ರಸಗೊಬ್ಬರ ಎಂಬ ಮೋಸದ ಜಾಲ (ರೈತರೇ ಬದುಕಲು ಕಲಿಯಿರಿ-೧೦)

ರಸಗೊಬ್ಬರ ಎಂಬ ಮೋಸದ ಜಾಲ (ರೈತರೇ ಬದುಕಲು ಕಲಿಯಿರಿ-೧೦)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ)

ರಂಜಕ (ಸೂಪರ್ ಫಾಸ್ಫೇಟ್)

ಸಾರಜನಕದಂತೆ ರಂಜಕವನ್ನು ಕೂಡ ನಮ್ಮ ಬೆಳೆಗಳು ನೇರವಾಗಿ ಹೀರಿಕೊಳ್ಳಲಾರವು. ಆದರೆ ಬೆಳೆಗಳಿಗೆ ಬೇಕಾದ ಪ್ರಮಾಣದ ರಂಜಕ ನಮ್ಮ ಭೂಮಿಯಲ್ಲಿ ಹೇರಳವಾಗಿರುತ್ತದೆ. ಇದನ್ನು ವಿಭಜಿಸಿ, ಸಸ್ಯಗಳ ಬೇರುಗಳು ಹೀರಿಕೊಳ್ಳುವಂತೆ ಮಾಡುವ ಕೆಲಸ ಪಿ.ಎಸ್.ಬಿ. (ಫಾಸ್ಫೇಟ್ ಸಲ್ಯೂಬಲಿಂಗ್ ಬ್ಯಾಕ್ಟೀರಿಯಾ- ಅಂದರೆ ಫಾಸ್ಫೇಟ್ ಅನ್ನು ಕರಗಿಸುವ ಬ್ಯಾಕ್ಟೀರಿಯಾ) ಜೀವಾಣುಗಳದು. ದೇಸಿ ಆಕಳ ಸಗಣಿಯಲ್ಲಿ ಈ ಪಿ.ಎಸ್.ಬಿ. ಜೀವಾಣುಗಳು ಯಥೇಚ್ಛವಾಗಿರುತ್ತವೆ.

ಸಸ್ಯಗಳ ಬೆಳವಣಿಗೆಗೆ ಬೇಕಾದ ರಂಜಕ ಭೂಮಿಯಲ್ಲಿ ಮೂರು ವಿವಿಧ ಸ್ವರೂಪದಲ್ಲಿರುತ್ತದೆ. ಏಕದಳ ರಂಜಕ, ದ್ವಿದಳ ರಂಜಕ ಹಾಗೂ ತ್ರಿದಳ ರಂಜಕ. ಭೂಮಿಯಲ್ಲಿರುವ ಪಿ.ಎಸ್.ಬಿ. ಜೀವಾಣು ಇವನ್ನು ವಿಭಜಿಸಿ ಬೇರುಗಳಿಗೆ ಒದಗಿಸುತ್ತದೆ.

ಆಹಾರ ತಯಾರಿಕೆಯ ಸಂದರ್ಭದಲ್ಲಿ ರಂಜಕದ ಅವಶ್ಯಕತೆ ಬಂದಾಗ, ಗಿಡದ ಎಲೆಗಳು ಬೇರಿನ ತುದಿಗೆ ವಿದ್ಯುತ್ ಕಣಗಳ ಮೂಲಕ ಸಂದೇಶ ಕಳಿಸುತ್ತವೆ. ಅದು ತಲುಪುತ್ತಲೇ ಬೇರಿನ ತುದಿಗಳು ಒಂದು ವಿಶಿಷ್ಟ ವಾಸನೆಯನ್ನು ಸ್ರವಿಸುತ್ತವೆ. ಮಣ್ಣಿನಲ್ಲಿರುವ ಪಿ.ಎಸ್.ಬಿ. ಜೀವಾಣುಗಳು ಈ ವಾಸನೆಯನ್ನು ಗ್ರಹಿಸಿ, ತಕ್ಷಣ ರಂಜಕದ ಕಣಗಳನ್ನು ಸುತ್ತುವರಿದು ೧೬ ವಿವಿಧ ರಾಸಾಯನಿಕಗಳನ್ನು ಸ್ರವಿಸಿ, ರಂಜಕವನ್ನು ಏಕದಳ, ದ್ವಿದಳ ಹಾಗೂ ತ್ರಿದಳ ಸಂಯುಕ್ತವನ್ನಾಗಿ ವಿಭಜಿಸುತ್ತವೆ. ನಂತರ ಬೇರುಗಳು ಈ ಕಣಗಳನ್ನು ಹೀರಿಕೊಂಡು ಎಲೆಗಳಿಗೆ ಕಳಿಸುವ ಮೂಲಕ ಚಕ್ರ ಸಂಪೂರ್ಣವಾಗುತ್ತದೆ.

ಆದರೆ ಭೂಮಿಯಲ್ಲಿ ವಿಷ ಹಾಕುವ ಮೂಲಕ ನಾವು ಪಿ.ಎಸ್.ಬಿ. ಜೀವಾಣುಗಳನ್ನು ಕೊಂದಿದ್ದೇವೆ. ಇನ್ನು ಸಾರಜನಕ (ಯೂರಿಯಾ), ರಂಜಕ (ಸೂಪರ್ ಫಾಸ್ಫೇಟ್)ದಂತಹ ಗೊಬ್ಬರ ಸಸ್ಯಗಳಿಗೆ ದಕ್ಕುವುದಾದರೂ ಹೇಗೆ? ಆದರೂ ಭೂಮಿಗೆ ರಂಜಕ ಸುರಿಯಲು ಕೃಷಿ ವಿಜ್ಞಾನಿಗಳು ಹೇಳುತ್ತಾರೆ. ಅದನ್ನು ಪರಿವರ್ತಿಸುವ ಜೀವಾಣುಗಳೇ ಇಲ್ಲದ ಮೇಲೆ ಈ ರಂಜಕ ಹಾಕುವುದಾದರೂ ಏಕೆ? ಇವರಿಗೆ ಯಾರು ಬುದ್ಧಿ ಹೇಳಬೇಕು?

ಪೊಟ್ಯಾಷ್

ಇಂಥದೇ ಇನ್ನೊಂದು ಮಹತ್ವದ ಪೋಷಕಾಂಶ ಪೊಟ್ಯಾಷ್. ಸಸ್ಯಗಳು ಇದನ್ನೂ ನೇರವಾಗಿ ಹೀರಿಕೊಳ್ಳಲಾರವು. ಏಕೆಂದರೆ ಪೊಟ್ಯಾಷ್ ಸತ್ವವನ್ನು ಬೇರಿಗೆ ಹೀರಿಕೊಳ್ಳಲು ಅನುಕೂಲವಾಗುವುಂತೆ ಸಿದ್ಧಪಡಿಸುವುದು ಮಣ್ಣಿನಲ್ಲಿರುವ ಬ್ಯಾಸಿಲಸ್ ಸಿಲಿಕೇಸ್ ಎಂಬ ಬ್ಯಾಕ್ಟೀರಿಯಾ. ಆದರೆ ನಮ್ಮ ಆಧುನಿಕ ಕೃಷಿ ಪದ್ಧತಿ ಈ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿದೆ.

ಮಣ್ಣಿನಲ್ಲಿ ಪೊಟ್ಯಾಷ್ ಸಾಮಾನ್ಯವಾಗಿ ಸಿಲಿಕೇಟ್ ಸಂಯುಕ್ತ ವಸ್ತುಗಳಿಂದ ಆವೃತವಾಗಿರುತ್ತದೆ. ದೇಸೀ (ಜವಾರಿ) ತಳಿಯ ಆಕಳು, ಎತ್ತು, ಎಮ್ಮೆಗಳ ಕರುಳಲ್ಲಿ ಹುಟ್ಟಿ ಸಗಣಿಯ ಮೂಲಕ ಹೊರಬರುವ ಬ್ಯಾಸಿಲಸ್ ಸಿಲಿಕೇಸ್ ಎಂಬ ಬ್ಯಾಕ್ಟೀರಿಯಾ ತನಗೆ ಸೂಕ್ತ ಪರಿಸರ ಸಿಕ್ಕರೆ ಅಲ್ಲಿ ವೃದ್ಧಿಯಾಗುತ್ತದೆ. ಸಾಮಾನ್ಯವಾಗಿ ಇಂತಹ ಪ್ರಾಣಿಗಳ ಸಗಣಿಯಲ್ಲಿ ಸುಮಾರು ೬೭ ಉಪಜಾತಿಗಳ ಬ್ಯಾಸಿಲಸ್ ಸಿಲಿಕಸ್ ಬ್ಯಾಕ್ಟೀರಿಯಾಗಳು ಇರುತ್ತವೆ. ಮಣ್ಣಿನಲ್ಲಿರುವ ಪೊಟ್ಯಾಷ್ ಅಂಶವುಳ್ಳ ಸಿಲಿಕೇಟ್ ಸಂಯುಕ್ತಗಳನ್ನು ಬ್ಯಾಸಿಲಸ್ ಸಿಲಿಕೇಸ್ ಬ್ಯಾಕ್ಟೀರಿಯಾ ಯಶಸ್ವಿಯಾಗಿ ವಿಭಜಿಸಬಲ್ಲುದು. ಆಗ ಬೇರುಗಳ ತುದಿಗಳು ಇವನ್ನು ಹೀರಿಕೊಂಡು ಎಲೆಗಳಿಗೆ ಕಳಿಸುತ್ತವೆ.

ಅಂದರೆ ಮಣ್ಣಿನಲ್ಲಿರುವ ರೈಜೋಬಿಯಂ ಜೀವಾಣುಗಳು ಸಾರಜನಕ(ಯೂರಿಯಾ)ವನ್ನು, ಪಿ.ಎಸ್.ಬಿ. ಬ್ಯಾಕ್ಟೀರಿಯಾಗಳು ಫಾಸ್ಫೇಟ್ ಅನ್ನು ಹಾಗೂ ಬ್ಯಾಸಿಲಸ್ ಸಿಲಿಕೇಸ್ ಬ್ಯಾಕ್ಟೀರಿಯಾಗಳು ಪೊಟ್ಯಾಷ್ ಅನ್ನು ಎಲೆಗಳಿಗೆ ಒದಗಿಸುವ ಕೆಲಸ ಮಾಡುತ್ತವೆ. ಮತ್ತು ಈ ಸಂಯುಕ್ತ ವಸ್ತುಗಳು ನಮ್ಮ ಮಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿವೆ ಎಂದಾಯ್ತು.

ಹಾಗಿದ್ದರೆ ದುಬಾರಿ ದುಡ್ಡು ಕೊಟ್ಟು ಗೊಬ್ಬರದ ರೂಪದಲ್ಲಿ ಇವನ್ನು ಭೂಮಿಗೆ ಸುರಿಯುವದು ಯಾತಕ್ಕೆ? ಈ ಗೊಬ್ಬರಗಳಿಗೇ ಅಲ್ಲವೇ ನಾವು ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿರುವುದು?

ನಮ್ಮ ದೇಶದಲ್ಲಿರುವ ಅಷ್ಟೂ ಕೃಷಿ ವಿಶ್ವವಿದ್ಯಾಲಯಗಳು, ಅವುಗಳ ಸಾವಿರಾರು ಶಾಖೆಗಳು, ನೂರಾರು ರಾಸಾಯನಿಕ ಗೊಬ್ಬರದ ಕಾರ್ಖಾನೆಗಳು ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿರುವ ಕೃಷಿ ಪ್ರಾಧ್ಯಾಪಕರು, ಅಂಗಡಿಕಾರರು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಬ್ಯಾಂಕ್‌ಗಳು, ಕೃಷಿ ಕೇಂದ್ರಗಳು ಏಕೆ ಕೃತಕ (ರಾಸಾಯನಿಕ) ಗೊಬ್ಬರ ಬಳಸಬೇಕೆಂದು ಹೇಳುತ್ತಿವೆ? ಒಂದು ವೇಳೆ ಇವರು ಹೇಳುವುದೆಲ್ಲ ನಿಜವಾಗಿದ್ದರೆ ಇಷ್ಟೊಂದು ಪ್ರಮಾಣದ ಗೊಬ್ಬರ ಉಂಡ ನಮ್ಮ ಭೂಮಿ ಏಕೆ ಬೆಳೆಯುತ್ತಿಲ್ಲ?

ಇದು ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ ಎಂದು ಮಾತ್ರ ಹೇಳಬಹುದು. ತಮ್ಮ ಉತ್ಪಾದನೆಗಳು ಖರ್ಚಾಗಲಿ ಎಂಬ ಕಾರಣಕ್ಕೆ ಇವರೆಲ್ಲ ಸುಳ್ಳು ಹೇಳುತ್ತ ಹೇಳುತ್ತ ಅದನ್ನೇ ಸತ್ಯ ಎಂದು ನಮ್ಮನ್ನು ನಂಬಿಸಿಬಿಟ್ಟಿದ್ದಾರೆ. ಅಸಲಿ ಸಂಗತಿ ಏನೆಂಬುದನ್ನು ತಿಳಿಯುವ ವಿವೇಚನೆಯನ್ನೇ ಕೊಂದುಬಿಟ್ಟಿದ್ದಾರೆ. ನಮ್ಮ ಕೃಷಿ ವಿಜ್ಞಾನಿಗಳು ಕೂಡ ಈ ಸುಳ್ಳಿನ ಬುನಾದಿಯ ಮೇಲೆಯೇ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ಈ ಸಣ್ಣ ಆದರೆ ಬಹು ಮಹತ್ವದ ಸಂಗತಿ ಗೊತ್ತಾದರೆ ಸಾಕು, ನಮ್ಮ ರೈತ ನಿಂತ ನಿಲುವಿನಲ್ಲೇ ಸ್ವಾವಲಂಬಿಯಾಗುತ್ತಾನೆ. ನಮ್ಮ ದೇಶ ಆರ್ಥಿಕವಾಗಿ ಸಮೃದ್ಧವಾಗುತ್ತದೆ.

ಲಘು ಪೋಷಕಾಂಶಗಳು

ಮುಖ್ಯ ಗೊಬ್ಬರಗಳು ಸುಲಭವಾಗಿ ಬೆಳೆಗಳಿಗೆ ದಕ್ಕುವ ರೀತಿಯಲ್ಲಿಯೇ ಸಸ್ಯಗಳ ಬೆಳವಣಿಗೆಗೆ ಅವಶ್ಯಕವಾದ ಲಘು ಪೋಷಕಾಂಶಗಳೂ ದೊರೆಯುತ್ತಿರುತ್ತವೆ. ಗಂಧಕ, ಮ್ಯಾಗ್ನೀಷಿಯಂ, ಬೋರಾನ್, ತಾಮ್ರ ಮುಂತಾದ ಖನಿಜಗಳ ಅವಶ್ಯಕತೆಯನ್ನು ಮಣ್ಣಿನಲ್ಲಿರುವ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಪೂರೈಸುತ್ತವೆ.

ಥಿಯೋ ಆಕ್ಸಿಡೆಂಟ್ಸ್, ಫೆರಸ್ ಬ್ಯಾಕ್ಟೀರಿಯಾ, ಮೈಕೋರೈಜಾ ಫಂಗಸ್ ಅಥವಾ ಮೈಕೋರೈಜಾ ಬ್ರೂಸಿ ಮುಂತಾದ ಜೀವಾಣುಗಳು ಲಘು ಪೋಷಕಾಂಶಗಳನ್ನು ಬೇರುಗಳು ಹೀರಿಕೊಳ್ಳಲು ಸುಲಭವಾಗುವಂತೆ ವಿಭಜಿಸಿ ತಲುಪಿಸುತ್ತವೆ. ಆಕಳ ಸಗಣಿಯಲ್ಲಿಯೇ ಇಂತಹ ೩೬ ಬಗೆಯ ಥಿಯೋ ಬ್ಯಾಕ್ಟೀರಿಯಾಗಳಿದ್ದು, ಸಸ್ಯಗಳ ಗಂಧಕದ ಬೇಡಿಕೆಯನ್ನು ಪೂರೈಸುತ್ತವೆ. ಅದೇ ರೀತಿ ಫೆರಸ್ ಬ್ಯಾಕ್ಟೀರಿಯಾಗಳು ಮ್ಯಾಗ್ನೀಷಿಯಂ, ಬೋರಾನ್, ತಾಮ್ರ ಮುಂತಾದ ಖನಿಜ-ಲವಣಗಳನ್ನು ದೊರಕಿಸುತ್ತವೆ. ಮೈಕೋರೈಜಾ ಫಂಗಸ್, ವೆರಿಬಲ್ ಮುಂತಾದವು ಸಸ್ಯಗಳ ಇತರ ಅವಶ್ಯಕತೆಗಳನ್ನು ಈಡೇರಿಸುತ್ತವೆ.

ಈ ಎಲ್ಲ ಬ್ಯಾಕ್ಟೀರಿಯಾಗಳು ಹಾಗೂ ಜೀವಾಣುಗಳು ಸೇರಿಕೊಂಡು ಕೃಷಿ ತ್ಯಾಜ್ಯಗಳಾದ ಕಸ, ಕಡ್ಡಿ, ದಂಟು, ಎಲೆಗಳು ಮುಂತಾದ ವಸ್ತುಗಳು ಬೇಗ ಕೊಳೆಯಲು ನೆರವಾಗುತ್ತವೆ. ಇವುಗಳ ಕ್ರಿಯಾಶೀಲತೆಯಿಂದಾಗಿ ಕೃಷಿ ತ್ಯಾಜ್ಯಗಳಲ್ಲಿರುವ ಪೋಷಕಾಂಶಗಳು ಕರಗಿ ಬೇಗ ಮಣ್ಣು ಸೇರುತ್ತವೆ. ಅಲ್ಲಿರುವ ಕೋಟ್ಯಂತರ ಜೀವಾಣುಗಳಿಗೆ ಇದೇ ಆಹಾರ. ಯಥೇಚ್ಛ ಬಿಸಿಲು, ತಕ್ಕ ಮಟ್ಟಿಗಿನ ತೇವಾಂಶದಿಂದ ಇವುಗಳ ಚಟುವಟಿಕೆಗೆ ಹಾಗೂ ಬೆಳವಣಿಗೆ ವೇಗವಾಗುತ್ತದೆ.

ಆದರೆ ಕಳೆದ ಐವತ್ತು ವರ್ಷಗಳಿಂದ ಭೂಮಿಗೆ ಸೇರುತ್ತಿರುವ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಹಾವಳಿಯಿಂದ ಈ ಅಮೂಲ್ಯ ಜೀವಾಣುಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಅದಕ್ಕೆಂದೇ ವಿಪರೀತ ಗೊಬ್ಬರ ಸುರಿದರೂ ನಮ್ಮ ಭೂಮಿ ಬೆಳೆಯದ ಹಂತ ತಲುಪಿರುವುದು. ಇನ್ನಾದರೂ ನಮ್ಮ ಮಣ್ಣಿನಲ್ಲಿ ಈ ಜೀವಾಣುಗಳ ಉಳಿವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು.

ಅದು ಸುಲಭವಾಗಿ ಸಾಧ್ಯವಾಗುವುದು ಸುಭಾಷ ಪಾಳೇಕರ ಅಭಿವೃದ್ಧಿಪಡಿಸಿರುವ ’ಜೀವಾಮೃತ’ ಬಳಕೆಯಿಂದ ಮಾತ್ರ !

(ಮುಂದುವರಿಯುವುದು)

- ಚಾಮರಾಜ ಸವಡಿ