ರಸ್ತೆ ಅಪಘಾತಗಳಿಗೆ ಬೇಕು ಬ್ರೇಕ್

ರಸ್ತೆ ಅಪಘಾತಗಳಿಗೆ ಬೇಕು ಬ್ರೇಕ್

ನಮ್ಮ ದೇಶದಲ್ಲಿರುವುದು ಜಗತ್ತಿನ ಒಟ್ಟು ವಾಹನಗಳ ಶೇಕಡಾ ಒಂದು ಮಾತ್ರ. ಆದರೆ, ನಮ್ಮದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಜಗತ್ತಿನ ಒಟ್ಟು ಅಪಘಾತಗಳ ಶೇಕಡಾ ೧೦!
ಭಾರತೀಯ ಅಟೋಮೊಬೈಲ್ ಉತ್ಪಾದಕರ ಸೊಸೈಟಿಯ ಮಾಹಿತಿಯ ಅನುಸಾರ, ವಾಹನ ಉತ್ಪಾದಕರು ಕಳೆದ ಐದು ವರುಷಗಳಲ್ಲಿ ಪ್ರತಿ ವರುಷ ಭಾರತದಲ್ಲಿ ಮಾರಾಟ ಮಾಡಿದ ವಾಹನಗಳ ಸಂಖ್ಯೆ ೧.೫ ಕೋಟಿ. ಈ “ಅಭಿವೃದ್ಧಿ”ಯ ದಾರುಣ ಮುಖವನ್ನು ತಿಳಿಸುವ ಅಂಕೆಸಂಖ್ಯೆಗಳು ಹೀಗಿವೆ:
- ಕಳೆದ ೧೦ ವರುಷಗಳಲ್ಲಿ ರಸ್ತೆ ಅಪಘಾತಗಳಿಂದಾಗಿ ಸತ್ತವರ ಸಂಖ್ಯೆ ೧೦ ಲಕ್ಷ.
-ರಸ್ತೆ ಅಪಘಾತಗಳಿಂದಾಗಿ ಭಾರತದಲ್ಲಿ ಸಾಯುವವರ ಸಂಖ್ಯೆ ಪ್ರತಿ ಗಂಟೆಗೆ ೧೫.
-ಪ್ರತಿದಿನವೂ ೧೪ ವರುಷಕ್ಕಿಂತ ಕಡಿಮೆ ವಯಸ್ಸಿನ ೨೦ ಮಕ್ಕಳ ಮರಣ.
-ಕಳೆದ ದಶಕದಲ್ಲಿ ರಸ್ತೆ ಅಪಘಾತಗಳಿಂದಾಗಿ ೧.೨ ಲಕ್ಷ ಪಾದಚಾರಿಗಳ ಮತ್ತು ಮೂರು ಲಕ್ಷ ದ್ವಿಚಕ್ರ ವಾಹನಚಾಲಕರ ಸಾವು
-ರಸ್ತೆ ಅಪಘಾತಗಳಿಂದಾಗುವ ಸಾವುಗಳಿಗೆ ಕಾರಣ: ದ್ವಿಚಕ್ರವಾಹನಗಳು (ಶೇ.೨೪.೯), ಲಾರಿಗಳು (ಶೇ.೧೭.೫) ಮತ್ತು ಕಾರುಗಳು (ಶೇ.೧೦.೮)
-ಕಮ್ಯುನಿಟಿ ಎಗೆಯಿನಿಸ್ಟ್ ಡ್ರಂಕನ್ ಡ್ರೈವಿಂಗ್ (ಪಾನಮತ್ತ ವಾಹನಚಾಲನೆ ವಿರುದ್ಧ ಸಮುದಾಯ) ಎಂಬ ಲಾಭರಹಿತ ಸಂಸ್ಥೆಯ ಪ್ರಕಾರ, ೨೦೧೧ರಲ್ಲಿ ಜರಗಿದ ಶೇ.೭೦ ವಾಹನ ಅಪಘಾತಗಳಿಗೆ ಕಾರಣ ಪಾನಮತ್ತ ವಾಹನಚಾಲನೆ.
-ದೊಡ್ಡ ರಸ್ತೆ ಅಪಘಾತಗಳಿಗೆ ಕಾರಣಗಳು: ಅತಿ ವೇಗದ ವಾಹನ ಚಾಲನೆ, ನಿಯಮ ಮೀರಿದ ಪಾರ್ಕಿಂಗ್, ತಪ್ಪು-ದಿಕ್ಕಿನಲ್ಲಿ ವಾಹನ ಚಾಲನೆ, ಪಾದಚಾರಿಗಳು ಅಜಾಗರೂಕತೆಯಿಂದ ರಸ್ತೆ ದಾಟುವುದು ಮತ್ತು ಪಾನಮತ್ತ ಚಾಲಕರಿಂದ ವಾಹನ ಚಾಲನೆ.
ಪ್ರಮುಖ ಲ್ಯುಬ್ರಿಕೆಂಟ್ ಉತ್ಪಾಕದ ಕಂಪೆನಿ ಕಾಸ್ಟ್ರಾಲ್ ಇಂಡಿಯಾ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ರವಿ ಕಿರ್ಪಲಾನಿ ಹೀಗೆನ್ನುತ್ತಾರೆ, “ಶೇಕಡಾ ೭೦ಕ್ಕಿಂತ ಹೆಚ್ಚಿನ ರಸ್ತೆ ಅಪಘಾತಗಳಿಗೆ ಕಾರಣ ವಾಹನಚಾಲಕರು ಮಾಡುವ ತಪ್ಪುಗಳು. ನಾವು ವಾಹನ ಚಾಲಕರ ವಾಹನಚಾಲನೆ ಕೌಶಲ್ಯಗಳ ಮೌಲ್ಯಮಾಪನ ಮಾಡುತ್ತೇವೆ. ಈ ತನಕ ಆ ತರಬೇತಿಗಳಲ್ಲಿ ಭಾಗವಹಿಸಿದ ವಾಹನ ಚಾಲಕರ ಸಂಖ್ಯೆ ಸುಮಾರು ೨೦,೦೦೦.”
ಇಂತಹ ತರಬೇತಿಗಳು ಯಾಕೆ ಅಗತ್ಯ? ಒಂದು ಅಧ್ಯಯನದ ಪ್ರಕಾರ, ಶೇಕಡಾ ೫೦ ವಾಹನ ಅಪಘಾತಗಳಲ್ಲಿ ಅದನ್ನು ತಪ್ಪಿಸಲು ಚಾಲಕರು ಪ್ರಯತ್ನಿಸಲೇ ಇಲ್ಲ. ಶೇಕಡಾ ೩೦ ಅಪಘಾತಗಳಲ್ಲಿ ಮಾತ್ರ ಚಾಲಕರು ವಾಹನದ ಬ್ರೇಕ್ ಒತ್ತಿದರು! ಸೀಟ್ ಬೆಲ್ಟ್ ಹಾಕಿಕೊಂಡರೆ, ವಾಹನ ಅಪಘಾತಗಳಿಂದಾಗುವ ಆಘಾತ ಕಡಿಮೆ ಮಾಡಲು ಖಂಡಿತ ಸಾಧ್ಯ. ಆದರೆ ಸೀಟ್ ಬೆಲ್ಟ್ ಹಾಕಿಕೊಳ್ಳುವ ವಾಹನ ಚಾಲಕರು ಮತ್ತು ಮುಂದಿನ ಸೀಟಿನ ಪ್ರಯಾಣಿಕರ ಸಂಖ್ಯೆ ಶೇ.೧೭ ಮಾತ್ರ!
ಕೆ.ಎಸ್.ಆರ್.ಟಿ.ಸಿ.ಯ ಒಂದು ವೊಲ್ವೊ ಬಸ್ಸಿಗೆ ಬೆಂಕಿ ತಗಲಿ ಪ್ರಯಾಣಿಕರು ಬೆಂದು ಹೋದ ದುರ್ಘಟನೆಯ ನೆನಪಿನ್ನೂ ಹಸಿಹಸಿ. ಅಲ್ಲಿಯ ವರೆಗೆ ವೊಲ್ವೊ ಬಸ್ಸುಗಳಲ್ಲಿ “ತುರ್ತು ನಿರ್ಗಮನ ಬಾಗಿಲುಗಳು” ಇರಲೇ ಇಲ್ಲ ಎಂದರೆ ನಂಬುತ್ತೀರಾ? ರೂಪಾಯಿ ೮೦ ಲಕ್ಷಕ್ಕಿಂತ ಅಧಿಕ ಬೆಲೆಯ ವಾಹನದ ಗತಿ ಹೀಗಿತ್ತು! ಅದಾದ ನಂತರ ವೊಲ್ವೊ ಬಸ್ಸುಗಳಿಗೆ ಆ ಬಾಗಿಲುಗಳನ್ನು ಅಳವಡಿಸಲಾಗಿದೆ. ಅದಲ್ಲದೆ, ವೊಲ್ವೊ ಕಂಪೆನಿ ತನ್ನ ವಾಹನಗಳಿಗೆ ಕೆಲವು ವಿಶೇಷ ವ್ಯವಸ್ಥೆಗಳನ್ನು ಒದಗಿಸಿದೆ: ಉದಾಹರಣೆಗೆ ವಾಹನ ಚಾಲಕನಿಗೆ ಮಂಪರು ಕವಿಯುತ್ತಿದ್ದರೆ ಅಥವಾ ಆತ ಏಕಾಗ್ರತೆ ಕಳೆದುಕೊಳ್ಳುತ್ತಿದ್ದರೆ, ಆತನನ್ನು ಎಚ್ಚರಿಸುವ ವ್ಯವಸ್ಥೆ.
ರಸ್ತೆಗಳ ಸ್ಥಿತಿಗತಿಯೂ ವಾಹನ ಅಪಘಾತಗಳಿಗೆ ಪ್ರಧಾನ ಕಾರಣ. ವಾಹನ ಚಾಲಕರಿಗೆ ಸೂಕ್ತ ನಿರ್ದೇಶನ ನೀಡುವ ಬೋರ್ಡುಗಳು, ರಸ್ತೆ ತಿರುವುಗಳ ಕೋನ, ರಸ್ತೆ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಗುಣಮಟ್ಟ, ಹೆದ್ದಾರಿಗಳಿಂದ ಅಗಲಕಿರಿದಾದ ರಸ್ತೆಗಳಿಗೆ ತಿರುಗಿಕೊಳ್ಳುವ ಜಾಗಗಳು – ಇವೆಲ್ಲ ಸರಿಯಾಗಿ ಇಲ್ಲದಿದ್ದರೆ ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಇವೆಲ್ಲದರ ಜೊತೆಗೆ ವಾಹನ ಚಲಾವಣೆ ಮತ್ತು ರಸ್ತೆ ಪ್ರಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಕಟ್ಟುನಿಟ್ಟಾದ ಜ್ಯಾರಿಯೂ ಅವಶ್ಯ. ಚಾಲಕನ ಅಸಡ್ಡೆ ಹಾಗೂ ನಿರ್ಲಕ್ಷ್ಯದಿಂದಾಗಿ ಅಪಘಾತ ಆದಾಗಲೂ ಶಿಕ್ಷೆಯಿಂದ ಪಾರಾಗ ಬಹುದು ಎಂಬ ಭಾವನೆ ಜನರಲ್ಲಿದೆ. ಚಾಲಕರ ಅಜಾಗರೂಕತೆಯಿಂದ ಪಾದಚಾರಿಗಳಿಗೆ ಅಥವಾ ಪ್ರಯಾಣಿಕರಿಗೆ ಅಂಗವೈಕಲ್ಯ ಆದಾಗಲೂ ದಂಡ ಕಟ್ಟಿ ಬಚಾವಾಗಬಹುದು ಎಂದು ನಂಬಿದವರೇ ಜಾಸ್ತಿ.
ಭಾರೀ ಶ್ರೀಮಂತರು / (ಕು)ಪಸಿದ್ಧ ಚಲನಚಿತ್ರ ನಟರು ದುಬಾರಿ ಕಾರನ್ನು ಮನುಷ್ಯರ ಮೇಲೆಯೇ ಚಲಾಯಿಸಿ, ಹಲವರ ಕೊಲೆ ಮಾಡಿದ ಪ್ರಕರಣಗಳನ್ನು ನಾವೆಲ್ಲರೂ ಗಮನಿಸಿದ್ದೇವೆ. ೧೦ – ೧೫ ವರುಷಗಳ ನಂತರವೂ ಅವರಿಗೆ ಯಾವುದೇ ಶಿಕ್ಷೆ ಆಗದಿರುವುದು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಅಪಘಾತಕ್ಕೆ ಕಾರಣನಾದ ಚಾಲಕನ ಚಾಲನಾ ಪರವಾನಗಿ ಒಂದು ವರುಷ ಅಮಾನತು, ಎರಡನೇ ಸಲ ತಪ್ಪು ಮಾಡಿದರೆ ಚಾಲನಾ ಪರವಾನಗಿಯ ಶಾಶ್ವತ ರದ್ದತಿ – ಇಂತಹ ಕಠಿಣಕ್ರಮಗಳು ಜ್ಯಾರಿ ಅಗತ್ಯ, ಅಲ್ಲವೇ?