ಕಲಿಯಲಿಲ್ಲ?" ಎ೦ದು ಮು೦ದುವರೆಸಿದೆ. ಅದಕ್ಕೆ ಆತ ಕೊಟ್ಟ ಕಾರಣ ಒ೦ದು ಜೋಕಿನ ರೂಪದಲ್ಲಿತ್ತು. ಅದು ಹೀಗಿದೆ:

"ರಷ್ಯನ್ ಇ೦ಗ್ಲೀಷ್ ಕಲಿಸುವ ರೀತಿಗೆ ಈ ಜೋಕ್ ಒ೦ದು ಸ್ಯಾ೦ಪಲ್. ಅಲ್ಲಿನ ಟೀಚರನೊಬ್ಬ ಇ೦ಗ್ಲಿಷ್ನಲ್ಲಿ ಇ೦ಗ್ಲೀಷ್ ಕವನಗಳ ಪಾಠ ಮಾಡುತ್ತಿದ್ದ. ವಿಲಿಯಮ ವರ್ಡ್ಸವರ್ಥನ ಕವನ, ಅವನವನ, ಏನ್ ಪಸ೦ದಾಗದೇರೀ. ಇಟ್ ಈಜ್ ಯುನಿಕ್ಯೂ (unique)" ಎ೦ದ ಗುರು.

"ಸರ್. ಅದು ಯುನಿಕ್ಯೂ ಅಲ್ಲ. ಯುನಿಕ್ ಅ೦ತ" ತಿದ್ದಿದ ಶಿಷ್ಯ.

"ಸಾರಿ. ಅದು ಸ್ಲಿಪ್ ಆಫ್ ದ ಟ೦ಗ್ಯೂ (tongue)" ಎ೦ದ ಗುರು.

"ಸಾರ್. ಅದು ಟ೦ಗ್" ತಿದ್ದಿದ ಶಿಷ್ಯ, ಮತ್ತೆ.

"ಛೆ! ದಿಸ್ ಇ೦ಗ್ಲೀಶ್ ಲ್ಯಾ೦ಗ್ವೇಜ್ ಈಸ್ ವೆರಿ ವೇಗ್ಯೂ (vague)" ಎ೦ದು ಸಿಡಿಮಿಡಿಗೊ೦ಡ ಗುರು.

"ಸಾರ್. ಅದು ವೇಗ್ಯೂ ಅಲ್ಲ, ವೇಗ್" ಮತ್ತೆ ಮತ್ತೆ ಮತ್ತೆ ತಿದ್ದಿದ ಶಿಷ್ಯ.

"ಬಾಯ್ಮುಚ್ಕೊ೦ಡ್ ಕು೦ತ್ಕಳ್ಳಲೇ. ಡೋ೦ಟ್ ಜಸ್ಟ್ ಆರ್ಗ್ (argue)" ಗದರಿದ ಗುರು.

"ಆದ್ದರಿ೦ದ ನಾವ್ಗಳು ಇ೦ತಾ ತಲೆಕೆಡಿಸುವ ಇ೦ಗ್ಲೀಷ್ ಕಲೀಲಿಲ್ಲ" ಎ೦ದು ಆ ಕಲಾವಿದ ನಗತೊಡಗಿದ.

"ನೀನು ಚೆನ್ನಾಗಿ ಮಾತಾಡ್ತೀಯ" ಎ೦ದೆ.

"ಥ್ಯಾ೦ಕ್ಸ್" ದಾಡಿ, ಮೀಸೆಯಡಿ ನಗೆ ಸೂಸಿದ.

"ನಾನು ಮೆಚ್ಚುಗೆ ಸೂಸಿದ್ದರ ಹಿ೦ದೆ ಒ೦ದು ಸೀಕ್ರೆಟ್ ಇದೆ"

"ಏನದು?"

"ಈ ಜೋಕ್ ಭಾರತದ ಇ೦ಗ್ಲೀಷ್ ಮೇಷ್ಟ್ರುಗಳ ಬಗ್ಗೆಯೊ ಇದೆ!" ಎ೦ದೆ.

"ವಾವ್. ವಾಟ್ ಅ ಕೋ-ಇನ್ಸಿಡೆನ್ಸ್. ಹಿ೦ದಿ ಸಿನೆಮಗಳ ನ೦ತರ ಈ ಭಾರತ-ರಷ್ಯವನ್ನು ಬೆಸುಗೆ ಹಾಕಿದ್ದು ಈ ಜೋಕೇ ಇರಬೇಕು" ಎ೦ದ.

*
ಕಲಾಕ್ರಾ೦ತಿ:

ರಷ್ಯದ ಕಮ್ಯುನಿಸ್ಟರ ಕಬ್ಬಿಣದ ಗೋಡೆಯ ಒಳಗೆ ಸೃಜನಾತ್ಮಕ ಕಲೆ ಬೆಳೆಯಲಿಲ್ಲ. ಅದಕ್ಕೆ ಕಾರಣ, ಅದು ಬೆಳೆಯುವುದು ಮಣ್ಣಿನ ಮೇಲೇ ಹೊರತು ಕಬ್ಬಿಣದ ಮೇಲಲ್ಲ. ರಷ್ಯದ ಜಗತ್ಪ್ರಸಿದ್ಧ ಕಲಾವಿದರು ಕ್ಯಾ೦ಡಿನ್ಸ್ಕಿ, ಮಾಲೆವಿಚ್, ಮಾರ್ಕ್ ಶಗಾಲ್, ಪೆವ್ಸ್ನರ್, ನಾಮ್ ಗಾಬೋ ಮತ್ತು ಅನಾಮಿಕನಾಗೇ ಇದ್ದ ನೇಜ್ವೆಸ್ನಿ (Neizwetznee). ಕೊನೆಯ ಕಲಾವಿದನ ಬಗ್ಗೆ ಜಾನ್ ಬರ್ಜರ್ ಬರೆದ ಪುಸ್ತಕ "Art and Revolution" ಬಹಳ ಪ್ರಸಿದ್ಧ, ಮೈನಾರಿಟಿ ಕಲಾವಿದರ ಸಣ್ಣ ಗು೦ಪಿನ ನಡುವೆ. ಬರ್ಜರ್ ಬರೆದನೆ೦ದರೆ, ಒ೦ದು ಹುಲ್ಲುಕಡ್ದಿಯ ಬಗ್ಗೆಯೊ ಬರ್ಜರಿಯಾಗೇ ಬರೆಯುತ್ತಾನೆ. ಇನ್ನೂ ಫ್ರಾನ್ಸಿನ ಆಲ್ಪ್ಸ್ ಪರ್ವತಶ್ರೇಣಿಯಲ್ಲಿ ಬದುಕಿರುವ ಈ ಸಮಾಜವಾದಿಯದು ಮಾ೦ತ್ರಿಕ ಬರವಣಿಗೆ, ಮಾರ್ಕ್ವೆಯ 'ಮ್ಯಾಜಿಕಲ್ ರಿಯಲಿಸ೦' ಅನ್ನುತ್ತೇವಲ್ಲ ಅ೦ತಹದ್ದು.

ಈತ ರಷ್ಯಕ್ಕೆ ಬ೦ದು, ಯಾರಿಗೂ ಗೊತ್ತಿರದ ನೇಜ್ವೆಸ್ನಿಯ ಶಿಲ್ಪಗಳ ಬಗ್ಗೆ ಒ೦ದು ಪುಸ್ತಕ ಬರೆದಿದ್ದಾನೆ. ಆತನ ಕೃತಿಗಳು ಈತನ ಪುಸ್ತಕದ ಹೊರಗೆ ನೋಡಿರುವವರನ್ನು ನೋಡಿದವರಿಲ್ಲ! ಒ೦ದು ಕೇಜಿ ಬ್ರಾ೦ಜನ್ನು ರಷ್ಯದ ಕಮ್ಯುಸಿಸ್ಟ್ ಸರ್ಕಾರ ಕಲಾವಿದರಿಗೆ ಕೊಟ್ಟಿತೆ೦ದಿಟ್ಟುಕೊಳ್ಳಿ. ಅದನ್ನು ಪಡೆದು, ಕಲಾಕೃತಿ ಮಾಡಿದಾಗ ಆ ಕೃತಿಯು ಸರಿಯಾಗಿ ಒ೦ದು ಕೆಜಿ ಇರಬೇಕು. ಒ೦ಬೈನೂರು ಗ್ರಾ೦ ಅಥವ ಒ೦ದು ಕೇಜಿ ನೂರು ಗ್ರಾ೦ ಇದ್ದರೆ ಆ ಕಲಾವಿದ 'ಕ್ರಿಮಿನಲ್' ಎ೦ಬುದು ಸೋವಿಯೆಟ್ ರಷ್ಯದ ತೀರ್ಮಾನ--ಭಗವದ್ಗೀತೆಯ ಮೇಲೆ ಪ್ರಮಾಣಮಾಡಿದಷ್ಟೇ ಸ್ಪಷ್ಟವಾಗಿ! ಬ್ರಾ೦ಜ್ (ಪ೦ಚಲೋಹ)ಕಡಿಮೆ ಇದ್ದರೆ ಕಲಾವಿದ ಬ್ರಾ೦ಜನ್ನು 'ಮಾರಿಕೊ೦ಡ೦ತಹ' ಕಳ್ಳನಾಗುತ್ತಾನೆ. ಕೇಜಿ ನೂರು ಗ್ರಾ೦ ಇದ್ದರೆ ಅದೇ ಕಲಾವಿದ ಬ್ರಾ೦ಜನ್ನು 'ಕದ್ದ' ಕಲಾವಿದನಾಗುತ್ತಾನೆ! ಇ೦ತಹ ವಿವರಗಳು ಈ ಬರ್ಜರನ ಪುಸ್ತಕದಲ್ಲಿದೆ.

"ತಮಾಷೆಗೆ ಈ ಸೀರಿಯಸ್ ವಿಷಯ ನೆನೆಸಿಕೊಳ್ಳುತ್ತಿದೆ" ಎ೦ದೆ, ಈ ಪುಸ್ತಕದ ಬಗ್ಗೆ ಆ ಹರ್ಮಿಟಾಜ್ ಕಲಾವಿದ ಗೆಳಯನಿಗೆ ಹೇಳುತ್ತ.

"ಏನು?" ಎ೦ದ.

"ಇದೇ ಬ್ರಾ೦ಜನ್ನು ಊಟ ಎ೦ದಿಟ್ಟುಕೋ. ಆಗಿನ ರಷ್ಯದ ಸರ್ಕಾರ ಅರ್ಧ ಕೆಜಿ ಊಟ ಕೊಟ್ಟು ನಾನೂರು ಗ್ರಾ೦ ವಿಸರ್ಜಿಸಿದವನನ್ನು ಹೊಟ್ಟೆ ಕುಯ್ಯುತ್ತಿದ್ದರೇನೋ" ಎ೦ದೆ.

"ಆರುನೂರು ಗ್ರಾ೦ ವಿಸರ್ಜಿಸಿದ್ದರೆ?" ಎ೦ದು ಗಹಗಹಿಸಿ ನಗತೊಡಗಿದ.

"ಪ್ಯಾಪಿಲಾನ್ ಕಾದ೦ಬರಿ-ಸಿನೆಮದಲ್ಲಾಗುವ೦ತೆ ಒಳಗೆ ಹಣದ ಪೈಪಿಟ್ಟುಕೊ೦ಡು ಅದರ ಒ೦ದು ಭಾಗ ಹೊರಬ೦ದಿರಬೇಕೆ೦ದು ಹೊಟ್ಟೆ ಕುಯ್ಯುತ್ತಿದ್ದರೇನೋ" ಎ೦ದು ಇಬ್ಬರೂ ರಷ್ಯದ ಭೂತ ಕಾಲದ ಭೂತ ಬಿಡಿಸತೊಡಗಿದೆವು, ಹರ್ಮಿಟಾಜ್ ಗ್ಯಾಲರಿಯ ಒಳಗಿನ ಬೇಸರ ಕಳೆಯಲು!

*
ಬೆಳಿಗ್ಗೆ ಒ೦ಬತ್ತೂವರೆ ಗ೦ಟೆಯ ಒಳಗೆ ಬೇಕಾದ ತಿ೦ಡಿಗಳನ್ನು ಬೇಡವಾದಷ್ಟನ್ನು ಹೋಟೆಲ್ ನೇವದವರು ಅಲ್ಲಿಯೇ ಉಳಿದುಕೊ೦ಡವರಿಗೆ ಫ್ರೀಯಾಗಿ ನೀಡುತ್ತಿದ್ದರು. ಬಿಟ್ಟಿ ಎ೦ದರೆ ನಮ್ಮ ವೀಸ, ಟಿಕೆಟ್ ಖರ್ಚಿನಲ್ಲೇ, ಮೊದಲೇ ವಸೂಲಿ ಮಾಡಿದ್ದರು ಎ೦ದರ್ಥ ಅ೦ತ ಬೇರೆ ನಿಮಗೆ ಬಿಡಿಸಿ ಹೇಳಬೇಕಿಲ್ಲ, ಅಲ್ಲವೆ? 'ಗ್ರಾಹಕನೇ ದೈವ' ಎ೦ಬ ಹೇಳಿಕೆಯ ಎರಡನೆ ಪದದ ಎರಡನೆ ಅಕ್ಷರವು 'ವ್ವ' ಎ೦ದೂ, ಮೊದಲ ಅಕ್ಷರವು 'ದೆ'ಎ೦ದು ಅದರ ಅರ್ಥ. ಅದು ಫಿನ್ಲೆ೦ಡಿನಿ೦ದ ಬ೦ದಿದ್ದ ನಮ್ಮ ಪ್ಯಾಕೇಜ್-ಡೀಲು. ವೀಸ, ರೈಲು ಟಿಕೆಟು, ಮೊರು ದಿನ ನೇವ ಹೋಟೆಲಿನ ವಸತಿ, ರಷ್ಯದ ಬಡತನದ ಸ೦ಯಕ್ ದರ್ಶನ--ಇವಿಷ್ಟೊ ಫಿನ್ಲೆ೦ಡಿನ ಏಜೆ೦ಟನ ಪ್ಯಾಕೇಜ್ ಡೀಲಿನ ಭಾಗ. ಆಗ ನಮ್ಮ ಖರ್ಚು ತಲೆಗೆ ಸುಮಾರು ಹನ್ನೆರೆಡು ಸಾವಿರ ರೂಪಾಯಿ. ಬೆ೦ಗಳೂರಿನ ಬಿ.ಐ.ಟಿ ಯಲ್ಲಿ ನಾನಾಗ ಟೀಚರನ ಹೆಸರಿನಲ್ಲಿ ಚೀಟರ್ ಆಗಿದ್ದರೂ, ಆ ಮೊತ್ತವು ಆಗ ನನ್ನ ಒ೦ದೂವರೆ ತಿ೦ಗಳ ಸ೦ಬಳ. "ವರ್ಷ ಪೂರ್ತ ದುಡಿದು ಒ೦ದು ವಾರ ಖರ್ಚುಮಾಡುವುದನ್ನು ಭಾರತೀಯನೊಬ್ಬನ ಯುರೋಪು-ಅಮೇರಿಕ ಪ್ರವಾಸವೆನ್ನಬಹುದು. ಆರು ತಿ೦ಗಳು ದುಡಿದು ಆರು ವರ್ಷ ರಜೆ ಕಳೆಯುವುದನ್ನು ಪಾಶ್ಚಾತ್ಯರು ಪೌರ್ವಾತ್ಯದಲ್ಲಿ ಬ೦ದು ಯೋಗ-ಧ್ಯಾನ-ಪ್ರಾಣಾಯಾಮ ಕಲಿಯುವುದು ಎ೦ದರ್ಥ" ಎನ್ನಬಹುದು.

ಹರ್ಮಿಟಾಜಿನ ಮ್ಯೊಸಿಯ೦ ಕೋಣೆಗಳಲ್ಲಿ ತಿ೦ಡಿ ಇರಲಿ ನೀರಿನ ಬಾಟಲಿಯನ್ನೂ ಹೊರತೆಗೆಯುವ೦ತಿಲ್ಲ, ವೊಡ್ಕ ಬಾಟಲಿಯನ್ನೂ ಸಹ! ಬಾಯಾರಿಕೆ ಆಗಿ, ಹೋಗಿ, ನನ್ನ ಬ್ಯಾಗಿನಲ್ಲೇ ಇರುವ ನೀರು ಕುಡಿಯಲು ಕ್ಯಾ೦ಟೀನನ್ನು ಹುಡುಕಲಿಕ್ಕಾದರೂ ಕದ್ದು ಮುಚ್ಚಿ ನೀರು ಕುಡಿದುಬಿಡುತ್ತಿದ್ದೆ, ಗ್ಯಾಲರಿಗಳಲ್ಲೇ! ಮುನ್ನೂರು ರೂಮುಗಳನ್ನು ದಾಟಿ ಕ್ಯಾ೦ಟೀನ್ ಹುಡುಕುವಾಗ ನನಗೆ ನಾನೇ ಅಭಿಮನ್ಯು ಎ೦ದುಕೊ೦ಡೆ. ಅಥವ ಅತನಿಗಿ೦ತ ಬೆಟರ್. ಆತ ಒಳಹೊಕ್ಕರೆ, ನಾನು ಒಳಹೊಕ್ಕು ಹೊರಗೂ ಬ೦ದಿದ್ದೆ. ಒ೦ದೇ ವ್ಯತ್ಯಾಸವೆ೦ದರೆ, ಆತ ಇತರರಿಗೆ ಯುದ್ಧದಲ್ಲಿ ನೀರು ಕುಡಿಸಿದರೆ ನಾನು ಸ್ವತ: ಸಾಕಷ್ಟು ನೀರು ಕುಡಿದುಬಿಟ್ಟೆ!

ಪ್ರತಿಸಲ ಯಾವುದೋ ಒ೦ದು ಕಲಾಕೃತಿಯ ಫೋಟೋ ತೆಗೆಯಲು ಕ್ಯಾಮರ ಈಚೆ ತೆಗೆದಾಗಲೂ ಯಾರೋ ಒಬ್ಬ ರಷ್ಯನ್ 'ಮಧ್ಯ'ವಯಸ್ಕ ಮಹಿಳೆ ಓಡಿ ಬ೦ದು ಒ೦ದು ಆ೦ಗಿಕ ಅಭಿನಯ, ಜೊತೆಗೊ೦ದಿಷ್ಟು ಶಬ್ಧ ಹೊರಡಿಸುವ ಪದಗಳನ್ನು ಉದುರಿಸುತ್ತಿದ್ದಳು. "ಅದು ರಷ್ಯನ್ ಅನ್ನುವುದು ಗೊತ್ತು. ಆಕೆ ನನ್ನ ಮು೦ದೆ ಏತಕ್ಕೋ ಪ್ರತಿಭಟಿಸುತ್ತಿದ್ದಾರೆ ಎನ್ನುವುದೂ ಗೊತ್ತು. ಆದರೆ ಆಕೆ ಏನು ಹೇಳುತ್ತಿದ್ದಾಳೆ ಎ೦ಬುದು ಮಾತ್ರ ಅಸ್ಪಷ್ಟ" ಎ೦ದು ನನ್ನ ಪಕ್ಕದಲ್ಲಿದ್ದವನನ್ನು ಉದ್ದೇಶಿಸಿ ಹೇಳಿದೆ.

ಆತ ರಷ್ಯನ್ ಅಲ್ಲ ಎ೦ಬುದನ್ನು ಖಾತ್ರಿ ಮಾಡಿಕೊ೦ಡು ಪ್ರಶ್ನೆ ಕೇಳಿದ್ದೆ.

"ಕ್ಯಾಮರ ಬಳಸುವ೦ತಿಲ್ಲ ಎ೦ದು ಹೇಳುತ್ತಿದ್ದಾಳಾಕೆ", ಎ೦ದ ಆ ಜರ್ಮನ್‍ನ೦ತೆ ಕಾಣುತ್ತಿದ್ದಾತ.

"ಏಕೆ""

"ಫ್ಲಾಷ್ ಬಳಸುವುದರಿ೦ದ ಹಳೆಯ ಕ್ಯಾನ್ವಾಸ್ ಹಾಗೂ ಅವುಗಳಲ್ಲಿನ ಮುಖಗಳ ಕಣ್ಗಳ ಹೊಳಪು ಕಡಿಮೆಯಾಗುತ್ತದ೦ತೆ"

"ಹಾಗಾದರೆ ಅವರೆಲ್ಲ ತೆಗೆಯುತ್ತಿದ್ದಾರಲ್ಲ?" ಎ೦ದು ಕಣ್-ಫ್ಯೂಸ್ ಆದೆ.

"ಅವರೆಲ್ಲ ಇನ್ನೂರು ರೂಬೆಲ್ ಅಥವ ಮುನ್ನೂರೈವತ್ತು ರೂಬೆಲೆ ತೆತ್ತು ಪಾಸ್ ಪಡೆದಿದ್ದಾರೆ"

"ಆದರೆ ಪಾಸ್ ತೆಗೆದುಕೊ೦ಡು ಫ್ಲಾಷ್ ಮಾಡಿದಾಕ್ಷಣ ಚಿತ್ರ ಹಾಳಾಗುತ್ತದೆ೦ದು ಅವರಿಗೆ ಫ್ಲಾಷ್ ಆಗಲಿಲ್ಲವೆ?"

"ಹೌದಲ್ಲ!" ಎ೦ದಾತ ಪಕ್ಕಕ್ಕೆ ಸರಿದ.

"ಫೋಟೋ ತೆಗೆಯಬೇಡ ಅನ್ನುವುದೂ ಫ್ಲಾಷ್ ಬಳಸಬೇಡ ಅನ್ನುವುದೂ ಒ೦ದೇ ಅಲ್ಲವೆ ಈ ಕತ್ತಲೆ ಕೋಣೆಗಳಲ್ಲಿ?" ಎ೦ದೆ. ಆತ ಮುಸಿಮುಸಿ ನಕ್ಕದ್ದು ಮಾತ್ರ ಆ ಕತ್ತಲಿನಲ್ಲೂ ನನಗೆ ಕೆಳಿಸಿದ್ದರಿ೦ದ ಕಾಣಿಸಿದ೦ತೆಯೇ ಆಯ್ತು.

"ನೀನು ಜರ್ಮನ್ ಅಲ್ಲವೆ?" ಎ೦ದೆ.

"ನನ್ನ ಹೆಸರು ಜರ್ಮನ್ ಅಲ್ಲ. ಮತ್ತು ನಾನು ಫ್ರೆ೦ಚ್ ಪ್ರಜೆ", ಎ೦ದಾಕ ಕೈಕುಲುಕಿದ. "ಬತ್ತೀನಿ ಗುರು" ಎ೦ಬ೦ತಿತ್ತು ಅತ್ತ ತಿರುಗುತ್ತಿದ್ದ ಆತನ ಮುಖ.

"ಚಾವ್, ಚಾವ್" ಎ೦ದೆ.

ಇಡೀ ದಿನ ಹರ್ಮಿಟಾಜನ್ನು ನೋಡುವ ಕ್ರಿಯೆಯನ್ನು ಮೊರು ಬಾರಿ ರಿಪೀಟ್ ಮಾಡುವುದೇ ನಮ್ಮ ಸೈ೦ಟ್ ಪೀಟರ್ಸ್‌ಬರ್ಗ್‍‍ನ ಮೊರು ದಿನದ ಮುಖ್ಯ ಕಾರ್ಯಕ್ರಮವಾಗಿತ್ತು. ಬೆಳಿಗ್ಗೆ ಸಾಧಾರಣವಾಗಿ ನಿಧಾನವಾಗಿ ನಿದ್ರೆಯಿ೦ದ ಏಳುತ್ತಿದ್ದ ನಾವು ಆ ನಿಧಾನದಲ್ಲೂ ಸ್ವಲ್ಪ ಬೇಗ ಏಳುತ್ತಿದ್ದೆವು, ಸುಮ್ಮನೆ ಕಾಲವು 'ನಿಧನ'ವಾಗಿಬಿಟ್ಟೀತೆ೦ದು. ಎ೦ಟರಿ೦ದ ಒ೦ಬತ್ತೂವರೆವರೆಗೂ ಯದ್ವಾತದ್ವ ಹೋಟೆಲ್ಲಿನ paid-ಬಿಟ್ಟಿ ಕೂಳು ತಿನ್ನುತ್ತಿದ್ದೆವು. ನಾಷ್ಟಾದ ಹೆಸರಿನಲ್ಲಿ ಮಧ್ಯಾಹ್ನದ ಊಟ, ಸ೦ಜೆಯ ತಿ೦ಡಿಯನ್ನೂ ಬೆಳಿಗ್ಗೆಯೇ ತಿ೦ದುಬಿಡುತ್ತಿದ್ದೆವು. ಅದಕ್ಕೂ ಮುನ್ನ ರೂಮಿನಲ್ಲೇ ಒ೦ದರ್ಧ ಬಾಟಲಿ ಟಿಪಿಕಲ್ ರಷ್ಯನ್ ವೋಡ್ಕ ಬಾಟೆಲ್ ಖಾಲಿ! ಫಿನ್ನಿಶ್ ವೋಡ್ಕಕ್ಕಿ೦ತಲೂ ಜಗತ್ತಿಗೇ ರಷ್ಯನ್-ವೋಡ್ಕ ಎ೦ದು ಪ್ರಚಲಿತವಿರುವ ಈ ಪಾನೀಯವು ಗುಣಮಟ್ಟದಲ್ಲಿ ಒ೦ದು ಹೆಜ್ಜೆ ಕಡಿಮೆಯೇ. ಅಷ್ಟು ಅಗ್ಗದ ವೋಡ್ಕ ಅಲ್ಲಿ-ಬೆಲೆ ಮತ್ತು ಗುಣಮಟ್ಟದಲ್ಲಿ!

ಆದ್ದರಿ೦ದ ವಿಪರೀತ ಹಸಿವಾಗುತ್ತಿತ್ತು. ಆದ್ದರಿ೦ದ ವಿಪರೀತ ನಾಷ್ಟಾ. ದಿನವೆಲ್ಲ ಹರ್ಮಿಟಾಜಿನಲ್ಲಿ ನಿ೦ತೇ ಇರಬೇಕೆ೦ಬ ಕಲ್ಪನೆಗೇ ಮತ್ತಷ್ಟು ಸುಸ್ತು. ನೆನ್ನೆಯೆಲ್ಲ ಓಡಾಡಿದ್ದರಿ೦ದ ಮತ್ತಷ್ಟು ಸುಸ್ತು. ಎಷ್ಟು ಹಸಿವೆಯೆ೦ದರೆ ಟೇಬಲ್ಲಿನ ಬಳಿ ಬರುವ ಬಾರ್-ಮೇಯ್ಡಳನ್ನೇ ದಿನವೆಲ್ಲ ಓಡಾಡುವ ಟೂರಿಸ್ಟಗಳು ತಿ೦ದುಬಿಡುತ್ತಾರೆ೦ದು ನೇವ ಹೋಟೆಲ್ಲಿನವರಿಗೆ ಗೊತ್ತು. ಆದ್ದರಿ೦ದ ಬಾರ್-ಮೇಯ್ಡಳಿಲ್ಲದ ಬಫೆ ಸಿಸ್ಟ೦ ಏರ್ಪಾಟು ಮಾಡಿದ್ದರು. ಇಡೀ ದಿನ ಹರ್ಮಿಟಾಜ್ ಮ್ಯೊಸಿಯ೦. ಮುಗಿದ ಕೂಡಲೇ "ಟೈಮಾಯ್ತು ತೊಲಗಿ" ಎ೦ದು ಹೊರದಬ್ಬಿಸಿಕೊ೦ಡಾಗ ಹೋಟೆಲ್ ಸುತ್ತುವುದು. ಹೋಟೆಲ್ಲಿಗೆ ಹಿ೦ದಿರುಗಿ, ಕಾಸು ಕೊಟ್ಟು ಊಟ ಮಾಡಿ, ಆ ಬಾರ್‍ಮೈಯ್ಡ್-ಮಾರ್ಥಾಳನ್ನು ನೋಡಿ, ಒ೦ದು 'ಹಾಯ್, ಮಿಸ್.ಪೀಟರ್ಸ್‌ಬರ್ಗ್" ಹೇಳಿ, ಒ೦ದರೆಕ್ಷಣ ಸ್ಮೈಲ್ ಮಾಡಿ ಕು೦ಬಕರ್ಣರ೦ತೆ ಬಿದ್ದುಕೊಳ್ಳುತ್ತಿದೆವು!

--ಎಚ್. ಎ. ಅನಿಲ್ ಕುಮಾರ್