ರಸಿಕ ನವಾಬ
ಆಬಿದ್ ಸುರತಿ ಅವರ ನವಾಬ್ ರಂಗೀಲೆ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಡಿ. ಎನ್. ಶ್ರೀನಾಥ್. ಇದಕ್ಕೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಆಬಿದ್ ಸುರತಿ. ಮಕ್ಕಳ ಪುಸ್ತಕವಾದರೂ ಹಿರಿಯರನ್ನೂ ಚಿಂತನೆಗೆ ಹಚ್ಚುವ ಪುಸ್ತಕವಿದು.
ಭಾರತ - ಪಾಕಿಸ್ಥಾನದ ಗಡಿಯ ಪಕ್ಕದ ನಗಡಾಪುರದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳ ಸರಣಿಯ ಕಥನ ಇದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಗಡಾಪುರ ರಾಜ್ಯ ನಮ್ಮ ದೇಶದೊಂದಿಗೆ ಸೇರಬೇಕಾಯಿತು. ಅದರೊಂದಿಗೆ ನವಾಬನ ನವಾಬಗಿರಿ ಅಂತ್ಯವಾಗಿತ್ತು. ಆದರೆ ಆ ರಾಜ್ಯದ ಪ್ರಜೆಗಳು ಇನ್ನೂ ಇದ್ದರು. ಅಲ್ಲಿನ ಹಿರಿಯರು ಇಂದಿಗೂ ರಸಿಕ ನವಾಬನನ್ನು ಗೌರವದಿಂದ ಕಾಣುತ್ತಿದ್ದರು …. ನವಾಬಗಿರಿಯೊಂದೇ ಅಲ್ಲ, ಕಾಲದೊಂದಿಗೆ ಎಲ್ಲವೂ ಬದಲಾದವು. ಈಗ ರಸಿಕ ನವಾಬರು ಒಂದು ಚಿಕ್ಕ ಮನೆಯಲ್ಲಿ ತಮ್ಮ ರಸಿಕ ಬೇಗಂಳೊಂದಿಗೆ ವಾಸಿಸುತ್ತಾರೆ. ಕೋಳಿಗಳನ್ನು ಸಾಕುವುದರಿಂದ ಹಿಡಿದು ಸಿಂಹದ ಶಿಕಾರಿ ಮಾಡುವುದು - ಹೀಗೆ ಯಾವಕೆಲಸವೇ ಆಗಿರಲಿ, ಮಾಡುತ್ತಾರೆ. ಆದರೂ ಅವರು ದುಃಖಿಯಾಗಿಲ್ಲ …. ಬಾಯಿಯಲ್ಲಿ ಬೀಡಾ ಜಗಿಯುತ್ತಾ ತಮ್ಮ ಪರಾಕ್ರಮದ ಕಥೆಯನ್ನು ಹೇಳುತ್ತಾರೆ - ಎಂಬ ವಿವರಗಳೊಂದಿಗೆ ಕಥನ ಶುರು.
“ಲಲ್ಲೂ ತಮ್ಮಾ ಶುರು ಮಾಡು" ಎಂಬ ಮೊದಲ ಅಧ್ಯಾಯದಲ್ಲಿ, ಡಕಾಯಿತ ಭೂತನಾಥನನ್ನು ಬಂಧಿಸಿ ತರಲು ಕಾಡಿಗೆ ಹೋದ ರಸಿಕ ನವಾಬರಿಗೆ ಆತ ಯಾರೆಂಬುದೇ ತಿಳಿದಿಲ್ಲ. ಕೊನೆಗೆ ಆತನನ್ನೇ ಮನೆಗೆ ಕರೆ ತಂದು ಊಟ ಹಾಕುತ್ತಾರೆ! ಆ ರಾತ್ರಿ ಆತ ಇವರ ಮನೆಯ ಚಿನ್ನಾಭರಣಗಳನ್ನು ದರೋಡೆ ಮಾಡಿ ಹೋಗುತ್ತಾನೆ.
ಮರುದಿನ ಊರಿನಲ್ಲೆಲ್ಲ ರಸಿಕ ನವಾಬರ ಮನೆ ದರೋಡೆ ಸುದ್ದಿಯಾಯಿತು. ಜೊತೆಗೆ ರಸಿಕ ನವಾಬ ಮತ್ತು ರಸಿಕ ಬೇಗಂ ಉಸಿರಾಡದೆ ಬಿದ್ದಿದ್ದಾರೆಂದು ಗುಲ್ಲಾಯಿತು. ಇನ್‌ಸ್ಪೆಕ್ಟರ್ ಬಂದೂಕುಲಾಲನಿಗೂ ದೂರು ಹೋಯಿತು. ಆತ ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ಅವರಿಬ್ಬರ “ಶವ"ಗಳನ್ನು ಸಮಾಧಿ ಮಾಡಲಿಕ್ಕಾಗಿ ಶ್ಮಶಾನಕ್ಕೆ ಒಯ್ಯಲಾಯಿತು. ಶವಗಳನ್ನು ಸಮಾಧಿ ಹೊಂಡದ ಬಳಿ ಇಳಿಸಿದಾಗ, ರಸಿಕ ನವಾಬರು ಹುಟ್ಟಿನಿಂದ ಮುಸಲ್ಮಾನರಾಗಿದ್ದರೇ ಎಂಬು ವಾಗ್ವಾದ ಶುರು. ಇದರಿಂದಾಗಿ ಊರಿನ ಜನ ಎರಡು ಗುಂಪುಗಳಾಗಿ, ವಾಗ್ವಾದದ ಇತ್ಯರ್ಥಕ್ಕಾಗಿ ಊರಿಗೆ ಮರಳಿದರು. ಆಗ, ಎರಡೂ “ಶವ"ಗಳು ಕಾಣೆಯಾದವು! ಕೊನೆಗೆ ರಸಿಕ ನವಾಬ ಮತ್ತು ರಸಿಕ ಬೇಗಂ ಅವರ ಮನೆಯಲ್ಲೇ ಜೀವಂತವಾಗಿ ಕಾಣಿಸಿದರು. ಊರಿನ ಜನರು ಅವರು “ಭೂತ”ವಾಗಿದ್ದಾರೆಂದು ಭಯಭೀತರಾದರು - ಇದು 2ನೇ ಅಧ್ಯಾಯದ ಕತೆ.
ಮುಂದಿನ ಅಧ್ಯಾಯದಲ್ಲಿ ಡಕಾಯಿತ ಭೂತನಾಥನನ್ನು ಹಿಡಿದು ತರಲು ರಸಿಕ ನವಾಬ ಪುನಃ ಕಾಡಿಗೆ ರಾತ್ರಿಯಲ್ಲಿ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ಅಲ್ಲಿ ಆಕಸ್ಮಿಕ ಘಟನೆಗಳ ಪರಿಣಾಮವಾಗಿ ರಸಿಕ ನವಾಬರಿಂದ ಡಕಾಯಿತ ಭೂತನಾಥನ ಸಾವು! ಅವನ ಶವ ಹೊತ್ತುಕೊಂಡು ಮರುದಿನ ಬೆಳಗ್ಗೆ ಊರಿಗೆ ಬಂದ ರಸಿಕ ನವಾಬರಿಗೆ ಯುದ್ಧವೀರನ ಸ್ವಾಗತ.
ಅಷ್ಟರಲ್ಲಿ ನಗಡಾಪುರ ಪಾಕಿಸ್ಥಾನಕ್ಕೆ ಸೇರಬೇಕೆಂದು ಗಡಿಯಾಚೆಯ ತಬಲಾಗಂಜ್ ಜನರಿಂದ ತಗಾದೆ. ಅದರ ಇತ್ಯರ್ಥಕ್ಕಾಗಿ ಎರಡೂ ಊರುಗಳ ಜನರು ಜಮಾಯಿಸಿದರು. ಜನರ ಗುಂಪುಗಳಲ್ಲಿ ಉದ್ರೇಕ ತಾರಕಕ್ಕೆ ಏರುತ್ತಿದ್ದಂತೆ, ಎರಡೂ ಊರುಗಳ ಮುಖಂಡರು ರಕ್ತಪಾತ ಬೇಡವೆಂದು ನಿರ್ಧರಿಸಿದರು. ಅದರ ಬದಲಾಗಿ, ತಬಲಾಗಂಜ್‌ನ ಹೆಸರುವಾಸಿ ಪೈಲ್ವಾನ್ ಭಯಾನಕ ಖಾನ್ (ಅಧ್ಯಾಯದ ಶಿರ್ಷೀಕೆ) ಮತ್ತು ರಸಿಕ ನವಾಬರ ನಡುವೆ ಮಲ್ಲಯುದ್ಧ ನಡೆಸಬೇಕೆಂದು ನಿರ್ಣಯ. ರಸಿಕ ನವಾಬರು ಬಲಿಷ್ಠ ಪೈಲ್ವಾನನ್ನು ಕಂಡು ಹೆದರಿ ಸತ್ತಂತಾದರು. ಆದರೆ, ಮಲ್ಲಯುದ್ಧದಲ್ಲಿ ಜಯಶಾಲಿಯಾದದ್ದು ರಸಿಕ ನವಾಬ! ತಬಲಾಗಂಜ್‌ನ ಜನ ತಲೆ ತಗ್ಗಿಸಿ ಮರಳಿ ಹೋದರು. ಅದೇನಿದ್ದರೂ ತಬಲಾಗಂಜ್ ಪಾಕಿಸ್ಥಾನದಲ್ಲೇ ಉಳಿಯಿತು.
ತೊಂಬತ್ತೊಂಬತ್ತರ ಯುವಕ ಎಂಬ ನಂತರದ ಅಧ್ಯಾಯದಲ್ಲಿ ತೆರೆದುಕೊಳ್ಳುತ್ತದೆ 99 ವರುಷದ ಮುದುಕನೊಬ್ಬ ರಸಿಕ ನವಾಬ ಕೊಟ್ಟ ಬೇರು ತಿಂದು ಯುವಕನಂತೆ ಚೇಷ್ಟೆಗಳಲ್ಲಿ ತೊಡಗಿ ಅವಾಂತರ ಮಾಡುವ ಕಥನ. ಕೊನೆಯ ಎರಡು ಅಧ್ಯಾಯಗಳು ನಗಡಾಪುರದ ಚುನಾವಣೆಯ ಪ್ರಹಸನ; ರಸಿಕ ನವಾಬರು ಗೆದ್ದದ್ದೇ ವಿಸ್ಮಯ.